ಇಂಟರ್‌ ಡೆಂಟಲ್ ಬ್ರಷ್: ಹಾಗೆಂದರೇನು? ಇದು ಯಾಕೆ ಬೇಕು?

Upayuktha
0

ಸಾಮಾನ್ಯವಾಗಿ ಹಲ್ಲುಗಳನ್ನು ಶುಚಿಗೊಳಿಸಲು ದಂತ ಕುಂಚ ಅಥವಾ ಟೂತ್ ಬ್ರಷ್ ಬಳಸುತ್ತೇವೆ. ಇದು ಹಲ್ಲಿನ ಹೊರಭಾಗ, ಮೇಲ್ವಾಗ ಮತ್ತು ಒಳ ಭಾಗವನ್ನು ಶುಚಿಗೊಳಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಮೆದು, ಹದ ಮೆದು ಮತ್ತು ಕಠಿಣ ಎಂಬ ಮೂರು ರೀತಿಯ ಬ್ರಷ್‍ಗಳು ಲಭ್ಯವಿರುತ್ತದೆ. ಹೆಚ್ಚಾಗಿ ದಂತ ವೈದ್ಯರು ಮೆದು ಅಥವಾ ಹದ ಮೆದು/ಮೀಡಿಯಂ ಮೆದು ಬ್ರಷ್‍ಗಳನ್ನು ಬಳಸಲು ಆದೇಶಿಸುತ್ತಾರೆ. ಆದರೆ ಈ ಬ್ರಷ್‍ಗಳಿಂದ ಎರಡು ಹಲ್ಲುಗಳ ನಡುವಿನ ಭಾಗವನ್ನು ಶುಚಿಗೊಳಿಸಲು ಸಾಧ್ಯವಾಗುವುದಿಲ್ಲ. ಎರಡು ಹಲ್ಲುಗಳ ನಡುವಿನ ಅಂತರ ಗಟ್ಟಿಯಾಗಿ ಹಿಡಿದುಕೊಂಡಿದ್ದಲ್ಲಿ ದಂತ ಬಳ್ಳಿ ಅಥವಾ ದಂತ ದಾರ ಬಳಸಿ ಎರಡು ಹಲ್ಲುಗಳ ನಡುವಿನ ಭಾಗವನ್ನು ಶುಚಿಗೊಳಿಸುತ್ತಾರೆ. ಎರಡು ಹಲ್ಲುಗಳ ನಡುವೆ ಅಂತರವಿದ್ದಲ್ಲಿ ಅಥವಾ ಹಲ್ಲಿನ ಸುತ್ತಲಿನ ದಂತದಾರ ಎಲುಬು ಕರಗಿ ವಸಡು ಜಾರಿದ್ದಲ್ಲಿ, ಹಲ್ಲುಗಳ ನಡುವೆ ಆಹಾರ ಸಿಕ್ಕಿಹಾಕಿಕೊಳ್ಳುತ್ತದೆ. ಆಗ ಸಾಮಾನ್ಯ ಬ್ರಷ್‍ಗಳಿಂದ ಹಲ್ಲಿನ ನಡುವಿನ ಅಂತರದಲ್ಲಿ ಸಿಕ್ಕಿಹಾಕಿಕೊಂಡ ಆಹಾರವನ್ನು ಶುಚಿಗೊಳಿಸಲು ಸಾಧ್ಯವಾಗುವುದಿಲ್ಲ. ಇಂತಹಾ ಸಂದರ್ಭಗಳಲ್ಲಿ  ಇಂಟರ್‌ಡೆಂಟಲ್ ಬ್ರಷ್ ಬಳಸಬೇಕಾಗುತ್ತದೆ.


ವಿಧಗಳು:

