ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ವಸಂತೋತ್ಸವ

Upayuktha
0

ಬದಿಯಡ್ಕ: ಅಂಕದ ಪ್ರಮಾಣಪತ್ರವನ್ನು ಗಿಟ್ಟಿಸಿಕೊಳ್ಳುವುದಕ್ಕೆ ಅಂಟಿಕೊಳ್ಳದೆ ಜೀವನ ಮೌಲ್ಯಗಳನ್ನು ರೂಢಿಸಿಕೊಳ್ಳುತ್ತಾ ಕೌಶಲ್ಯಾಭಿವೃದ್ಧಿಯತ್ತ ಗಮನ ಹರಿಸಿ ಎಂದು ಭಟ್ ಬಯೋಟೆಕ್ ಇಂಡಿಯಾ ಬೆಂಗಳೂರು ಇದರ ಸ್ಥಾಪಕ ಹಾಗೂ ಆಡಳಿತ ನಿರ್ದೇಶಕ ಡಾ. ಶಾಮಭಟ್ ಹೇಳಿದರು.


ಗುರುವಾರ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ವಸಂತೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಶೇಕಡಾ 100 ರಷ್ಟು ಅಂಕವನ್ನು ಪಡೆದರೂ ಉದ್ಯೋಗಕ್ಕಾಗಿ ಸಂದರ್ಶನದಲ್ಲಿ ಕುಳಿತವರಲ್ಲಿ ವಿದ್ಯಾಭ್ಯಾಸದ ಅರಿವಿನ ಕೊರತೆ ಅದೆಷ್ಟೋ ಮಂದಿಯಲ್ಲಿ ಕಾಣುತ್ತೇವೆ. ಗ್ರಾಮೀಣ ಭಾಗದಲ್ಲಿರುವ ವಿದ್ಯಾರ್ಥಿಗಳಲ್ಲಿ ಉತ್ತಮ ಪ್ರತಿಭೆಗಳಿರುತ್ತವೆ. ಆದರೆ  ಆರ್ಥಿಕ ಸಮಸ್ಯೆ, ಪೋಷಕರ ಸಹಕಾರ, ಶಿಕ್ಷಣ ಸಂಸ್ಥೆಗಳು ಸನಿಹದಲ್ಲಿರದಿರುವುದು ಮುಂತಾದ ಕಾರಣಗಳಿಂದಾಗಿ ಉನ್ನತ ವ್ಯಾಸಂಗದಿಂದ ವಂಚಿತರಾಗುತ್ತಾರೆ ಎಂದು ಹೇಳಿದರು. ಸ್ಪಷ್ಟ ಗುರಿಯೊಂದಿಗೆ ಎಲ್ಲವನ್ನೂ ಸರಿದೂಗಿಸಿ ಸಾಧನೆಯನ್ನು ಮಾಡಿ ಹಲವಾರು ಜನರಿಗೆ ಉದ್ಯೋಗದಾತನಾಗಿ ಮಣ್ಣಿನ ಋಣವನ್ನು ತೀರಿಸಿದ ಅದೆಷ್ಟೊ ಮಂದಿ ನಮ್ಮೊಂದಿಗಿದ್ದಾರೆ ಎಂದರು.


ಹೊಸನಗರ ಶ್ರೀರಾಮಚಂದ್ರಾಪುರ ಮಠದ ಸಂಯೋಜನಾ ಖಂಡದ ಸಂಯೋಜಕ ಡಾ. ವೈ.ವಿ. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. 

