ಗೋಕರ್ಣ: ಪ್ರತಿಯೊಂದು ಜೀವಿಯನ್ನೂ ಭಯ ಕಾಡುತ್ತದೆ. ಇದರ ಕಾರಣದಿಂದ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಭಗವಂತನ ಅಭಯ ಮುದ್ರೆ ಸಮಸ್ತ ಜೀವಕೋಟಿ ಭಯ ನಿವಾರಿಸಬಲ್ಲದು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು.
ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಶನಿವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಇಂಥ ಅಭಯ ಸ್ಥಿತಿಯನ್ನು ತಲುಪುವವನಿಗೆ ಯಾವ ಭಯ ಅಥವಾ ಅಂಜಿಕೆ ಇರುವುದಿಲ್ಲ. ಅಭಯದೀಕ್ಷೆಯಿಂದ ಮಾತ್ರ ಭಯ ನಿವಾರಣೆ ಸಾಧ್ಯ. ಜೀವನದಲ್ಲಿ ಭಯವೇ ದೊಡ್ಡ ಆಪತ್ತು. ಅದಕ್ಕಿಂತ ದೊಡ್ಡ ಆಪತ್ತು ಬೇರೊಂದಿಲ್ಲ. ಸಾವಿನ ಬಗ್ಗೆ ಭೀತಿ ಮಾಡಿ ಚಿಂತೆ ಮಾಡುವ ಬದಲು ಜೀವನದ ಬಗ್ಗೆ ಚಿಂತೆ ಮಾಡಿ ಎಂದು ಕರೆ ನೀಡಿದರು.
ಹೇಡಿಯೊಬ್ಬನಿಗೆ ತನ್ನ ಬಗ್ಗೆ ಜಿಗುಪ್ಸೆಗೊಂಡು ಧೈರ್ಯಶಾಲಿಯಾಗಬೇಕು ಎಂಬ ಸಂಕಲ್ಪದಿಂದ ಸಮರ ವಿದ್ಯೆ ಕಲಿಸುವ ಗುರುಕುಲವೊಂದಕ್ಕೆ ಹೋಗಿ ತನಗೆ ಧೈರ್ಯ ಕಲಿಸಿಕೊಡಿ ಎಂದು ಗುರುಗಳನ್ನು ಕೇಳುತ್ತಾನೆ. ಆಗ ಗುರುಗಳು ಒಂದು ತಿಂಗಳು ತಯಾರಿ ಮಾಡುವಂತೆ ಸೂಚಿಸುತ್ತಾರೆ. ದೊಡ್ಡ ಊರಿನಲ್ಲಿ ವಾಸವಿದ್ದು, ನಿನ್ನಲ್ಲಿಗೆ ಬರುವ ಎಲ್ಲರಿಗೂ ನಾನು ಹೇಡಿ ಎಂದು ಗಟ್ಟಿಯಾಗಿ ಹೇಳಿಕೊಳ್ಳಬೇಕು ಎಂದರು. ಆಗ ಭಯ ಆತನನ್ನು ಕಾಡಿತು. ಬೇಸರದಲ್ಲೇ ಎರಡು ದಿನ ಕಳೆದು ಬಳಿಕ ಗುರುಗಳ ಸೂಚನೆ ಪಾಲನೆ ಮಾಡಲು ಮುಂದಾಗುತ್ತಾನೆ. ಮೊದಲ ಬಾರಿಗೆ ನಾನೊಬ್ಬ ಹೇಡಿ ಎಂದು ಹೇಳಿಕೊಳ್ಳಲು ಆತನಿಗೆ ತೀರಾ ಮುಜುಗರ ಎನಿಸಿತು. ಆದರೆ ಕ್ರಮೇಣ ತಾನು ಹೇಡಿ ಎಂದು ಹೇಳಿಕೊಳ್ಳಲು ಅಭ್ಯಾಸವಾಯಿತು. ನಾನೊಬ್ಬ ಹೇಡಿ ಎಂದು ಧೈರ್ಯವಾಗಿ ಹೇಳಿಕೊಳ್ಳತೊಡಗಿದ. ಆದರೆ ಒಂದು ತಿಂಗಳು ಕಳೆದಾಗ ತಾನು ಹೇಡಿಯಲ್ಲ ಎಂಬ ಆತ್ಮವಿಶ್ವಾಸ ಆತನಲ್ಲಿ ಮೂಡಿತು ಎಂದು ಬಣ್ಣಿಸಿದರು.
