|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಾಗರ ಪಂಚಮಿ: ಪರಶುರಾಮ ಕ್ಷೇತ್ರದಲ್ಲಿ ನಾಗಾರಾಧನೆ ಬಂದ ಬಗ್ಗೆ ಪುರಾಣದ ಐತಿಹ್ಯ ಏನು?

ನಾಗರ ಪಂಚಮಿ: ಪರಶುರಾಮ ಕ್ಷೇತ್ರದಲ್ಲಿ ನಾಗಾರಾಧನೆ ಬಂದ ಬಗ್ಗೆ ಪುರಾಣದ ಐತಿಹ್ಯ ಏನು?


ನಮ್ಮ ದೇಶದಲ್ಲಿ ಹಬ್ಬಗಳು ಕಡಿಮೆ ಏನಲ್ಲ. ಹಿಂದುಗಳ ವಿಶೇಷತೆಯೇ ಅದು. ನಾವು ಕಲ್ಲು ಮುಳ್ಳು ಹಸು ಪ್ರಾಣಿ ಪಕ್ಷಿ ಎಲ್ಲರಲ್ಲೂ ದೇವರನ್ನು ಕಂಡವರು. ನಾಮ ಹಲವು ದೇವನೊಬ್ಬ ಎಂಬುದೇ ಹಿಂದು ಧರ್ಮದ ಅಡಿಪಾಯ. ನೀನು ಯಾವ ರೂಪದಲ್ಲಾದರೂ ನನ್ನನ್ನು ಪೂಜಿಸು ನಾನು ಅದೇ ರೂಪದಲ್ಲಿ ನಿನಗೆ ಕಾಣಿಸುತ್ತೇನೆ ಎಂಬ ದೇವರ ದೇವನ ಮಾತೇ ಹಿಂದೂ ಧರ್ಮವನ್ನು ಇತರ ಧರ್ಮಕ್ಕಿಂತ ಮೇಲಿನ ಸ್ಥಾನದಲ್ಲಿ ಇರಿಸಿದೆ.


ಇಂದು ನಾಗರ ಪಂಚಮಿ.

ಇದಕ್ಕೆ ಪೌರಾಣಿಕ ಕತೆಯೊಂದಿದ್ದರೂ ಪರಶುರಾಮ ಕ್ಷೇತ್ರಕ್ಕೆ ಸಂಬಂಧಿಸಿ ಕತೆಯೊಂದಿದೆ. ನನ್ನ ಹಿರಿಯರು ಹೇಳಿದ ಈ ಕತೆಯನ್ನು ನಿಮ್ಮೊಂದಿಗೆ ಹಂಚೋಣ ಅನ್ನಿಸಿದೆ. ಮುಂದುವರಿಯೋಣ ಈ ಕತೆಯೆಡೆಗೆ.


ಭೂಲೋಕದಲ್ಲಿ ಅನಾಚಾರಗಳು ಹೆಚ್ಚಾಗಿ ಬ್ರಾಹ್ಮಣರಿಗೆ ಅವರ ನಿತ್ಯಾನುಷ್ಟಾನಗಳನ್ನು ನಡೆಸುವುದೇ ದುಸ್ತರವಾಗುತ್ತದೆ. ಬ್ರಾಹ್ಮಣರಿಗೆ ರಕ್ಷಣೆ ಕೊಡಬೇಕಿದ್ದ ಕ್ಷತ್ರಿಯರು ಸುಖಲೋಲುಪರಾಗಿ ತಮ್ಮ ಕರ್ತವ್ಯವನ್ನು ಮರೆಯುತ್ತಾರೆ. ಆಗ ಭಗವಂತ ಪರಶುರಾಮ ರೂಪದಲ್ಲಿ ಭೂಲೋಕದಲ್ಲಿ ಅವತರಿಸುತ್ತಾನೆ. 

21 ಬಾರಿ ಭೂಪ್ರದಕ್ಷಿಣೆ ಮಾಡಿದ ಪರಶುರಾಮರು ದುಷ್ಟ ಸಂಹಾರ ಮಾಡಿ ಶಿಷ್ಟ ರಕ್ಷಣೆ ಮಾಡುತ್ತಾರೆ.

