ಕಿನ್ನಿಗೋಳಿ: ಯುಗಪುರುಷ ಪತ್ರಿಕೆಯ ಸಂಸ್ಥಾಪಕ ಕೊಡೆತ್ತೂರು ಅನಂತಪದ್ಮನಾಭ ಉಡುಪರ ಸ್ಮರಣಾರ್ಥ ಸ್ಥಾಪಿಸಲಾಗಿರುವ ಕೊ. ಅ. ಉಡುಪ ಪ್ರಶಸ್ತಿಯನ್ನು ಈ ಬಾರಿ ಪ್ರಸಿದ್ಧ ಕವಿ ಸಾಹಿತಿ ಚಿಂತಕ ಡಾ. ವಸಂತಕುಮಾರ ಪೆರ್ಲ ಅವರಿಗೆ ಪ್ರದಾನ ಮಾಡಲಾಯಿತು.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು, ಡಾ. ಪೆರ್ಲ ಅವರು ಸಾಹಿತ್ಯ ಮತ್ತು ಮಾಧ್ಯಮರಂಗದಲ್ಲಿ ಅಪೂರ್ವ ಕೆಲಸ ಮಾಡಿದ್ದಾರೆ. ಆಕಾಶವಾಣಿಯಲ್ಲಿ ಅವರ ಸೇವೆ ಅನುಪಮ. ಇಂತಹ ಸಾಧಕರಿಗೆ ಪ್ರಶಸ್ತಿ ಅರ್ಹವಾಗಿಯೇ ಸಂದಿದೆ ಎಂದು ಪ್ರಶಸ್ತಿ ಪ್ರದಾನ ಮಾಡಿ ಹೇಳಿದರು.
ಪ್ರಶಸ್ತಿಯು ಹತ್ತು ಸಾವಿರ ರೂಪಾಯಿ ನಗದು, ಫಲಕ, ಪ್ರಶಸ್ತಿಪತ್ರ ಮತ್ತು ಸನ್ಮಾನವನ್ನು ಒಳಗೊಂಡಿತ್ತು. ಶ್ರೀಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಜೈನ್, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಮೂಡಬಿದಿರೆಯ ಡಾ. ಎಂ. ಮೋಹನ ಆಳ್ವ, ಬಿಜೆಪಿಯ ಹಿರಿಯ ಮುಖಂಡ ಜಗದೀಶ್ ಅಧಿಕಾರಿ, ಕಿನ್ನಿಗೋಳಿಯ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಾಯೀಶ್ ಚೌಟ ಕೆ. ಮತ್ತು ಯುಗಪುರುಷದ ಪ್ರಕಾಶಕ - ಸಂಪಾದಕ ಕೆ. ಭುವನಾಭಿರಾಮ ಉಡುಪ ಮುಂತಾದ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇದು ಯುಗಪುರುಷದ ಎಪ್ಪತ್ತೈದನೇ ವರ್ಷದ ಸ್ಥಾಪನಾ ವರ್ಷವಾಗಿದ್ದು ಸ್ವಾತಂತ್ರ್ಯದ ಎಪ್ಪತ್ತೈದನೇ ವರ್ಷವೂ ಆಗಿರುವುದು ವಿಶೇಷವಾಗಿದೆ. ಯುಗಪುರುಷದ ಸಂಸ್ಥಾಪಕ ಕೊ. ಅ. ಉಡುಪರು ಸ್ಥಳೀಯ ಅಭಿವೃದ್ಧಿಗೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಅಂತಹ ಮಹನೀಯರ ಸ್ಮರಣಾರ್ಥ ಸ್ಥಾಪಿಸಲಾಗಿರುವ ಈ ಪ್ರಶಸ್ತಿಯನ್ನು ಸ್ವೀಕರಿಸುವುದು ತನಗೆ ಅತೀವ ಹರ್ಷದ ಸಂಗತಿ ಎಂದು ಪ್ರಶಸ್ತಿ ಸ್ವೀಕರಿಸಿದ ಡಾ. ವಸಂತಕುಮಾರ ಪೆರ್ಲ ಅವರು ಹೇಳಿದರು.
