ಚಿಗಟ ಜ್ವರ ಎನ್ನುವುದು ಬ್ಯಾಕ್ಟೀರಿಯಾದಿಂದ ಬರುವ ವಿರಳ ಜ್ವರವಾಗಿದ್ದು ಆಂಗ್ಲ ಭಾಷೆಯಲ್ಲಿ ಟೈಫಸ್ ಜ್ವರ ಎಂದು ಕರೆಯುತ್ತಾರೆ. ಇಲಿ, ನಾಯಿ, ಬೆಕ್ಕು, ಕುರಿ ಮತ್ತು ದನಗಳ ಮೇಲೆ ಕುಳಿತಿರುವ ಸೋಂಕಿತ ಚಿಗಟ ಅಥವಾ ಉಣ್ಣೆ ಕಚ್ಚುವುದರಿಂದ “ಓರಿಯನ್ಸಿಯಾ ಸುಸುಗಮ್ಮಿ” ಎಂಬ ಬ್ಯಾಕ್ಟೀರಿಯಾ ಮನಷ್ಯನ ದೇಹ ಸೇರಿ ಈ ಚಿಗಟ ಜ್ವರ ಬರುತ್ತದೆ. ಲಸಿಕೆ ಇಲ್ಲದ ರೋಗ ಇದಾಗಿರುವುದರಿಂದ ಸಾಕಷ್ಟು ಮುಂಜಾಗರೂಕತೆ ವಹಿಸಬೇಕಾದ ಅನಿವಾರ್ಯತೆ ಇದೆ. ರೋಗಾಣು ದೇಹಕ್ಕೆ ಸೇರಿ ಒಂದರಿಂದ ಎರಡು ವಾರಗಳಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ.
ಸೋಂಕಿತ ಪ್ರದೇಶದಲ್ಲಿ ವಾಸ ಮತ್ತು ಪ್ರಯಾಣ ಮಾಡುವುದರಿಂದ ಮತ್ತೊಬ್ಬರಿಗೆ ಹರಡುತ್ತದೆ. ಇಂಡೋನೇಷ್ಯ, ಚೀನ, ಜಪಾನ್, ಆಗ್ನೇಷಿಯಾ, ಏಷ್ಯ, ಉತ್ತರ ಆಸ್ಟೇಲಿಯಾ, ಸೇರಿದಂತೆ ಭಾರತದ ಗ್ರಾಮೀಣ ಪ್ರದೇಶÀದಲ್ಲಿ ಟೈಫಸ್ ಮತ್ತು ಸ್ಕ್ರಬ್ ಟೈಫಸ್ ಜ್ವರ ಕಾಣಿಸಿಕೊಳ್ಳುತ್ತದೆ. ರಾಜ್ಯದ ಹಾವೇರಿ, ಧಾರವಾಡ, ಉಡುಪಿ ಜಿಲ್ಲೆಗಳಲ್ಲಿ ಬೇರೂರಿರುವ ಈ ಚಿಗಟ ಜ್ವರ 2018 ರಲ್ಲಿ 217 ಜನರಿಗೆ ಮತ್ತು 2019 ರಲ್ಲಿ 240 ಜನರಿಗೆ ಈ ಜ್ವರ ಬಂದಿರುತ್ತದೆ ಎಂದು ಆರೋಗ್ಯ ಇಲಾಖೆಯ ದಾಖಲೆಗಳು ತಿಳಿಸಿದೆ. ಈಗ ಮಳೆಗಾಲದಲ್ಲಿ ಡೆಂಗ್ಯೂ, ಹಂದಿಜ್ವರ, ಚಿಕನ್‍ಗುನ್ಯಾ, ತನ್ನ ರುದ್ರ ನರ್ತನವನ್ನು ಮಾಡುತ್ತಿರುವ ಸಮಯದಲ್ಲಿಯೇ ಈ ಚಿಗಟ ಜ್ವರವೂ ದೊಡ್ಡ ತಲೆನೋವಾಗಿ ಕಾಡತೊಡಗಿದೆ. ಸಾಮಾನ್ಯ ರೋಗ ಇದಾಗಿದ್ದರೂ ಸೂಕ್ತ ಚಿಕಿತ್ಸೆ ಸಕಾಲದಲ್ಲಿ ಪಡೆಯದಿದ್ದಲ್ಲಿ 60 ಶೇಕಡಾ ಮಂದಿಯಲ್ಲಿ ಮಾರಣಾಂತಿಕವಾಗಿ ಕಾಡುವ ಸಾಧ್ಯತೆ ಇದೆ ಎಂದು ಅಂಕಿ ಅಂಶಗಳಿಂದ ಸಾಬೀತಾಗಿದೆ. ಹೆಣ್ಣು ಗಂಡು ಎಂಬ ಬೇಧವಿಲ್ಲದೆ ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರನ್ನು ಸಮಾನವಾಗಿ ಕಾಡುವ ಚಿಗಟ ಜ್ವg,À ಆರೋಗ್ಯ ಇಲಾಖೆಗೆ ಸವಾಲಾಗಿದೆ ಎಂದರೂ ತಪ್ಪಾಗಲಾರದು
