ಆರ್ಥಿಕ ಹಿಂಜರಿತದ ಕರಿನೆರಳು: ಎಚ್ಚರಿಕೆಯ ಹೆಜ್ಜೆಗಳು ಅಗತ್ಯ

Upayuktha
0

 ಏರುತ್ತಿರುವ ಬಡ್ಡಿದರ ಹಾಗೂ ಜಾಗತಿಕ ಆರ್ಥಿಕ ಹಿಂಜರಿತದ ಭೀತಿ




ಡಾ.ಎ.ಜಯ ಕುಮಾರ ಶೆಟ್ಟಿ

ಅರ್ಥಶಾಸ್ತ್ರ ಪ್ರಾದ್ಯಾಪಕ, 

ಶ್ರೀ.ಧ.ಮಂ.ಕಾಲೇಜು, ಉಜಿರೆ

ajkshetty@sdmcujire.in

9448154001


ಜಾಗತಿಕ ಆರ್ಥಿಕ ಹಿಂಜರಿತದ ಭೀತಿ

ಐಎಂಎಫ್ ಮತ್ತು ವಿಶ್ವಬ್ಯಾಂಕ್ ಅಮೇರಿಕಾ ಮತ್ತು ಐರೋಪ್ಯ ರಾಷ್ಟ್ರಗಳು 2023 ರಲ್ಲಿ 1970 ರ ಬಳಿಕ ಭಾರೀ ಪ್ರಮಾಣದ ಆರ್ಥಿಕ ಹಿಂಜರಿತ ಕಾಣಲಿದ್ದು ಅಭಿವೃದ್ಧಿಶೀಲ ಹಾಗೂ ಹಿಂದುಳಿದ ದೇಶಗಳ ಮೇಲೆ ಗಂಭೀರ ಪರಿಣಾಮವನ್ನು ಬೀರಲಿದೆ ಎಂದು ವಾರದ ಹಿಂದೆಯಷ್ಟೇ ಎಚ್ಚರಿಕೆ ನೀಡಿದ್ದವು.


ಜಾಗತಿಕವಾಗಿ ಈಗ ಆರ್ಥಿಕ ಹಿಂಜರಿತದ ಲಕ್ಷಣಗಳು ಗೋಚರಿಸಲಾರಂಭಿಸಿದೆ. ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕುಗಳು ಹಣದುಬ್ಬರವನ್ನು ತಡೆಯಲು ಸಾಲ ನೀತಿಯನ್ನು ಬಿಗಿಗೊಳಿಸಿ ಬಡ್ಡಿದರವನ್ನು ಏರಿಸುತ್ತಿದೆ. 

ರಷ್ಯಾ ಉಕ್ರೇನ್ ಕದನ, ಜಾಗತಿಕ ಆಹಾರ ಪೂರೈಕೆಯಲ್ಲಿ ಅಡಚಣೆ, ಕೃಷಿ ಉತ್ಪಾದನೆಯಲ್ಲಿ ಕುಂಠಿತ, ಕೊರೋನ ಹೀಗೆ ಹಲವು ಕಾರಣಗಳಿಂದಾಗಿ ಹಣದುಬ್ಬರ ಉಂಟಾಗಿ ನಿರೀಕ್ಷಿತ ಆರ್ಥಿಕ ಪ್ರಗತಿಯನ್ನು ಸಾಧಿಸಲಾಗುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಭಾರತವೂ ಸೇರಿದಂತೆ ವಿಶ್ವ ಮುಂದಿನ ವರ್ಷ ಆರ್ಥಿಕ ಹಿಂಜರಿತ ಕಾಣಬಹುದು ಎಂಬ ಭಯದ ವಾತಾವರಣ ಸೃಷ್ಠಿಯಾಗಿದೆ.