ತೋಕೂರಿನ ವೇದವಿದ್ವಾಂಸ ಟಿ. ಆರ್. ಸುಬ್ರಹ್ಮಣ್ಯ ರಾವ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಎಂ.ವಿ. ಭಟ್ (ಶ್ರೀಮಿತ್ತೂರು) ಅವರ ಹಿಂದಿನ ಇಂದಿನ ಸಾಮಾಜಿಕ ಸ್ಥಿತಿ ಮತ್ತು ರುಕ್ಮಯ್ಯ ಶೆಟ್ಟಿ ಬಾಂಬಿಲ ಅವರ ರಂಗನಾಯಕಿ ಕೃತಿಯನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.
ಕೊ. ಅ. ಉಡುಪ ಪ್ರಶಸ್ತಿ ಗಳಿಸಿದ ಡಾ. ಪೆರ್ಲ ಅವರು ಪ್ರತಿಭಾವಂತ ಕವಿಯಾಗಿ, ಸಾಹಿತಿಯಾಗಿ, ಚಿಂತಕರಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದು ಸಾಹಿತ್ಯದ ಜೊತೆಗೆ ಪತ್ರಿಕೆ, ರೇಡಿಯೋ, ಟಿ. ವಿ. ಮುಂತಾದ ಸಮೂಹ ಮಾಧ್ಯಮಗಳಲ್ಲಿ ಹಾಗೂ ರಂಗಭೂಮಿ, ಸಿನಿಮಾ ಕ್ಷೇತ್ರಗಳಲ್ಲಿ ಕೂಡ ಪರಿಣಿತರು. ಒಳ್ಳೆಯ ವಿಮರ್ಶಕ, ವಾಗ್ಮಿ ಮತ್ತು ವಿದ್ವಾಂಸರೆಂದು ಗುರುತಿಸಲ್ಪಟ್ಟವರು. ಕನ್ನಡ, ತುಳು ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡುತ್ತಿರುವ ಡಾ. ಪೆರ್ಲರ ಕವನಗಳು ತುಳು, ಕೊಂಕಣಿ, ಮಲಯಾಳಂ, ತಮಿಳು, ತೆಲುಗು, ಹಿಂದಿ, ಪಂಜಾಬಿ, ನೇಪಾಲಿ ಹಾಗೂ ಇಂಗ್ಲಿಷ್ ಭಾಷೆಗೆ ಅನುವಾದವಾಗಿವೆ.
ಮೈಸೂರು ವಿ.ವಿ. ಯಿಂದ ಕನ್ನಡ ಎಂ. ಎ. ಪದವಿ ಪಡೆದ ಬಳಿಕ ’ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ಜಾನಪದ ಒಳನೋಟಗಳು’ ಎಂಬ ವಿಷಯದ ಬಗ್ಗೆ ಪ್ರೌಢ ಪ್ರಬಂಧ ರಚಿಸಿ ಮೈಸೂರು ವಿ.ವಿ.ಯಿಂದ ಡಾಕ್ಟೋರೇಟ್ ಪದವಿ ಪಡೆದಿದ್ದಾರೆ. ಸುಮಾರು ಮೂವತ್ತು ವರ್ಷಗಳ ಕಾಲ ಮಂಗಳೂರು ಸಹಿತ ಆಕಾಶವಾಣಿಯ ವಿವಿಧ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿ ನಿರ್ದೇಶಕ ಹುದ್ದೆಯಿಂದ ಇತ್ತೀಚೆಗೆ ನಿವೃತ್ತರಾಗಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು ಕೆ. ಭುವನಾಭಿರಾಮ ಉಡುಪ ಅವರು ಸ್ವಾಗತಿಸಿ, ವಂದಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