ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಹೊಸ ಪ್ರತಿಭೆಗಳ ಅನ್ವೇಷಣೆಗೆ ನಡೆದ ಮೇಧಾನ್ವೇಷ

Upayuktha
0

ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಮೇಧಾನ್ವೇಷ- 2022 ಅಂತರ್‌ಕಾಲೇಜು ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟನೆ


ಪುತ್ತೂರು: ಸಾಂಸ್ಕೃತಿಕ ಚಟುವಟಿಕೆಗಳು ಸಂಸ್ಕಾರದಜೊತೆಗೆ ಪರಂಪರೆಯ ಶಿಕ್ಷಣವನ್ನು ನೀಡುತ್ತವೆ. ಪಠ್ಯ ಮತ್ತು ಪಠ್ಯೇತರ ಶಿಕ್ಷಣಗಳು ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ. ಅದೇ ರೀತಿ ಮೆದುಳಿಗೆ ಶಿಕ್ಷಣ, ಶರೀರಕ್ಕೆ ಪೋಷಣೆ, ಹೃದಯಕ್ಕೆ ಸಂಸ್ಕಾರ ಎನ್ನುವ ಮಾತಿಗೆ ಪೂರಕವಾಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಈ ಎಲ್ಲಾ ಆಯಾಮಗಳಲ್ಲೂ ಸಮರ್ಥರನ್ನಾಗಿಸಲು ಹಲವು ವೇದಿಕೆಗಳ ಮುಖೇನ ಪ್ರಯತ್ನಿಸುತ್ತದೆ. ಈ ನಿಟ್ಟಿನಲ್ಲಿ ವಿವೇಕಾನಂದ ಕಾಲೇಜು ಸಾಂಸ್ಕೃತಿಕವಾಗಿ ತೆರೆದುಕೊಳ್ಳಲು ವೇದಿಕೆಯನ್ನು ನಿರ್ಮಾಣ ಮಾಡಿಕೊಂಡಿದೆ. ಆ ದೃಷ್ಟಿಯಲ್ಲಿ ಆಯೋಜನೆಗೊಂಡ ಕಲ್ಪನೆಯೇ ಮೇಧಾನ್ವೇಷ. ಅದೇ ರೀತಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತಿ ವಹಿಸುತ್ತಿರುವುದು ಶ್ಲಾಘನೀಯ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್‌ರಾವ್ ಹೇಳಿದರು.


ಅವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ (ಸ್ವಾಯತ್ತ) ಲಲಿತ ಕಲಾ ಸಂಘ, ಯಕ್ಷರಂಜಿನಿ ಮತ್ತು ಐಕ್ಯುಎಸಿ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ಅಂತರ್‌ಕಾಲೇಜು ಮಟ್ಟದ ಸಾಂಸ್ಕೃತಿಕ ಸ್ಪರ್ಧೆ 'ಮೇಧಾನ್ವೇಷ- 2022' ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಮಾತನಾಡಿದರು.


ಶಿಕ್ಷಣ ಹೇಗೆ ವಿದ್ಯಾರ್ಥಿಗಳ ಜೀವನ ರೂಪಿಸುತ್ತದೆಯೋ ಅದೇ ರೀತಿ ವಿದ್ಯಾರ್ಥಿಗಳ ಚಟುವಟಿಕೆಗಳು ತಮ್ಮ ಜೀವನದ ಉದ್ದಕ್ಕೂ ಸಹಕಾರಿಯಾಗುತ್ತದೆ. ಕಾಲೇಜು ವೇದಿಕೆಗಳು ಅವೆಷ್ಟೋ ಸಾಧಕರಿಗೆ ಸಾಧನೆಯ ಪ್ರಥಮ ಮೆಟ್ಟಿಲಾಗಿರುತ್ತದೆ.ಈ ನಿಟ್ಟಿನಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಯು ಪ್ರತಿ ಬಾರಿ ವಿವಿಧ ರೀತಿಯಲ್ಲಿ ಅನೇಕ ವೇದಿಕೆಗಳನ್ನು ಸೃಷ್ಟಿಸಿ ವಿದ್ಯಾರ್ಥಿಗಳ ಪ್ರತಿಭೆಗಳ ಅನ್ವೇಷಣೆಗೆ ಪೂರಕವಾದ ಕೆಲಸ ಮಾಡುತ್ತಾ ಬರುತ್ತಿರುವುದು ಶ್ಲಾಘನೀಯ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ.ಶ್ರೀಪತಿ ಕಲ್ಲೂರಾಯ ಮಾತನಾಡಿ ಸಮುದ್ರ ಅಲೆಗಳ ಹರಿವಿನಂತೆ ಜೀವನದಲ್ಲೂ ಏರಿಳಿತಗಳು ಸಾಮಾನ್ಯ. ಅಂತೆಯೇ ವಿದ್ಯಾಭ್ಯಾಸದ ಹಂತದಲ್ಲೂ ಹಲವು ಸವಾಲುಗಳು ಎದುರಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಗುರುತಿಸಿಕೊಳ್ಳುವುದು ಮತ್ತು ಬೆಳೆಸಿಕೊಳ್ಳುವುದು ಆದ್ಯ ಕರ್ತವ್ಯ. ತಮ್ಮಲ್ಲಿರುವ ಪ್ರತಿಭೆಗೆ ಶ್ರಮ ಎನ್ನುವ ನೀರೆರೆದು ಪೋಷಿಸಬೇಕು. ಪಠ್ಯ ಶಿಕ್ಷಣವನ್ನು ವಿದ್ಯಾಸಂಸ್ಥೆಗಳು ನೀಡುತ್ತವೆ. ಅದರ ಜೊತೆಗೆ ನಮ್ಮಲ್ಲಿರುವ ವಿಶೇಷ ಪ್ರತಿಭೆಗಳಿಗೆ ವೇದಿಕೆ ಕಂಡುಕೊಳ್ಳುವ ಸಾಮರ್ಥ್ಯ ನಮ್ಮದಾಗಬೇಕು.ಬದುಕಿನ ಪ್ರತಿ ಹಂತದಲ್ಲೂ ಲಲಿತ ಕಲೆಗಳ ಕಲಿಕೆ ಸಹಕಾರಿಯಾಗುತ್ತದೆ. ವಿದ್ಯಾ ಸಂಸ್ಥೆ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳ ಅನಾವರಣಕ್ಕೆ ವಿಫುಲ ಅವಕಾಶವನ್ನು ನೀಡುತ್ತಿದ್ದು, ಸ್ವಾಮಿ ವಿವೇಕಾನಂದರ ಆಶಯದಂತೆ ಸದೃಢ, ಸುಸಂಸ್ಕೃತ ಮತ್ತು ಸಶಕ್ತ ಯುವಕರನ್ನು ರೂಪಿಸಿ ಸಮಾಜಕ್ಕೆ ನೀಡುವ ವ್ಯವಸ್ಥೆ ವಿವಿಧ ಚಟುವಟಿಕೆಗಳ ಮೂಲಕ ಸಾಧ್ಯವಾಗುತ್ತಿದೆ ಎಂದರು.


ಗೌರವ ಉಪಸ್ಥಿತಿ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣುಗಣಪತಿ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿ, ವಿಧ್ಯಾರ್ಥಿಗಳ ಕಲಿಕೆ ಕೇವಲ ಶೈಕ್ಷಣಿಕ ಅಧ್ಯಯನಕ್ಕೆ ಸೀಮಿತವಾಗಕೂಡದು. ಪ್ರಸ್ತುತ ಹೊಸ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳ ಅತ್ಮ ಸ್ಥೈರ್ಯ, ಮನೋಲ್ಲಾಸ ಹೆಚ್ಚಿಸುವ ಪ್ರಯತ್ನ ನಡೆಯುತ್ತಿದೆ.ಈ ಕಾರ್ಯದಲ್ಲಿ ಕಾಲೇಜಿನ ಲಲಿತ ಕಲಾ ಸಂಘ ತಾಲ್ಲೂಕಿನ ಪರಿಸರಕ್ಕೆ ಸಾಂಸ್ಕೃತಿಕ ಕೊಡುಗೆ ನೀಡುತ್ತಾ ಬರುತ್ತಿದೆ ಎಂದರು.


ಇದೇ ಸಂದರ್ಭದಲ್ಲಿ ಪ್ರಸ್ತುತ ಶೈಕ್ಷಣೀಕ ವರ್ಷದ ಸ್ನಾತೋತ್ತರ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆಯ ಪ್ರಥಮ ಆವೃತ್ತಿ 'ವಿಕಾಸ' ಬಿಡುಗಡೆಗೊಳಿಸಲಾಯಿತು.


ವಿದ್ಯಾರ್ಥಿಗಳಿಗೆ ಶಾಸ್ತ್ರೀಯ ಸಂಗೀತ, ಭಾವಗೀತೆ, ಪೆನ್ಸಿಲ್ ಸ್ಕೆಚ್, ಮೇಕ್ ಪ್ರೆಸ್, ಯಕ್ಷಗಾನ ಭಾಗವತಿಕೆ, ಫೇಸ್ ಪೈಂಟಿಂಗ್, ದೇಶಭಕ್ತಿಗೀತೆ, ಜನಪದ ನೃತ್ಯ, ಕುಣಿತ ಭಜನೆ, ಟ್ರೆಷರ್ ಹಂಟ್, ಬೀದಿ ನಾಟಕ, ಪಿಕ್‌ಅಂಡ್ ಸ್ಪೀಚ್, ರಂಗೋಲಿ, ಗೂಗಲ್‌ಇಟ್, ಮ್ಯಾಡ್‌ಆಡ್, ಕ್ವಿಜ್ ಮುಂತಾದ ಹದಿನಾರು ಸ್ಪರ್ಧೆಗಳನ್ನು ಆಯೋಜಿಸಾಗಿತ್ತು. ತಾಲೂಕಿನ ವಿವಿಧ ಪದವಿ ಪೂರ್ವ ವಿದ್ಯಾಸಂಸ್ಥೆಗಳಿಂದ ಹಲವಾರು ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.


ವಿವೇಕಾನಂದ ಸ್ವಾಯತ್ತಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ.ಎಚ್ .ಜಿ ಶ್ರೀಧರ್, ಕಾಲೇಜಿನ ಐಕ್ಯೂಎಸಿ ಸಂಯೋಜಕ ಪ್ರೊ. ಶಿವಪ್ರಸಾದ್ ಕೆ.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ವಿಭಾ ಪ್ರಾರ್ಥಿಸಿದರು. ಲಲಿತ ಕಲಾ ಸಂಘದ ಸಂಯೋಜಕಿ ಅಂಬಿಕಾ ಎನ್‌ಆರ್ ಸ್ವಾಗತಿಸಿ, ಯಕ್ಷರಂಜಿನಿ ಸಂಯೋಜಕ ಕಿಶೋರ್ ವಂದಿಸಿದರು. ಸಮಾಜಶಾಸ್ತ್ರ ಉಪನ್ಯಾಸಕಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top