ವಿಪ್ರೋ ಲಿ.ಬೆಂಗಳೂರು ಇದರ ಆಡಳಿತ ಸಲಹೆಗಾರ ಶಿವರಂಜನ್ ಬೇರ್ಕಡವು ಮಾತನಾಡುತ್ತಾ, ಮಕ್ಕಳಿಗೆ ಆಸಕ್ತಿ ಇರುವ ಕ್ಷೇತ್ರವನ್ನು ಗುರುತಿಸಿ ಉನ್ನತ ವ್ಯಾಸಂಗಕ್ಕಾಗಿ ಪ್ರೋತ್ಸಾಹವನ್ನು ನೀಡಬೇಕೇ ವಿನಹ ನಮ್ಮ ಆಶೋತ್ತರಗಳನ್ನು ಅವರ ಮೇಲೆ ಹೇರಬಾರದು. ಹಾಗಾದಾಗ ವಿದ್ಯಾರ್ಥಿಯು ಉತ್ತಮ ವ್ಯಾಸಂಗವನ್ನು ಪೂರೈಸಬಲ್ಲ. ಶಿಕ್ಷಣ ಸಂಸ್ಥೆಗಳು ಉತ್ತಮ ಫಲಿತಾಂಶದ ಹಂಬಲದೊಂದಿಗಿನ ಚಟುವಟಿಕೆಗಳನ್ನು ಹೊರತುಪಡಿಸಿ ಸರ್ವಾಂಗೀಣ ಅಭಿವೃದ್ಧಿಗೆ ಬೇಕಾಗುವಂತಹ ಇತರೇ ಸಾಂಸ್ಕೃತಿಕ, ಸಾಹಿತ್ಯಕ, ಕ್ರೀಡೆ ಮೊದಲಾದ ಚಟುವಟಿಕೆಗಳನ್ನು ಇಲ್ಲಿ ಹಮ್ಮಿಕೊಂಡು ಬಂದಿರುವುದು ಪೋಷಕರ ಸೌಭಾಗ್ಯ ಎಂದರು. ಇಂತಹ ಶಾಲೆಗಳನ್ನು ಗುರುತಿಸಿ ಸಮಾಜದ ಎಲ್ಲರೂ ಕೈಲಾದ ವಿಧಾನದಲ್ಲಿ ಅಭಿವೃದ್ಧಿಗೊಳಿಸಬೇಕು. ಇದರಿಂದ ಮುಂದಿನ ಪೀಳಿಗೆಯ ಬದುಕು ಹಸನಾಗಬಹುದು ಎಂದು ಹೇಳಿದರು.


ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಶಶಿಧರ ಎಂ, ಶಾಲಾ ಸಂಚಾಲಕ ಜಯಪ್ರಕಾಶ ಪಜಿಲ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಕಂಡೆತ್ತೋಡಿ, ಮಾತೃಸಮಿತಿ ಅಧ್ಯಕ್ಷೆ ರೇಷ್ಮಾ ಕನಕಪ್ಪಾಡಿ ಶುಭಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಶೈಕ್ಷಣಿಕ ವರ್ಷದ ಸಾಧನೆಯ ಬೆಳಕನ್ನು ಚೆಲ್ಲಿದರು. ಶಾಲಾ ನಾಯಕ ಅಭಯ ಶರ್ಮ ಪಂಜಿತ್ತಡ್ಕ ಸ್ವಾಗತಿಸಿ, ಉಪನಾಯಕಿ ಮಾನಸಾ ಚುಳ್ಳಿಕ್ಕಾನ ವಂದಿಸಿದರು.


2021-22 ನೇ ವರ್ಷದ ಪ್ರತೀ ತರಗತಿಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಅಗ್ರೇಸರ ಹಾಗೂ ಹತ್ತನೇ ತರಗತಿಯಲ್ಲಿ ಎಲ್ಲಾ ವಿಷಯದಲ್ಲಿಯೂ ಎ ಪ್ಲಸ್ ಪಡೆದ ವಿದ್ಯಾರ್ಥಿಗಳಿಗೆ ನಿವೃತ್ತ ಅಧ್ಯಾಪಕ ಕುಳಮರ್ವ ಶ್ಯಾಮ ಭಟ್ ನೀಡುವ ದತ್ತಿನಿಧಿ ನೀಡಲಾಯಿತು. ಬೇರ್ಕಡವು ಸೀತಾರಾಮ ಭಟ್ಟರ ಸ್ಮರಣಾರ್ಥ ಮೊಮ್ಮಗ ಶಿವರಂಜನ್ ಬೇರ್ಕಡವು ಕೊಡಮಾಡುವ ಸ್ವರ್ಣಾಂಕುರ ಪ್ರಶಸ್ತಿಯನ್ನು ಅತ್ಯುತ್ತಮ ವಿದ್ಯಾರ್ಥಿ ಎಂದು ಗುರುತಿಸಲ್ಪಟ್ಟ ಬಿ. ಶ್ರದ್ಧಾ ಬಳ್ಳಂಬೆಟ್ಟು ಪಡೆದುಕೊಂಡಳು.


ಸಭಾಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ನಿರಂತರ ಆರು ಗಂಟೆಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಯಾವುದೇ ಧ್ವನಿಸುರುಳಿ ಬಳಸದೆ ವಿದ್ಯಾರ್ಥಿಗಳೇ ಎಲ್ಲಾ ಕಾರ್ಯಕ್ರಮಗಳನ್ನು ನಿರ್ವಹಿಸಿರುವುದು ಮೆಚ್ಚುಗೆಗೆ ಪಾತ್ರವಾಯಿತು. ಶಾಲಾ ರಕ್ಷಕ ಶಿಕ್ಷಕ ಸಂಘದ ಕೋಶಾಧಿಕಾರಿ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top