ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ವೈಭವ

Upayuktha
0

• ಆಕರ್ಷಕ ವಿನ್ಯಾಸದ ವಿದ್ಯುದ್ದೀಪಗಳಿಂದ ಕಣ್ಮನ ಸೆಳೆಯುತ್ತಿರುವ ಧರ್ಮಸ್ಥಳ

• ಉಜಿರೆಯಿಂದ ಪಾದಯಾತ್ರೆ


ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಹಾಗೂ ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳದಲ್ಲಿ ಶನಿವಾರ ಕಾರ್ತಿಕ ಮಾಸದ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಶುಭಾರಂಭಗೊಂಡಿವೆ.


ದೇವಸ್ಥಾನ, ಬಸದಿ, ಬಾಹುಬಲಿ ಬೆಟ್ಟ (ರತ್ನಗಿರಿ), ಎಲ್ಲಾ ವಸತಿ ಛತ್ರಗಳನ್ನು ಆಕರ್ಷಕ ವಿನ್ಯಾಸದ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ.


ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಶಾಸಕ ಹರೀಶ್ ಪೂಂಜ ರಾಜ್ಯ ಮಟ್ಟದ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು. ಸರ್ಕಾರದ ವಿವಿಧ ಇಲಾಖೆಗಳ ಮಳಿಗೆಗಳೂ ಸೇರಿದಂತೆ ಕೃಷಿ, ಆರೋಗ್ಯ, ಶಿಕ್ಷಣ, ವಾಣಿಜ್ಯ ಹಾಗೂ ಹೈನುಗಾರಿಕೆಗೆ ಸಂಬಂಧಿಸಿದ ಇನ್ನೂರಕ್ಕೂ ಮಿಕ್ಕಿ ಮಳಿಗೆಗಳಿದ್ದು ಭಕ್ತರು ಹಾಗೂ ಪ್ರವಾಸಿಗರು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.


ಹಿಂದೂಗಳು, ಜೈನರು, ಮುಸ್ಲಿಮರು, ಕ್ರೈಸ್ತರು ಸೇರಿದಂತೆ ಸರ್ವಧರ್ಮೀಯರೂ ಆಗಮಿಸಿದ್ದು ದೇವರದರ್ಶನದ ಬಳಿಕ ಅನ್ನಪೂರ್ಣದಲ್ಲಿಇಪ್ಪತ್ತೈದು ಸಾವಿರಕ್ಕೂ ಮಿಕ್ಕಿ ಭೋಜನ ಸ್ವೀಕರಿಸಿದರು.


ಬಂದವರೆಲ್ಲ ಉದ್ಯಾನ, ಮಂಜೂಷಾ ವಸ್ತುಸಂಗ್ರಹಾಲಯ, ಕಾರ್‌ಮೂಸಿಯಂ, ಬಸದಿ, ಜಮಾ ಉಗ್ರಾಣ, ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನ (ತಾಳೆಗರಿ ಗ್ರಂಥಗಳ ಅಮೂಲ್ಯ ಸಂಗ್ರಹ) ವೀಕ್ಷಿಸಿ ಜ್ಞಾನಕ್ಷಿತಿಜವನ್ನು ವಿಸ್ತರಿಸಿಕೊಂಡರು.


ಎಲ್ಲೆಲ್ಲೂ ಸೊಬಗಿದೆ, ಸೊಗಸಿದೆ, ಸೊಗಡಿದೆ. ಸಂಭ್ರಮ - ಸಡಗರವಿದೆ. ಶಿಸ್ತು, ಸ್ವಚ್ಛತೆ, ದೇವಳ ನೌಕರರ ಸೌಜನ್ಯಪೂರ್ಣ ಸೇವೆ ಭಕ್ತರಿಗೆ ಮುದ ನೀಡುತ್ತಿದೆ.


ರಥಬೀದಿಯಿಂದ ಮುಖ್ಯ ಪ್ರವೇಶದ್ವಾರದ ವರೆಗೂ ನೂರಾರು ವೈವಿಧ್ಯಮಯ ಮಳಿಗೆಗಳಿದ್ದು ಗ್ರಾಹಕರನ್ನು ಆಕರ್ಷಿಸುತ್ತಿವೆ.


ಪಾದಯಾತ್ರೆ:


ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಿಂದ ಶನಿವಾರ ಅಪರಾಹ್ನ ಮೂರು ಗಂಟೆಗೆ ಇಪ್ಪತ್ತೈದು ಸಾವಿರಕ್ಕೂ ಮಿಕ್ಕಿ ಭಕ್ತರು ಹಾಗೂ ಸಾರ್ವಜನಿಕರು ಭಜನೆ, ಪ್ರಾರ್ಥನೆ ಹಾಗೂ ಶಿವಪಂಚಾಕ್ಷರಿ ಪಠಣದೊಂದಿಗೆ ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡಿದರು. ಪಾದಯಾತ್ರೆಯ ಹತ್ತನೆ ವರ್ಷವಾಗಿದ್ದು ಹೆಗ್ಗಡೆಯವರನ್ನುಗೌರವಿಸಲಾಯಿತು. ರಾತ್ರಿ ಹೊಸಕಟ್ಟೆಉತ್ಸವ ನಡೆಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top