ಬ್ರಹ್ಮದ್ವೇಷ ಇಲ್ಲದ ಬೆರ್ಮೆರ್‌ ನಂಬಿಕೆಯಡಿ ಪೊಡಮೂಡಿದ ತುಳುಸಂಸ್ಕೃತಿಯ ಸಿನಿಮಾ!

Upayuktha
0


ಲೇಖನ: ಜಿತೇಂದ್ರ ಕುಂದೇಶ್ವರ

ನಟ್ಟಿರುಳು ದಟ್ಟ ಕಾಡಿನಲ್ಲಿ ಬೃಹದಾಕಾರದ ಮರ, ಕಡಿಯುವ ದೃಶ್ಯ, ಬಿದ್ದ ಮರದ ಮೇಲೆ ನಾಯಕ ರಿಷಬ್‌ ವೇಗವಾಗಿ ಹೆಜ್ಜೆಗಳ ಇಡುವಾಗ ನನಗೆ ಅವತಾರ್‌ ಸಿನಿಮಾದ ನ್ಯಾಚುರಲ್‌ ನೇಚರ್‌ ಕಣ್ಣಿಗೆ ಕಟ್ಟಿದಂತಾಯಿತು.


ಅನ್ನಿಯನ್‌ ಸಿನಿಮಾದಲ್ಲಿ ನಾಯಕ ವಿಕ್ರಮ್‌ ಏಟು ತಿಂದು ಜರ್ಝರಿತನಾಗಿ ಬಿದ್ದು ನಿಸ್ತೇಜನಾದ ಸ್ವಲ್ಪ ಹೊತ್ತಿನ ಬಳಿಕ ಎದ್ದೇಳುವ ದೃಶ್ಯ ನನ್ನ ಕಣ್ಣಲ್ಲಿ ಈಗಲೂ ಕಟ್ಟಿದಂತಿದೆ.


ಅದೇ ರೀತಿ ಅನೇಕ ಮಂದಿಯ ಸ್ಮೃತಿ ಪಟಲದಲ್ಲಿ ಬಹುಕಾಲ ಉಳಿಯಲಿದೆ ನಾಯಕ ರಿಷಬ್‌ ಶೆಟ್ಟಿ ಏಟು ತಿಂದು ಬಿದ್ದ ಬಳಿಕ ಎದ್ದೇಳುವ ದೃಶ್ಯ. ಗುಳಿಗ ದೈವ ಆವಾಹನೆಯಾಗುವ ಅಬ್ಬರ!

ಆರಂಭದಲ್ಲಿ ಗುತ್ತಿನ ಅರಸ ಕಾಡಿನಲ್ಲಿ #ಪಂಜುರ್ಲಿ ದೈವವನ್ನು ಮನೆಗೆ ಒಯ್ಯಲು ಅನುಮತಿ ಕೇಳುವ ದೃಶ್ಯದಲ್ಲಿ ಅಲ್ಲಿರುವ ಜನರು ಪಕ್ಕಾ ಆದಿವಾಸಿಗಳಂತೆ ದರ್ಶನ ಪಾತ್ರಿ (ನವೀನ ಬೋಂದೇಲ್ )ಯ ಆವೇಶ ಎಲ್ಲವನ್ನು ನೋಡುವಾಗ ನನ್ನ ಫೇವರಿಟ್ ನಂ.1 ಸಿನಿಮಾ #ಅಪೊಕಲಿಪ್ತೊ ಹಾಲಿವುಡ್‌ ಸಿನಿಮಾದ ದೃಶ್ಯಗಳಷ್ಟು ಅದ್ಭುತ ಮತ್ತು ಸಹಜವಾಗಿತ್ತು.


ಹಂದಿರೂಪದ ಪಂಜುರ್ಲಿ ಕಾಡಿನಲ್ಲಿ ಮಾಯದಲ್ಲಿ ಅಡ್ಡಾಡುವಾಗ ಹಾವೊಂದು ‌ತನ್ನ ಪಾಡಿಗೆ ಹೋಗುತ್ತಿರುತ್ತದೆ. ಇದು ಸಣ್ಣ ವಿಚಾರವಾದರೂ ಅತ್ಯಂತ ಸೂಕ್ಷ್ಮ ವಿಚಾರ. ಅನಿಮೇಶನ್‌ ಹಾವು ಮಾಡಲು ಖರ್ಚು ಮಾಡಲಾಗಿದೆ ಎಂಬ ಕಾರಣಕ್ಕೆ ಹಾವನ್ನು ಅಗತ್ಯಕ್ಕಿಂತ ಹೆಚ್ಚಾಗಿ ತೋರಿಸದೆ ಎಷ್ಟು ಬೇಕೋ ಅಷ್ಟೇ ತೋರಿಸಿದ್ದಾರೆ. 