ಏರುತ್ತಿರುವ ಬಡ್ಡಿ ದರ-ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ

ಅಮೇರಿಕಾ ಮತ್ತು ಬ್ರಿಟನ್ ನಲ್ಲಿ ಹಣದುಬ್ಬರಕ್ಕೆ ಮೂಗುದಾರ ಹಾಕುವ ಕ್ರಮವಾಗಿ ಅಲ್ಲಿನ ಕೇಂದ್ರೀಯ ಬ್ಯಾಂಕುಗಳಾದ ಫೆಡರಲ್ ರಿಸರ್ವ್ ಮತ್ತು ಬ್ಯಾಂಕ್ ಆಫ್ ಇಂಗ್ಲೆಂಡ್ ಬಡ್ಡಿ ದರವನ್ನು ಹೆಚ್ಚಿಸಿರುವ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದೆ. ಪರಿಣಾಮವಾಗಿ ಭಾರತೀಯ ಷೇರು ಮಾರುಕಟ್ಟೆ ಸತತ ಮೂರನೇ ದಿನವೂ ಕುಸಿತ ಅನುಭವಿಸಿದೆ. ಬುಧವಾರ ಅಮೇರಿಕಾವು ಬಡ್ಡಿ ದರವನ್ನು ಶೇ.0.75 ಹೆಚ್ಚಳ ಮಾಡಿದರೆ, ಬ್ರಿಟನ್ ಶೇ. 0.50, ಸ್ವಿಟ್ಜರ್ಲೆಂಡ್‌‌ ನಲ್ಲಿ ಶೇ.0.75 ಹೆಚ್ಚಿಸಲಾಗಿದೆ.


ಗುರುವಾರ ದಿನಾಂತ್ಯಕ್ಕೆ ರೂಪಾಯಿ ಡಾಲರ್ ಎದುರು 6 ತಿಂಗಳಲ್ಲೇ ಗರಿಷ್ಠ 90 ಪೈಸೆಗಳಷ್ಟು ಕುಸಿತ ಕಂಡು 80.86 ರೂ.ಗೆ ಇಳಿದಿದೆ. ಈ ಕುಸಿತ ಫೆ.24 ರ ಬಳಿಕದ ಅತ್ಯಂತ ದೊಡ್ಡ  ಹಾಗೂ ಸಾರ್ವಕಾಲಿಕ ಕುಸಿತವಾಗಿದೆ.


ಉಕ್ರೇನ್ ಯುದ್ದ, ಕೊರೊನಾದ ಹೊಡೆತದಿಂದ ಹೊರಬರಲು ಒದ್ದಾಟದ ನಡುವೆ ಹಲವು ದೇಶಗಳಲ್ಲಿ ಆಹಾರದ ಅಭಾವ ತಲೆದೋರಿದೆ. ಇಂತಹ ಸಂಕಟದ ಸಮಯದಲ್ಲಿ ಬಡ್ಡಿ ದರದಲ್ಲಿ ಏರಿಕೆ ಬೆಂಕಿಗೆ ತುಪ್ಪ ಸುರಿದಂತಾಗುವುದೋ ಎಂಬ ಭಯ ತಲೆದೋರಿದೆ.


ಹಣದುಬ್ಬರ ಮತ್ತು ಜಿಡಿಪಿ:

ಹಣದುಬ್ಬರ ಮತ್ತು ಜಿಡಿಪಿ ದೇಶದ ಆರ್ಥಿಕ ಸ್ಥಿತಿಗತಿಯನ್ನು ಬಿಂಬಿಸುವ ಪ್ರಮುಖ ಮಾನದಂಡಗಳು. ರಿಪೋ ದರವನ್ನು ಹೆಚ್ಚಿಸುವುದು ಹಾಗೂ ನಗದು ಹರಿವನ್ನು ಕಡಿತಗೊಳಿಸುವ ಮೂಲಕ ದೇಶದ ಕೇಂದ್ರೀಯ ಬ್ಯಾಂಕು ಹಣದುಬ್ಬರವನ್ನು  ನಿಯಂತ್ರಿಸಲು  ಪ್ರಯತ್ನಿಸುತ್ತದೆ. ರಿಪೋ ದರ ಹೆಚ್ಚಳವಾದರೆ ಸಾಲಗಳ ಮೇಲಿನ ಬಡ್ಡಿ ದರವೂ ಏರಿಕೆಯಾಗುತ್ತದೆ. ಕಳೆದ ಮೇ ತಿಂಗಳಿನಿಂದ ರೆಪೋ ದರ ಶೇ.1.4 ರಷ್ಟು ಏರಿಕೆಯಾಗಿದೆ. ದೇಶದ ಆರ್ಥಿಕ ಪರಿಸ್ಥಿತಿ, ಅಂತಾರಾಷ್ಟ್ರೀಯ ವಿದ್ಯಾಮಾನಗಳು ರಿಪೋ ದರದ ಪರಿಷ್ಕರಣೆಯ ನಿರ್ಧಾರದಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ದೇಶೀ ಮಾರುಕಟ್ಟೆಯಲ್ಲಿ ಪೆಟ್ರೋಲ್ ಬೆಲೆ ಹೆಚ್ಚಿನ ಮಟ್ಟದಲ್ಲಿರುವುದು, ಪೂರೈಕೆ ವ್ಯವಸ್ಥೆಯಲ್ಲಿನ ಅಡಚಣೆಗಳು ಹಣದುಬ್ಬರಕ್ಕೆ ಕಾರಣವಾಗುತ್ತಿದೆ. ಅಂದರೆ ಹಣದುಬ್ಬರಕ್ಕೆ ಕಡಿಮೆ ಬಡ್ಡಿದರ ಮತ್ತು ಹೆಚ್ಚಿನ ನಗದು ಚಲಾವಣೆ ಮಾತ್ರ ಕಾರಣವಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.


