ಬೆಂಗಳೂರು : ಜ.22 ರಂದು 2ನೇ ಅಖಿಲ ಭಾರತ ದಾಸ ಸಾಹಿತ್ಯ ಸಮ್ಮೇಳನ

Upayuktha
0

ಸಮ್ಮೇಳಾನಾಧ್ಯಕ್ಷತೆ : ಡಾ.ಅರಳುಮಲ್ಲಿಗೆ ಪಾರ್ಥಸಾರಥಿ



ಬೆಂಗಳೂರು: ಹರಿದಾಸ ಕೀರ್ತನ ಬಳಗದ ವತಿಯಿಂದ ಸೇಡಂನ ದಾಸಧೇನು ಟ್ರಸ್ಟ್ ಸಹಯೋಗದಲ್ಲಿ ಇದೇ ಜ.22 ಭಾನುವಾರ ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿರುವ ಶ್ರೀಕೃಷ್ಣರಾಜ ಪರಿಷ್ಮನಂದಿರದಲ್ಲಿ 2ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಆಯೋಜಿಸಿದೆ. ಅಂತರಾಷ್ಟ್ರೀಯ ಖ್ಯಾತಿಯ ಹರಿದಾಸ ಸಾಹಿತ್ಯ ವಿದ್ವಾಂಸ ವಿದ್ಯಾವಾಚಸ್ಪತಿ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ರವರು ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 

ಅಂದು ಬೆಳಗ್ಗೆ 10.00 ಸಮ್ಮೇಳನವನ್ನು ಬೇಲಿಮಠದ ಪೂಜ್ಯ ಶ್ರೀ ಶಿವರುದ್ರ ಮಹಾಸ್ವಾಮಿಗಳು ಉದ್ಘಾಟಿಸುವರು. ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌ.ಪ್ರಧಾನ ಕಾರ್ಯದರ್ಶಿ ನಾಡೋಜ ಡಾ.ವೂಡೇ ಪಿ.ಕೃಷ್ಣ ಮತ್ತು ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆಯ ಕಾರ್ಯದರ್ಶಿ , ರಂಗವಿಠಲ ಮಾಸಪತ್ರಿಕೆ ಸಂಪಾದಕ ವಿದ್ವಾನ್ ಹೆಚ್.ಬಿ.ಲಕ್ಷ್ಮೀನಾರಾಯಣಾಚಾರ್ಯರವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸೇಡಂನ ದಾಸಧೇನು ಟ್ರಸ್ಟ್‍ನ ಅಧ್ಯಕ್ಷ ಡಾ.ವಾಸುದೇವ ಅಗ್ನಿಹೋತ್ರಿ ಆಶಯ ನುಡಿಗಳನ್ನಾಡುವರು. ಇದೇ ಸಂದರ್ಭದಲ್ಲಿ ಡಾ.ಅರಳುಮಲ್ಲಿಗೆ ಪಾರ್ಥಸಾರಥಿರವರ ‘ವಿಷ್ಣುಸಹಸ್ರನಾಮದ ಅಪೂರ್ವ ಅರ್ಥಗಳು’ ಮತ್ತು ಡಾ. ಹೆಚ್.ಎ. ಸತ್ಯವತಿರವರ ‘ದಾಸ ದೀಪ್ತಿ’ ಕೃತಿ ಲೋಕಾರ್ಪಣೆಗೊಳ್ಳಲಿದೆ.

ದಾಸ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಂಶೋಧನೆ: ಶ್ರೀಧರ ರಾಯಸಂ; ಪ್ರಕಾಶನ : ಡಾ.ಗುರುರಾಜ ಪೋಶೆಟ್ಟಿಹಳ್ಳಿ ; ಸಂಘಟನೆ : ವೆಂಕೋಬರಾವ್ ; ಸಾಹಿತ್ಯ : ಡಾ.ಮಂಜುನಾಥ ಪಾಳ್ಯ ; ವಂಶಸ್ಥರು : ಚೀಕಲಪರ್ವಿ ಜಗನ್ನಾಥ ದಾಸರು ಹಾಗು ಸಂಗೀತ : ವಿದ್ವಾನ್ ಶ್ರೀನಿಧಿರವರುಗಳಿಗೆ ಅಭಿನಂದನೆಯನ್ನು ಮಾಡಲಾಗುವುದು.

