ಕಾರುಣ್ಯ ಮನುಷ್ಯನ ಸರ್ವಶ್ರೇಷ್ಠ ಭಾವ: ರಾಘವೇಶ್ವರ ಶ್ರೀ

Upayuktha
0

 



ಗೋಕರ್ಣ: ಕಾರುಣ್ಯ ಹಾಗೂ ಅದ್ವೈತ ಒಂದಕ್ಕೊಂದು ಸಂಬಂಧ ಹೊಂದಿವೆ. ಅಂತೆಯೇ ಜ್ಞಾನಕ್ಕೂ ಕಾರುಣ್ಯಕ್ಕೂ ನಿಕಟ ಸಂಬಂಧ ಇದೆ; ಕಣ್ಣರಿಯದಿದ್ದರೂ, ಕರುಳು ಅರಿಯುತ್ತದೆ ಎಂಬಂತೆ ಭಾಷೆ ಇಲ್ಲದೇ ಭಾವದ ಮೂಲಕ ವಿಷಯಗಳಿಗೆ ಸ್ಪಂದಿಸುವ ಶ್ರೇಷ್ಠ ಭಾವ ಕಾರುಣ್ಯ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ಹೇಳಿದರು.


ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಬುಧವಾರ ಆಶೀರ್ವಚನ ನೀಡಿದ ಅವರು, ಕರುಣ ಭಾವ ಇದ್ದರೆ ಮಾತ್ರ ಆತ ಮನುಷ್ಯ ಎನಿಸಿಕೊಳ್ಳುತ್ತಾನೆ. ಇಲ್ಲದಿದ್ದರೆ ರಾಕ್ಷಸನಾಗುತ್ತಾನೆ. ತನ್ನನ್ನೂ ಸೇರಿದಂತೆ ಯಾರ ಬಗ್ಗೆಯೂ ಕಾರುಣ್ಯ ಅಥವಾ ಕನಿಕರ ಇಲ್ಲದವನು ರಾಕ್ಷಸಾಧಮ. ತನ್ನ ಬಗ್ಗೆ ಮಾತ್ರ ಕರುಣೆ ಇರುವವನು ರಾಕ್ಷಸ. ತಾನು ಹಾಗೂ ತನ್ನವರಲ್ಲಿ ಕನಿಕರ ಇರುವವನು ಮನುಷ್ಯ. ತನ್ನವರು ಅಲ್ಲದವರ ಮೇಲೂ ಕನಿಕರ ಹೊಂದುವುದು ಮಾನವೋತ್ತಮ ಎಂದು ಬಣ್ಣಿಸಿದರು.


ಕುಟುಕುವ ದುರ್ಜನರ ಮೇಲೂ ಸಂತ ಹಾಗೂ ಭಗವಂತ ಕನಿಕರ ವ್ಯಕ್ತಪಡಿಸುತ್ತಾನೆ. ಭಗವಂತನ ಶಾಸನ ಅಥವಾ ಶಾಸ್ತ್ರವನ್ನು ನಾವು ಪದೇ ಪದೇ ಧಿಕ್ಕರಿಸುತ್ತಲೇ ಇರುತ್ತೇವೆ. ತಾಯಿ ತಂದೆಯ ವಾತ್ಸಲ್ಯಕ್ಕೆ ಸಾವಿರ ಪಾಲು ವಾತ್ಸಲ್ಯ ಶಾಸ್ತ್ರಕ್ಕೆ ಇದೆ. ಅದನ್ನು ಧಿಕ್ಕರಿಸಿದರೂ ಭಗವಂತ ನಮ್ಮ ಮೇಲೆ ಅಪಾರ ಕನಿಕರ ಹೊಂದಿರುತ್ತಾನೆ ಎಂದು ವರ್ಣಿಸಿದರು.


ಕಾರುಣ್ಯ ಎನ್ನುವುದು ದೇವರ ಗುಣ. ಎಲ್ಲರ ಜತೆಗೆ ಭಾವ ಬಂಧದ ಬೆಸುಗೆ ಆತನಿಗೆ ಇದು. ಎಲ್ಲ ಜೀವ ಜಂತುಗಳ ಬಗ್ಗೆಯೂ ಆತನಿಗೆ ಅದ್ವೈತ ಭಾವ ಇದೆ. ಅದು ಮನುಷ್ಯನಲ್ಲಿ ಬಂದಷ್ಟೂ ಆತನಿಗೂ ದೈವೀಭಾವ ಬರುತ್ತದೆ ಎಂದರು. ಪರರ ದುಃಖಕ್ಕೂ ಸ್ಪಂದಿಸುವ ಭಾವ ಬೆಳೆಸಿಕೊಂಡು ದೈವತ್ವಕ್ಕೇರೋಣ ಎಂದು ಕರೆ ನೀಡಿದರು.


ನಮಗೆ ಕೇಡು ಮಾಡಿದವರಲ್ಲೂ ಕನಿಕರ ಹೊಂದಿರುವವರು ದೇವರು ಮತ್ತು ಗುರುಗಳಿಗೆ ಮಾತ್ರ ಸಾಧ್ಯ ಎಂದರು. ಪರರಿಗೆ ದುಃಖವಾದಾಗ ನಮಗೂ ದುಃಖವಾಗುವುದು ಕಾರುಣ್ಯ. ನಮ್ಮ ತೊಂದರೆಗೆ ನಾವು ದುಃಖಿಸುವುದು ಎಲ್ಲರಿಗೂ ತಿಳಿದಿದೆ. ಆದರೆ ಇನ್ನೊಬ್ಬರಿಗೆ ದುಃಖವಾದಾಗ ನಾವು ದುಃಖಿಸುವುದು ಕರುಣೆ. ಆದರೆ ಇದು ತರ್ಕಕ್ಕೆ ನಿಲುಕದ್ದು. ಅದು ಒಂದು ಬಗೆಯ ಅದ್ವೈತ. ಮತ್ತೊಂದು ಜೀವದ ಜತೆಗೆ ಒಂದು ಸ್ತರದ ಅದ್ವೈತ ಅಥವಾ ಬೆಸುಗೆ ಬಂದಾಗ ಈ ಭಾವ ಪ್ರಕಟವಾಗುತ್ತದೆ ಎಂದು ವಿಶ್ಲೇಷಿಸಿದರು.


ಶ್ರೀರಾಮ ನವರಸ ನಾಯಕ. ರಾಮಾಯಣ ರಸ ಕಾವ್ಯ. ಶೃಂಗಾರ, ವೀರ, ಅದ್ಭುತ, ಭಯ, ಭೀಬತ್ಸ, ರೌದ್ರ, ಶಾಂತ, ಕಾರುಣ್ಯ ಹೀಗೆ ನವರಸಗಳು ರಾಮಾಯಣದುದ್ದಕ್ಕೂ ಕಂಡುಬರುತ್ತದೆ. ಸೀತಾ ರಾಮರ ಕರುಣರಸದ ಪ್ರವಾಹವೇ ರಾಮಾಯಣ ಎಂದು ಪಂಡಿತರು ಹೇಳುತ್ತಾರೆ ಎಂದು ವಿವರಿಸಿದರು.

ಚಾತುರ್ಮಾಸ್ಯ ಸಾಂಸ್ಕøತಿಕ ಕಾರ್ಯಕ್ರಮ ಅಂಗವಾಗಿ ಪ್ರತಿಮಾ ಜಾಗಟೇದಾರ್ ಅವರಿಂದ ಹರಿಕಥೆ ನಡೆಯಿತು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top