ಧರ್ಮಸ್ಥಳ: ರಾಜ್ಯದ ಅರಣ್ಯ ಸಚಿವ ಉಮೇಶ್ ಕತ್ತಿ ಅವರ ನಿಧನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಅವರು, ಅರಣ್ಯ ಸಚಿವರಾದ ಉಮೇಶ್ ಕತ್ತಿಯವರು ನಿಧನರಾದ ವಿಚಾರ ತಿಳಿದು ವಿಷಾದವಾಯಿತು ಎಂದು ತಿಳಿಸಿದ್ದಾರೆ.
ಅವರು ನಮ್ಮ ಕ್ಷೇತ್ರದ ಅಭಿಮಾನಿಯೂ, ಭಕ್ತರೂ ಆಗಿದ್ದು ನಮ್ಮ ಎಲ್ಲಾ ಕಾರ್ಯಕ್ರಮಗಳಿಗೆ ಸಕ್ರಿಯ ಸಹಕಾರ ನೀಡಿ ಪ್ರೋತ್ಸಾಹಿಸುತ್ತಿದ್ದರು. ವಿಶೇಷವಾಗಿ, ರೈತರ ಕೃಷಿಗೆ ಕಾಡು ಪ್ರಾಣಿಗಳಿಂದ ಆಗುವ ಉಪಟಳವನ್ನು ತಡೆಯಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಹಮ್ಮಿಕೊಂಡ ಅರಣ್ಯ ಪ್ರದೇಶದಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಉತ್ತಮ ರೀತಿಯ ಸಹಕಾರ ನೀಡಿದ್ದಾರೆ. ಇತ್ತೀಚೆಗೆ ವೇಣೂರಿನಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಪ್ರೋತ್ಸಾಹಿಸಿದ್ದಾರೆ. ಅಲ್ಲದೆ, ಅರಣ್ಯ ಇಲಾಖೆಯಿಂದ ಹಣ್ಣಿನ ಗಿಡಗಳನ್ನು ಕೊಡಿಸಿ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದರು.
ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ ಹಾಗೂ ಅವರ ಅಗಲುವಿಕೆಯಿಂದ ಕುಟುಂಬದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿ-ತಾಳ್ಮೆಯನ್ನಿತ್ತು ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ ಎಂದು ಹೆಗ್ಗಡೆ ಅವರು ತಮ್ಮ ಸಂತಾಪ ಸೂಚಕ ಸಂದೇಶದಲ್ಲಿ ಸ್ಮರಿಸಿಕೊಂಡಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