ನವರಾತ್ರಿ- ದುರ್ಗಾಪೂಜೆ: ಜಗಜ್ಜನನಿಯ ಆರಾಧನೆಯ ಪರ್ವಕಾಲ

Upayuktha
0


 ಯಾ ದೇವೀ ಸರ್ವ ಭೂತೇಷು ಮಾತೃರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೇ ನಮೋ ನಮಃ! !!!


ಎಲ್ಲ ಓದುಗರಿಗೆ ನವರಾತ್ರಿ ಹಬ್ಬದ ಶುಭಾಶಯಗಳು


"ನವರಾತ್ರಿ" ಇದು ದೇವಿಯನ್ನು ಆರಾಧಿಸುವ ಹಿಂದೂ ಧರ್ಮದ ಹಬ್ಬ. ಇದನ್ನು ಕರ್ನಾಟಕದಲ್ಲಿ ದಸರಾ ಎಂದು ಕರೆಯಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ಈ ಹಬ್ಬವನ್ನು ದುರ್ಗಾ ಪೂಜಾ ಎಂದು ಆಚರಿಸಲಾಗುತ್ತದೆ. ನವರಾತ್ರಿಯೆಂದರೆ ಒಂಬತ್ತು (ನವ) ರಾತ್ರಿಗಳು, ದೇವಿಯ ಒಂಬತ್ತು ವಿಧದ ರೂಪಗಳನ್ನು ಆರಾಧಿಸಲಾಗುತ್ತದೆ. ಹತ್ತನೇಯ ದಿನ ‘ವಿಜಯ ದಶಮಿ’.


ನವರಾತ್ರಿಯ ಕುರಿತು ಪುರಾಣಗಳಲ್ಲಿ ಹಲವು ಉಲ್ಲೇಖಗಳಿವೆ. ಹಲವು ಕಥೆಗಳಿವೆ.. ನವರಾತ್ರಿಯಲ್ಲಿ ಚಾಮುಂಡೇಶ್ವರಿ /ದುರ್ಗಾದೇವಿಯು ಮಹಿಷಾಸುರ ಮರ್ಧಿನಿಯಾಗಿ ಮಹಿಷಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದಳು. ನವರಾತ್ರಿಯೆಂದರೆ ಒಂಭತ್ತು ದಿನಗಳಿಗೆ ಸೀಮಿತವಾಗಿದ್ದರೂ ಹತ್ತನೇ ದಿನ ವಿಜಯದಶಮಿ. ಮಹಾದುರ್ಗೆ ರಾಕ್ಷಸರನ್ನು ಸಂಹರಿಸಿ ವಿಜಯವನ್ನು ಸಾಧಿಸಿದ ದಿನ. ತ್ರೇತಾಯುಗದಲ್ಲಿ ಶ್ರೀರಾಮನು ರಾವಣನನ್ನು ಸಂಹಾರ ಮಾಡಿದನು. ಅದು ವಿಜಯದಶಮಿಯ ದಿನ ಎಂಬ ನಂಬಿಕೆ ಇದೆ.


ದ್ವಾಪರಾಯುಗದಲ್ಲಿ ಪಾಂಡವರು ಒಂದು ವರ್ಷ ಅಜ್ಞಾತವಾಸ ಮಾಡುವಾಗ ತಮ್ಮ ಆಯುಧಗಳನ್ನು ಬನ್ನಿ ಮರದಲ್ಲಿ ಮುಚ್ಚಿಟ್ಟಿದ್ದರು. ದಶಮಿಯ ದಿನಕ್ಕೆ ಅಜ್ಞಾತವಾಸ ಮುಗಿದು, ಅವರು ಬನ್ನಿ ಮರದಿಂದ ತಮ್ಮ ಆಯುಧಗಳನ್ನು ವಾಪಸ್ಸು ಪಡೆದು ಕುರುಕ್ಷೇತ್ರ ಯುದ್ಧದಲ್ಲಿ ಕೌರವರನ್ನು ಸೋಲಿಸಿ ವಿಜಯಸಾಧಿಸಿದರು ಎಂದು ಹೇಳುತ್ತಾರೆ. ಹೀಗಾಗಿ ಈ ದಶಮಿಯನ್ನು ವಿಜಯದಶಮಿ ಎಂದು ಕರೆಯುತ್ತಾರೆ. ಆದ್ದರಿಂದ ಇವರೆಲ್ಲರ ವಿಜಯದ ಸಂಕೇತವಾಗಿ ಈ ದಿನವನ್ನು ವಿಜಯದಶಮಿ ಎಂದು ಆಚರಿಸುವುದು ಸಂಪ್ರದಾಯ.


