|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಂಪ್ರದಾಯ: ಆಶೀರ್ವಾದವೇ ಉಡುಗೊರೆ

ಸಂಪ್ರದಾಯ: ಆಶೀರ್ವಾದವೇ ಉಡುಗೊರೆ


ಇವತ್ತು ಸಾಮಾನ್ಯವಾಗಿ ಹೆಚ್ಚಿನ ಮದುವೆಯ ಕರೆಯೋಲೆಗಳಲ್ಲಿ ಕಂಡುಬರುವ ವಾಕ್ಯವಿದು. ಸಾಧಾರಣ ನಲ್ವತ್ತು ನಲ್ವತೈದು ವರ್ಷಗಳ ಹಿಂದೆ ಈ ವಾಕ್ಯಗಳಿರಲಿಲ್ಲ. ಮಗುವಿಗೆ ತೊಟ್ಟಿಲಲ್ಲಿ ಹಾಕುವ ಕಾರ್ಯಕ್ರಮದಿಂದ ತೊಡಗಿ ಮುಂಜಿ, ಮದುವೆ, ಗೃಹ ಪ್ರವೇಶ, ಅರವತ್ತು ಎಪ್ಪತ್ತರ ಶಾಂತಿ ಎಲ್ಲದಕ್ಕೂ ಉಡುಗೊರೆಗಳನ್ನು ಕೊಡುವ ಸಂಪ್ರದಾಯವಿತ್ತು. ಮಾತ್ರವಲ್ಲ ಉಡುಗೊರೆಯಲ್ಲಿ ಇಷ್ಟು ಬರಬಹುದೆಂಬ ಲೆಕ್ಕಾಚಾರವೂ ಇತ್ತು. ಒಂದು ದೃಷ್ಟಿಯಿಂದ ನೋಡಿದಾಗ ಅದರಲ್ಲಿ ಕೆಲವು ಧನಾಂಶಗಳೂ ಇದ್ದವು. ಬಡತನವೇ ಜಾಸ್ತಿ ಇದ್ದಂಥ ಆ ಕಾಲದಲ್ಲಿ ಯಾವುದೇ ಒಂದು ಕಾರ್ಯಕ್ರಮ ಮಾಡುವುದಾದರೆ ಅದು ಒಬ್ಬೊಬ್ಬನಿಂದ ಆಗುತ್ತಿರಲಿಲ್ಲ. ಅದಕ್ಕೆ ಸಂಬಂಧಿಕರೊಡನೆ ಊರವರೆಲ್ಲರೂ ಸೇರಿ ಕಾರ್ಯಕ್ರಮವನ್ನು ನಿಭಾಯಿಸುತ್ತಿದ್ದರು. ಅವರವರಲ್ಲಿದ್ದಂಥ ವಸ್ತುಗಳನ್ನು ಅವಶ್ಯಕತೆಗನುಗುಣವಾಗಿ ಯಥಾಶಕ್ತಿ ಕೊಟ್ಟು ಅಂದರೆ ವಸ್ತು ರೂಪದಲ್ಲಿರಬಹುದು, ಹಣದ ರೂಪದಲ್ಲಿರಬಹುದು ಅಥವಾ ಕಾರ್ಯಕ್ರಮವಾಗುವ ಮನೆಯಲ್ಲಿ ಏನಾದರೂ ಕಾಯಕ ಮಾಡುವುದೂ ಇರಬಹುದು ಅಂತು ಎಲ್ಲರ ಸಹಕಾರದಿಂದ ನಡೆಯುವ ಕಾರ್ಯಕ್ರಮಗಳು ಎಲ್ಲರಿಗೂ ಮುದ ಕೊಡುತ್ತಿದ್ದವು.