ಗೋಲಿ ಸೋಡ, ಫಾರೆಸ್ಟ್‌ ಗೇಟ್‌, ಬ್ಯಾನರ್‌, ಅಂಗಡಿ ಫಲಕಗಳ ಅಕ್ಷರಗಳಿಂದ ಹಿಡಿದು ಪೆಟ್ರೋಮ್ಯಾಕ್ಸ್‌ (ಗ್ಯಾಸ್‌ಲೈಟ್), ಸಣ್ಣಪುಟ್ಟ ಅಂಶಗಳಲ್ಲಿಯೂ ಆಯಾ ಕಾಲಕ್ಕೆ, ಆಯಾ ಪರಿಸರಕ್ಕೆ ತಕ್ಕುದಾಗಿಯೇ ತೋರಿಸಿದ್ದಾರೆ. (ರಿಷಬ್‌ ವೈಶಿಷ್ಟ್ಯತೆಯೇ ಅದು, ಬೆಲ್‌ ಬಾಟಮ್‌ ನಲ್ಲಿಯೇ ಕಂಡಿದ್ದೇನೆ).


ಎಲ್ಲಿಯೂ ತಪ್ಪು ಕಂಡು ಹುಡುಕಲು ಸಾಧ್ಯವಾಗುತ್ತಿಲ್ಲ, ಮನಸ್ಸು ಕೂಡಾ ಇಲ್ಲ.. 70ರ ದಶಕದ ದೈವದ ಬಣ್ಣ, ವೇಷ ಭೂಷಣಗಳು, ಕಡು ಅರಸಿನ ಬಣ್ಣದ ಮುಖದಲ್ಲಿನ ದೈವಕಳೆ, ತೇಜಸ್ಸು, ಕೆಂಪನೆ ಕೇಪಳ ಹೂ, ಅಪ್ಪಟ ತೆಂಗಿನ ಗರಿ, ಬಳಿಕ ಗುರುವ ದೈವ ಪಾತ್ರ‌ದ ವಿನಯವಂತಿಕೆ, *ಗುರುವ ಎಷ್ಟೇ ಕುಣಿದರೂ ಅವನ ದೊಡ್ಡಪ್ಪನಷ್ಟು ಚೆಂದ ಕುಣಿಯುವುದಿಲ್ಲ ಎನ್ನುವ ಸಹಜ ಮಾತುಗಳು, (ನಮ್ಮ ಊರಿನಲ್ಲಿ ಈ ರೀತಿಯ ಮಾತುಗಳನ್ನು ಹಲವು ಬಾರಿ ಕೇಳಿದ್ದೇನೆ).


ಇದಾದ ಬಳಿಕ ನಾಯಕ ರಿಷಬ್‌ ಪಂಜುರ್ಲಿ ವೇಷ ಬಣ್ಣ, ಆಭೂಷಣಗಳು ಈಗಿನ ಕಾಲಕ್ಕೆ ಸರಿ ಹೊಂದುತ್ತಿವೆ. ಮುಖವರ್ಣಿಕೆ ಯಕ್ಷಗಾನೀಯವಾಗಿರುವುದು, ದೇವಸ್ಥಾನಗಳ ಪ್ರಭಾವಳಿಯಂತೆ ದೈವದ ಅಣಿಗಳು... ಕುಣಿತವೂ ಕೂಡ


ತುಳು ದೈವ ಸಂಸ್ಕೃತಿ ಹಿನ್ನೆಲೆಯ ತುಳು ಸಿನಿಮಾ #ನೇಮದಬೂಳ್ಯದಲ್ಲಿಯೂ ಕಥೆಯೂ ಚೆನ್ನಾಗಿತ್ತು. ಆ ಕಾಲದ ಮನೆಗಳು, ವಸ್ತುಗಳು ಸಿನಿಮಾದಲ್ಲಿದ್ದವು. ಆದರೆ ಸಿನಿಮಾದಲ್ಲಿ ತಾಂತ್ರಿಕ ಶ್ರೀಮಂತಿಕೆ ಇರಲಿಲ್ಲ. ಅಬ್ಬರವೂ ಇರಲಿಲ್ಲ. ಕಥಾ ಪ್ರಸ್ತುತಿ ಸಾಮಾನ್ಯವಾಗಿತ್ತು. ಹೀಗಾಗಿ ಈ ರೀತಿ ಸದ್ದು ಮಾಡಲಿಲ್ಲ. ಕಾಂತಾರದಲ್ಲಿ ರಾತ್ರಿ ದೊಂದಿ ಬೆಳಕು ಪರದೆಯಲ್ಲಿ ಈ ರೀತಿಯ ಕಾಂಬಿನೇಶನ್‌, ಸಂಗೀತ ಸ್ವರ ಏರಿಳಿತಗಳು, ಕ್ಲೈಮ್ಯಾಕ್ಸ್‌ಗಳು ಕಥಾ ಪ್ರಸ್ತುತಿ ಕಲಾ ನಿರ್ದೇಶನ, ಛಾಯಾಗ್ರಹಣ, ಸಂಕಲನ ಅದೊಂದು ದೃಶ್ಯ ಕಾವ್ಯ.. ಅದ್ಭುತ... 