ಭಾರತ ಮತ್ತು ಆರ್ಥಿಕ ಹಿಂಜರಿತ

ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದ ಮೇಲೆ ಇದರ ಪ್ರಭಾವವು ಕಡಿಮೆ ಇರುತ್ತದೆ ಎಂದು ಎಂದು ನಂಬಲಾಗಿದೆ. ಭಾರತ ಬೆಳೆಯುತ್ತಿರುವ ದೇಶ ಹಾಗೂ ಮೂಲಭೂತ ಅಂಶಗಳೂ ಬಲಿಷ್ಠವಾಗಿವೆ. ಆದುದರಿಂದ  ಪಾಶ್ಚಿಮಾತ್ಯ ದೇಶಗಳಿಗಿಂತ ಇಲ್ಲಿ ಆರ್ಥಿಕ ಹಿಂಜರಿತದ ಪರಿಣಾಮ ಕಡಿಮೆ ಇರುತ್ತದೆ. ಆದರೆ ಆರ್ಥಿಕ ಹಿಂಜರಿತ ಉಂಟಾದರೆ, ನಮ್ಮ ದೇಶದ ಚೇತರಿಕೆಯ ವೇಗವು ನಿಧಾನಗೊಳ್ಳಲಿದೆ.


ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆ!

ಕೋವಿಡ್-19 ಸಾಂಕ್ರಾಮಿಕ, ರಷ್ಯಾ-ಉಕ್ರೇನ್ ಯುದ್ಧ ಮತ್ತು 2023 ರಲ್ಲಿ ಸಂಭವನೀಯ ಆರ್ಥಿಕ ಹಿಂಜರಿತದ ಹೊರತಾಗಿಯೂ, ಭಾರತವು ಆಯ್ಕೆಮಾಡಿಕೊಂಡ ನೀತಿಗಳಿಂದಾಗಿ ಆರ್ಥಿಕತೆಯು ವಿಸ್ತರಿಸುವ ಸಾಧ್ಯತೆಯಿದೆ.


ಆತ್ಮನಿರ್ಭರ ಭಾರತದ ಹಿನ್ನೆಲೆಯಲ್ಲಿ ದೇಶವು ಒತ್ತು ನೀಡಿದ ಸ್ವಾವಲಂಬನೆಯ ಸ್ಥಂಭಗಳಾದ ಆರ್ಥಿಕತೆ, ಮೂಲ ಸೌಕರ್ಯ, ಬೇಡಿಕೆ ಈಡೇರಿಸಲು ಕೃಷಿ ಪೂರೈಕೆಯ ಸುಧಾರಣೆ, ತರ್ಕಬದ್ಧ ತೆರಿಗೆ ವ್ಯವಸ್ಥೆ, ಬಲಶಾಲಿ ಹಣಕಾಸಿನ ಪ್ರಯತ್ನಗಳು ಆರ್ಥಿಕತೆಗೆ ಭದ್ರ ಅಡಿಪಾಯವನ್ನು ಒದಗಿಸಿದೆ.


ಏಪ್ರಿಲ್-ಜೂನ್ 2022 ತ್ರೈಮಾಸಿಕದಲ್ಲಿ ದಾಖಲೆಯ ವಿಸ್ತರಣೆಯೊಂದಿಗೆ, ಭಾರತೀಯ ಆರ್ಥಿಕತೆಯು ಈಗ ಆರನೇ ಸ್ಥಾನಕ್ಕೆ ಕುಸಿದಿರುವ UK ಯನ್ನು ಹಿಂದಿಕ್ಕಿದೆ. ಭಾರತೀಯ ಆರ್ಥಿಕತೆಯ ಗಾತ್ರವು $854.7 ಬಿಲಿಯನ್ ಹಾಗೂ U.K. ಯ ಆರ್ಥಿಕತೆಯ ಗಾತ್ರವು $816 ಬಿಲಿಯನ್ ಆಗಿತ್ತು ಎಂದು ಬ್ಲೂಮ್‌ಬರ್ಗ್ ವರದಿ ಹೇಳಿದೆ.