ಬರಬರುತ್ತ ಮನುಷ್ಯ ಸ್ವಾವಲಂಬಿಯಾಗತೊಡಗಿದಂತೆ ಎಲ್ಲವನ್ನೂ ತಾನೇ ತಯಾರು ಮಾಡಿ ಇನ್ನೊಬ್ಬರ ಸಹಾಯವನ್ನು ಕಡಿಮೆ ಅಪೇಕ್ಷಿಸಿದಂತೆ ವಸ್ತು ರೂಪದ, ಕಾಯಕದ ಸಹಕಾರಗಳು ವಿರಳವಾಗತೊಡಗಿದವು. ಆವಾಗ ಪ್ರಾರಂಭವಾದದ್ದೇ ಈ ಕವರ್ ಎನ್ನುವ ಧನ ರೂಪದ ಉಡುಗೊರೆಗಳು. ಕವರಿನ ಒಳಗಡೆ ಹತ್ತು ರೂಪಾಯಿಯಾದರು ಸರಿ ಸಾವಿರ ರೂಪಾಯಿಯಾದರು ಸರಿ ಕೊಡುವವನ ಶಕ್ತಿಯ ಅನುಸಾರ ಮುಜುಗರವಿಲ್ಲದೇ ಕೊಡಬಹುದು. ಹಾಗೂ ಇನ್ನೊಬ್ಬರಿಗೆ ಅದರೊಳಗಿನ ಮೊತ್ತ ಗೊತ್ತಾಗದ ಕಾರಣ ಉಡುಗೊರೆಯ ಗಾತ್ರದಿಂದ ಪ್ರತಿಷ್ಠೆಯನ್ನು ಅಳೆದು ಉಪಚರಿಸುವ ಸಂಪ್ರದಾಯಕ್ಕೂ ಇತಿಶ್ರೀ ಹೇಳಬಹುದಾದಂಥ ಈ ಸಂಪ್ರದಾಯ ಎಲ್ಲ ವರ್ಗಗಳ ಜನರೂ ಒಪ್ಪಿಕೊಂಡರು. ನಂತರ ಅದು ಎಷ್ಟರ ಮಟ್ಟಿಗೆ ಸರ್ವ ವ್ಯಾಪಿಯಾಯಿತೆಂದರೆ ಮದುವೆ ಮತ್ತು ಕವರ್ ಎನ್ನವ ಪದಗಳು ಒಂದಕ್ಕೊಂದು ಅಪ್ಪಿಕೊಂಡಂತೇ ಇರತೊಡಗಿದವು. ಮದುವೆಗೆ ಉಡುಗೋರೆ ಕೊಡುವುದು ಎನ್ನುವುದಕ್ಕಿಂತಲೂ ಮದುವೆಗೆ ಕವರ್ ಕೊಡುವುದು ಎನ್ನುವುದೇ ಹೆಚ್ಚು ಪ್ರಚಲಿತವಾಯಿತು. ಇವತ್ತಿನ ಕಾಲಕ್ಕೆ ವಸ್ತು ರೂಪದ ಉಡುಗೋರೆಗಳು ಹೊರೆಯಾಗುವಂಥವೇ ಹೊರತು ಉಪಯೋಗಕ್ಕೆ ಬೀಳುವಂಥವು ನೂರಕ್ಕೆ ಹತ್ತರಷ್ಟಿರಬಹುದು. ಕವರ್‌ನಲ್ಲಿಟ್ಟ ಹಣವಾದರೆ ಅದನ್ನು ಯಾವ ರೀತಿಯಲ್ಲಿಯೂ ಉಪಯೋಗಿಸಲಿಕ್ಕಾಗುವುದರಿಂದ ವರ್ತಮಾನದಲ್ಲಿ ಅದು ಪ್ರಸ್ತುತವೇ ಆಯಿತು.


