ಉಜಿರೆ: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಧರ್ಮಸ್ಥಳ ಗ್ರಾಮ ಪಂಚಾಯಿತಿ ಜಂಟಿ ಆಶ್ರಯದಲ್ಲಿ ದೇವಸ್ಥಾನ ಮತ್ತು ಧರ್ಮಸ್ಥಳಕ್ಕೆ 26 ಕೋಟಿ ರೂ. ವೆಚ್ಚದ ಕುಡಿಯುವ ನೀರು ಸರಬರಾಜು ಯೋಜನೆಗೆ ಸೋಮವಾರ ಶಿವರಾತ್ರಿ ಬೆಟ್ಟದಲ್ಲಿ ಶಿಲಾನ್ಯಾಸ ನೆರವೇರಿಸಿದ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಒಂದು ವರ್ಷದೊಳಗೆ ಉತ್ತಮ ಗುಣಮಟ್ಟದ ಕಾಮಗಾರಿಯೊಂದಿಗೆ ಯೋಜನೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.
ಶಿಲಾನ್ಯಾಸ ಸಮಾರಂಭದ ಬಳಿಕ ಶ್ರೀ ಸನ್ನಿಧಿ ಅತಿಥಿಗೃಹದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದ ಅವರು ಧರ್ಮಸ್ಥಳ ಮತ್ತು ಸುಬ್ರಹ್ಮಣ್ಯದಲ್ಲಿ ಒಳಚರಂಡಿ ವ್ಯವಸ್ಥೆಗೆ ಯೋಜನೆ ರೂಪಿಸಿದ್ದು ಒಂದು ತಿಂಗಳೊಳಗೆ ಈ ಬಗ್ಗೆ ಅಧಿಕೃತ ಆದೇಶ ನೀಡಲಾಗುವುದು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಐವತ್ತು ಸಾವಿರ ಕೋಟಿ ರೂ. ವೆಚ್ಚದಲ್ಲಿ ದೇಶದಲ್ಲಿ ಪ್ರತಿ ಮನೆಗೂ ಕುಡಿಯುವ ನೀರು ಸರಬರಾಜು ಮಾಡಲು ಯೋಜಿಸಲಾಗಿದೆ. ಅಮುಕ್ತ್ ಯೋಜನೆಯಲ್ಲಿ ಕರ್ನಾಟಕದಲ್ಲಿ ಒಂಬತ್ತು ಸಾವಿರ ಕೋಟಿ ರೂ. ವೆಚ್ಚದಲ್ಲಿ ಎಲ್ಲಾ ಮನೆಗಳಿಗೂ ಕುಡಿಯುವ ನೀರು ಸರಬರಾಜು ಮಾಡಿ ದಾಹ ಮುಕ್ತ ರಾಜ್ಯ ರೂಪಿಸಲಾಗುವುದು ಎಂದು ಅವರು ಪ್ರಕಟಿಸಿದರು.
ಬಾಲ್ಯದಲ್ಲಿ ಶಾಲಾ ಶೈಕ್ಷಣಿಕ ಪ್ರವಾಸದಲ್ಲಿ ತಾನು ಧರ್ಮಸ್ಥಳಕ್ಕೆ ಬಂದಿರುವುದನ್ನು ಸ್ಮರಿಸಿದ ಸಚಿವರು ಧರ್ಮಸ್ಥಳದಲ್ಲಿ ಯೋಜನೆ ಅನುಷ್ಠಾನಗೊಳಿಸಿರುವುದು ಬದುಕಿನ ಅವಿಸ್ಮರಣೀಯ ಕಾರ್ಯವಾಗಿದ್ದು ಇದರಿಂದಾಗಿ ಪರೋಕ್ಷವಾಗಿ ನಾಡಿನೆಲ್ಲೆಡೆಯಿಂದ ಬರುವ ಸಾವಿರಾರು ಭಕ್ತರಿಗೂ ಪ್ರಯೋಜನವಾಗಿದೆ ಎಂದು ಅವರು ಧನ್ಯತೆಯನ್ನು ವ್ಯಕ್ತಪಡಿಸಿದರು. ತಮ್ಮ ವಿಧಾನ ಸಭಾಕ್ಷೇತ್ರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಮಹಿಳಾ ಸಬಲೀಕರಣ ಕಾರ್ಯ ಸಾಧನೆ ಬಗ್ಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿ ಹೆಗ್ಗಡೆಯವರನ್ನು ಅಭಿನಂದಿಸಿದರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಧರ್ಮಸ್ಥಳಕ್ಕೆ ಬಂದ ಭಕ್ತರು ನೇತ್ರಾವತಿ ನದಿಯಲ್ಲಿ ಪುಣ್ಯಸ್ನಾನ ಮಾಡಿ ದೇವರ ದರ್ಶನ ಮಾಡುವುದು ಸಂಪ್ರದಾಯವಾಗಿದೆ. ಇದರಿಂದ ಭಕ್ತರು ಬಹಿರಂಗ ಮತ್ತು ಅಂತರಂಗದಲ್ಲಿ ಪರಿಶುದ್ಧರಾಗಿ ತಮ್ಮ ದೋಷಗಳನ್ನು ಪರಿಹರಿಸಿಕೊಳ್ಳುತ್ತಾರೆ. ವಸತಿ ಛತ್ರಗಳಲ್ಲಿ ಹಾಗೂ ಅನ್ನದಾನಕ್ಕೂ ನೀರಿನ ಅವಶ್ಯಕತೆ ಇದೆ. ಪಂಚಭೂತಗಳಲ್ಲಿ ನೀರು ಅತ್ಯಂತ ಪ್ರಮುಖವಾಗಿದ್ದು ಬದುಕಿಗೆ, ಕೃಷಿಗೆ ಹಾಗೂ ಇತರ ಕಾರ್ಯಗಳಿಗೂ ನೀರು ಅಗತ್ಯವಾಗಿದೆ.
ಎರಡೂವರೆ ಕಿ.ಮೀ. ದೂರದಿಂದ ನದಿ ನೀರನ್ನು ಶುದ್ಧೀಕರಿಸಿ ಕುಡಿಯುವ ನೀರು, ವಸತಿ ಛತ್ರಗಳಿಗೆ ಹಾಗೂ ಅನ್ನದಾನಕ್ಕೆ ಮತ್ತು ಊರಿನ ನಾಗರಿಕರಿಗೆ ಕುಡಿಯುವ ನೀರು ಒದಗಿಸಲಾಗುವುದು.
ಆಧುನಿಕ ತಂತ್ರಜ್ಞಾನವನ್ನು ಬಳಸಿ ತ್ಯಾಜ್ಯ ನೀರನ್ನು ಶುದ್ಧೀಕರಣಗೊಳಿಸಿ ಮರುಬಳಕೆ ಮಾಡಲು ಕ್ರಮ ತೆಗೆದುಕೊಳ್ಳವಂತೆ ಹೆಗ್ಗಡೆಯವರು ಇಲಾಖಾ ಅಧಿಕಾರಿಗಳಿಗೆ ಸಲಹೆ ನೀಡಿದರು.
ಕುಡಿಯುವ ನೀರು ಸರಬರಾಜು ಯೋಜನೆ ಆದಷ್ಟು ಶೀಘ್ರ ನಿರ್ವಿಘ್ನವಾಗಿ ಪೂರ್ಣಗೊಳ್ಳುಲೆಂದು ಅವರು ಹಾರೈಸಿದರು.
ಧರ್ಮಸ್ಥಳದ ಡಿ. ಸುರೇಂದ್ರಕುಮಾರ್ ಮತ್ತು ಡಿ. ಹರ್ಷೇಂದ್ರ ಕುಮಾರ್, ಸುರಪುರ ವಿಧಾನಸಭಾ ಕ್ಷೇತ್ರದ ಶಾಸಕ ನರಸಿಂಹನಾಯಕ, ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಕಿಯೊನಿ ಕ್ಸ್ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ಮೋಹನ್‌ರಾಜ್, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ ಮತ್ತು ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಯಾ ಮೋನಪ್ಪಗೌಡ ಉಪಸ್ಥಿತರಿದ್ದರು.
ಶಾಸಕ ಹರೀಶ್ ಪೂಂಜ ಸ್ವಾಗತಿಸಿದರು. ಶ್ರೀನಿವಾಸ ರಾವ್ ಧರ್ಮಸ್ಥಳ ಧನ್ಯವಾದವಿತ್ತರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