ಮೂಡುಬಿದಿರೆ: ಆಂತರಿಕ ಶಕ್ತಿಯನ್ನು ಅರಿತವರು ಮಹಾನ್ ವ್ಯಕ್ತಿಗಳಾಗಿ ಹೊರಹೊಮ್ಮುತ್ತಾರೆ. ವಿದ್ಯಾರ್ಥಿಗಳಿಗೆ ತಮ್ಮ ಆಂತರಿಕ ಶಕ್ತಿಯನ್ನು ಅರಿಯಲು ರಾಷ್ಟ್ರೀಯ ಸೇವಾ ಯೋಜನೆಯು ಒಂದು ಉತ್ತಮ ವೇದಿಕೆಯಾಗಿದ್ದು, ಅದನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ರಾಜ್ಯ ರಾಷ್ಟ್ರಿಯ ಸೇವಾ ಯೋಜನಾ ಅನುಷ್ಠಾನ ಅಧಿಕಾರಿ ಡಾ. ಪೂರ್ಣಿಮಾ ಜೋಗಿ ಹೇಳಿದರು.
ಆಳ್ವಾಸ್ ಪದವಿಪೂರ್ವ ಕಾಲೇಜಿನ ರಾಷ್ಟ್ರಿಯ ಸೇವಾ ಯೋಜನೆ ಘಟಕವು ಶಿವರಾಮ ಕಾರಂತ ಸಭಾಂಗಣದಲ್ಲಿ ಆಯೋಜಿಸಿದ್ದ ‘ರಾಷ್ಟ್ರಿಯ ಸೇವಾ ಯೋಜನಾ ಸಂಸ್ಥಾಪನಾ ದಿನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ವ್ಯಕ್ತಿತ್ವ ವಿಕಸನಕ್ಕೆ ಅಡ್ಡಿಯಾಗಿರುವ ಕೀಳರಿಮೆ ಮತ್ತು ಮೇಲರಿಮೆ ಎಂಬ ವೈರಸ್‍ನ್ನು ದೂರಮಾಡಬೇಕಾದರೆ ರಾಷ್ಟ್ರಿಯ ಸೇವಾ ಯೋಜನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಆಮೂಲಕ ಸದೃಡ ರಾಜ್ಯ ದೇಶ ಕಟ್ಟಲು ವಿದ್ಯಾರ್ಥಿಗಳು ಪಣ ತೊಡಬೇಕೆಂದು ಕರೆನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ರಾಷ್ಟ್ರೀಯ ಸೇವಾ ಯೋಜನಾ ನಿವೃತ್ತ ಅಧಿಕಾರಿ ಡಾ. ಗಣನಾಥ ಶೆಟ್ಟಿ ಎಕ್ಕಾರು, ರಾಷ್ಟ್ರಿಯ ಸೇವಾ ಯೋಜನೆಯು ಜಾತಿ, ಧರ್ಮತೀತವಾಗಿದ್ದು ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುತ್ತಿದೆ. ಸೇವಾ ಮನೋಭಾವವನ್ನೇ ಧ್ಯೇಯವನ್ನಾಗಿಸಿದ ಎನ್ನೆಸ್ಸೆಸ್ ಪಾಲ್ಗೊಳ್ಳುವ ಮೂಲಕ ಸಮಾಜದ ಋಣ ಸಂದಾಯ ಮಾಡಲು ಸಾಧ್ಯ. ಜ್ಞಾನ, ಕೌಶಲ್ಯ, ದೈಹಿಕ ಆರೋಗ್ಯ ಹಾಗೂ ಜೀವನ ಮೌಲ್ಯಗಳನ್ನು ಒಳಗೊಂಡಿರುವ ಎನ್ನೆಸೆಸ್‍ನಲ್ಲಿ ವಿದ್ಯಾರ್ಥಿಗಳಿಗೆ ಪಠ್ಯದಷ್ಟೇ, ಪಠ್ಯೇತರ ಚಟುವಟಿಕೆಗಳಿಗೂ ಮಹತ್ವ ನೀಡುತ್ತದೆ. ವಿದ್ಯಾರ್ಥಿಗಳು ರಚನಾತ್ಮಕವಾಗಿ ತೊಡಗಿಸಿಕೊಂಡಾಗ ರಾಷ್ಟ್ರ, ರಾಜ್ಯ, ಜಿಲ್ಲೆ ಹಾಗೂ ಸ್ಥಳೀಯ ಅಭಿವೃದ್ಧಿಗೂ ಪೂರಕವಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಮಹಮ್ಮದ್ ಸದಾಕತ್ ಅವರು ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಯಲ್ಲದ್ದುಕೊಂಡು, ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ಕಲಿತ ಸಮಯದ ಸದುಪಯೋಗÀ, ಶಿಸ್ತು ಹಾಗೂ ಸೇವಾ ಮನೋಭಾವನೆಯನ್ನು ಜೀವನದುದ್ದುಕ್ಕೂ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾಲೇಜಿನ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ., ಕಲಾ ವಿಭಾಗದ ಡೀನ್ ವೇಣುಗೋಪಾಲ್ ಶೆಟ್ಟಿ, ರಾಷ್ಟ್ರಿಯ ಸೇವಾ ಯೋಜನ ಸಹ ಸಂಯೋಜನಾಧಿಕಾರಿ ಅಂಬರೀಶ್ ಚಿಪ್ಳೂಂಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನಾ ಸಂಯೋಜನಾಧಿಕಾರಿ ಶಾಲೆಟ್ ಮೋನಿಸ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿದ್ಯಾರ್ಥಿನಿ ಜಾಹ್ನವಿ ವಂದಿಸಿದರು. ಕೃತಿಕಾ, ಚಂದ್ರಾಧರ ಅತಿಥಿಗಳನ್ನು ಪರಿಚಯಿಸಿದರು. ಅಕ್ಷಾ ಕಾರ್ಯಕ್ರಮ ನಿರ್ವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