ಇಂಟರ್‍ಡೆಂಟಲ್ ಬ್ರಷ್‍ಗಳಲ್ಲಿ ಮೂರು ವಿಧಗಳಿವೆ. ಎರಡು ಹಲ್ಲುಗಳ ನಡುವಿನ ಅಂತರವನ್ನು ನೋಡಿಕೊಂಡು ದಂತ ವೈದ್ಯರು ಯಾವ ರೀತಿಯ ಬ್ರಷ್ ಬಳಸಬೇಕು ಎಂದು ನಿರ್ಧರಿಸುತ್ತಾರೆ. ಅತಿ ಕಡಿಮೆ ಅಂತರವಿದ್ದಲ್ಲಿ ಪಿಂಕ್/ಗುಲಾಬಿ ಬಣ್ಣದ ಚಿಕ್ಕ ಇಂಟರ್‍ಡೆಂಟಲ್ ಬ್ರಷ್, ಸ್ವಲ್ಪ ಅಂತರವಿದ್ದಲ್ಲಿ ಕೆಂಪು/ರೆಡ್ ಬಣ್ಣದ ಮೀಡಿಯಂ ಗಾತ್ರದ ಇಂಟರ್‍ಡೆಂಟರ್ ಬ್ರಷ್ ಹಾಗೂ ಹೆಚ್ಚು ಅಂತರವಿದ್ದಲ್ಲಿ ಬ್ಲೂ/ ನೀಲಿ ಬಣ್ಣದ ದೊಡ್ಡ ಗಾತ್ರದ ಇಂಟರ್‍ಡೆಂಟಲ್ ಬ್ರಷ್ ಬಳಸಬಹುದಾಗಿದೆ. ಯಾವುದೇ ಕಾರಣಕ್ಕೂ ಹಲ್ಲುಗಳ ನಡುವೆ ಕಡ್ಡಿ, ಟೂತ್‍ಪಿಕ್, ಸೇಫ್ಟಿ ಪಿನ್ ಅಥವಾ ಇತರ ಇನ್ನಾವುದೇ ವಸ್ತು ಹಾಕಲೇಬಾರದು. ಈ ರೀತಿಯ ವಸ್ತುಗಳನ್ನು ಬಳಸುವುದರಿಂದ ಹಲ್ಲಿನ ವಸಡಿಗೆ ಗಾಯವಾಗಿ ರಕ್ತ ಜಿನುಗಬಹುದು ಮತ್ತು ವಸಡಿನಲ್ಲಿ ಸೋಂಕು ಉಂಟಾಗುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ಹಲ್ಲಿಗೆ ಗಾಯ ಉಂಟು ಮಾಡಲೂ ಬಹುದು. ಪದೇ ಪದೇ ಹಲ್ಲಿನ ನಡುವೆ ಶುಚಿಯಿಲ್ಲದ ಕಡ್ಡಿ ಬಳಸಿದಲ್ಲಿ ಕೀವು ಉಂಟಾಗುವ ಸಾಧ್ಯತೆ ಇರುತ್ತದೆ.


ಯಾವಾಗ ಇಂಟರ್‍ಡೆಂಟಲ್ ಬ್ರಷ್ ಬಳಸಬೇಕಾಗುತ್ತದೆ:

1. ರೋಗಿಯು ವಸಡು ಸಂಬಂಧಿ ರೋಗವಾದ ‘ಪಯೋರಿಯಾ’ ದಿಂದ ಬಳಲುತ್ತಿದ್ದಲ್ಲಿ ಹಲ್ಲುಗಳ ಸುತ್ತಲಿನ ದಂತಾದಾರ ಎಲುಬು ಕರಗಿ, ವಸಡು ಜಾರಿ ಹಲ್ಲುಗಳ ನಡುವೆ ಅಂತರವಿರುತ್ತದೆ. ಅಂತಹ ವ್ಯಕ್ತಿಗಳಲ್ಲಿ ಹಲ್ಲಿನ ನಡುವೆ ಸಿಕ್ಕಿ ಹಾಕಿಕೊಂಡ ಆಹಾರವನ್ನು ತೆಗೆಯಲು ಇಂಟರ್‍ಡೆಂಟಲ್ ಬ್ರಷ್ ಬಳಸಬಹುದು.

2. ಮಧುಮೇಹ ರೋಗಿಗಳಲ್ಲಿ ಹೆಚ್ಚಾಗಿ ವಸಡು ಸಮಸ್ಯೆ ಇರುತ್ತದೆ ಮತ್ತು ದವಡೆ ಹಲ್ಲುಗಳ ನಡುವೆ ಹೆಚ್ಚಾಗಿ ಅಂತರವಿರುತ್ತದೆ. ಆಗ ಇಂಟರ್‍ಡೆಂಟಲ್ ಬ್ರಷ್ ಬಳಸಿ ಹಲ್ಲುಗಳ ನಡುವಿನ ಆಹಾರವನ್ನು ತೆಗೆಯಬೇಕಾಗುತ್ತದೆ.

3. ಕ್ಷತಕ ಹಲ್ಲುಗಳಾದ ಕ್ರೌನ್ ಅಥವಾ ಬ್ರ್ರಿಡ್ಜ್ ಇರುವ ರೋಗಿಗಳಲ್ಲಿ ಹಲ್ಲು ಮತ್ತು ಕ್ರೌನ್‍ಗಳ ನಡುವೆ ಆಹಾರ ಸೇರಿಕೊಂಡಲ್ಲಿ ಕಡ್ಡಿ ಬಳಸುವ ಬದಲು ಈ ಇಂಟರ್‍ಡೆಂಟಲ್ ಬ್ರಷ್ ಬಳಸಬಹುದು.