ಪ್ರತಿಯೊಬ್ಬನಲ್ಲೂ ಒಬ್ಬ ರೆಬೆಲ್‌ ಇದ್ದಾನೆ, ಒರಟ ಇದ್ದಾನೆ. ಪೊಲಿತನ ಬಹುತೇಕ ಇದ್ದೇ ಇರುತ್ತೆ. ವಾಚ್ಯವಾಗಿ, ಕಾಯಿಕವಾಗಿ ತೋರಿಸದೇ ಇದ್ದರೂ ಮಾನಸಿಕವಾಗಿ ಪೊಲಿತನ ಇರಲೇ ಬೇಕು. ಇಲ್ಲವಾದರೆ ಅವ ಸರಿಯಾದ ಮನುಷ್ಯನೇ ಅಲ್ಲ. ಕಾಂತಾರದಲ್ಲಿ ನಾಯಕ ಮತ್ತು ಆತನ ಗೆಳೆಯರಲ್ಲಿ ಇದನ್ನೆಲ್ಲವನ್ನು ಯಥೇಚ್ಛವಾಗಿ ತುರುಕಲಾಗಿದೆ, 'ಪೋಲಿತನ' ಮಾಡಿದವರಿಗೆ ನೆನಪಾಗಿ ಖುಷಿಯಾದರೆ, ಮಾಡದವರಿಗೂ ಸ್ತುಪ್ತವಾಗಿದ್ದ ಬಯಕೆಗಳಿಗೆ ಮುದ ನೀಡಿದೆ. ಹೀಗಾಗಿ ಮಾಸ್‌ ಪ್ರೇಕ್ಷಕರ ಹೃದಯತಟ್ಟಿದೆ. ನೂರಾರು ವಿಮರ್ಶೆ ನೋಡಿದ ಬಳಿಕವೂ ಕಾಂತಾರ ನೋಡಿದರೂ ಅನೇಕ ಬಾರಿ ನಾನು ರೋಮಾಂಚಿತನಾದೆ.


ಹಾಲಿ‌ವುಡ್ ಶೈಲಿ:

ಮರದ ಮೇಲೆ ಒಂದು ಅಟ್ಟಳಿಗೆಯ ಮನೆಯನ್ನು ನಮ್ಮ  ನೆರೆಮನೆ ಭಂಡಾರಿಗಳ ಗದ್ದೆಯ ಬದಿಯಲ್ಲಿ ನೋಡಿದ್ದೇನೆ. ಇಬ್ಬರು ಮಲಗಬಹುದು. ರಾತ್ರಿ ಗದ್ದೆ ಕಾಯಲು ಅದನ್ನು ಬಳಸುತ್ತಿದ್ದರು.  ಇದೇ ರೀತಿಯ ಮನೆಯನ್ನು #ರಿಷಬ್‌ ಶೆಟ್ರು, ಹಾಲಿವುಡ್‌ ಶೈಲಿಯಲ್ಲಿ ಎತ್ತರದ ಮರದಲ್ಲಿ ಅಟ್ಟಳಿಗೆ ಮನೆ ಕಟ್ಟುವ ಮೂಲಕ ತುಳು ಸಂಸ್ಕೃತಿಯನ್ನು ಇನ್ನಷ್ಟು ಎತ್ತರಕ್ಕೆ ಏರಿಸಿದ್ದಾರೆ.