ರಾಮನಿಂದ ರಾವಣನ ವಧೆಯಾಗಬೇಕೆಂದು ನಾರದರು ರಾಮನಿಗೆ ಶರವನ್ನರಾತ್ರಿ ವ್ರತವನ್ನು ಮಾಡಲು ಹೇಳಿದ್ದರು. ಈ ವ್ರತವನ್ನು ಪೂರ್ಣಗೊಳಿಸಿದ ನಂತರ ರಾಮನು ಲಂಕೆಯ ಮೇಲೆ ಆಕ್ರಮಣ ಮಾಡಿ ಯುದ್ಧದಲ್ಲಿ ರಾವಣನನ್ನು ವಧಿಸಿದನು.


ದೇವಿಯು, ಮಹಿಷಾಸುರನೆಂಬ ರಾಕ್ಷಸನೊಂದಿಗೆ ಪಾಡ್ಯದಿಂದ ನವಮಿಯವರೆಗೆ ಒಂಬತ್ತು ದಿನಗಳ ಕಾಲ ಯುದ್ಧವನ್ನು ಮಾಡಿ ನವಮಿಯ ರಾತ್ರಿ ಅವನನ್ನು ಕೊಂದಳು. ಅಂದಿನಿಂದ ಅವಳಿಗೆ ಮಹಿಷಾಸುರಮರ್ದಿನಿ ಎನ್ನತೊಡಗಿದರು.


ದಸರಾ ಎನ್ನುವ ಶಬ್ದದ ಒಂದು ವ್ಯುತ್ಪತ್ತಿಯು ದಶಹರಾ ಎಂದೂ ಇದೆ. ದಶ ಎಂದರೆ ಹತ್ತು, ಹರಾ ಎಂದರೆ ಸೋತಿವೆ. ದಸರಾದ ಮೊದಲ ಒಂಬತ್ತು ದಿನಗಳ ನವರಾತ್ರಿಗಳಲ್ಲಿ ಹತ್ತೂ ದಿಕ್ಕುಗಳು ದೇವಿಯ ಶಕ್ತಿಯಿಂದ ಸಂಪನ್ನವಾಗಿರುತ್ತವೆ ಮತ್ತು ನಿಯಂತ್ರಣಕ್ಕೊಳಪಟ್ಟಿರುತ್ತವೆ. ಅಂದರೆ ಹತ್ತೂ ದಿಕ್ಕುಗಳಲ್ಲಿನ ದಿಕ್ಪಾಲಕರು, ಗಣರು ಮುಂತಾದವರ ಮೇಲೆ ನಿಯಂತ್ರಣವಿರುತ್ತದೆ. ಹತ್ತೂ ದಿಕ್ಕುಗಳ ಮೇಲೆ ವಿಜಯವು ದೊರಕಿರುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಈ ದಿನಕ್ಕೆ ದಶಹರಾ, ದಸರಾ, ವಿಜಯ ದಶಮಿ ಮುಂತಾದ ಹೆಸರುಗಳಿವೆ. ಈ ದಿನದಂದೇ ಶ್ರೀರಾಮಚಂದ್ರನು ರಾವಣನ ಮೇಲೆ ವಿಜಯ ಪಡೆದು ಆತನನ್ನು ವಧಿಸಿದ್ದನು ಎಂದು ನಂಬಲಾಗುತ್ತದೆ. ಈ ಘಟನೆಗಳ ಸಂಕೇತವಾಗಿ ಈ ದಿನಕ್ಕೆ ವಿಜಯದಶಮಿ ಎಂದು ಹೆಸರು ಬಂದಿದೆ. ಹಾಗೆ ನೋಡಿದರೆ ಈ ಹಬ್ಬವು ಬಹಳ ಪ್ರಾಚೀನ ಕಾಲದಿಂದ ನಡೆದು ಬಂದಂತಿದೆ. ಪ್ರಾರಂಭದ ಕಾಲದಲ್ಲಿ ಇದು ಕೃಷಿಗೆ ಸಂಬಂಧಪಟ್ಟ ಒಂದು ಲೋಕೋತ್ಸವವಾಗಿತ್ತು. ಮಳೆಗಾಲದಲ್ಲಿ ಬಿತ್ತಿದ ಪ್ರಥಮ ಪೈರು ಮನೆಗೆ ಬಂದಾಗ ರೈತರು ಈ ಉತ್ಸವವನ್ನು ಆಚರಿಸುತ್ತಿದ್ದರು. ಕಲಶ ಸ್ಥಾಪನೆಯ ದಿನ ಕಲಶದ ಕೆಳಗಿನ ಪೀಠದಲ್ಲಿ ಒಂಭತ್ತು ಧಾನ್ಯಗಳನ್ನು ಬಿತ್ತುತ್ತಾರೆ. ದಸರಾದಂದು ಈ ಧಾನ್ಯದ ಮೊಳಕೆಗಳನ್ನು ತೆಗೆದು ದೇವರಿಗೆ ಅರ್ಪಿಸುತ್ತಾರೆ. ಅನೇಕ ಕಡೆ ಗದ್ದೆಯಲ್ಲಿ ಬೆಳೆದ ಭತ್ತದ ತೆನೆಗಳನ್ನು ಕೊಯ್ದು ತಂದು ಅವುಗಳನ್ನು ಮನೆಯ ಪ್ರವೇಶದ್ವಾರಕ್ಕೆ ತೋರಣದಂತೆ ಕಟ್ಟುತ್ತಾರೆ. ಈ ಪದ್ಧತಿಯಿಂದ ಕೃಷಿಗೆ ಸಂಬಂಧಪಟ್ಟ ಈ ಹಬ್ಬದ ಸ್ವರೂಪ ಸ್ಪಷ್ಟವಾಗುತ್ತದೆ. ಮುಂದೆ ಈ ಹಬ್ಬಕ್ಕೆ ಧಾರ್ಮಿಕ ಸ್ವರೂಪವನ್ನು ಕೊಡಲಾಯಿತು.