4. ವಕ್ರದಂತ ಚಿಕಿತ್ಸೆಯ ಸಂದರ್ಭದಲ್ಲಿ ಹಲ್ಲಿನ ಮೇಲ್ಬಾಗಕ್ಕೆ ಅಂಟಿಸಿದ ಬ್ರಾಕೆಟ್‍ಗಳನ್ನು ಶುಚಿಗೊಳಿಸಲು ಈ ಮೆದುವಾದ ಇಂಟರ್‍ಡೆಂಟಲ್ ಬ್ರಷ್ ಬಳಸಬಹುದು.

5. ಪೆರಿಯೋಡೊಂಟೈಟಿಸ್ ಎಂಬ ವಸಡು ಸಂಬಂಧಿ ರೋಗ ಇರುವವರಲ್ಲಿ ವಸಡಿನ ಸುತ್ತ ಇರುವ ದಂತಾದಾರ ಎಲುಬು ಕರಗಿ, ಕೀವು ತುಂಬಿಕೊಂಡು, ಹಲ್ಲುಗಳ ನಡುವೆ ಆಹಾರ ಸಿಕ್ಕಿ ಹಾಕಿಕೊಂಡಿರುತ್ತದೆ. ಇಂತಹ ರೋಗಿಗಳಲ್ಲಿ ಇಂಟರ್‍ಡೆಂಟಲ್ ಬ್ರಷ್ ಬಹಳ ಉಪಕಾರಿಯಾಗಬಲ್ಲದು.


ಎಲ್ಲಿ ಲಭ್ಯವಿದೆ? 

ಬೇರೆ ಬೇರೆ ಕಂಪೆನಿಗಳ ಇಂಟರ್‍ಡೆಂಟಲ್ ಬ್ರಷ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಸ್ಟಿಮ್ ಇಂಟರ್‍ಡೆಂಟಲ್ ಬ್ರಷ್, ಓರಲ್ ಬಿ ಇಂಟರ್‍ಡೆಂಟಲ್ ಬ್ರಷ್, ಥರ್ಮೊಸೀಲ್ ಇಂಟರ್‍ಡೆಂಟಲ್ ಬ್ರಷ್ ಮತ್ತು ಬೆಂಟೊಡೆಂಟ್ ಇಂಟರ್‍ಡೆಂಟಲ್ ಬ್ರಷ್ ಮುಂತಾದವುಗಳು ಲಭ್ಯವಿದೆ. ಈಗ ಕರಗಿ ಹೋಗಬಹುದಾದ ಬಯೋಡಿಗ್ರೇಡೇಬಲ್ ಇಂಟರ್‍ಡೆಂಟಲ್ ಬ್ರಷ್ ಕೂಡಾ ಲಭ್ಯವಿದೆ. ಈ ರೀತಿಯ ಬಯೋಡಿಗ್ರೇಡೇಬಲ್ ಬ್ರಷ್‍ಗಳು, ಒಂದು ವೇಳೆ ತುಂಡಾದಲ್ಲಿ ಅದು ಅಲ್ಲಿಯೇ ಕರಗಿ ಹೋಗುವ ಸಾಧ್ಯತೆ ಇರುತ್ತದೆ ಮತ್ತು ಯಾವುದೇ ತೊಂದರೆ ಉಂಟು ಮಾಡುವುದಿಲ್ಲ. ಹೆಚ್ಚಿನ ಕಂಪನಿಗಳು 5 ಅಥವಾ 6 ಇಂಟರ್ ಡೆಂಟಲ್ ಬ್ರಷ್‍ಗಳು ಒಂದು ಪ್ಯಾಕ್‍ನಲ್ಲಿ ಲಭ್ಯವಿದೆ. ಅಗತ್ಯವಿದ್ದಲ್ಲಿ ಒಂದು ಬ್ರಷ್ ಕೂಡ ಸಿಗುತ್ತದೆ. ನಿಮ್ಮ ಬ್ರಷ್‍ನ ಆಯ್ಕೆಗೆ ನಿಮ್ಮ ದಂತವೈದ್ಯರ ಸಲಹೆ ಮತ್ತು ಸಂದರ್ಶನ ಅತೀ ಅಗತ್ಯ. ದಂತ ವೈದ್ಯರು ಸೂಚಿಸಿದರೆ ಮಾತ್ರ ಇದನ್ನು ಬಳಸಬೇಕು. ಅನಗತ್ಯವಾಗಿ ಬಳಸಿದಲ್ಲಿ ವಸಡಿಗೆ ಮತ್ತು ಎಲುಬಿಗೆ ಹಾನಿಯಾಗಿ, ಉಪಕಾರಕ್ಕಿಂತ ಉಪದ್ರವಾಗುವ ಸಾಧ್ಯತೆ ಇರುತ್ತದೆ. ಅಗತ್ಯವಿದ್ದಲ್ಲಿ ದಂತ ವೈದ್ಯರು ಹಲ್ಲಿನ ಕ್ಷಕಿರಣ ತೆಗೆದು ಹಲ್ಲಿನ ನಡುವಿನ ದಂತದಾರ ಎಲುಬಿನ ಎತ್ತರ, ಅಗಲ ಮತ್ತು ಆಳವನ್ನು ಆಬ್ಯಸಿಸಿ ಇಂಟರ್ ಡೆಂಟಲ್ ಬ್ರಷ್ ಆಯ್ಕೆಯನ್ನು ಮಾಡುತ್ತಾರೆ. ಒಮ್ಮೆ ಬಳಸಿದ ಇಂಟರ್‍ಡೆಂಟಲ್ ಬ್ರಷ್‍ನ್ನು ಹೆಚ್ಚೆಂದರೆ ಎರಡು ವಾರ ಬಳಸಬಹುದು. ಅದರ ಎಳೆಗಳು ಮತ್ತು ನಡುವಿನ ಸರಿಗೆ ಬೆಂಡಾದ ಬಳಿಕ ಅದರ ಕಾರ್ಯಕ್ಷಮತೆ ಕ್ಷೀಣಿಸುತ್ತದೆ. ದಿನಕ್ಕೆ ಎರಡು ಬಾರಿ ಮಾತ್ರ ಬಳಸುವುದು ಸೂಕ್ತ. ರಾತ್ರಿ ಮಲಗುವ ಮೊದಲು ಹಲ್ಲುಜ್ಜಿದ ಬಳಿಕ ಇಂಟರ್‍ಡೆಂಟಲ್ ಬ್ರಷ್ ಬಳಸಿ ಹಲ್ಲುಗಳ ನಡುವಿನ ಆಹಾರ ಅಥವಾ ಕೊಳೆಯನ್ನು ಶುಚಿಗೊಳಿಸುವುದು ಅತೀ ಅಗತ್ಯ. ಇಲ್ಲವಾದಲ್ಲಿ ರಾತ್ರಿ ಇಡೀ ಆಹಾರದಲ್ಲಿ ಬ್ಯಾಕ್ಟೀರಿಯ ವಿಭ್ರಂಬಿಸಿ, ಸಂತಾನೋತ್ಪತ್ತಿ ಮಾಡಿ, ಬಾಯಿ ವಾಸನೆ, ವಸಡು ರೋಗ ಮತ್ತು ದಂತಕ್ಷಯಕ್ಕೆ ಕಾರಣವಾಗುವ ಸಾಧ್ಯತೆ ಇರುತ್ತದೆ.


