ವಿವಿ ಕಾಲೇಜು: 36 ವರ್ಷಗಳ ಸೇವೆಯ ನಂತರ ವಯೋನಿವೃತ್ತಿ ಪಡೆದ ಇಂಗ್ಲಿಷ್ ವಿಭಾಗ ಮುಖ್ಯಸ್ಥೆ
ಮಂಗಳೂರು: ನನ್ನ ತಂದೆ-ತಾಯಿ, ಯಾವತ್ತೂ ನನ್ನನ್ನು ಕೈಹಿಡಿದು ನಡೆಸಲಿಲ್ಲ, ಅದಕ್ಕಾಗಿ ಅವರಿಗೆ ನಾನು ಕೃತಜ್ಞನಾಗಿದ್ದೇನೆ. ಜೀವನದ ಅನುಭವಗಳು, ವಿಶೇಷವಾಗಿ ವಿಶ್ವವಿದ್ಯಾನಿಲಯ ಕಾಲೇಜಿನೊಂದಿಗಿನ 36 ವರ್ಷಗಳ ಬಾಂಧವ್ಯ ನನ್ನ ಬದುಕನ್ನು ರೂಪಿಸಿದೆ, ಎಂದು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆಯಾಗಿ ನಿವೃತ್ತರಾದ ಡಾ.ರಾಜಲಕ್ಷ್ಮಿ ಎನ್.ಕೆ ಹೇಳಿದರು.
ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ನೆರೆದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಅತೀ ಸಾಮಾನ್ಯ, ಲೋಕಜ್ಞಾನವಿಲ್ಲದ ವಿಜ್ಞಾನ ವಿದ್ಯಾರ್ಥಿನಿಯಿಂದ ಇಂಗ್ಲಿಷ್ ಪ್ರಾಧ್ಯಾಪಕರಾಗುವವರೆಗೆ ತಮ್ಮ ಬೆಳವಣಿಗೆಯನ್ನು ಸ್ಮರಿಸಿದರು. “ರಸಾಯನಶಾಸ್ತ್ರದ ಮೇಲಿನ ಪ್ರೀತಿಯಿದ್ದರೂ, ಕಾಲೇಜು ನಿಯತಕಾಲಿಕೆಗೆ ನೀಡಿದ ಕೊಡುಗೆಗಳು ನನ್ನನ್ನು ಭಾಷೆ ಮತ್ತು ಸಾಹಿತ್ಯದ ಕಡೆಗೆ ಕರೆದೊಯ್ಯಿತು. ಕುಟುಂಬದ ಹಿನ್ನೆಲೆ, ಆರಂಭದ ದಿನಗಳಲ್ಲಿ ತಂದೆಯಂತೆ ಮಾರ್ಗದರ್ಶನ ನೀಡಿದ ಪ್ರಾಂಶುಪಾಲ ಡಾ. ಹಿರೇಮಠ ಅವರನ್ನು ಮರೆಯಲಾಗದು,” ಎಂದರು.
ತಮ್ಮ ಪತಿ, ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಉದಯಕುಮಾರ್ ಇರ್ವತ್ತೂರು ಅವರ ಬೆಂಬಲವನ್ನು ಪ್ರೀತಿಯಿಂದ ಸ್ಮರಿಸಿದ ಅವರು, "ಅವರ ಬೆಂಬಲದೊಂದಿಗೆ, ನಾನು ಅನೇಕ ಜವಾಬ್ದಾರಿಗಳನ್ನು ನಿಭಾಯಿಸಿದೆ, ಮೌಲ್ಯಮಾಪನ ವ್ಯವಸ್ಥೆಯಲ್ಲಿ ಬದಲಾವಣೆ ತಂದಿದ್ದೇನೆ, ಪತ್ರಿಕೋದ್ಯಮ ಪ್ರಯೋಗಾಲಯ, ಇಂಗ್ಲಿಷ್ ಭಾಷಾ ಪ್ರಯೋಗಾಲಯ, ಪುಸ್ತಕ ಪ್ರಕಟಣೆ, ಸೆಮಿನಾರ್ಗಳ ಆಯೋಜನೆಯಂತಹ ಪ್ರಮುಖ ಯೋಜನೆಗಳನ್ನು ಪೂರ್ಣಗೊಳಿಸಿದೆ," ಎಂದರು. ಇದೇ ವೇಳೆ ಅವರು ಜ್ಞಾನವನ್ನು ಹಂಚಿಕೊಳ್ಳಲು ತಿಂಗಳಿಗೊಮ್ಮೆಯಾದರೂ ಕಾಲೇಜಿನಲ್ಲಿ ಶೈಕ್ಷಣಿಕ ವಿನಿಮಯ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಆಗ್ರಹಿಸಿದರು.