ಆಯುಧಪೂಜೆ (ಶಸ್ತ್ರಪೂಜೆ) ಅಂದರೆ ಏನು?:

ಈ ದಿನ ರಾಜರು, ಸಾಮಂತರು, ಸರದಾರರು ತಮ್ಮ ತಮ್ಮ ಶಸ್ತ್ರಗಳನ್ನು ಸ್ವಚ್ಛಗೊಳಿಸಿ, ಸಾಲಾಗಿ ಇಟ್ಟು ಪೂಜೆ ಮಾಡುತ್ತಾರೆ. ಹಾಗೆಯೇ ರೈತರು ಮತ್ತು ಕುಶಲ ಕರ್ಮಿಗಳು ತಮ್ಮತಮ್ಮ ಶಸ್ತ್ರಗಳ ಪೂಜೆಯನ್ನು ಮಾಡುತ್ತಾರೆ. ಕೆಲವರು ಈ ಪೂಜೆಯನ್ನು ನವಮಿಯಂದೂ ಮಾಡುತ್ತಾರೆ.


ಮಾರ್ಕಂಡೇಯ ಋಷಿಗಳು ಬರೆದಿರುವ ದುರ್ಗಾಸಪ್ತಶತಿ ಎಂಬ ಗ್ರಂಥವು ತಂತ್ರ ಮತ್ತು ಮಂತ್ರ ಈ ಎರಡೂ ಮಾರ್ಗಗಳಲ್ಲಿ ಪ್ರಸಿದ್ಧವಾಗಿದ್ದು ಭಾರತದಲ್ಲಿ ಇಂದು ಲಕ್ಷಾಂತರ ಜನರು ಸಪ್ತಶತಿಯ ಪಠಣ ಮಾಡುತ್ತಿರುವುದು ಕಂಡುಬರುತ್ತದೆ. ಭಗವಾನ ಹಿರಣ್ಯಗರ್ಭ ಮುನಿಗಳು ಮಂತ್ರಯೋಗ ಸಮೀಕ್ಷೆಯಲ್ಲಿ ಹೇಳಿರುವ ಶ್ರೀ ದುರ್ಗಾಸಪ್ತಶತಿಯಲ್ಲಿನ ದೇವಿಯ ಹೆಸರುಗಳ ಶಾಸ್ತ್ರೀಯ ಅರ್ಥ ಮತ್ತು ಇಂದಿನ ಭೌತಿಕ ವಿಜ್ಞಾನವು ಮಾಡಿರುವ ಪ್ರಗತಿಯ ಬಗ್ಗೆ ಇಲ್ಲಿ ನಾವು ವಿಚಾರ ಮಾಡೋಣ.