ಸಮ್ಮೇಳನದ ಕುರಿತು :

ಆರ್ಥಿಕವಾಗಿ, ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಪ್ರದೇಶವೆಂದೇ ಪರಿಗಣಿತವಾಗಿರುವ ಕಲ್ಯಾಣ ಕರ್ನಾಟಕ, ಸಾಹಿತ್ಯಿಕವಾಗಿ,  ಸಾಂಸ್ಕøತಿಕವಾಗಿ ವಿಶೇಷವಾದ  ಭಕ್ತಿ ಸಾಹಿತ್ಯದ ಹಿನ್ನೆಲೆಯಲ್ಲಿ ಹೇಗೆ ಮಹತ್ವಪೂರ್ಣವಾದ ಶ್ರೀಮಂತ ಕೊಡುಗೆ ನೀಡಿದೆ ಎನ್ನುವ ವಿಚಾರವಾಗಿ ಒಂದು ವಿಶೇಷ ಗೋಷ್ಠಿಯನ್ನು ಈ ಸಮ್ಮೇಳನದಲ್ಲಿ ಆಯೋಜಿಸಲಾಗಿದೆ. ಈ ಗೋಷ್ಠಿಯ ವೈಶಿಷ್ಟವೆಂದರೆ ಕಲ್ಯಾಣ ಕರ್ನಾಟಕ ಭಾಗದಲ್ಲೇ ಈ ಬಗ್ಗೆ ದಶಕಗಳ ಕಾಲ ವಿದ್ವತ್ಪೂರ್ಣ ಕೃಷಿ ಮಾಡಿರುವ ವಿದ್ವಾಂಸರುಗಳೇ ಸ್ವತಃ ಬಂದು ಗೋಷ್ಟಿಯಲ್ಲಿ ಭಾಗವಹಿಸಿ ಈ ಬಗ್ಗೆ ಬೆಳಕು ಚೆಲ್ಲಲಿದ್ದಾರೆ.

ದಾಸ ಸಾಹಿತ್ಯ ನಿಂತ ನೀರಲ್ಲ, ಇಂದಿಗೂ ಸಮೃದ್ಧಧಾರೆಯಾಗಿ ತುಂಬಿ ತುಂಬಿ ಹರಿಯುತ್ತಿರುವ ನೀರು ಎಂಬುದನ್ನು ‘ಆಧುನಿಕ ಹರಿದಾಸ ಸಾಹಿತ್ಯ’ ಎಂಬ ಗೋಷ್ಠಿಯಲ್ಲಿ ನಿರೂಪಿಸಲಾಗುವುದು. ಇದರಲ್ಲೂ ವಿಶೇಷವಾಗಿ ಅರವತ್ತಕ್ಕೂ ಹೆಚ್ಚು ಹರಿದಾಸ ಗ್ರಂಥಗಳನ್ನು ಸಹಸ್ರಾರು ಹರಿದಾಸ ಕೀರ್ತನೆಗಳನ್ನು ರಚಿಸಿರುವ ಜಗತ್ತಿನ ನಾನಾ ರಾಷ್ಟ್ರಗಳಿಗೆ ದಾಸ ಸಾಹಿತ್ಯ ಸೌರಭವನ್ನು ಅತ್ಯಂತ ಯಶಸ್ವಿಯಾಗಿ ಪ್ರಸರಿಸಿ ಬಂದಿರುವ ಈ ಸಮ್ಮೇಳನಾಧ್ಯಕ್ಷರಾದ ಡಾ| ಅರಳುಮಲ್ಲಿಗೆ ಪಾರ್ಥಸಾರಥಿಯವರ ಸಾಹಿತ್ಯದ ಕುರಿತು ಗೋಷ್ಠಿಯಲ್ಲಿ ಚಿಂತನ-ಮಂಥನ  ನಡೆಯಲಿದೆ.

ಸಮ್ಮೇಳನದ ಇನ್ನೊಂದು ಸ್ವಾರಸ್ಯಕರ ಕಾರ್ಯಕ್ರಮ ‘ಸಂವಾದ’, ದಾಸ ಸಾಹಿತ್ಯದಲ್ಲಿ ದಶಕಗಳ ಕಾಲ ಕೃಷಿ ಮಾಡಿರುವ  ಹತ್ತಾರು ವಿದ್ವಾಂಸರು ಸಮ್ಮೇಳನಾಧ್ಯಕ್ಷರೊಡನೆ ಸ್ಪಂದಿಸುತ್ತ ದಾಸಸಾಹಿತ್ಯ ಕ್ಷೇತ್ರದ ಹೊಳಹುಗಳು-ಸುಳಿವುಗಳು, ಆಗಬೇಕಾದ ಕೆಲಸಗಳ ಬಗ್ಗೆ ಚಿಂತಿಸುವ, ಅಧ್ಯಯನಶೀಲರಿಗೆ, ದಾಸಸಾಹಿತ್ಯಾಸಕ್ತರಿಗೆ ಮಾರ್ಗದರ್ಶನ ಮಾಡುವ ವಿಧೇಯಕವಾಗಿರುವ  ಈ ಕಾರ್ಯಕ್ರಮ ಅತ್ಯುಪಯುಕ್ತವಾಗಲಿದೆ.


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top