ಈಗ ಮತ್ತೊಮೆ ನಾಲ್ಕು ದಶಕದಷ್ಟು ಹಿಂದೆ ಹೋಗೋಣ. ಉಡುಗೊರೆಗಳನ್ನು ಕೊಡುವುದು ಆಗಲಿ ಪಡೆದುಕೊಳ್ಳುವುದಾಗಲಿ ಉಭಯತರರಿಗೂ ಹೊರೆಯಾಗಬಾರದು, ಹಾಗೂ ಅದು ಪರಸ್ಪರರ ಯೋಗ್ಯತೆಗೂ ಮಾನದಂಡವಾಗಬಾರದು. ಅಲ್ಲಿ ಕೊಡುವ ಹಿಂದಿನ ಭಾವವೇ ಮುಖ್ಯ ಹೊರತು ಮೊಬಲಗು ಮುಖ್ಯವಲ್ಲ. ಅಥವಾ ಕಾರ್ಯಕ್ರಮಕ್ಕೆ ಬಂದವರೆಲ್ಲ ಉಡುಗೊರೆ ಕೊಡಲೇ ಬೇಕೆಂದಿಲ್ಲ. ಸಂತೋಷವನ್ನು ಅಭಿವ್ಯಕ್ತಗೊಳಿಸುವುದಕ್ಕೆ ಅಥವಾ ಆ ಸಂತೋಷವನ್ನು ಪ್ರೀತಿಯಿಂದ ಹಂಚಿಕೊಳ್ಳುವುದಕ್ಕೆ ಉಡುಗೊರೆ ಎನ್ನಬಹುದೋ ಏನೊ. ಉಡುಗೋರೆ ಕೊಟ್ಟರೆ ಪ್ರೀತಿ ಜಾಸ್ತಿ ಎನ್ನುವುದೂ ಅಲ್ಲ, ಕೊಡದಿದ್ದರೆ ಕಡಿಮೆ ಎನ್ನುವುದೂ ಅಲ್ಲ. ಆದರೆ ಈ ಉಡುಗೊರೆಯಿಂದ ಆ ಕಾಲದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಅದೆಷ್ಟು ಮಜುಗರ, ಕೀಳರಿಮೆಗಳನ್ನು ಉಂಟು ಮಾಡುತ್ತಿತ್ತು ಎನ್ನುವುದು ಅನುಭವಿಸಿದವರಿಗೆ ಮಾತ್ರ ಗೊತ್ತು. ಆದಾಯ ಕಡಿಮೆ, ಖರ್ಚು ಜಾಸ್ತಿ, ಆದಾಯದ ಮೂಲಗಳು ಇವತ್ತಿನಂತಿರದೆ ಬರಿದೆ ತೋಟಗಳ ಫಸಲನ್ನು ನಂಬಿ ಜೀವನ, ಇತರ ಆದಾಯವೆಂದರೆ ಪೌರೋಹಿತ್ಯ ಅಥವಾ ಅಡುಗೆ. ಅದೂ ಇಲ್ಲದಿದ್ದರೆ ಕೂಲಿ ಕೆಲಸ.


ವಿದ್ಯೆ ಕಲಿತವರಿಗೆ ಸರಕಾರಿ ಕೆಲಸಗಳು ಸಿಗುತ್ತಿದ್ದರೂ ಖಾಸಗಿ ಕೆಲಸಗಳು ಅಪರೂಪವೇ ಆಗಿತ್ತು. ಹಣವಿದ್ದರೆ ವಿದ್ಯೆ, ವಿದ್ಯೆ ಇದ್ದರೆ ಹಣ ಎನ್ನುವ ಆಗಿನ ಕಾಲದಲ್ಲಿ ಬದುಕು ಬಹಳ ದುಸ್ತರವಾಗಿತ್ತು. ಇವತ್ತಿನಂತೆ ವಿದ್ಯಾಕೇಂದ್ರಗಳೂ ಅಪರೂಪ,ವಿದ್ಯೆಯ ಮಹತ್ವ ಅರಿತವರೂ ಅಪರೂಪ. ಬಹುಶ ಅದೊಂದು ಸಂಧಿಕಾಲವೇ ಆಗಿತ್ತು ಎಂದೆನಿಸುತ್ತದೆ. ಆ ದಿನಗಳಲ್ಲಿ ಮದುವೆ, ಮುಂಜಿ ಅಥವಾ ಇನ್ಯಾವುದೇ ಕಾರ್ಯಕ್ರಮಗಳಾದಾಗ ಎಲ್ಲರೂ ಭಾಗವಹಿಸುವುದು ಸಂಪ್ರದಾಯವೇ ಆಗಿತ್ತು. ನಾವು ಸಣ್ಣವರಿದ್ದಾಗ ಹಿರಿಯರೊಡನೆ ಹೋಗುತ್ತಿದ್ದೆವು. ಅಲ್ಲಿ ವಿಜ್ರಂಭಣೆಯ ಊಟದ ಹೊರತು ನಮಗೆಲ್ಲ ಗೌಣವೇ ಆಗಿತ್ತು. ನಾವು ದೊಡ್ಡವರಾಗಿ ಸ್ವತಂತ್ರವಾಗಿ ಕಾರ್ಯಕ್ರಮಗಳಿಗೆ ಹೋಗಲು ಪ್ರಾರಂಭವಾದಾಗ ನಮಗೆ ಅರಿವಾಗತೊಡಗಿತು ಈ ಸಂಭ್ರಮಗಳಲ್ಲೂ ಬಡವರಾದವರು ಎಷ್ಟು ಮುಜುಗರದಿಂದ ಇರಬೇಕಾಗುತ್ತದೆ ಎಂದು. ಉದಾಹರಣೆಗೆ ಮದುವೆಗೆ ಹೋಗುವುದಾದರೆ ಉಡುಗೊರೆಯೊಂದನ್ನು ಕಟ್ಟಿಕೊಂಡೇ ಹೋಗಬೇಕಾಗಿರುವುದರಿಂದ ಆರ್ಥಿಕವಾಗಿ ಅದು ಒಂದು ಹೊರೆಯೇ ಆಗಿತ್ತು.  