ಪ್ರಥಮಂ  ಶೈಲಪುತ್ರೀ ಚ ದ್ವಿತೀಯಂ  ಬ್ರಹ್ಮಚಾರಿಣಿ ತೃತೀಯಂ  ಚಂದ್ರಘಂಟೇತಿ  ಕೂಷ್ಮಾಂಡೇತಿ ಚತುರ್ಥಕಮ್

ಪಂಚಮಂ  ಸ್ಕಂದಮಾತೇತಿ ಷಷ್ಠಂ  ಕಾತ್ಯಾಯಿನೀತಿ ಚ ಸಪ್ತಮಂ  ಕಾಲರಾತ್ರಿಶ್ಚ  ಮಹಾಗೌರೀತಿ ಚಾಷ್ಟಮಮ್

ನವಮಂ  ಸಿದ್ಧಿಧಾತ್ರೀ ಚ ನವದುರ್ಗಾಃ ಪ್ರಕೀರ್ತಿತಾಃ


ಮೊದಲ ದಿನ (ಕೆಂಪು ಬಣ್ಣ)

ನವರಾತ್ರಿಯ ಮೊದಲ ದಿನಕ್ಕೆ

ದುರ್ಗಾಮಾತೆ ಗೆ ‘ಶೈಲಪುತ್ರಿ’ ಎಂದು ಕರೆಯುತ್ತಾರೆ (ಪರ್ವತರಾಜನ  ಸುಪುತ್ರಿ). ಈ ದಿನದಂದು ದುರ್ಗೆಯನ್ನು ಶಿವನ ಪತ್ನಿಯಾಗಿ ಪೂಜಿಸಲಾಗುತ್ತದೆ. ಕೆಂಪು ಬಣ್ಣವು ಉತ್ಸಾಹ ಮತ್ತು ಸಂಭ್ರಮಗಳನ್ನು ಪ್ರತಿಬಿಂಬಿಸುತ್ತದೆ, ಹಬ್ಬವನ್ನು ಪ್ರಾರಂಭಿಸಲು ಅತಿ ಸೂಕ್ತವಾದ ಬಣ್ಣ.


ಎರಡನೆಯ ದಿನ (ಕಡುನೀಲಿ ಬಣ್ಣ)

ದ್ವಿತೀಯ ದಿನ ದುರ್ಗೆಯು ‘ಬ್ರಹ್ಮಚಾರಿಣಿ’ಯ ರೂಪ ಪಡೆಯುತ್ತಾಳೆ. ಈ ದಿನದಂದು ದೇವಿಯು ಸಂತೋಷ ಮತ್ತು ಸಮೃದ್ಧಿಯನ್ನು ಕೊಡುತ್ತಾಳೆ. ಕಡುನೀಲಿ ಬಣ್ಣವು ಶಾಂತಿ ಮತ್ತು ಶಕ್ತಿಯನ್ನು ಪ್ರತಿಪಾದಿಸುತ್ತದೆ.


ಮೂರನೆಯ ದಿನ (ಹಳದಿ ಬಣ್ಣ)

ತೃತೀಯ ದಿನದಂದು ದೇವಿಯು ‘ಚಂದ್ರಘಂಟೆ’ಯ ರೂಪದಲ್ಲಿ ಪೂಜಿಸಲ್ಪಡುತ್ತಾಳೆ. ಈ ರೂಪದಲ್ಲಿ ದುರ್ಗೆಯ ಹಣೆಯ ಮೇಲೆ ಅರ್ಧಚಂದ್ರಾಕೃತಿಯಿಂದ ಅಲಂಕಾರ ಮಾಡುತ್ತಾರೆ. ಇದು ಸೌಂದರ್ಯ ಮತ್ತು ಶೌರ್ಯವನ್ನು ಪ್ರತಿಬಿಂಬಿಸುತ್ತದೆ. ದೇವಿಯು ರಾಕ್ಷಸರೊಂದಿಗೆ (ದುಷ್ಟ ಶಕ್ತಿಗಳೊಂದಿಗೆ) ಹೋರಾಡಿ ಲೋಕವನ್ನು ರಕ್ಷಿಸಿದ ಶಕ್ತಿ ಇವಳು. ಲೋಕದ ಎಲ್ಲರ ಮನಸ್ಸಿನಲ್ಲಿ ಈ ಹಳದಿ ಬಣ್ಣವು ಉತ್ಸಾಹವನ್ನು ತುಂಬುತ್ತದೆ.


ನಾಲ್ಕನೆಯ ದಿನ (ಹಸಿರು ಬಣ್ಣ)

ಚತುರ್ಥಿಯ ದಿನದಂದು ದೇವಿಯು ‘ಕುಶ್ಮಾಂಡೆ’ಯ ರೂಪ ಪಡೆಯುತ್ತಾಳೆ. ಈಕೆಯನ್ನು ಜಗತ್ತಿನ ಸೃಷ್ಟಿಕರ್ತೆ ಎನ್ನಲಾಗುತ್ತದೆ. ಈಕೆ ಭೂಮಿಯನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡುತ್ತಾಳೆ.


