ಉಜಿರೆ: ಯಾವುದೇ ಭಾಷೆಯೂ ಒಂದು ಸಂಸ್ಕೃತಿಯ ಉತ್ಪನ್ನ. ಹೀಗಾಗಿ ಭಾಷೆಯ ಬಳಕೆ ನಿಂತರೆ ಆ ಸಂಸ್ಕೃತಿಯು ನಶಿಸಿದಂತೆ ಎಂದು ಬೆಳ್ತಂಗಡಿಯ ವಾಣಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರೂ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷರಾಗಿರುವ ಯದುಪತಿ ಗೌಡರು ಅಭಿಪ್ರಾಯಪಟ್ಟರು.
ಅವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ಕನ್ನಡ ಸಂಘವು ಆಯೋಜಿಸಿದ ʼಭಾಷೆಯ ಮಹತ್ವ ಮತ್ತು ಬಳಕೆʼ ಎಂಬ ವಿಶೇಷ ಉಪನ್ಯಾಸದ ಅಭ್ಯಾಗತರಾಗಿ ಮಾತನಾಡುತ್ತಾ ಭಾಷೆಯ ಸ್ವರೂಪ, ಸಾಹಿತ್ಯ ಹಾಗೂ ಇತಿಹಾಸ ವಿಚಾರಗಳಲ್ಲಿ ಶ್ರೀಮಂತವಾಗಿರುವ ಕನ್ನಡ ಭಾಷೆಯನ್ನು ಕಾಪಾಡುವ ಹೊಣೆಗಾರಿಕೆ ನಮ್ಮೆಲ್ಲರದ್ದೂ ಆಗಿದೆ. ಅತ್ಯಂತ ಸುಂದರ ಲಿಪಿಯನ್ನು ಹೊಂದಿರುವ ಕನ್ನಡವನ್ನು ಉಳಿಸಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯರರಾದ ಪ್ರೊ.ಎನ್. ದಿನೇಶ್ ಚೌಟರವರು ಭಾಷೆಯ ಮಹತ್ವ ಅರಿಯಬೇಕಾದರೆ ಮೊದಲು ಉತ್ತಮ ಓದುಗರರಾಗಬೇಕು ಹಾಗೂ ವಿದ್ಯಾರ್ಥಿಗಳು ಓದುವುದರಿಂದ ಧನಾತ್ಮಕ ಲಾಭಗಳಿವೆ ಎಂದು ಹೇಳಿದರು.
ವೇದಿಕೆಯಲ್ಲಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ರಾಧಾಕೃಷ್ಣ ಕೆದಿಲಾಯರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಚೇತನ್, ಸೂರ್ಯ ಹಾಗೂ ಸುಶಿರಾ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.