ಭಾಷಾಂತರದಿಂದ ಯಾವುದೇ ಕ್ಷೇತ್ರದಲ್ಲೂ ಕೊಡುಗೆ ಸಾಧ್ಯ: ಡಾ. ಅಜಕ್ಕಳ ಗಿರೀಶ್ ಭಟ್

Upayuktha
0

ತರ್ಜುಮೆ ಬಾಲ್ಯದಿಂದಲೇ ಆರಂಭವಾಗುವ ಸಹಜ ಪ್ರಕ್ರಿಯೆ: ಡಾ. ತಾಳ್ತಜೆ ವಸಂತ ಕುಮಾರ


ಮಂಗಳೂರು: ನಾವು ಯಾವುದೇ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದರೂ ಭಾಷೆ, ಭಾಷಾಂತರದ ಜ್ಞಾನ ಇದ್ದರೆ ಆ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಲು ಸಾಧ್ಯ. ಈ ನಿಟ್ಟಿನಲ್ಲಿ ಯುವ ಜನತೆಯಲ್ಲಿ ಭಾಷಾಂತರದ ಬಗ್ಗೆ ಆಸಕ್ತಿ ಮೂಡಿಸಲು ರಾಜ್ಯದಾದ್ಯಂತ ಭಾಷಾಂತರ ಕಮ್ಮಟಗಳನ್ನು ಆಯೋಜಿಸಲಾಗುತ್ತಿದೆ, ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ. ಅಜಕ್ಕಳ ಗಿರೀಶ್ ಭಟ್ ಹೇಳಿದ್ದಾರೆ.


ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಮತ್ತು ವಿಶ್ವವಿದ್ಯಾನಿಲಯ ಕಾಲೇಜಿನ ಕನ್ನಡ ಸಂಘ (ಕನ್ನಡ ವಿಭಾಗ) ದ ವತಿಯಿಂದ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಭಾಷಾಂತರ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಹುಭಾಷಿಗರು ಹೆಚ್ಚಿದ್ದರೂ ರಾಜ್ಯದಲ್ಲಿ ಭಾಷಾಂತರಕಾರರ ಕೊರತೆಯಿರುವುದು ಚಿಂತಿಸಬೇಕಾದ ವಿಷಯ. ಅನುವಾದವನ್ನು ತೊಡಗಿಕೊಂಡು ಕಲಿಯಬೇಕು, ಎಂದರು. 


ದಿಕ್ಸೂಚಿ ಭಾಷಣ ಮಾಡಿದ ಮುಂಬೈ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಅಧ್ಯಕ್ಷ ಮತ್ತು ವಿಶ್ರಾಂತ ಪ್ರಾಧ್ಯಾಪಕ ಡಾ. ತಾಳ್ತಜೆ ವಸಂತ ಕುಮಾರ ಮಾತನಾಡಿ, ಕರಾವಳಿಗರಲ್ಲಿ ಮನೆಮಾತುಗಳು ವಿಭಿನ್ನವಾಗಿರುವುದರಿಂದ ನಮ್ಮಲ್ಲಿ ತರ್ಜುಮೆ ಬಾಲ್ಯದಿಂದಲೇ ಆರಂಭವಾಗುವ ಒಂದು ಸಹಜ ಪ್ರಕ್ರಿಯೆ. ಬಾಷಾಂತರದಲ್ಲಿ ಹಲವು ವಿಧಗಳು ಮಾತ್ರವಲ್ಲ, ಸವಾಲುಗಳೂ ಅನೇಕ. ಇಂಗ್ಲಿಷ್ ಪದ್ಯವನ್ನು ʼಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ…ʼ ಎಂಬ ಸುಂದರ ಹಾಡಾಗಿಸಿದ ಬಿಎಂಶ್ರೀ ಯವರ ಚಾಕಚಕ್ಯತೆಯನ್ನು ನಾವೂ ರೂಢಿಸಿಕೊಳ್ಳಬೇಕು. ತರ್ಜುಮೆಯಲ್ಲಿ ಅಚಾತುರ್ಯವಾಗದಂತೆ, ವಿಷಯ ಪೇಲವವಾಗಿ ಅಸ್ಥಿಪಂಜರದಂತಾಗಬಾರದು, ಎಂದರು.


ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಕಿಶೋರ್ ಕುಮಾರ್ ಸಿಕೆ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಭಾಷಾಂತರ ಜ್ಞಾನದ ಹಂಚಿಕೆಯೂ ಹೌದು, ಶ್ರೀಮಂತ ಕನ್ನಡ ಭಾಷೆಯನ್ನು ಇನ್ನಷ್ಟು ಶ್ರೀಮಂತವಾಗಿಸಲು ಇರುವ ಒಂದು ಮಾರ್ಗವೂ ಹೌದು. ತರ್ಜುಮೆಯಲ್ಲಾಗುವ ತಪ್ಪುಗಳನ್ನು ನಿವಾರಿಸಲು ಇಂತಹ ಕಾರ್ಯಾಗಾರಗಳು ಅತ್ಯಗತ್ಯ, ಎಂದರು. ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಮಾತನಾಡಿ, ಕಾರ್ಯಾಗಾರಕ್ಕೆ ಶುಭ ಹಾರೈಸಿದರು.


ವಿವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಾಧವ ಎಂ. ಕೆ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿನಿ ಪ್ರತೀಕ್ಷಾ ಪಿ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಉಪನ್ಯಾಸಕ ಡಾ. ವೆಂಕಟೇಶ್ ವಿ ಧನ್ಯವಾದ ಸಮರ್ಪಿಸಿದರು.


ಭಾಷಾಂತರ, ಅನುವಾದ ಬೇರೆ ಬೇರೆ!

ʼಭಾಷಾಂತರ ಒಂದು ಅಧ್ಯಯನʼ ಎಂಬ ಬಗ್ಗೆ ಮಾತನಾಡಿದ ಹಿರಿಯ ಸಾಹಿತಿ ಜನಾರ್ಧನ ಭಟ್ ಬೆಳ್ಮಣ್ ಭಾಷಾಂತರ ಎಂದರೆ ಭಾಷೆಯಿಂದ ಭಾಷೆಗೆ ಬದಲಾಯಿಸುವುದಲ್ಲ, ಅಲ್ಲಿ ಭಾವ ಅಗತ್ಯ ಎಂದರು. ಎಂ.ಜಿ.ಎಂ ಕಾಲೇಜಿನ ವಿಶ್ರಾಂತ ಇಂಗ್ಲಿಷ್ ಮತ್ತು ಜರ್ಮನ್ ಪ್ರಾಧ್ಯಾಪಕ ಪ್ರೊ. ಜಿ. ಎನ್ ಭಟ್ ಅವರು ʼಕನ್ನಡ ಮತ್ತು ಭಾಷಾಂತರʼ ಎಂಬ ಕುರಿತು ಮತ್ತು ಸಾಹಿತಿ ಮತ್ತು ಆಕಾಶವಾಣಿ ಕಲಾವಿದ ಪ್ರವೀಣ್ ಅಮ್ಮೆಂಬಳ ʼಕನ್ನಡ-ತುಳು ಭಾಷಾಂತರದ ಸಾಧ್ಯತೆಗಳುʼ ಎಂಬ ಬಗ್ಗೆ ಮಾತನಾಡಿದರು. ಸಂತ ಅಲೋಶಿಯಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಸುಧಾ ಕುಮಾರಿ ಪ್ರಾಯೋಗಿಕ ಅವಧಿ ನಡೆಸಿಕೊಟ್ಟು ಭಾಷಾಂತರದಿಂದ ಹೇಗೆ ಆದಾಯ ಗಳಿಸಬಹುದು ಎಂಬುದನ್ನು ವಿವರಿಸಿದರು.  


ವಿಶ್ವವಿದ್ಯಾನಿಲಯ ಕಾಲೇಜಿನ ಹಿಂದಿ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಮುರಳೀಧರ ನಾಯ್ಕ್ ಸಮಾರೋಪ ಭಾಷಣ ಮಾಡಿದರು. ಇದೇ ಕಾಲೇಜಿನ ಕನ್ನಡ ವಿಭಾಗದ ವಿಶ್ರಾಂತ ಮುಖ್ಯಸ್ಥೆ ಡಾ. ರತ್ನಾವತಿ ಟಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮಂಗಳೂರು ವಿವಿ ಮಟ್ಟದ ಅಂತರ್ಕಾಲೇಜು ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ದ್ವಿತೀಯ ಬಿಎಯ ಲತೇಶ್ ಸಾಂತ ಅವರನ್ನು ಅಭಿನಂದಿಸಲಾಯಿತು. ಪ್ರಾಂಶುಪಾಲೆ ಡಾ. ಅನಸೂಯ ರೈ, ವಿಭಾಗದ ಮುಖ್ಯಸ್ಥ ಡಾ. ಮಾಧವ ಎಂ. ಕೆ ಮೊದಲಾದವರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top