ಈ ವರೆಗೂ ಕಷ್ಟ ಕೋಟಲೆಗಳನ್ನು ಅನುಭವಿಸಿದ ಬ್ರಾಹ್ಮಣರು ಪರಶುರಾಮರೊಡನೆ ಬ್ರಾಹ್ಮಣರಿಗೆ ಅವರ ಅನುಷ್ಟಾನಕ್ಕೆ ತೊಂದರೆಯಾಗದಂತೆ ರಕ್ಷಣೆ ಇರುವ ಭೂಮಿ ಒದಗಿಸಿ ಕೊಡುವಂತೆ ಪ್ರಾರ್ಥಿಸುತ್ತಾರೆ. ಸಂಪೂರ್ಣ ಬ್ರಹ್ಮ ಕ್ಷೇತ್ರವನ್ನು ಸುತ್ತಾಡಿ ದುಷ್ಟರನ್ನು ಸಂಹರಿಸಿದ ಪರಶುರಾಮರಿಗೆ ಪುನ: ಅಲ್ಲಿ ಬ್ರಾಹ್ಮಣರಿಗಾಗಿ ಸ್ಥಳ ಕೇಳುವುದು ಉಚಿತ ಎನ್ನಿಸುವುದಿಲ್ಲ. ಆಗಲೇ ಅವರ ಪರಶು ಕ್ಷತ್ರಿಯರ ರಕ್ತದಿಂದ ಪೂರಿತವಾಗಿದ್ದುದರಿಂದ ಪುನ: ಅದನ್ನು ಉಪಯೋಗಿಸುವ ಮನ ಅವರಲ್ಲಿ ಇರಲಿಲ್ಲ. ಪರಶುವನ್ನು ಶುಚಿಗೊಳಿಸುವ ಕೆಲಸದೊಂದಿಗೆ ಬ್ರಾಹ್ಮಣರಿಗಾಗಿ ಪ್ರತ್ಯೇಕ ಸ್ಥಳ ಕೊಡಿಸುವ ನಿರ್ಧಾರ ಪರಶುರಾಮರು ತೆಗೆದು ಕೊಳ್ಳುತ್ತಾರೆ.  


ಈ ನಿರ್ಧಾರ ತೆಗೆದು ಕೊಂಡ ಪರಶುರಾಮರು ಗೋಕರ್ಣದಲ್ಲಿ ನಿಂತು ಸಾಗರನನ್ನು ಕರೆಯುತ್ತಾರೆ. ಬ್ರಾಹ್ಮಣರಿಗಾಗಿ ಭೂಮಿ ಕೊಡಲು ವಿನಂತಿಸುತ್ತಾರೆ. ಆದರೆ ಸಾಗರ ನಿರಾಕರಿಸುತ್ತಾನೆ. ಎಷ್ಟು ವಿನಂತಿಸಿದರೂ ವಿವಿಧ ಕಾರಣಗಳನ್ನು ನೀಡುತ್ತಾ ಭೂಮಿ ಕೊಡಲು ಸಾಗರ ನಿರಾಕರಿಸಿದಾಗ ಕೋಪಗೊಂಡ ಪರಶುರಾಮರು ತಮ್ಮ ಕೊಡಲಿಯನ್ನು ಎತ್ತಿ ಸಾಗರನನ್ನು ಸಂಹರಿಸಲು ಹೊರಡುತ್ತಾರೆ.


ಭೀತಗೊಂಡ ಸಾಗರ ಪರಶುರಾಮರಿಗೆ ಹಲವೂ ಶರ್ತಗಳೊಂದಿಗೆ ಭೂಮಿ ಕೊಡಲು ಒಪ್ಪುತ್ತಾನೆ.

ಪರಶುರಾಮರು ಯಾವೆಲ್ಲಾ ಶರ್ತಗಳನ್ನು ಪಾಲಿಸ ಬೇಕೆಂದು ಸಾಗರನನ್ನು ಕೇಳುತ್ತಾರೆ.