ರೋಗದ ಲಕ್ಷಣಗಳು:
ಟೈಪಸ್ ಜ್ವರ ಅನಾದಿಕಾಲದಿಂದಲು ಚರಿತ್ರೆಯಲ್ಲಿ ದಾಖಲಾಗಿದೆ. ಗ್ರೀಕ್ ಶಬ್ದ ಟೂಪೋಸ್ ಅಂದರೆ ಮಂಜುಕವಿದ ಹಾಗೆ ಎಂಬ ಅರ್ಥ ಬರುತ್ತದೆ. ಈ ಜ್ವರ ಬಂದಾಗ ಮೆದುಳಿಗೆ ಒಂದು ರೀತಿಯ ಮಂಕಾಗಿ, ಸ್ಪಷ್ಟ ನಿಲುವು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಟೈಪಾಯಿಡ್ ಜ್ವರಕ್ಕೂ ಈ ಟೈಫಸ್ ಜ್ವರಕ್ಕೂ ಯಾವುದೇ ಸಂಬಂದ ಇಲ್ಲ. ಇವೆರಡು ಬೇರೆ ಬೇರೆ ಬ್ಯಾಕ್ಟೀರಿಯಗಳಿಂದ ಬರುತ್ತದೆ.
ರೋಗಾಣು ದೇಹಕ್ಕೆ ಸೇರಿದ 7 ರಿಂದ 14 ದಿನಗಳಲ್ಲಿ ಜ್ವರ ಬರುತ್ತದೆ. ಶೀತ, ಮೈಕೈ ನೋವು, ಸ್ನಾಯು ಸೆಳೆತ ಇರುತ್ತದೆ. ಆರಂಭದಲ್ಲಿ ಕೆಮ್ಮು, ಗ್ರಂಥಿಗಳ ಉರಿಯೂತ, ಬೆವರುವಿಕೆ, ತಲೆನೋವು ಇರುತ್ತದೆ, ಈ ಲಕ್ಷಣಗಳು ಕಾಣಿಸಿಕೊಂಡ 5 ರಿಂದ 9 ದಿನಗಳ ಬಳಿಕ ಹೊಟ್ಟೆಯ ಭಾಗದಲ್ಲಿ ತುರಿಕೆ ಮತ್ತು ಕಜ್ಜಿ ಕಂಡು ಬರುತ್ತದೆ ಕ್ರಮೇಣ ಈ ತುರಿಕೆ ಮತ್ತು ಕಜ್ಜಿ ದೇಹದ ಇತರ ಭಾಗಗಳಿಗೆ ಹರಡುತ್ತದೆ. ಮುಖ, ಪಾದ ಮತ್ತು ಕೈಯ ಒಳ ಭಾಗದಲ್ಲಿ ಮಾತ್ರ ಇರುವುದಿಲ್ಲ. ಇದಾದ ಎರಡು ವಾರಗಳಲ್ಲಿ ಮೆದುಳಿನ ಉರಿಯೂತದ ಲಕ್ಷಣಗಳು ಕಂಡು ಬರುತ್ತದೆ ಪೊಟೋಪೋಭಿಯಾ ಅಂದರೆ ಬೆಳಕನ್ನು ಕಂಡಾಗ ಭಯವಾಗುವುದು ಮತ್ತು ಬೆಚ್ಚಿಬೀಳುವುದು ಪ್ರಾಥಮಿಕ ಲಕ್ಷಣವಾಗಿದೆ. ಮೆದುಳಿನ ಚಿಂತನಾÀ ಶಕ್ತಿ ಕುಂದುತ್ತದೆ. ಮತ್ತು ಕೊನೆಯ ಹಂತದಲ್ಲಿ ವ್ಯಕ್ತಿ ಕೋಮಾಕ್ಕೆ ಹೋಗಿ ಮರಣದಲ್ಲಿ ಅಂತ್ಯವಾಗುತ್ತದೆ. ಲಕ್ಷಣಗಳನ್ನು ಆದಷ್ಟು ಬೇಗ ಗುರುತಿಸಿ ಚಿಕಿತ್ಸೆ ನೀಡದಲ್ಲಿ ಈ ರೋಗ ಖಂಡಿತವಾಗಿಯೂ ಸಾವಿನಲ್ಲಿ ದುರಂತ ಅಂತ್ಯ ಕಾಣುತ್ತದೆ. 60 ವರ್ಷ ದಾಟಿದ ವೃದ್ದರಲ್ಲಿ ಸಾವಿನ ಸಾಧ್ಯತೆ ಹೆಚ್ಚಾಗಿರುತ್ತದೆ.