ಐದನೆಯ ದಿನ (ಬೂದು ಬಣ್ಣ)

ಪಂಚಮಿಯಂದು ದೇವಿಯು ‘ಸ್ಕಂದ ಮಾತೆ’ಯ ರೂಪ ಪಡೆಯುತ್ತಾಳೆ. ಈ ದಿನದಂದು ದೇವಿಯು ಕಾರ್ತಿಕೇಯನನ್ನು ತನ್ನ ಶಕ್ತಿಯುತವಾದ ಕೈಯಲ್ಲಿ ಹಿಡಿದಿರುತ್ತಾಳೆ. ಬೂದು ಬಣ್ಣವು ತಾಯಿ ಮಗುವನ್ನು ರಕ್ಷಿಸಲು ಯಾವುದೇ  ಹಂತಕ್ಕು ಹೋಗಲು ತಯಾರಿರುತ್ತಾಳೆ ಎಂಬುದನ್ನು ಪ್ರತಿಬಿಂಬಿಸುತ್ತದೆ.


ಆರನೆಯ ದಿನ(ಕೇಸರಿ)

ಆರನೆಯ ದಿನದಂದು ದೇವಿಯು ‘ಕಾತ್ಯಾಯನಿ’ಯ ರೂಪ ಧರಿಸುತ್ತಾಳೆ. ಕೆಲವು ದಂತಕತೆಗಳ ಪ್ರಕಾರ ‘ಕಾತ’ ಎಂಬ ಋಷಿಯು ದೇವಿ ದುರ್ಗೆಯನ್ನು ಮಗಳಾಗಿ ಪಡೆಯಲು ಯಜ್ಞ ಮಾಡಿದ. ಅವನ ಭಕ್ತಿಗೆ ಮೆಚ್ಚಿ ದುರ್ಗೆಯು ಪ್ರಸನ್ನಳಾಗಿ, ಕೇಸರಿ ಬಣ್ಣದ ದಿರಿಸು ಧರಿಸಿ ಮಗಳಾಗಿ ಜನಿಸಿ ಬರುತ್ತಾಳೆ. ಈ ಬಣ್ಣವು ಧೈರ್ಯವನ್ನು ಪ್ರತಿಬಿಂಬಿಸುತ್ತದೆ.


ಏಳನೆಯ ದಿನ(ಬಿಳಿಯ ಬಣ್ಣ)

ಏಳನೆಯ ದಿನದಂದು ದೇವಿಯನ್ನು ‘ಕಾಲರಾತ್ರಿ’ ಯ ರೂಪದಲ್ಲಿ ಪೂಜಿಸಲಾಗುತ್ತದೆ. ಈ ದಿನದಂದು ದೇವಿಯನ್ನು ಬಿಳಿಯ ಬಣ್ಣದ ಸೀರೆಯನ್ನು ಉಡಿಸಿ, ಕ್ರೋಧಭರಿತ ಕಣ್ಣುಗಳಿಂದ ಅಲಂಕರಿಸುತ್ತಾರೆ. ಬಿಳಿಯ ಬಣ್ಣವು ಭಕ್ತಿ ಮತ್ತು ಶಾಂತಿಯ ಪ್ರತೀಕವಾಗಿದೆ.


ಎಂಟನೆಯ ದಿನ (ಗುಲಾಬಿ ಬಣ್ಣ)

ಅಷ್ಟಮಿಯಂದು ಮಹಾ ಗೌರಿಯ ರೂಪದಲ್ಲಿ ದೇವಿಯನ್ನು ಎಲ್ಲ ‘ಪಾಪ-ಪರಿಹಾರಕಳು’ ಎಂದು ಪೂಜಿಸಲಾಗುತ್ತದೆ. ಗುಲಾಬಿ ಬಣ್ಣವು ಭರವಸೆ ಮತ್ತು ನವೀನತೆಯ ಪ್ರತೀಕವಾಗಿದೆ.


ಒಂಬತ್ತನೆಯ ದಿನ (ತಿಳಿ ನೀಲಿ)

ನವಮಿಯಂದು ದೇವಿಯು ‘ಸಿದ್ಧಿಧಾತ್ರಿ’ಯ ರೂಪ ಧರಿಸುತ್ತಾಳೆ. ತಿಳಿನೀಲಿ ಬಣ್ಣದಿಂದ ಅಲಂಕರಿಸಲಾಗುತ್ತದೆ. 'ಸಿದ್ಧಿಧಾತ್ರಿ'ಯು ಸಿದ್ಧಿಯನ್ನು ಪಡೆದುಕೊಳ್ಳಲು ನಿರಂತರ ಅನುಗ್ರಹ ಮಾಡುತ್ತಾಳೆ.


-ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

8971275651


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top