ಗೋಕರ್ಣ: "ಪ್ರತಿಯೊಬ್ಬರ ಬದುಕಿನಲ್ಲೂ ಕಷ್ಟವಿದೆ. ಅದರ ನಡುವೆ ಒಳಿತೂ ಇದೆ. ಅದನ್ನು ಗುರುತಿಸುವ ದೃಷ್ಟಿ ಇರಬೇಕು. ಜಂತೂ ನಾಂ ನರಜನ್ಮ ದುರ್ಲಭಂ' ಎಂಬಂತೆ ಅತ್ಯದ್ಭುತವಾದ ಮಾನವ ಜನ್ಮ ದೊರಕಿರುವಾಗ ಬೆಟ್ಟದಷ್ಟಿರುವ ಒಳಿತನ್ನು ಬಿಟ್ಟು ಬೆಟ್ಟಿನಷ್ಟಿರುವ ಕೆಡುಕನ್ನು ಗುರುತಿಸುವ ನಮ್ಮ ದೃಷ್ಟಿ ಬದಲಾಗಬೇಕು. ಸವಾಲಿಲ್ಲದ ಬದುಕು ಬದುಕಲ್ಲ. ಸುಖದ ಅನುಭೂತಿಯನ್ನು ತಿಳಿಯಬೇಕಿದ್ದರೆ ಕ್ಲೇಶವನ್ನು ಅನುಭವಿಸಬೇಕು. ದ್ವೇಷವನ್ನು ಬದಿಗಿರಿಸಿ ಎಂಥಾ ಕಷ್ಟದಲ್ಲೂ ಇಷ್ಟವನ್ನು ಕಾಣುವ ದೃಷ್ಟಿ ಬರಲಿ. ಇರುವ ಒಳಿತನ್ನು ಗುರುತಿಸುವ ದೃಷ್ಟಿ, ಒಳಿತನ್ನು ಕಾಣುವ ಕಣ್ಣು ನಮಗಿದ್ದಾಗ ಜೀವನ ಪರಿಪೂರ್ಣವಾಗುತ್ತದೆ. ಮುಳ್ಳೇರಿಯ ಮಂಡಲದ ನಾಲ್ಕೂ ವಲಯದ ಎಲ್ಲರಿಗೂ ಶುಭವೂ, ಶುಭದೃಷ್ಟಿಯೂ ದೊರಕಲಿ" ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅಶೋಕೆಯಲ್ಲಿ ನಡೆಯುತ್ತಿರುವ ಗುರುಕುಲ ಚಾತುರ್ಮಾಸ್ಯದ ಸಂದರ್ಭದಲ್ಲಿ ನಡೆದ ಗುಂಪೆ, ನೀರ್ಚಾಲು, ಪೆರಡಾಲ ಮತ್ತು ಕಾಸರಗೋಡು ವಲಯಗಳ ಭಿಕ್ಷಾಸೇವೆಯ ಸಂದರ್ಭದಲ್ಲಿ ಜರಗಿದ ಧರ್ಮಸಭೆಯಲ್ಲಿ ಆಶೀರ್ವದಿಸಿದರು.
ಗೋಕರ್ಣದ ಅಶೋಕೆಯಲ್ಲಿ ನಡೆಯುತ್ತಿರುವ ಗುರುಕುಲ ಚಾತುರ್ಮಾಸ್ಯದ ಸಂದರ್ಭದಲ್ಲಿ ಮುಳ್ಳೇರಿಯ ಮಂಡಲದ ಗುಂಪೆ, ನೀರ್ಚಾಲು, ಪೆರಡಾಲ, ಕಾಸರಗೋಡು ವಲಯಗಳ ಭಿಕ್ಷಾಸೇವೆಯು ಸೆ.5ರಂದು ಸೋಮವಾರ ನೆರವೇರಿತು.
ಗುಂಪೆ ವಲಯದ ಕುಮಾರಸುಬ್ರಹ್ಮಣ್ಯ, ಸಹನಾ ಕೊಂದಲಕಾಡು ದಂಪತಿಗಳು ಶ್ರೀಗುರು ಭಿಕ್ಷಾಂಗ ಪಾದುಕಾಪೂಜೆ ನೆರವೇರಿಸಿದರು. ಶಂಭು ಹೆಬ್ಬಾರ್, ಲಲಿತಾ ಶ್ರಾವಣಕೆರೆ ದಂಪತಿಗಳು ಗೋಪೂಜೆ ನೆರವೇರಿಸಿದರು.
ಪ್ಲಸ್ ಟು ವಿಜ್ಞಾನ ವಿಭಾಗದಲ್ಲಿ ಎಲ್ಲಾ ವಿಷಯಗಳಲ್ಲೂ A+ ಪಡೆದ ಸಾತ್ವಿಕ ಕೃಷ್ಣ ನೇರೋಳು ಇವನಿಗೆ ಶ್ರೀಗುರುಗಳು ಪ್ರತಿಭಾ ಪುರಸ್ಕಾರ ನೀಡಿ ಹರಸಿದರು.
ಈ ಸಂದರ್ಭದಲ್ಲಿ ಶ್ರೀಮಠದ ವಿವಿಧ ಸೇವಾಯೋಜನೆಗಳಿಗೆ ದೇಣಿಗೆ ನೀಡಿದ ಶಿಷ್ಯಬಂಧುಗಳಿಗೆ ಶ್ರೀಗುರುಗಳು ಆಶೀರ್ಮಂತ್ರಾಕ್ಷತೆ ಅನುಗ್ರಹಿಸಿದರು. ಕೇಶವಪ್ರಸಾದ ಭಾಗ್ಯಲಕ್ಷ್ಮಿ ಎಡಕ್ಕಾನ ದಂಪತಿಗಳು ವೈಯಕ್ತಿಕ ಪಾದುಕಾಪೂಜೆ ನೆರವೇರಿಸಿ ಆಶೀರ್ವಾದ ಪಡೆದುಕೊಂಡರು.
ವಲಯ ಗುರುಭಿಕ್ಷಾಸೇವೆಯ ಈ ದಿನ ಗುಂಪೆ ವಲಯದ ನಲುವತ್ತನಾಲ್ಕು ಮಂದಿ ಶಿಷ್ಯಬಂಧುಗಳು ಭಾಗವಹಿಸಿ ಮಂತ್ರಾಕ್ಷತೆ ಸ್ವೀಕರಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