ಚಿಕಿತ್ಸೆ ಹೇಗೆ?
ಆಂಟಿಬಯೋಟಿಕ್ ಔಷಧಿಗೆ ಈ ರೋಗ ಚೆನ್ನಾಗಿ ಸ್ಪಂದಿಸುತ್ತದೆ. ಟ್ರೆಟ್ರಾಸೈಕ್ಲೀನ್ ಗುಂಪಿಗೆ ಸೇರಿದ ಡೋಕ್ಸಿಸೈಕ್ಲೀನ್ ಔಷಧಿ ಬಹಳ ಉಪಯುಕ್ತ. ಕೆಲವೊಮ್ಮೆ ಮೆದುಳಿನ ಉರಿಯೂತ ಇದ್ದಾಗ ಕ್ಲೊರಾಮ್‍ಫೆನಿಕಾಲ್ ಔಷಧಿ ಬೇಕಾಗಬಹುದು. ಆಂಟಿಬಯೋಟಿಕ್ ಜೊತೆಗೆ, ಒಳ ರೋಗಿಯಾಗಿ ದಾಖಲು ಮಾಡಿ ರಕ್ತನಾಳಗಳ ಮುಖಾಂತರ ಷೋಷಕಾಂಶಯುಕ್ತ ದ್ರಾವಣ ಮತ್ತು ಆಕ್ಸಿಜನ್ ಕೂಡ ನೀಡಬೇಕಾಗಬಹುದು. ಒಟ್ಟಿನಲ್ಲಿ ಚಿಕಿತ್ಸೆಗೆ ಈ ರೋಗ ಚಿನ್ನಾಗಿ ಸ್ಪಂದಿಸುತ್ತದೆ.
ತಡೆಗಟ್ಟುವುದು ಹೇಗೆ?
ಈ ರೋಗಕ್ಕೆ ಲಸಿಕೆ ಇಲ್ಲದ ಕಾರಣ ರೋಗ ತಡೆಗಟ್ಟುವುದು ಹೆಚ್ಚಿನ ಆಧ್ಯತೆ ನೀಡಲಾಗುತ್ತದೆ.
1. ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು, ಕುರಿ ದನಗಳನ್ನು ಸ್ವಚ್ಚಗೊಳಿಸಿ ಚಿಗಟ ಅಥವಾ ಉಣ್ನೆ ಬರದಂತೆ ನೋಡಿಕೊಳ್ಳಬೇಕು.
2. ದನ ಕರು ಇರುವ ಜಾಗಗಳನ್ನು ಸ್ವಚ್ಚವಾಗಿರಿಸತಕ್ಕದ್ದು ಪಶು ಸಂಗೋಪನೆ, ಹೈನುಗಾರಿಕೆ, ಕುರಿ ಸಾಕಾಣೆ ಮಾಡುವವರು ಮೈ ಮುಚ್ಚುವ ಉದ್ದ ತೋಳಿನ ಅಂಗಿ ಹಾಕಿ ಉಣ್ಣೆ ಕಚ್ಚದಂತೆ ಎಚ್ಚರ ವಹಿಸಬೇಕು.
3. ಶಂಕಿತ ಮತ್ತು ಸೋಂಕಿತ ಚಿಗಟ ಜ್ವರ ಬಂದಿರುವ ಜಾಗಗಲ್ಲಿ ವಾಸ ಮತ್ತು ಪ್ರಯಾಣ ಮಾಡಬಾರದು.