 

ತುಳುನಾಡಲ್ಲಿ ಗುಳಿಗ ದೈವದ ಅಬ್ಬರದ ಕುಣಿತ ನೋಡಿದವ ನಾನು. ಏಟು ತಿಂದು ಧರಾಶಾಹಿಯಾಗಿ ಬಳಿಕ ಏಳುವಾಗ ರಿಷಬ್‌ ಮುಖಕ್ಕಂಟಿದ ಕಪ್ಪನೆ ಮಸಿ ಬಣ್ಣ, ಹೆಪ್ಪುಗಟ್ಟುತ್ತಿರುವ ರಕ್ತದ ಕೆಂಪು ಬಣ್ಣ ಪಕ್ಕನೆ ನೋಡಿದರೆ ಗುಳಿಗನೇ ಎದ್ದು ಬಂದನೋ ಎಂಬಂತ ಕಾಣುತ್ತಿತ್ತು. ದೊಂದಿ ಹೊಡೆದಾಟ, ಅದರಿಂದ ಬಿದ್ದ ಕರಿ, ರಕ್ತ ಹೀಗೆ ಮೇಕಪ್‌ ಇಲ್ಲದೆ ತನ್ನಿಂದ ತಾನಾಗಿಯೇ ಆ ವೇಷ ಪಡಿಮೂಡಿದ ಹಾಗೆ. ಕೋಪದ ಆವೇಶ ಅತ್ಯಂತ ಸಹಜವಾಗಿ ಕಾಣುತ್ತದೆ. ( ಇದಕ್ಕೆ ಗಂಟೆಗಟ್ಟಲೆ ಮೇಕಪ್‌ ಮಾಡಿರಬಹುದು ಅದು ಬೇರೆ ವಿಷಯ). ಜತೆಯಲ್ಲಿ ಮಾಡು ಏರುವ ಇಳಿಯುವ ಅತಿ ಮಾನುಷ ಶಕ್ತಿಯಂತೆ ತೋರಿಸುವ ಮೂಲಕ ಹಾರರ್‌ ಮೂವಿಯ ಸಣ್ಣ ಝಲಕ್‌ ಪಾಸ್‌ ಆಗುತ್ತದೆ. ಸಹಜತೆ ವಿಚಾರದಲ್ಲಿ #ಹಾಲಿವುಡ್‌ ಗೆ ಸಮನಾಗಿ ಮೂಡಿದೆ ಎನ್ನಲಡ್ಡಿ ಇಲ್ಲ. ಇಲ್ಲವಾದರೆ #ಬಾಲಿವುಡ್‌ ನಲ್ಲಿ ಸಾವಿರಾರು ಶೋಗಳನ್ನು ಪಡೆಯುವುದು ಸುಲಭವಲ್ಲ. ನಾನು ಬಾಲ್ಯದಲ್ಲಿ ನೋಡಿದ ನಮ್ಮ ಮನೆ ದೈವ ಲತ್ತಂಡೆ ಪಂಜುರ್ಲಿ ಕೋಲದಲ್ಲಿ ಚಕ್ಕು ಎಂಬ ಹಿರಿಯ ದೈವ ನರ್ತಕರ ಕುಣಿತ, ಆವೇಶ, ಭಯ ಹುಟ್ಟಿಸುವ ವಿಶಿಷ್ಟ ಸ್ವರಗಳು ನನ್ನಲ್ಲಿ ಈಗಲೂ ರೋಮಾಂಚನ ಹುಟ್ಟಿಸುತ್ತವೆ. (ಬಾಲಕನಾಗಿದ್ದ ನಾನು ಮರುದಿನ ಅದೇ ರೀತಿ ಬಟ್ಟೆ ತೊಟ್ಟು ಸ್ವರ, ಹಾವ, ಭಾವ ಅನುಕರಿಸುತ್ತಿದ್ದೆ.)


ಕಡು ಅರಸಿನ ಮುಖ ಬಣ್ಣ, ತಲೆಪಟ್ಟಿ, ಕಿರೀಟ ಕೂಡಾ ಬದಿರಿನಲ್ಲಿಯೇ ಮಾಡಿ ಅದಕ್ಕೆ ಕೇಪಳ ಹೂ ಹಾಕುತ್ತಿದ್ದರು. ಈಗ ನಡೆಯುತ್ತಿರುವ ನೇಮ ಕೋಲದಲ್ಲಿ ಆದ ವ್ಯತ್ಯಾಸಗಳು, ಬದಲಾವಣೆಗಳನ್ನು ನಾನು ನೋಡುತ್ತಿದ್ದೇನೆ. ಕಾಲ ಬದಲಾಗಿದೆ ಎಲ್ಲವೂ ಬದಲಾಗುತ್ತಿದೆ. ಇದನ್ನೇ ಸಿನಿಮಾದಲ್ಲಿ ಸಹಜವಾಗಿಯೇ ತೋರಿಸಿದ್ದಾರೆ. ಇದೇ ಸರಿ, ಅದು ತಪ್ಪು ಎಂದು ತೀರ್ಮಾನ ನೀಡಿಲ್ಲ. ಇದೇ ಸಿನಿಮಾದ ಯಶಸ್ಸಿನ ಗುಟ್ಟು.

kundeshwara@gmail.com

9945666324


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top