ಭರತಾಂಜಲಿ ಕೊಟ್ಟಾರ ಆಶ್ರಯದಲ್ಲಿ ಉಚಿತ ಸಂಸ್ಕಾರ ಕೇಂದ್ರ ಉದ್ಭಾಟನೆ
ಮಂಗಳೂರು: ಜೀವನ ಎಂಬ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾದರೆ ವಿದ್ಯೆಯ ಜೊತೆಗೆ ಸಂಸ್ಕಾರ ಆತಿ ಮುಖ್ಯ ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ಅಭಿಪ್ರಾಯಪಟ್ಟರು.
ಭರತಾಂಜಲಿ ಕೊಟ್ಟಾರ ಇವರ ಆಶ್ರಯದಲ್ಲಿ ಹಮ್ಮಿಕೊಂಡಿರುವ ಉಚಿತವಾಗಿ ನಡೆಸಲ್ಪಡುವ ಭರತಾಂಜಲಿ ಸಂಸ್ಕಾರ ಕೇಂದ್ರದ ಉದ್ಭಾಟನಾ ಕಾರ್ಯಕ್ರಮದಲ್ಲಿ ಆವರು ಮಾತನಾಡಿದರು.
ಸಂಸ್ಕ್ರತಿಯಿಂದ ಮನುಷ್ಯನಲ್ಲಿ ಸನ್ನಡತೆ ಮೂಡುವುದು. ಈ ಸನ್ನಡತೆ ವ್ಯಕ್ತಿಯ ವ್ಯಕ್ತಿತ್ವದ ಮಾನದಂಡವಾಗಿದ್ದು ಧರ್ಮ, ಸಂಸ್ಕಾರ, ದಾನಗುಣಗಳು ವ್ಯಕ್ತಿತ್ವವನ್ನು ಇನ್ನಷ್ಟು ಉನ್ನತೀಕರಣಗೊಳಿಸುತ್ತವೆ ಎಂದು ನುಡಿದರು.
ಪ್ರಚಲಿತ ವಿದ್ಯಮಾನಕ್ಕೆ ಬೇಕಾದ ಒಂದು ಉತ್ತಮ ಕಾರ್ಯವನ್ನು ಸುಂದರ ಸಮಾಜದ ಭವಿಷ್ಯದ ಚಿಂತನೆಯೊಂದಿಗೆ ಮಕ್ಕಳಿಗೆ ಉಚಿತವಾಗಿ ನೀಡಲು ಉದ್ದೇಶಿಸಿದ ಭರತಾಂಜಲಿಯ ನಿರ್ದೇಶಕರಾದ ಶ್ರೀಧರ ಹೊಳ್ಳ, ಪ್ರತಿಮಾ ಶ್ರೀಧರ್ ಅಭಿನಂದನಾರ್ಹರು. ಈ ಸಂಸ್ಥೆಗೆ ಬೇಕಾದ ಸರ್ವ ಸಹಕಾರ ನೀಡಲು ಬದ್ಧ ಎಂದರು.
ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರು, ಈ ಸಂಸ್ಕಾರ ಕೇಂದ್ರದ ಸದುಪಯೋಗವನ್ನು ಪಡೆದುಕೊಂಡು ಧನಾತ್ಮಕ ಚಿಂತನೆಯನ್ನು ಮೈಗೂಡಿಸಿಕೊಂಡು ದೇಶದ ಸದೃಢ ಪ್ರಜೆಗಳಾಗಿ ಎಂದರು.
ಮುಖ್ಯ ಅತಿಥಿಗಳಾಗಿ ರಾಜ್ಯ ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಜೆ. ಕತ್ತಲ್‌ಸಾರ್, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿವೃತ್ತ ನಿರ್ದೇಶಕ ಎಂ.ಆರ್ ವಾಸುದೇವ, ಮನಪಾ ಸದಸ್ಯೆ ಜಯಲಕ್ಷ್ಮೀ ವಿ. ಶೆಟ್ಟಿ, ಮಂಗಳೂರು ಮಹಾನಗರ ಬಾಲಗೋಕುಲ ಸಂಯೋಜಕ ನರಸಿಂಹ ಕುಲಕರ್ಣಿ, ಯಕ್ಷಗುರು ಶ್ರೀಧರ ಐತಾಳ್ ಭಾಗವಹಿಸಿದ್ದರು.
ಬಿಜೆಪಿ ವಾರ್ಡ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಬೂತ್ ಅಧ್ಯಕ್ಷ ಸಂಜಿತ್ ಉಪಸ್ಥಿತರಿದ್ದರು. ಭರತಾಂಜಲಿಯ ನಿರ್ದೇಶಕ ಶ್ರೀಧರ ಹೊಳ್ಳ ಸ್ವಾಗತಿಸಿದರು. ನಿರ್ದೇಶಕಿ ಪ್ರತಿಮಾ ಹೊಳ್ಳ ವಂದಿಸಿದರು.
100ಕ್ಕೂ ಹೆಚ್ಚು ಮಕ್ಕಳ ನೋಂದಣಿ:
ಸುಮಾರು 100ಕ್ಕೂ ಹೆಚ್ಚು ಮಕ್ಕಳು ಈ ಕೇಂದ್ರದ ಫಲಾನುಭವ ಪಡೆಯಲು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ ಎಂದು ಶ್ರೀಧರ ಹೊಳ್ಳ ತಿಳಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