ವಿವಿವಿಯಲ್ಲಿ ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಹಬ್ಬ

Upayuktha
0

ಗೋಕರ್ಣ: ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ; ವಿದ್ಯಾರ್ಥಿಗಳು ಆಧುನಿಕ ಶಿಕ್ಷಣದ ಜತೆಗೆ ಭಾರತೀಯ ಪಾರಂಪರಿಕ ಭಾರತೀಯ ಸಂಸ್ಕøತಿ ಮತ್ತು ಕಲೆಗಳಲ್ಲಿ ಪ್ರೌಢಿಮೆ ಸಾಧಿಸಬೇಕು. ಇದು ಪರಿಪೂರ್ಣ ವ್ಯಕ್ತಿತ್ವಕ್ಕೆ ಪೂರಕ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.


ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾನಿಲಯದಲ್ಲಿ ದಿನೇಶ್ ಶಹ್ರಾ ಫೌಂಡೇಷನ್ ಸಹಯೋಗದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಪರಮಪೂಜ್ಯರು ಆಶೀರ್ವಚನ ನೀಡಿದರು. ವಿವಿಧ ಕ್ಷೇತ್ರಗಳಲ್ಲಿ ಅಪೂರ್ವ ಪ್ರತಿಭೆ ಪ್ರದರ್ಶಿಸಿದ 30 ವಿದ್ಯಾರ್ಥಿಗಳಿಗೆ ಫೌಂಡೇಷನ್ ವತಿಯಿಂದ ತಲಾ 10 ಸಾವಿರ ರೂಪಾಯಿಗಳ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.


ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿದ ದಿನೇಶ್ ಶಾಹ್ರ, ವಿದ್ಯಾರ್ಥಿಗಳು ಮೊದಲು ಯೋಗ್ಯತೆ ಗಳಿಸಿದರೆ ಅರ್ಹತೆ, ಗೌರವಗಳು ತಾನಾಗಿಯೇ ಹುಡುಕಿಕೊಂಡು ಬರುತ್ತವೆ ಎಂದು ಹೇಳಿದರು.

ಗುರುಕುಲದ ಸಂಗೀತ ಆರ್ಯರಾದ ರಘುನಂದನ ಬೇರ್ಕಡವು ಸ್ವಾಗತಿಸಿದರು, ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಯಾದಿಯನ್ನು ಉಪಪ್ರಾಚಾರ್ಯರಾದ ಸೌಭಾಗ್ಯ ಭಟ್ಟ ವಾಚಿಸಿದರು. ನವಯುಗ ವಿಭಾಗಾಧ್ಯಕ್ಷರಾದ ಶ್ರೀ ಎಸ್.ಜಿ. ಭಟ್ಟ ನಿರೂಪಿಸಿದರು.


ಇದೇ ಸಂದರ್ಭಧಲ್ಲಿ ಅಶೋಕೆಯ ಗೋವಿಶ್ವದಲ್ಲಿ ಶಿವಮೊಗ್ಗ ಪಶು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಉತ್ತರ ಕನ್ನಡ ಜಿಲ್ಲಾ ಪಶುವೈದ್ಯರ ಸಂಘದ ಸಹಯೋಗದಲ್ಲಿ 200ಕ್ಕೂ ಹೆಚ್ಚು ಗೋವುಗಳಿಗೆ ಉಚಿತ ಚಿಕಿತ್ಸಾ ಶಿಬಿರ ನಡೆಯಿತು. ಡಾ.ಎನ್.ಬಿ.ಶ್ರೀಧರ್ ಮತ್ತು ಡಾ.ರಾಕೇಶ್, ಡಾ.ವೈ.ವಿ.ಕೃಷ್ಣಮೂರ್ತಿ ನೇತೃತ್ವ ವಹಿಸಿದ್ದರು. ಗುರುಕುಲದ ಆಯುರ್ವೇದ ವೈದ್ಯ ಡಾ. ರವಿ ಕಾರ್ಯಕ್ರಮ ನಿರ್ವಹಿಸಿದರು.


ಹಲಸಿನಿಂದ ತಯಾರಿಸಬಹುದಾದ ಖಾದ್ಯಗಳನ್ನು ಮಕ್ಕಳಿಗೆ ಪರಿಚಯಿಸುವ ಉದ್ದೇಶದಿಂದ ಹಲಸು ಹಬ್ಬವನ್ನು ಶ್ರೀಮಠದ ಮಾತೃವಿಭಾಗದ ವತಿಯಿಂದ ಇದೇ ಸಂದರ್ಭದಲ್ಲಿ ಆಯೋಜಿಸಲಾಗಿತ್ತು. ಹಲಸಿನ ಕಡುಬು, ಹಲಸಿನ ಬೀಜದ ಪೌಷ್ಟಿಕ ಹಾಲು, ಹಲಸಿನ ಹಲ್ವ, ಹಲಸಿನ ಚಿಪ್ಸ್ ಸೇರಿದಂತೆ ಹಲವು ಖಾದ್ಯಗಳನ್ನು ಪುಟಾಣಿಗಳು ಸವಿದರು. ಮಾತೃವಿಭಾಗದ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಕಿರಣಮೂರ್ತಿ ಮತ್ತಿತರರು ನೇತೃತ್ವ ವಹಿಸಿದ್ದರು.


ಬಳಿಕ ಸುಮಧುರ ಸಂಗೀತ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಶ್ರೀ ದಿನೇಶ ಶಾಹ್ರ ಅವರು ಸರಸ್ವತಿ ಮತ್ತು ಶಿವನ ಸ್ತುತಿಯ ಮೂಲಕ ಚಾಲನೆ ನೀಡಿದರು. ನಂತರ ಗುರುಕುಲದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಲೋಹ ತರಂಗ, ಗುರು ಗೀತ, ಭರತನಾಟ್ಯ, ನಾಟಕ, ಜಾನಪದ ನೃತ್ಯ ಹಾಗೂ ಯಕ್ಷಗಾನವನ್ನು ಪ್ರಸ್ತುತಪಡಿಸಲಾಯಿತು. ಸಾಂಸ್ಕøತಿಕ ಪ್ರತಿಭೆಗಳಿಗೆ ದಿನೇಶ್ ಶಹ್ರಾ 21 ಸಾವಿರ ರೂಪಾಯಿ ಬಹುಮಾನ ನೀಡಿದರು.


ವಿವಿವಿ ವ್ಯವಸ್ಥಾ ಪರಿಷತ್ ಅಧ್ಯಕ್ಷ ಡಿ.ಡಿ.ಶರ್ಮಾ, ಪ್ರಾಚಾರ್ಯ ಮಹೇಶ್ ಹೆಗಡೆ, ಪಾರಂಪರಿಕ ವಿಭಾಗದ ಪ್ರಾಚಾರ್ಯ ಸತ್ಯನಾರಾಯಣ ಶರ್ಮಾ ಮತ್ತಿತರರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top