ಸ್ಮರಣೆ: ಅಪ್ರತಿಮ ಕ್ರಾಂತಿಕಾರಿ ಭಗತ್

Upayuktha
0

ಭಾರತದ ಇತಿಹಾಸದಲ್ಲಿ ಕ್ರಾಂತಿಕಾರಿಗಳೆಂದ ಕೂಡಲೇ ನೆನಪಾಗುವುದು ಮದನ್ ಲಾಲ್ ಧಿಂಗ್ರಾ, ಸಾವರ್ಕರ್, ಚಂದ್ರಶೇಖರ್ ಅಜಾದ್, ಭಗತ್ ಸಿಂಗ್, ರಾಜ್ ಗುರು, ಸುಖದೇವ್ ಮುಂತಾದವರು.


ಇವರೆಲ್ಲರೂ ದೇಶಕ್ಕಾಗಿ ಪ್ರಾಣಾರ್ಪಣೆಗೈದು ಅದೆಷ್ಟೋ ವರ್ಷ ಕಳೆದರೂ ಇವರ ತ್ಯಾಗ ಬಲಿದಾನಗಳ ಚರಿತ್ರೆ ಕೇಳುವಾಗ ಇಂದಿಗೂ ನಮ್ಮಲ್ಲಿ ರೋಮಾಂಚನವಾಗುತ್ತದೆ.


ಇಂದಿಗೆ ಸರಿಯಾಗಿ ನೂರು ವರ್ಷಗಳ ಹಿಂದೆ ಜಲಿಯನ್ ವಾಲ ಭಾಗ್ ದುರಂತದ ನಂತರ ಕ್ರಾಂತಿ ಚಟುವಟಿಕೆಗಳು ದೇಶದಲ್ಲಿ ತೀವ್ರವಾದವು ಎಂದರೆ ತಪ್ಪಾಗಲಾರದು.


1920 ರ ಗಾಂಧೀಜಿಯ ಅಸಹಕಾರ ಚಳುವಳಿಯ ಕರೆಗೆ ಓಗೊಟ್ಟು ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರ ತನಕ ಸಾವಿರಾರು ಮಂದಿ ಬೀದಿಗಿಳಿದರು. ಅಂಥವರ ಮದ್ಯೆ ಬಿಸಿನೆತ್ತರಿನ ಒಬ್ಬ ಬಾಲಕನಿದ್ದ ಅವನೇ ಭಗತ್ ಸಿಂಗ್.


ಚೌರಿ ಚೌರದ ಘಟನೆಯ ನಂತರ ಗಾಂಧಿ ಏಕಾಏಕಿ ಚಳುವಳಿ ಹಿಂಪಡೆದರು, ಗಾಂಧಿಯ ಈ ನಿರ್ಧಾರ  ಭಗತ್ ನಲ್ಲಿ ಗಾಂಧಿವಾದದ ನಂಬಿಕೆ ಕಳೆಯುವಂತೆ ಮಾಡಿತು. ಬಹುಶಃ ಈ ಘಟನೆ ಭಗತ್ ನ ಜೀವನದ ದಿಕ್ಕು ಬದಲಿಸಿತು ಅನ್ನಬಹುದೇನೋ.


ಆ ನಂತರ ಭಗತ್ ಆರಿಸಿ ಕೊಂಡದ್ದು ಕ್ರಾಂತಿಯ ಮಾರ್ಗ. ಕಾಲೇಜಿನ ದಿನಗಳಲ್ಲೇ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಷ್ಬಾಕ್ ಉಲ್ಲ ಖಾನ್ ರ ಹಿಂದುಸ್ತಾನ್ ರಿಪಬ್ಲಿಕ್ ಅಸೋಸಿಯೇಷನ್ ಸದಸ್ಯನಾಗಿ ಚಳುವಳಿಗೆ ಧುಮುಕಿದ.ಕಾಕೋರಿ ಪ್ರಕರಣದ ನಂತರ ಕ್ರಾಂತಿಕಾರಿಗಳಾದ ರಾಮ್ ಪ್ರಸಾದ್ ಬಿಸ್ಮಿಲ್ ಹಾಗೂ ಅಷ್ಬಾಕ್ ಉಲ್ಲಾ ಖಾನ್ ರನ್ನು ಬ್ರಿಟಿಷ್ ಸರ್ಕಾರ ಗಲ್ಲಿಗೇರಿಸಿತು. ಭಗತ್ ನ ಗುರುವಿನಂತಿದ್ದ ಮತೋಬ್ಬ ಮಹಾನ್ ಕ್ರಾಂತಿಕಾರಿ ಚಂದ್ರಶೇಖರ್ ಅಜಾದ್ ಭೂಗತರಾಗಬೇಕಾಯಿತು. ಆ ಸಮಯದಲ್ಲಿ ಕ್ರಾಂತಿಕಾರಿಗಳ ನಾಯಕನಾಗಿ ಹೊರಹೊಮ್ಮಿದವನು ಭಗತ್ ಸಿಂಗ್.