ಇವತ್ತಿನ ಕಾಲಗತಿಯಲ್ಲಿ ಹಾಸ್ಯಾಸ್ಪದ ಎನಿಸಬಹುದು. ಆದರೆ ಆ ಕಾಲದಲ್ಲಿ ದಿನ ಒಂದಕ್ಕೆ ಹತ್ತು ರೂಪಾಯಿಯೂ ಹುಟ್ಟುತ್ತಿರಲಿಲ್ಲ. ಕವರ್ನಲ್ಲಿ ಹತ್ತು ರೂಪಾಯಿ ಇಡುವುದೂ ಹೊರೆಯಾಗುವಂಥ ಸ್ಥಿತಿ. ಬಸ್ಸಿನ ಟಿಕೆಟಿಗೆ ಹಣ ಹೊಂದಿಸಿಕೊಂಡು, ಇದ್ದುದರಲ್ಲಿ ಬಟ್ಟೆ ಬರೆಗಳನ್ನು ನೀಟಾಗಿಸಿ ಕೊಂಡು ಹೊರಡುವುದೆಂದರೆ ಹೈರಾಣಾಗಿ ಹೋಗುತ್ತಿತ್ತು. ಹೇಗಾದರು ಹೋದರೆ ಅಲ್ಲಿ ಎಲ್ಲರೂ ಉಡುಗೊರೆ ಕೊಡುವಾಗ ನೋಡಿಕೊಂಡಿರಲಾಗದೆ, ನೋಡಿಯೂ ನೋಡದವರಂತೆ ವರ್ತಿಸಿ ಊಟ ಮಾಡಿ ಬರುವಾಗ ಅಭಿಮಾನ ಎಂಬುದು ಸತ್ತು ಹೋಗುತ್ತಿತ್ತು. ಮುಂದೆ ಯಾವುದೇ ಕಾರ್ಯಕ್ರಮಕ್ಕೆ ಹೋಗುವ ಹುಮ್ಮಸ್ಸೇ ಹೊರಟು ಹೋಗುತ್ತಿತ್ತು.


ಎಷ್ಟೋ ಸಲ ಅಂಗಿಯ ಹರಿದ ಭುಜವು ಕಾಣಬಾರದೆಂದು ಶಾಲು ಹೊದೆದು, ಮುಂಡಿನ ಮಣ್ಣು ತಾಗಿದ ಬದಿ ಒಳ ಬರುವಂತೆ ಉಟ್ಟುಕೊಂಡು ಸಮಾರಂಭಗಳಿಗೆ ಹೋಗಿರುವಂತೆ, ಉಡುಗೊರೆಯೆಂಬುದಕ್ಕೆ ಹೆದರಿ ಮದುವೆ ಮುಂಜಿಗಳನ್ನು ಬಿಟ್ಟದ್ದೂ ಉಂಟು. ಅಂತಹ ದಿನಗಳಲ್ಲಿ ನಮ್ಮಂಥ ಕೆಲ ವರ್ಗದವರಿಗೆ ಅಭಿಮಾನವೇ ಮುಖ್ಯವಾಗಿತ್ತೇ ಹೊರತು ಬಡತನವಲ್ಲ. ಇದನ್ನು ಮನಗಂಡಂಥವರು ಉಡುಗೊರೆ ಹೊರೆಯಾಗಬಾರದೆಂದೋ, ತನಗೆ ಉಡುಗೊರೆಗಳನ್ನು ಪಡೆಯುವ ಅವಶ್ಯಕತೆ ಇಲ್ಲವೆಂದೋ ಅಥವಾ ಪಡೆದಂಥ ಉಡುಗೊರೆಗಳನ್ನು ಪೇರಿಸಿಡುವುದು ಕಷ್ಟವೆಂದೋ ಉಡುಗೊರೆಯೆಂಬುದು ಆಶೀರ್ವಾದದಲ್ಲಡಗಿದೆ ಎಂಬುದಕ್ಕೆ ಒತ್ತು ಕೊಟ್ಟು ಆಶೀರ್ವಾದವೇ ಉಡುಗೊರೆ ಎಂಬ ಸಂಪ್ರದಾಯಕ್ಕೆ ನಾಂದಿ ಹಾಡಿದರು.   