ಸಾಗರ ಪರಶುರಾಮರಿಗೆ ಒಂದನೆಯದಾಗಿ ಹಾಕಿದ ಶರ್ತ-

ತಾನು ಈ ಭೂಮಿಯನ್ನು ಬ್ರಾಹ್ಮಣರಿಗೆ ಅವರ ಅನುಷ್ಟಾನ ಗಳಿಗೆ ತೊಂದರೆ ಬರದಂತೆ ನಡೆಸುವ ಉದ್ದೇಶದಿಂದ ಕೊಡುತ್ತಿರುವುದಾದ ಕಾರಣ ಈ ಭೂಮಿಯಲ್ಲಿ ಪುಣ್ಯ ಕಾರ್ಯಗಳು ನಡೆಯದೆ ಹೋದಾಗ,ಯಾಗ ಯಜ್ಞಗಳು ನಡೆಯದೆ ಆದರೆ, ಬ್ರಾಹ್ಮಣರು ಅನುಷ್ಟಾನ ರಹಿತರಾದಾಗ, ಗೋ ಬ್ರಾಹ್ಮಣರಿಗೆ ಮಾನ್ಯತೆ ಸಿಗದಾಗ ತಾನು ಕೊಟ್ಟ ಈ ಭೂಮಿಯನ್ನು ತಾನೇ ಹಿಂದೆ ಪಡೆಯುವ ಅಧಿಕಾರ ತನ್ನಲ್ಲಿ ಇಟ್ಟು ಕೊಳ್ಳುವುದಾಗಿ ಹೇಳುತ್ತಾನೆ. ಪರಶುರಾಮರು ಇದಕ್ಕೆ ಒಪ್ಪುತ್ತಾರೆ.


ಎರಡನೆಯದಾಗಿ ಬ್ರಹ್ಮಕ್ಷೇತ್ರದ ಸಮೀಪ ಇರುವ ಭೂಮಿ ಸಾಗರನ ಒಡೆತನದಲ್ಲಿ ಇದ್ದರೂ ನಾಗಗಳಿಗೆ ಸೇರಿದ್ದೆಂದೂ ನಾಗಗಳು ತನ್ನ ರಕ್ಷಣೆಯಲ್ಲಿ ಇರುವ ಕಾರಣ ಈ ಭೂಮಿಯನ್ನು ಬಿಟ್ಟು ಕೊಟ್ಟ ಮೇಲೆ ಇಲ್ಲಿ ನಾಗಾರಾಧನೆ ನಡೆಯ ಬೇಕೆಂದೂ ನಾಗಗಳ ಮೇಲೆ ಯಾವುದೇ ಹಿಂಸೆ ನಡೆಯ ಬಾರದೆಂದೂ ನಾಗಾರಾಧನೆ ನಡೆಯದೆ ಹೋದರೆ ನಾಗಗಳಮೇಲೆ ಹಿಂಸೆ ನಡೆದರೆ ನಾಗಗಳ ಭೂಮಿಯನ್ನು ಹಿಂಪಡೆದು ಅವುಗಳಿಗೆ ಒಪ್ಪಿಸುವ ಅಧಿಕಾರ ತನ್ನಲ್ಲೇ ಇಟ್ಟುಕೊಳ್ಳುವುದಾಗಿಯೂ ಹೇಳುತ್ತಾನೆ. ಪರಶುರಾಮರು ಇದಕ್ಕೂ ಒಪ್ಪಿಕೊಳ್ಳುತ್ತಾರೆ.


ಈಗ ಸಾಗರ ಪರಶುರಾಮರೊಡನೆ ಅವರು ಎಷ್ಟು ಸ್ಥಳವನ್ನು ಅಪೇಕ್ಷಿಸುತ್ತಾರೆಂದು ಕೇಳುತ್ತಾನೆ. ತಾನು ನಿಂತಸ್ಥಳವಾದ ಗೋಕರ್ಣದಿಂದ ತನ್ನ ಕೊಡಲಿಯನ್ನು ಎಸೆಯುವುದಾಗಿಯೂ ಆ ಕೊಡಲಿ ಎಲ್ಲಿ ಹೋಗಿ ಬಿತ್ತೋ ಅಷ್ಟೂ ಜಾಗವನ್ನು ಬಿಟ್ಟುಕೊಡಬೇಕೆಂದು ಕೇಳುತ್ತಾರೆ. ಸಾಗರ ಅದಕ್ಕೆ ಒಪ್ಪಿಕೊಳ್ಳುತ್ತಾನೆ. ಈಗ ಪರಶುರಾಮರು ತಮ್ಮ ಕೊಡಲಿಯನ್ನು ಸಮುದ್ರದಲ್ಲಿ ಗೋಕರ್ಣದಿಂದ ತೆಂಕು ಬದಿಗೆ ಬೀಸಿ ಒಗೆಯುತ್ತಾರೆ. ಆ ಕೊಡಲಿ ಈಗಿನ ಕನ್ಯಾಕುಮಾರಿಯಲ್ಲಿ ಹೋಗಿ ಬೀಳುತ್ತದೆ. ಮಾತು ಕೊಟ್ಟಂತೆ ಸಾಗರ ಅಷ್ಟೂ ಸ್ಥಳದಿಂದ ಹಿಂದೆ ಸರಿಯುತ್ತಾನೆ.


