16 ತಂಡಗಳು ಭಾಗಿ | ಕರ್ನಾಟಕ ಅಂಚೆ ವೃತ್ತ ಆಯೋಜನೆ
ಬೆಂಗಳೂರು: ಕೇಂದ್ರ ಅಂಚೆ ಇಲಾಖೆಯ ಕರ್ನಾಟಕ ಅಂಚೆ ವೃತ್ತ ವತಿಯಿಂದ ಸೆ.27ರಿಂದ ಸೆ.30ರವರೆಗೆ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಅಖಿಲ ಭಾರತ ಅಂಚೆ ವಾಲಿಬಾಲ್ ಪಂದ್ಯಾವಳಿ ನಡೆಯಲಿದೆ.
ಮಂಗಳವಾರ ಬೆಳಗ್ಗೆ 9.30ಕ್ಕೆ ದೆಹಲಿಯ ಪೋಸ್ಟಲ್ ಸವೀಸಸ್ ಬೋರ್ಡ್‌ನ ಸದಸ್ಯೆ ಆಲ್ಕಾ ಝಾ, ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕೆ.ವೈ.ವೆಂಕಟೇಶ್ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ. ಶುಕ್ರವಾರ (ಸೆ.30) ಸಂಜೆ 4 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಡಾ.ಶಾಲಿನಿ ರಜನೀಶ್ ಮುಖ್ಯ ಅತಿಥಿಗಳಾಗಿ, ಅಂತಾರಾಷ್ಟ್ರೀಯ ಹಾಕಿ ಆಟಗಾರ ಎಂ.ಪಿ.ಗಣೇಶ್, ವಾಲಿಬಾಲ್ ಆಟಗಾರ ನಾಗರಾಜ ಹೆಗ್ಡೆ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಅಂಚೆ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರ ಕುಮಾರ್ ಹೇಳಿದರು.
ಆಂಧ್ರಪ್ರದೇಶ, ದೆಹಲಿ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಪಂಜಾಬ್, ರಾಜಸ್ಥಾನ, ತಮಿಳುನಾಡು, ತೆಲಂಗಾಣ ಮತ್ತು ಉತ್ತರ ಪ್ರದೇಶ ಸೇರಿ ದೇಶದ 16 ತಂಡಗಳ 200 ಆಟಗಾರರು ಆಡಲಿದ್ದಾರೆ. ಯೂಟೂಬ್, ಪೇಸ್‌ಬುಕ್‌ನಲ್ಲಿ ಈ ಪಂದ್ಯಾವಳಿಗಳು ನೇರ ಪ್ರಸಾರವಾಗಲಿದೆ ಎಂದು ಎಸ್.ರಾಜೇಂದ್ರ ಕುಮಾರ್ ಮಾಹಿತಿ ನೀಡಿದರು.
ಕರ್ನಾಟಕ ಅಂಚೆ ವೃತ್ತದ ವಾಲಿಬಾಲ್ ತಂಡ 2014 ಮತ್ತು 2018ರಲ್ಲಿ ಚಾಂಪಿಯನ್‌ಯಾಗಿದ್ದರೆ, 2019ರಲ್ಲಿ ರನ್ನರ್‌ಆಪ್ ಆಗಿತ್ತು. ನಮ್ಮ ತಂಡದಲ್ಲಿ ಅಂತಾರಾಷ್ಟ್ರೀಯ ಆಟಗಾರರಿದ್ದು, ಈ ಬಾರಿ ನಾವೇ ಗೆಲ್ಲುವ ವಿಶ್ವಾಸವಿದೆ. ೈನಲ್‌ನಲ್ಲಿ ವಿಜೇತ ತಂಡಕ್ಕೆ ಟ್ರೋಫಿ ಮತ್ತು ಸರ್ಟಿಫಿಕೇಟ್ ವಿತರಿಸಲಾಗುವುದು. ಕೋವಿಡ್ ಹಿನ್ನೆಲೆಯಲ್ಲಿ 2 ವರ್ಷಗಳಿಂದ ಪಂದ್ಯಾವಳಿ ಆಯೋಜನೆ ಮಾಡಿರಲಿಲ್ಲ. ಕೋವಿಡ್ ಕೇಸ್‌ಗಳು ಕಡಿಮೆಯಾದ ಹಿನ್ನೆಲೆಯಲ್ಲಿ ಟೂರ್ನಿಮೆಂಟ್ ಏರ್ಪಡಿಸಲಾಗಿದೆ ಎಂದು ವಿವರಿಸಿದರು.
ವಿವಿಧ ಕಾರ್ಯಕ್ರಮಗಳು: ಆಜಾದಿ ಕಾ ಅಮೃತಮಹೋತ್ಸವ ಅಂಗವಾಗಿ ಕರ್ನಾಟಕ ಅಂಚೆ ವೃತ್ತಯಿಂದ ಅ.9ರಿಂದ ಅ.15ರವರೆಗೆ ಸ್ವಾತಂತ್ರ್ಯ ಹೋರಾಟ, ಐಡಿಯಾಸ್-75, ಆಕ್ಷನ್-75, ಅಚೀವ್‌ಮೆಂಟ್-75 ಸೇರಿ ವಿವಿಧ ಕಾರ್ಯಕ್ರಮಗಳು ಏರ್ಪಡಿಸಲಾಗಿದೆ. ಅ.2ರಂದು ಕಬ್ಬನ್ ಪಾರ್ಕ್‌ನಲ್ಲಿ ‘ಫಿಟ್ ಇಂಡಿಯಾ ಸ್ವಾತಂತ್ರ್ಯ ಓಟ’ ಹಾಗೂ ಅ.3ರಂದು ಜಿಲ್ಲಾ ಹಂತದಲ್ಲಿ ಈ ಕಾರ್ಯಕ್ರಮಗಳು ಇರಲಿವೆ. ಅ.1ರಿಂದ ಅ.31ರವರೆಗೆ 8ನೇ ತರಗತಿಯಿಂದ 12ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ‘ಅಂಚೆ ಚೀಟಿ ವಿನ್ಯಾಸ ಸ್ಪರ್ಧೆ’ ಆಯೋಜಿಸಲಾಗಿದೆ. ಅತ್ಯುತ್ತಮ ಅಂಚೆ ವಿನ್ಯಾಸಕ್ಕೆ ಪ್ರಶಸ್ತಿ ನೀಡಲಾಗುತ್ತದೆ. ವಿವರಕ್ಕಾಗಿ 99861 50782ಕ್ಕೆ ಸಂಪರ್ಕಿಸಬಹುದು ಎಂದು ರಾಜೇಂದ್ರ ಕುಮಾರ್ ತಿಳಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