ಡಿಸೆಂಬರ್ 2021 ರ ಹೊತ್ತಿಗೆ ಭಾರತವು ಯುಕೆಯನ್ನು ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಮೀರಿಸಿದೆ ಎಂದು ಟಿಪ್ಪಣಿಯಲ್ಲಿ ತಿಳಿಸಿದೆ. ಭಾರತದ GDP ಯ ಪಾಲು ಈಗ 3.5% ರಷ್ಟಿದೆ, 2014 ರಲ್ಲಿ 2.6% ರಷ್ಟಿತ್ತು. ಮತ್ತು SBI ವರದಿಯ ಪ್ರಕಾರ, ಜಾಗತಿಕ GDP ಯಲ್ಲಿ ಜರ್ಮನಿಯ ಪ್ರಸ್ತುತ ಪಾಲನ್ನು 2027 ರಲ್ಲಿ 4% ದಾಟುವ ಸಾಧ್ಯತೆಯಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ವರದಿಯಲ್ಲಿ ಉಲ್ಲೇಖಿಸಿದೆ.


ಇತ್ತೀಚಿನ ಮಾಹಿತಿಯು ಜೂನ್ 2022 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಭಾರತವು 13.5% ರಷ್ಟು ಬೆಳೆದಿದೆ ಎಂದು ತೋರಿಸಿದೆ. ನಿಧಾನಗತಿಯ ಜಾಗತಿಕ ಆರ್ಥಿಕತೆ, ಹಣದುಬ್ಬರದ ಒತ್ತಡಗಳು ಮತ್ತು ವಿತ್ತೀಯ ಬಿಗಿತದ ಪ್ರಭಾವದಿಂದಾಗಿ ವಿಶ್ವ ಹಣಕಾಸು ಸಂಸ್ಥೆಯು ಭಾರತವು 7.4% ರಷ್ಟು ಬೆಳೆಯುತ್ತದೆ ಎಂದು ಅಂದಾಜಿಸಿದೆ. ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆ ಎಂಬ ಟ್ಯಾಗ್ ಅನ್ನು ಉಳಿಸಿಕೊಳ್ಳಲಿದೆ ಎಂದು ವಿಶ್ವ ಹಣಕಾಸು ಸಂಸ್ಥೆಯ ಮುನ್ನಂದಾಜು  ತೋರಿಸಿದೆ.

2022-23ರಲ್ಲಿ, ಭಾರತದ ಬೆಳವಣಿಗೆಯು ಸರಾಸರಿ 7 ಪ್ರತಿಶತದಷ್ಟು ಇರುತ್ತದೆ, ಇದು ಅತಿದೊಡ್ಡ ಆರ್ಥಿಕತೆಗಳಲ್ಲಿ ಪ್ರಬಲವಾಗಿದೆ, ಏಷ್ಯಾದ ಮತ್ತು ಜಾಗತಿಕ ಬೆಳವಣಿಗೆಗೆ 28 ಮತ್ತು 22 ರಷ್ಟು ಕೊಡುಗೆ ನೀಡುತ್ತದೆ ಎಂದು ಮೋರ್ಗನ್ ಸ್ಟಾನ್ಲಿ ವರದಿಯಲ್ಲಿ ತಿಳಿಸಿದೆ.


’ಇದು ಯುದ್ಧದ ಯುಗವಲ್ಲ’

ಇತ್ತೀಚೆಗೆ ನಡೆದ ಎಸ್ ಸಿ ಒ ಶೃಂಗದ ವೇಳೆ ರಷ್ಯಾ ಅಧ್ಯಕ್ಷ ಪುತಿನ್ ಗೆ ’ಇದು ಯುದ್ಧದ ಯುಗವಲ್ಲ’ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದು ಸರಿಯಾಗಿಯೇ ಇದೆ ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಅಭಿಪ್ರಾಯಪಟ್ಟಿದ್ದಾರೆ. ಇದು ಯುದ್ಧದ ಸಮಯವಲ್ಲ. ಪಾಶ್ಚಾತ್ಯರ ವಿರುದ್ಧ ಪ್ರತೀಕಾರ ತೀರಿಸುವ ಸಮಯವೂ ಅಲ್ಲ. ನಾವೆಲ್ಲರೂ ಎದುರಿಸುವಂತಹ ಸವಾಲುಗಳನ್ನು ಸಮರ್ಥವಾಗಿ, ಒಗ್ಗಟ್ಟಾಗಿ ಎದುರಿಸುವ ಸಮಯ ಎಂದು ಮ್ಯಾಕ್ರನ್ ಹೇಳಿರುವುದು ಸಮಯೋಚಿತವಾಗಿದೆ. ಜಾಗತಿಕ ನಾಯಕರು ಒಗ್ಗೂಡಿ ಎಚ್ಚರಿಕೆಯ ಕ್ರಮಗಳನ್ನು ಕೈಗೊಂಡು ಆರ್ಥಿಕ ಹಿಂಜರಿತದ ಅಪಾಯದಿಂದ ರಕ್ಷಿಸಬೇಕಾಗಿದೆ.