ಡಾ ಉದಯಕುಮಾರ್ ಇರ್ವತ್ತೂರು ಅವರು ಕಾಲೇಜಿಗೆ ನಿವೃತ್ತ ಪ್ರಾಧ್ಯಾಪಿಕೆಯ ಕೊಡುಗೆಯನ್ನು ಶ್ಲಾಘಿಸಿದರಲ್ಲದೆ ಅವರ ಬದ್ಧತೆಯನ್ನು ಸ್ಮರಿಸಿದರು. "ರಾಜಲಕ್ಷ್ಮಿ ಕೆಲಸದಲ್ಲಿ ಪರಿಪೂರ್ಣತೆ ಬಯಸುವವರು ಮತ್ತು ತನ್ನ ವಿಷಯದಲ್ಲಿ ಅತ್ಯುತ್ತಮ ಹಿಡಿತ ಹೊಂದಿರುವವರು. ಅವರು ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸವನ್ನು ಬೆಳೆಸಿದರು. ಒಂದು ರೀತಿಯಲ್ಲಿ ಆಕೆ ನನ್ನ ಗುರುವೂ ಹೌದು'' ಎಂದರು.
ಪ್ರಾಂಶುಪಾಲೆ ಡಾ.ಅನಸೂಯಾ ರೈ ಅವರು, ಡಾ.ರಾಜಲಕ್ಷ್ಮಿ ಎನ್ ಕೆ ಅವರು ಬಹುಮುಖ ಪ್ರತಿಭೆ, ಪರಿಪೂರ್ಣ ಮಹಿಳೆ, ಸಂಸ್ಥೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ, ಎಂದು ಶ್ಲಾಘಿಸಿದರಲ್ಲದೆ ಶೀಘ್ರದಲ್ಲೇ ಕಾಲೇಜಿನಲ್ಲಿ ಶೈಕ್ಷಣಿಕ ವಿನಿಮಯ ಚಟುವಟಿಕೆ ಆರಂಭಿಸುವುದಾಗಿ ಭರವಸೆ ನೀಡಿದರು. ಇದೇ ವೇಳೆ ಡಾ.ಸುಧಾ ಎನ್.ವೈದ್ಯ, ಅರುಣಾ ಕುಮಾರಿ, ಡಾ.ಕೆ.ಎಂ.ಉಷಾ, ಡಾ.ವೀರಬದ್ರಪ್ಪ, ಡಾ.ಗಣಪತಿ ಗೌಡ, ಡಾ.ರಾಮಕೃಷ್ಣ, ಶ್ರೀರಾಜ್ ಬಿ.ಎಸ್., ಜೈಬುನ್ನುಯಿಸ್ಸಾ, ಕೃಷ್ಣ ಶೆಟ್ಟಿಗಾರ್ ಮತ್ತಿತರರು ನಿವೃತ್ತರ ಜೊತೆಗಿನ ತಮ್ಮ ಸವಿನೆನಪುಗಳನ್ನು ಹಂಚಿಕೊಂಡರು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಲತಾ ಎ.ಪಂಡಿತ್ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