4. ಬೀದಿ ನಾಯಿಗಳು, ಬೀದಿ ಪ್ರಾಣಿಗಳಿಂದ ಸಾಕಷ್ಟು ಅಂತರ ಕಾಯ್ದುಕೊಳ್ಳಬೇಕು. ನೀವು ಎಷ್ಟೇ ಪ್ರಾಣಿ ಪ್ರಿಯರಾಗಿದ್ದರೂ ಸಾಕಷ್ಟು ಮುನ್ನೆಚ್ಚರಿಕೆ ವಹಿಸದಿದ್ದಲ್ಲಿ ಅನಾವಶ್ಯಕವಾಗಿ ರೋಗವನ್ನು ಆಹ್ವಾನಿಸಿಕೊಳ್ಳಬೇಕಾಗುತ್ತದೆ.
5. ನಿಮಗೆ ಚಿಗಟ ಅಥವಾ ಉಣ್ಣೆ ಕಚ್ಚಿದೆ ಎಂದು ದೃಢವಾಗಿದ್ದಲ್ಲಿ ಆ ಜಾಗವನ್ನು ಆಂಟಿಸೆಪ್ಟಿಕ್ ದ್ರಾವಣದಿಂದ ತೊಳೆದು ಸ್ವಚ್ಚ ಮಾಡತಕ್ಕದ್ದು ಮತ್ತು ತುರಿ,ಜ್ವರ, ತಲೆನೋವು ಬಂದಲ್ಲಿ ತಕ್ಷಣವೇ ವೈದ್ಯರ ಸಲಹೆ ಅತೀ ಅಗತ್ಯ.
ಕೊನೆ ಮಾತು:
ಕಾಲ ಬದಲಾದಂತೆ ನಮ್ಮ ಸುತ್ತಲಿನ ಪರಿಸರದಲ್ಲಿಯೂ ಬಹಳಷ್ಟು ಬದಲಾವಣೆ ಆಗುವುದು ಸಹಜ. ಕೈಗಾರಿಕೀಕರಣ, ಮರ ಗಿಡಗಳ ನಾಶ, ಹೊಸ ಹೊಸ ಆಂಟಿಬಯೋಟಿಕ್‍ಗಳ ಸಂಶೋಧನೆ ನಡೆಸಿದರೂ, ದಿನಕ್ಕೊಂದರಂತೆ ಹೊಸಹೊಸ ರೋಗಾಣುಗಳು ಮತ್ತು ರೋಗಗಳು ಹುಟ್ಟಿಕೊಳ್ಳುವುದು ಆಧುನಿಕತೆಗೆ ಸಿಕ್ಕಿದ ಶಾಪ ಎಂದರೂ ತಪ್ಪಲ್ಲ. ಈ ಪಟ್ಟಿಗೆ ಹೊಸದಾಗಿ ಸೇರಿದ ರೋಗವೇ ಚಿಗಟ ಜ್ವರ. ಈ ಜ್ವರಕ್ಕೂ, ಡೆಂಗ್ಯೂ ಜ್ವರಕ್ಕೂ ಬಹಳ ಸಾಮ್ಯತೆ ಇರುವ ಕಾರಣದಿಂದ ರಕ್ತ ಪರೀಕ್ಷೆ ಮಾಡಿ ಓರಿಯನ್ಸಿಯ ಸುಸುಗುಮ್ಮಿ ಎಂಬ ರೋಗಾಣು ದೇಹಕ್ಕೆ ಸೇರಿರುವುದನ್ನು ಖಚಿತ ಪಡಿಸಿಕೊಂಡು ಸೂಕ್ತ ಚಿಕಿತ್ಸೆ, ಸಕಾಲದಲ್ಲಿ ತಜ್ಞ ವೈದ್ಯರಿಂದ ಪಡೆದಲ್ಲಿ ಈ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಿದೆ ಎನ್ನುವುದು ಬಹಳ ಸಮಾಧಾನಕರ ವಿಚಾರವಾಗಿದೆ. ರೋಗದ ಚಿಕಿತ್ಸೆಗಿಂತ ರೋಗವನ್ನು ತಡೆಗಟ್ಟುವುದರಲ್ಲಿಯೇ ಜಾಣತನ ಇದೆ ಎಂಬ ಸತ್ಯವನ್ನು ಅರಿತು ಪಾಲಿಸಿದ್ದಲ್ಲಿ ಮುಂದಾಗುವ ಸಾವು ನೋವು ಮತ್ತು ಯಾತನೆಯನ್ನು ಕಡಿಮೆ ಮಾಡಬಹುದು ಮತ್ತು ಅದರಲ್ಲಿಯೇ ನಮ್ಮಲ್ಲರ ಮತ್ತು ಸಮಾಜದ ಹಿತ ಅಡಗಿದೆ.
-ಡಾ: ಮುರಲೀ ಮೋಹನ್ ಚೂಂತಾರು
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