ನೌ ಜವಾನ್ ಭಾರತ ಸಭಾದ ಸದಸ್ಯನಾಗಿದ್ದ ಭಗತ್, ದೆಹಲಿಯಲ್ಲಿ ಕರೆದಿದ್ದ ಕ್ರಾಂತಿಕಾರಿಗಳ ಸಭೆಯಲ್ಲಿ ನಮ್ಮ ಗುರಿ ಕೇವಲ ಸ್ವಾತಂತ್ರ್ಯಗಳಿಸುವುದಷ್ಟೇ ಅಲ್ಲ, ಸ್ವಾತಂತ್ರ್ಯ ನಂತರದ ಸಮಗ್ರ ಭಾರತದ ಚಿತ್ರಣದ ಪರಿಕಲ್ಪನೆ ಎಂದಿದ್ದ ಅಪ್ರತಿಮ ಕ್ರಾಂತಿಕಾರಿ. ಇಪ್ಪತ್ತರ ಆಸುಪಾಸಿನ ಈ ಭಗತ್ ನ ದೇಶದ ಕುರಿತಾದ ಚಿಂತನೆ ಕಂಡಾಗ ಆಶ್ಚರ್ಯವಾಗುತ್ತದೆ.


ಸೈಮನ್ ಕಮಿಷನ್ ವಿರುದ್ಧ ಗುಡುಗಿದ ಲಾಲಲಜಪತ್ ರಾಯ್ ರನ್ನು ಪೊಲೀಸ್ ಕೊಂದಾಗ, ಅವರ ಜೊತೆಗಿದ್ದ ಭಗತ್ ಮತ್ತು ಸಂಗಡಿಗರು ಪ್ರತೀಕಾರ ತೆಗೆದುಕೊಳ್ಳಲು ಶಪಥ ಮಾಡುವರು ನಂತರ ಆ ಶಪಥವನ್ನು ಕಾರ್ಯರೂಪಕ್ಕೆ ತರುವಲ್ಲಿ ಭಗತ್ ನೊಂದಿಗೆ ಕೈ ಜೋಡಿಸಿದವರು ರಾಜ್ ಗುರು, ಸುಖ್ ದೇವ್ ಮತ್ತು ಜೈ ಗೋಪಾಲ್.


ಅವರು ಬಲಿತೆಗೆದುಕೊಳ್ಳಬೇಕಾಗಿದ್ದದು ಪೊಲೀಸ್ ಮುಖ್ಯಸ್ಥ ಸ್ಕಾಟ್ ಅನ್ನು ಆದರೇ ಆ ಗುರಿ ತಪ್ಪಿ ಸ್ಯಾನ್ಡರ್ಸ್ ನ್ನು ಕೊಂದು ಪರಾರಿಯಾದರು. ನಂತರ ವೇಷಭೂಷಣ ಬದಲಿಸಿ ಕೆಲಕಾಲ ದೂರವಿದ್ದರು.


ಅನಂತರ ಅವರು ಕೈಗೊಂಡ ಯೋಜನೆ ಬ್ರಿಟಿಷ್ ಸರ್ಕಾರದ ದಿಫೈನ್ ಆಕ್ಟ್ ವಿರೋಧಿಸಿ ಆಸೆಮ್ಬಲಿಯಲ್ಲಿ ಬಾಂಬ್ ಹಾಕುವುದು ಮತ್ತು ಪೊಲೀಸ್ ರಿಗೆ ಶರಣಾಗುವುದು! ನಾವ್ಯಾಕೆ ಶರಣಾಗಬೇಕು ಎಂದು ಉಳಿದ ಕ್ರಾಂತಿಕಾರಿಗಳು ಕೇಳಿದ ಪ್ರಶ್ನೆಗೆ ಭಗತ್ ಹೇಳಿದ್ದು ಹೀಗೆ, "ಕಿವುಡರಿಗೆ ಕೇಳುವಂತೆ ಮಾಡಲು ಬಹಳ ಸದ್ದನ್ನೇ ಮಾಡಬೇಕು ಹಾಗೇ ಮುದುಡಿ ಮಲಗಿರುವ ದೇಶದ ಜನರಲ್ಲಿ ಕ್ರಾಂತಿಯನ್ನು ಬಡಿದ್ದೆಬ್ಬಿಸಬೇಕು".