ನಮ್ಮ ಮುಂದಿರುವ ಸವಾಲುಗಳು:

ಮುನ್ಸೂಚನೆಗಳು ನಮ್ಮನ್ನು ಎಚ್ಚರಿಸಲಿಕ್ಕಾಗಿದೆ, ನಾವು ಜಾಗೃತರಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಭಾರತದ ಆರ್ಥಿಕತೆಯು ಜಾಗತಿಕ ಹಿಂಜರಿಕೆಯನ್ನು ಎದುರಿಸಲು ಸಮರ್ಥವಾಗಿದೆ ಎಂಬ ವಿಶ್ವಾಸದ ನಡುವೆ ಗುರುವಾರದ ಬೆಳವಣಿಗೆ ಇನ್ನೂ ಗಟ್ಟಿ ಕ್ರಮಗಳ ಅಗತ್ಯತೆಯತ್ತ ಬೊಟ್ಟು ಮಾಡುತ್ತಿದೆ. ಆದರೆ ಇಂದಿನ ಬೆಳವಣಗೆಯನ್ನು ಅವಲೋಕಿಸಿದಾಗ ಭಾರತೀಯ ರೂಪಾಯಿಯ ಮೌಲ್ಯ ಕುಸಿಯುತ್ತಿರುವುದು ಹಾಗೂ ಷೇರು ಮಾರುಕಟ್ಟೆಯ ಕುಸಿತವು ಭಾರತೀಯ ಆರ್ಥಿಕತೆಯ ಮೇಲೆ ಜಾಗತಿಕ ಆರ್ಥಿಕ ತಲ್ಲಣಗಳ ಪ್ರಭಾವ ಸಾಬೀತಾಗುತ್ತಿದೆ.


ಭಾರತಕ್ಕೆ ಒತ್ತಡದ ಆರ್ಥಿಕ ಸವಾಲುಗಳು ಆಂತರಿಕವಾಗಿಯೇ ಉಳಿದಿರುವುದು ಧನಾತ್ಮಕ ಅಂಶ ಯಾಕೆಂದರೆ ನಮ್ಮ ಆರ್ಥಿಕ ಸಮಸ್ಯೆಗಳು ನಮ್ಮ ನೇರ ನಿಯಂತ್ರಣದಲ್ಲಿದೆ. ಆಂತರಿಕವಾದ ಸಮಸ್ಯೆಗಳಾದ ಸಣ್ಣ ಉದ್ಯಮಗಳ ಸ್ಪರ್ಧಾತ್ಮಕತೆ ಮತ್ತು ಆರ್ಥಿಕ ಸ್ವಾಸ್ಥ್ಯವನ್ನು ಉತ್ತಮಗೊಳಿಸುವುದು ಮತ್ತು ರಾಜ್ಯಗಳ ವಿತ್ತೀಯ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವ ಸವಾಲುಗಳು ಹೊಸದಲ್ಲದಿರವುದು ಆತಂಕಕ್ಕೆ ಕಾರಣ. ಡಾಲರ್ ಎದುರು ರೂಪಾಯಿ ಸ್ಥಿರತೆ ಕಾಪಾಡಿಕೊಳ್ಳಲು ಮತ್ತು ಆಂತರಿಕವಾಗಿ ಹಣದುಬ್ಬರವನ್ನು ನಿಯಂತ್ರಣದಲ್ಲಿಡಬೇಕಾದುದು ಇಂದಿನ ಅನಿವಾರ್ಯತೆ. ಆತ್ಮನಿರ್ಭರತೆ ಒತ್ತು ನೀಡಿ ಉತ್ಮಾದಕತೆಯನ್ನು ಹೆಚ್ಚಿಸುವ ದೂರದೃಷ್ಠಿಯ ಕ್ರಮಗಳಿಂದ ಭಾರತದ ಆರ್ಥಿಕತೆಯನ್ನು ರಕ್ಷಿಸಿಕೊಂಡು ನಿರೀಕ್ಷಿತ ಪ್ರಗತಿಯನ್ನು ಕಂಡುಕೊಳ್ಳಬಹುದು.



web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top