ಜ.29: ಶ್ರೀ ಪಡ್ರೆ ಅವರ ‘ಅಡಿಕೆ ಚೊಗರು’ ಪುಸ್ತಕ ಬಿಡುಗಡೆ

Upayuktha
0



ಪುತ್ತೂರು: ಅಡಿಕೆ ಪತ್ರಿಕೆ ಸಂಪಾದಕ ಶ್ರೀ ಪಡ್ರೆ ಅವರ ನೂತನ ಕೃತಿ ‘ಅಡಿಕೆ ಚೊಗರು; ಹೊಸ ನಿರೀಕ್ಷೆಗಳ ಚಿಗುರು’ ಇದೇ ಭಾನುವಾರ, 29ರಂದು ಬೆಳಿಗ್ಗೆ 11ಕ್ಕೆ ಪರ್ಪುಂಜದ ‘ಸೌಗಂಧಿಕ’ದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಕೃಷಿ ಲೇಖಕ ಡಾ. ನರೇಂದ್ರ ರೈ ದೇರ್ಲ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಪುಸ್ತಕ ಬಿಡುಗಡೆ ಮಾಡಲಿದ್ದಾರೆ.

‘ಅಡಿಕೆ ಪತ್ರಿಕೆ’ಯ ೩೫ನೇ ವರ್ಷಾಚರಣೆ ಅಂಗವಾಗಿ ಫಾರ್ಮರ್ ಫಸ್ಟ್ ಟ್ರಸ್ಟ್ ಮತ್ತು ಕೃಷಿ ಮಾಧ್ಯಮ ಕೇಂದ್ರ, ‘ಸೌಗಂಧಿಕ’ದ ಸಹಯೋಗದಲ್ಲಿ ಆಯೋಜಿಸಿರುವ ಈ ಸಮಾರಂಭದಲ್ಲಿ ಟ್ರಸ್ಟಿನ ಅಧ್ಯಕ್ಷ ಪಡಾರು ರಾಮಕೃಷ್ಣ ಶಾಸ್ತ್ರಿ, ಕೃತಿಯ ಲೇಖಕ ಶ್ರೀ ಪಡ್ರೆ ಉಪಸ್ಥಿತರಿರುತ್ತಾರೆ. ಈ ಸಂದರ್ಭದಲ್ಲಿ ಅಡಿಕೆ ಚೊಗರಿನ ತಯಾರಿಕ್ರಮ, ವೈಶಿಷ್ಟ್ಯ, ವಿವಿಧ ಉಪಯೋಗ ಮತ್ತಿತರ ಸಂಗತಿಗಳ ಬಗ್ಗೆ ಬೆಳಕುಚೆಲ್ಲುವ ಭಿತ್ತಿಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಚಂದ್ರ ಸೌಗಂಧಿಕ ಮತ್ತು ಮಾಧವ ಕಲ್ಲಾರೆ ಪರಿಸರ ಗೀತೆಗಳನ್ನು ಸಾದರಪಡಿಸಲಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಹಲಸು ಮತ್ತು ಬಾಳೆಕಾಯಿ ಹುಡಿ ಕುರಿತು ಸರಣಿ ಲೇಖನಗಳ ಮೂಲಕ ಯಶಸ್ವಿ ಅಭಿಯಾನ ನಡೆಸಿರುವ ಅಡಿಕೆ ಪತ್ರಿಕೆ, ಕಳೆದ ನಾಲ್ಕೈದು ತಿಂಗಳಿಂದ ಅಡಿಕೆ ಚೊಗರು ಅಥವಾ ತೊಗರಿನ ಬಗ್ಗೆ ವ್ಯಾಪಕ ಅಧ್ಯಯನ ಕೈಗೊಂಡಿದ್ದು ಈ ವೇಳೆ ಕಂಡುಕೊಂಡಿರುವ ಆಸಕ್ತಿಯುತ ಸಂಗತಿಗಳನ್ನು ಅನೇಕ ಲೇಖನಗಳ ಮೂಲಕ ಓದುಗರಿಗೆ ತಿಳಿಯಪಡಿಸಿದೆ. ಈ ಬರಹಗಳು ಇದೀಗ ಸಂಕಲನವಾಗಿ ಹೊರಬರುತ್ತಿದೆ.

ಮಲೆನಾಡಿನ ಕೆಲ ಭಾಗಗಳಲ್ಲಿ ಕೆಂಪಡಿಕೆ ಸಂಸ್ಕರಣೆ ವೇಳೆ ಸಹಜವಾಗಿ ಸಿಗುವ, ಗಾಢ ಕಂದು ಬಣ್ಣದ ಉಪಉತ್ಪನ್ನವಾದ ಚೊಗರು ಒಂದು ಬಹೂಪಯೋಗಿ ಪದಾರ್ಥ. ಬೇಯಿಸಿ ಒಣಗಿಸಿದ ಅಡಿಕೆಗೆ ಬಣ್ಣ ಲೇಪನಕ್ಕೆ ಚೊಗರು ಪ್ರಧಾನವಾಗಿ ಬಳಕೆಯಾಗುತ್ತದೆ. ಇದು ಪರಿಸರಸ್ನೇಹಿ, ನೈಸರ್ಗಿಕ ಬಟ್ಟೆ ಬಣ್ಣ. ಗೆದ್ದಲುನಾಶಕವೂ ಹೌದು. 

ಕರ್ನಾಟಕದಲ್ಲಿ ವಾರ್ಷಿಕ ಸುಮಾರು ಎರಡು ಲಕ್ಷ ಲೀಟರಿನಷ್ಟು ಚೊಗರು ಉತ್ಪಾದನೆಯಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಅಗತ್ಯಬಿದ್ದರೆ ಇದನ್ನು ಮೂರು ಪಟ್ಟು ಹೆಚ್ಚಿಸಬಹುದಾಗಿದೆ. ಚೊಗರಿನ ವಾಣಿಜ್ಯಿಕ ಸಾಧ್ಯತೆಗಳ ಬಗ್ಗೆ ಕೂಡ ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಸಮೃದ್ಧ ಮಾಹಿತಿ, ಆಕರ್ಷಕ ವಿನ್ಯಾಸ, ಎಂಟು ವರ್ಣಪುಟ ಪುಸ್ತಕದ ವಿಶೇಷ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top