ನಂತರ ಬ್ರಿಟಿಷ್ ಸೆರೆಯಾಳಾದ ಭಗತ್ ಮತ್ತು ಸಂಗಡಿಗರು ಜೈಲಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಆಗುತ್ತಿದ್ದ ಶೋಷಣೆಗಳನ್ನು ಸರಿಪಡಿಸಲು ಉಪವಾಸ ಸತ್ಯಾಗ್ರಹ ಜೈಲಿನಲ್ಲೇ ಮಾಡುತ್ತಾರೆ. ಇವರ ಮೇಲಿದ್ದ ಎಲ್ಲಾ ಆರೋಪಗಳು ಸಾಭೀತಾದ ಮೇಲೆ ಬ್ರಿಟಿಷ್ ಸರ್ಕಾರ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಿತು.


ಆಗ ಅದನ್ನು ವಿರೋಧಿಸಿ ಕೆಲ ಹೋರಾಟಗಾರರು ಮನವಿಪತ್ರಗಳು, ಸಹಿ ಸಂಗ್ರಹಣೆ ಎಲ್ಲವೂ ನಡೆದವು ಅದ್ಯಾವುದೂ ಪ್ರಯೋಜನಕ್ಕೆ ಬರಲಿಲ್ಲ. ಭಗತ್ ನ ತಂದೆ ಕಿಶನ್ ಸಿಂಗ್ ಶಿಕ್ಷೆ ರದ್ದು ಪಡಿಸುವಂತೆ ಬ್ರಿಟಿಷ್ ಸರ್ಕಾರಕ್ಕೆ ಮನವಿ ಮಾಡಿದಾಗ ಭಗತ್ ಹೇಳುತ್ತಾನೆ, "ನಾವು ಬದುಕುವುದಕ್ಕಿಂತ ಬಲಿದಾನ ಮಾಡುವುದರಿಂದಲೇ ಬ್ರಿಟಿಷ್ ಸರ್ಕಾರ ಪತನವಾಗುತ್ತೆ". ಆ ಮನವಿ ಪತ್ರವನ್ನು ಹಿಂಪಡೆಯುವಂತೆ ಮಾಡಿದ.


ನಂತರ ದಿನಗಳಲ್ಲಿ ಭಗತ್ ಸಿಂಗ್, ಸುಖ್ ದೇವ್, ರಾಜ್ ಗುರು ಬಲಿದಾನ ಭಾರತೀಯರಲ್ಲಿ ಹೋರಾಟದ ಕಿಚ್ಚು ಹೆಚ್ಚುವಲ್ಲಿ ಸಫಲವಾಯಿತು. ಹಾಗೇ ಅವರು ಹಚ್ಚಿದ ಕ್ರಾಂತಿ ಜ್ಯೋತಿಗೆ ಮುಂದೆ ನಿರ್ಣಾಯಕ ತಿರುವು ಕೊಟ್ಟವರು ಸುಭಾಷ್ ಚಂದ್ರ ಬೋಸ್.


1947ರಲ್ಲಿ ಸ್ವಾತಂತ್ರ್ಯ ಲಭಿಸಿತು. ಆದರೆ ಈ ಎಲ್ಲಾ ಕ್ರಾಂತಿಕಾರಿಗಳ ವಿಚಾರ ನಮ್ಮ ಇತಿಹಾಸ ಪುಸ್ತಕಗಳಲ್ಲಿ ಮೂಲೆಗುಂಪಾದವು. ಇದು ದುರದೃಷ್ಟವೇ ಸರಿ.... ಬರೆಯುತ್ತಾ ಹೋದರೆ ಈ ವಿಷಯಗಳಿಗೆ ಅಂತ್ಯವೇ ಇಲ್ಲಾ ಇಂತಹ ಅದೆಷ್ಟೋ ಕ್ರಾಂತಿಕಾರಿಗಳು ನಮ್ಮ ದೇಶಕ್ಕೆ ಪ್ರಾಣಾರ್ಪಣೆಗೈದಿದ್ದಾರೆ. ಅವರಲ್ಲಿ ಕೆಲವರ ಕೊಡುಗೆ ಅಪ್ರತಿಮ. ಹೇಗೆ ತಾನೇ ಮರೆಯಲು ಸಾಧ್ಯ ಮದನ್ ಲಾಲ್ ಧಿಂಗ್ರಾ, ಚಿದಂಬರಂ ಪಿಲೈ ಮುಂತಾದವರನ್ನು.

ಈ ಅಮರ ಸೇನಾನಿಗಳ ತ್ಯಾಗಕ್ಕೆ ನನ್ನ ನುಡಿನಮನಗಳು.


- ಕೆ. ರಾಘವೇಂದ್ರ ಭಟ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top