ಅದೇರೀತಿ ಚಿತ್ಪಾವನ ಸಮಾಜದಲ್ಲಿ ಅಹ್ಯರ ಎಂಬ ಒಂದು ಸಂಪ್ರದಾಯವಿದೆ. ಇದು ಕೂಡ ಉಡುಗೊರೆಯ ಇನ್ನೊಂದು ರೂಪ. ಇದು ಕೂಡ ಮೂಲದಲ್ಲಿ ಒಳ್ಳೆಯ ವಿಚಾರದ ಸಂಪ್ರದಾಯವೇ. ಹಿಂದೆ ಬಡತನದಿಂದ ಯಾವುದೇ ಅನಿವಾರ್ಯವಾದ ಕಾರ್ಯಕ್ರಮಗಳ ನಿರ್ವಹಣೆ ಕಷ್ಟಷಾಧ್ಯವಾದಾಗ ಊರವರು, ನೆಂಟರಿಷ್ಟರು ಸೇರಿ ಅವಶ್ಯಕತೆಗನುಗುಣವಾಗಿ ಅವರವರಲ್ಲಿದ್ದಂಥ ದ್ರವ್ಯಗಳನ್ನು ಕೊಟ್ಟು ಸಮಾರಂಭವನ್ನು ಮುಗಿಸುವ ಪ್ರಕ್ರಿಯೆಯೇ ಈ ಅಹ್ಯರ. ಇಲ್ಲಿ ಕೂಡ ಅಹ್ಯರ ಪಡಕೊಂಡವರು ಅದನ್ನು ಕೂಡಲೇ ಹಿಂದಿರುಗಿಸಲಿಕ್ಕಿಲ್ಲ. ಅಂದರೆ ಇನ್ನೊಬ್ಬರ ಮನೆಯಲ್ಲಿ ಸಮಾರಂಭಗಳಾದಾಗ ಅವರಿಗೆ ಅವಶ್ಯವಿದ್ದ ವಿಷಯಗಳಲ್ಲಿ ತನ್ನಲ್ಲಿ ಲಭ್ಯವಾದುದನ್ನು ಕೊಡುವ ಬಾಧ್ಯತೆ ಮಾತ್ರ ಇರುತ್ತದೆ. ಇದು ಕೂಡ ಬರಬರುತ್ತ ನೇಪಥ್ಯಕ್ಕೆ ಸರಿದದ್ದು ಮಾತ್ರ ವರ್ತಮಾನ. ಏನೇ ಇರಲಿ ಈ ಆಶೀರ್ವಾದವೇ ಉಡುಗೊರೆ ಎನ್ನುವ ಕಲ್ಪನೆ ಆವತ್ತು ಇರುತ್ತಿದ್ದರೆ ಹಲವಾರು ಸಮಾರಂಭಗಳಲ್ಲಿ ಭಾಗವಹಿಸಬಹುದಿತ್ತು ಎಂಬ ವಿಷಯ ಈ ದಿನಕ್ಕೆ ತಮಾಷೆಯ ವಿಷಯವಾದರೂ ಅಂದಿನ ವಸ್ತುಸ್ಥಿತಿ ಎಂದು ಯಾವ ಸಂಕೋಚವೂ ಇಲ್ಲದೆ ಹೇಳಬಹುದೆಂಬುದೂ ಸತ್ಯವೇ. 

***********

-ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post