ಬಳಿಕ ಗುರುಗಳ ಬಳಿಗೆ ಬಂದು ನನಗೆ ಯಾರ ಬಗ್ಗೆಯೂ ಭಯ ಇಲ್ಲ ಎಂದು ಹೇಳಿದ. ಭಯಕ್ಕೆ ಚಿಕಿತ್ಸೆ ಎಂದರೆ ಭಯದ ವಾತಾವರಣವೇ. ಉದಾಹರಣೆಗೆ ಎತ್ತರದಿಂದ ಕೆಳಗೆ ನೋಡಲು ಭಯ ಎನಿಸಿದರೆ ಪದೇ ಪದೇ ಎತ್ತರದ ಪ್ರದೇಶಕ್ಕೆ ಹೋದರೆ ಸಹಜವಾಗಿಯೇ ಭಯ ಮಾಯವಾಗುತ್ತದೆ ಎಂದರು.
ಧೈರ್ಯವಂತರನ್ನು ಭೂತ ಕಾಡುವುದಿಲ್ಲ; ಭಯಗ್ರಸ್ಥರನ್ನು ಅಥವಾ ಹೇಡಿಗಳನ್ನು ಮಾತ್ರವೇ ಅದು ಕಾಡುತ್ತದೆ. ಅಳುಕು ಇರುವವರ ಮನಸ್ಸು ಭೂತಕ್ಕೆ ಮೊದಲ ಆಹಾರ. ಯುದ್ಧದ ಭಯ ಇದ್ದರೆ, ಪದೇ ಪದೇ ಯುದ್ಧ ಮಾಡಬೇಕು. ಭಯದಿಂದ ಯಾವ ಲಾಭವೂ ಇಲ್ಲ. ಭಯವನ್ನು ಮೀರುವ ಮಾರ್ಗೋಪಾಯಗಳು ಅನೇಕ ಇವೆ. ಅದೆಂದರೆ ಮೂಲವನ್ನು ಹುಡುಕಿಕೊಂಡು ಹೋಗಿ ಅದನ್ನು ಪದೇ ಪದೇ ಎದುರಿಸುವುದು ಎಂದು ನುಡಿದರು.
ಆದ್ದರಿಂದ ಭಯ ಹೊಂದಿದ ಪ್ರತಿಯೊಬ್ಬರೂ, ಭಯದ ಕಡೆಗೆ ನುಗ್ಗುವ ಮೂಲಕ ಅದನ್ನು ಸೋಲಿಸಬೇಕು. ಭಯ ಎಂಬ ಮಾಯೆಯನ್ನು ನಾವು ಗುರುತಿಸಿದರೆ ಅಥವಾ ಕಂಡರೆ ಭಯದ ಚಿಂತೆ ಇರುವುದಿಲ್ಲ ಎಂದು ವಿವರಿಸಿದರು.
ಖ್ಯಾತ ಗಾಯಕಿ ಬಿ.ಆರ್. ಛಾಯಾ ಶನಿವಾರ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಬಳಿಕ ಹಾಡಿನ ಮೂಲಕ ಭಕ್ತರ ಮನ ರಂಜಿಸಿದರು. ಬಳಿಕ ಗುರುಕುಲ ವಿದ್ಯಾರ್ಥಿನಿಯರಾದ ತನ್ವಿತಾ ಮತ್ತು ಭವ್ಯ ಅವರಿಂದ ಭರತನಾಟ್ಯ, ವಸುಧಾ ಶರ್ಮಾ ಮತ್ತು ಬಳಗದವರಿಂದ ಹಿಂದೂಸ್ತಾನಿ ಗಾಯನ ನಡೆಯಿತು. ಧಾರ್ಮಿಕ ಕಾರ್ಯಕ್ರಮದಲ್ಲಿ ಚಾತುರ್ಮಾಸ್ಯ ಅಂಗವಾಗಿ ರುದ್ರಹವನ, ಚಂಡಿ ಪಾರಾಯಣ, ರಾಮತಾರಕ ಹವನ, ಚಂಡಿಹವನ, ಮಾತೆಯರಿಂದ ಕುಂಕುಮಾರ್ಚನೆ ನಡೆದವು.
ಚಾತುರ್ಮಾಸ್ಯ ಅಂಗವಾಗಿ ಈ ತಿಂಗಳ 5ರಂದು (ಸೋಮವಾರ) ಮಧ್ಯಾಹ್ನ 3.30ರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಲಿದೆ. ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಅವರ ಗಾಯನವಿದ್ದು, ಗೋಪಾಲಕೃಷ್ಣ ಹೆಗಡೆ ತಬಲಾದಲ್ಲಿ ಮತ್ತು ಸತೀಶ್ ಭಟ್ ಅವರು ಹಾರ್ಮೋನಿಯಂನಲ್ಲಿ ಸಹಕರಿಸುವರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