ಕೊನೆ ಮಾತು:

ನೆನಪಿರಲಿ ಇಂಟರ್‍ಡೆಂಟಲ್ ಬ್ರಷ್ ಬಳಸುವಾಗ ಯಾವುದೇ ಟೂತ್‍ಪೇಸ್ಟ್ ಅಥವಾ ಇನ್ನಾವುದೇ ಔಷಧಿ ಬಳಸುವ ಅವಶ್ಯಕತೆ ಇರುವುದಿಲ್ಲ. ಪದೇ ಪದೇ ಶುಚಿಯಿಲ್ಲದ ಕಡ್ಡಿ, ಸೇಫ್ಟಿ ಪಿನ್ ಬಳಸುವುದರಿಂದ ಕಡ್ಡಿ ತುಂಡಾಗಿ, ಸೋಂಕು ಉಂಟಾಗಿ ಕೀವಾಗುವ ಎಲ್ಲಾ ಸಾಧ್ಯತೆ ಇರುತ್ತದೆ. ಶುಚಿಯಾದ, ಶುಭ್ರವಾದ ಇಂಟರ್‍ಡೆಂಟಲ್ ಬ್ರಷ್ ಬಳಸುವುದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ದಂತ ವೈದ್ಯರ ಸಲಹೆಯಂತೆ ಅವರ ಹೇಳಿದ ರೀತಿಯಲ್ಲೇ ಇಂಟರ್‍ಡೆಂಟಲ್ ಬ್ರಷ್ ಬಳಸಬೇಕು. ಅದರಲ್ಲಿಯೇ ನಿಮ್ಮ ದಂತ ಆರೋಗ್ಯದ ಗುಟ್ಟು ಅಡಗಿದೆ.                                                   

-ಡಾ|| ಮುರಲೀ ಮೋಹನ್‍ ಚೂಂತಾರು

BDS, MDS,DNB,MOSRCSEd(U.K), FPFA, M.B.A

ಮೊ : 9845135787

drmuraleechoontharu@gmail.com


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ



web counter

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top