ನಿಟ್ಟೆ: 'ಭಾರತವು ಕ್ಷಿಪ್ರಗತಿಯಲ್ಲಿ ಪ್ರಗತಿಹೊಂದುತ್ತಿರುವ ರಾಷ್ಟ್ರವಾಗಿರುವುದರಿಂದ ಸಾಫ್ಟ್ ವೇರ್ ಮಾತ್ರವಲ್ಲದೆ ತಯಾರಿಕಾ ಕ್ಷೇತ್ರದಲ್ಲೂ ನುರಿತ ತಂತ್ರಜ್ಞರನ್ನು ಉತ್ತಮ ಉದ್ಯೋಗಾವಕಾಶಗಳು ಕೈಬೀಸಿ ಕರೆಯುತ್ತಿವೆ. ಇಂಜಿನಿಯರಿಂಗ್ ನ ಸೈದ್ದಾಂತಿಕ ಜ್ಞಾನದೊಂದಿಗೆ ಪ್ರಾಯೋಗಿಕ ಜ್ಞಾನವನ್ನೂ ಸಂಪಾದಿಸಿಕೊಳ್ಳುವುದು ಅತ್ಯಗತ್ಯ' ಎಂದು ನಿಟ್ಟೆ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಪೊ-ಚಾನ್ಸೆಲರ್ ವಿಶಾಲ್ ಹೆಗ್ಡೆ ಅಭಿಪ್ರಾಯಪಟ್ಟರು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟ್ರಿಕಲ್ ಇಲೆಕ್ಟ್ರಾನಿಕ್ಸ್ ವಿಭಾಗವು ನವೆಂಬರ್ 21 ರಂದು ವಿಭಾಗದ ಹಳೆವಿದ್ಯಾರ್ಥಿಗಳ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡ 'ಎಲಿಕ್ಸೀರ್ 2022' ವಿದ್ಯಾರ್ಥಿಗಳ ಮಾದರಿ ವಸ್ತುಪ್ರದರ್ಶನದ ಹನ್ನೊಂದನೇ ಆವೃತ್ತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
'ನಿಟ್ಟೆ ಶಿಕ್ಷಣ ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ಪ್ರಾಯೋಗಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇಂತಹ ವಸ್ತುಪ್ರದರ್ಶನಗಳು ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಲು ಉತ್ತಮ ವೇದಿಕೆಯಾಗುತ್ತವೆ. ವಿಭಾಗದಲ್ಲಿ ಕಲಿತು ಇಂದು ಉತ್ತಮ ಉದ್ಯೋಗದಲ್ಲಿದ್ದು ಇಂತಹ ಪ್ರಾಜೆಕ್ಟ್ ಪ್ರದರ್ಶನಕ್ಕೆ ಸಹಾಯ ಮಾಡುವ ಹಳೆವಿದ್ಯಾರ್ಥಿಗಳ ಕೊಡುಗೆ ಶ್ಲಾಘನೀಯ. ಇಂದು ಪ್ರದರ್ಶನಗೊಳ್ಳುತ್ತಿರುವ ಪ್ರಾಜೆಕ್ಟ್ ಗಳು ಮುಂದೊಂದು ದಿನ ದೊಡ್ಡ ಮಟ್ಟದಲ್ಲಿ ತಯಾರಿಕೆಯಾಗುವಂತಾಗಲಿ' ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ನಿರಂಜನ್ ಎನ್ ಚಿಪ್ಳೂಣ್ಕರ್ ಅವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ 'ಈ ಕಾರ್ಯಕ್ರಮದಲ್ಲಿ ಪ್ರದರ್ಶನಗೊಳ್ಳುತ್ತಿರುವ 117 ಮಾದರಿಗಳು ವಿದ್ಯಾರ್ಥಿಗಳ ಪರಿಶ್ರಮಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇಂದಿನ ದಿನಗಳಲ್ಲಿ ಕಂಪ್ಯೂಟರ್, ಸಾಫ್ಟ್ ವೇರ್ ಬಳಕೆ ಪ್ರತಿಯೊಂದು ವಿಭಾಗದಲ್ಲಿಯೂ ಅನಿವಾರ್ಯವಾಗಿದ್ದು ವಿಭಾಗಗಳ ನಡುವಿನ ಪ್ರತ್ಯೇಕತಾರೇಖೆಯೇ ಮಾಯವಾಗಿದೆ. ವಿದ್ಯಾರ್ಥಿಗಳ ಬೆಳವಣಿಯನ್ನು ಬೆಂಬಲಿಸುವ ನಿಟ್ಟಿನಲ್ಲಿ ಹಳೆ ವಿದ್ಯಾರ್ಥಿಗಳು ಉತ್ತಮ ಕೊಡುಗೆ ಸಲ್ಲಿಸುತ್ತಿರುವರು' ಎಂದರು.
ನಿಟ್ಟೆ ತಾಂತ್ರಿಕ ಕಾಲೇಜಿನ ಉಪಪ್ರಾಂಶುಪಾಲ ಡಾ| ಶ್ರೀನಿವಾಸ ರಾವ್ ಬಿ ಆರ್, ಫ್ಯಾಕಲ್ಟಿ ಸಂಯೋಜಕ ಅನೂಪ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇಲೆಕ್ಟ್ರಿಕಲ್ ಇಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಡಾ| ಸೂರ್ಯನಾರಾಯಣ ಕೆ ಸ್ವಾಗತಿಸಿ ಎಲಿಕ್ಸೀರ್ 2022 ವಸ್ತುಪ್ರದರ್ಶನದ ಬಗೆಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎಲಿಕ್ಸೀರ್ ವಿದ್ಯಾರ್ಥಿ ಸಂಯೋಜಕ ಸಮಿತ್ ಸುವರ್ಣ ವಂದಿಸಿದರು. ವಿದ್ಯಾರ್ಥಿನಿ ಜೇನ್ ಪೀಟರ್ ಲೋಬೋ ಕಾರ್ಯಕ್ರಮ ನಿರೂಪಿಸಿದರು.
ಉದ್ಘಾಟನಾ ಕಾರ್ಯಕ್ರಮವನ್ನು ವಿನೂತನ ರೀತಿಯಲ್ಲಿ ನೆರವೇರಿಸಲಾಯಿತು. ವಿದ್ಯಾರ್ಥಿಗಳ ಪ್ರಾಜೆಕ್ಟ್ ನ್ನೊಳಗೊಂಡ ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಇಲೆಕ್ಟ್ರಿಕ್ ವೆಹಿಕಲ್, ಸೋಲಾರ್ ಬೀದಿದೀಪ ಹಾಗೂ ಇನ್ವೆಂಟರಿ ಎಪ್ಲಿಕೇಶನ್ ಬಿಡುಗಡೆಗೊಳಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