*ಹೀಗೆ ಪರಶುರಾಮ ಕ್ಷೇತ್ರ ಗೋಕರ್ಣದಿಂದ ಕನ್ಯಾಕುಮಾರಿವರೆಗೆ ಹಬ್ಬಿ ಗೋಕರ್ಣ ಮಂಡಲ ಎನ್ನಿಸಿ ಕೊಳ್ಳುತ್ತದೆ. ಮೇರು ಪರ್ವತದ ದಕ್ಷಿಣ ಭಾಗವಾದ ಗೋಕರ್ಣ ಮಂಡಲದಲ್ಲಿ ಬ್ರಾಹ್ಮಣರ ನಿತ್ಯಾನುಷ್ಟನಕ್ಕಾಗಲಿ ವಿಶೇಷಾನುಷ್ಟನುಕ್ಕಾಗಲಿ ತೊಂದರೆ ಬಂದರೆ ಗೋ ಬ್ರಾಹ್ಮಣರ ಮೇಲೆ ದೌರ್ಜನ್ಯ ನಡೆದರೆ ಈ ಭೂಮಿಯನ್ನು ಹಿಂಪಡೆಯುವ ಅಧಿಕಾರ ಸಾಗರನಿಗೆ ಇಂದೂ ಇದೆ.


ತಮ್ಮ ಭೂಮಿಯನ್ನು ಲೋಕ ಹಿತಕ್ಕಾಗಿ ಬಿಟ್ಟು ಕೊಟ್ಟ ನಾಗಗಳನ್ನು ಆರಾಧಿಸುವ ಕೆಲಸ ಈ ಭೂಮಿಯಲ್ಲಿ‌ ವಾಸಿಸುವ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಆದ್ದರಿಂದ ಪರಶುರಾಮರನ್ನು ಸ್ಮರಿಸುತ್ತಾ ನಮಗೆ ಈ ಭೂಮಿಯನ್ನು ಕೊಡಮಾಡಿದ ಈ ದಿನವನ್ನು ನಾಗಾರಾಧನೆಯ ಮೂಲಕ ಕೊಂಡಾಡ ಬೇಕಿದೆ. ಇದು ಪರಶುರಾಮರ ಆಜ್ನೆ ಕೂಡಾ ಆಗಿದೆ. ಮುಂದೆ ಪರಶುರಾಮ ಕ್ಷೇತ್ರದಿಂದ ಹೊರಗೆ ಹೋದ ಬ್ರಾಹ್ಮಣರು ತಮ್ಮೊಂದಿಗೆ ಈ ನಾಗಾರಧನೆಯ ಕ್ರಮಗಳನ್ನು ದೇಶವಿಡೀ ಪಸರಿಸಿದರೆಂದೂ ಇದರಿಂದಲಾಗಿ ಈಗ ದೇಶದಲ್ಲಿ ಅದರಲ್ಲೂ ಗೋಕರ್ಣ ಕ್ಷೇತ್ರಕ್ಕೆ ಹೊರತಾದ ಕರ್ನಾಟಕದಲ್ಲೂ ನಾಗಾರಾಧನೆ ನಡೆಯುತ್ತಿದೆ.


ಆಯಾಯಾ ಊರಲ್ಲಿ ಅದಕ್ಕೆ ಅನುಸರಿಸಿ ಬೇರೆ ಬೇರೆ ಕತೆಗಳು ಇರಬಹುದು. ಆದರೆ ಈ ಕತೆ ವಾಸ್ತವಕ್ಕೆ ಹತ್ತಿರವಿದೆ ಅನ್ನಿಸುತ್ತದೆ. ಸಧ್ಯ ಇಂದಿನ ದಿನ ಗೋಕರ್ಣ ಕ್ಷೇತ್ರ ಉದಯವಾದ ದಿನವೆಂದೂ ಈ ಭೂಮಿಯನ್ನು ನಮಗಿತ್ತ ನಾಗಗಳನ್ನು ನೆನಪಿಸಿ ಪೂಜಿಸುವ ಕಾರ್ಯ ನಾವು ನಡೆಸ ಬೇಕಿದೆಯೆಂದೂ ತಿಳಿದು ಇಂದು ನಾಗಾರಾಧನೆ ನಡೆಸೋಣ.

-ಎಡನಾಡು ಕೃಷ್ಣ ಮೋಹನ ಭಟ್ಟ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

0 Comments

Post a Comment

Post a Comment (0)

Previous Post Next Post