ಯೋಗದ ವೈದ್ಯಕೀಯ ಲಾಭ ಜಗತ್ತಿಗೇ ತಿಳಿಯಬೇಕು: ಡಾ. ವಿಕ್ರಂ ಶೆಟ್ಟಿ

Upayuktha
0

ವಿವಿ ಕಾಲೇಜು: ಸ್ನಾತಕೋತ್ತರ ಯೋಗ ವಿಜ್ಞಾನ ವಿಭಾಗದ ವತಿಯಿಂದ ಯೋಗ ದಿನಾಚರಣೆ


ಮಂಗಳೂರು: ಯೋಗದ ಬಗ್ಗೆ ಸಂಶೋಧನೆ ಕೈಗೊಂಡು ಅದರ ಫಲಿತಾಂಶವನ್ನು ಅಂತಾರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಪ್ರಕಟಿಸಿ ಅದರ  ವೈದ್ಯಕೀಯ ಲಾಭಗಳನ್ನು ಸಾಬೀತುಪಡಿಸಿದಾಗ ಮಾತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗಕ್ಕೆ ಇನ್ನಷ್ಟು ಪ್ರಚಾರ ನೀಡಲು ಸಾಧ್ಯ, ಎಂದು ನಿಟ್ಟೆ ಮೀನಾಕ್ಷಿ ಇನ್ಸ್ಟಿಟ್ಯೂಟ್ ಆಫ್ ಕ್ರೇನಿಯೊಫೇಶಿಯಲ್ ಸರ್ಜರಿಯ ನಿರ್ದೇಶಕ ಪ್ರೊ. ಡಾ. ವಿಕ್ರಂ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ. 


ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ಯೋಗ ವಿಜ್ಞಾನ ವಿಭಾಗದ ವತಿಯಿಂದ ಮಂಗಳವಾರ ಆಯೋಜಿಸಲಾಗಿದ್ದ ʼಅಂತಾರಾಷ್ಟ್ರೀಯ ಯೋಗ ದಿನ- 2022’ ದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಯೋಗ ಇನ್ನಷ್ಟು ಆಕರ್ಷಕವಾಗಬೇಕು. ಎಲ್ಲಾ ವೈದ್ಯರೂ ತಮ್ಮ ರೋಗಿಗಳಿಗೆ ಅದನ್ನು ಸೂಚಿಸುವಂತಾಗಬೇಕು, ಎಂದರು.  


ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ. ಅನಸೂಯ ರೈ, ಯೋಗ ಮತ್ತು ಸಾತ್ವಿಕ ಆಹಾರದ ಲಾಭವನ್ನು ನಾವೀಗ ಅರಿಯುತ್ತಿದ್ದೇವೆ. ಕಾಲೇಜಿನ ಯೋಗ ವಿಜ್ಞಾನ ವಿಭಾಗ ತೆರೆಮರೆಯಲ್ಲಿ ಕ್ರಿಯಾಶೀಲವಾಗಿರುವುದು ಸಂತಸದ ವಿಚಾರ, ಎಂದರಲ್ಲದೆ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಯೋಗ ದಿನವನ್ನು ಯಶಸ್ವಿಯಾಗಿಸಿದ ಎಲ್ಲರನ್ನೂ ಅಭಿನಂದಿಸಿದರು. ಯೋಗ ವಿಜ್ಞಾನ ವಿಭಾಗದ ಡಾ. ಅಜಿತೇಶ್ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳಾದ ನಯನಾ ಮತ್ತು ಪ್ರತ್ಯಕ್ಷ ಕುಮಾರ್ ಯೋಗಾಸನಗಳನ್ನು ಪ್ರದರ್ಶಿಸಿದರು.  


ಕಾಲೇಜಿನ ದೈಹಿಕ ನಿರ್ದೇಶಕ ಡಾ. ಕೇಶವಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ ಕ್ರೀಡೆಗೂ ಯೋಗದ ಅಗತ್ಯತೆ ಬಗ್ಗೆ ವಿವರಿಸಿದರು. ಹಿರಿಯ ಯೋಗ ವಿದ್ಯಾರ್ಥಿ ರಾಮಚಂದ್ರ ಭಟ್ ಪ್ರಾರ್ಥನೆ ನೆರವೇರಿಸಿದರು. ವೈದ್ಯೆ, ಯೋಗ ವಿದ್ಯಾರ್ಥಿನಿ ವಿದ್ಯಾ ಭಾರತಿ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಎನ್ಸಿಸಿ ಅಧಿಕಾರಿಗಳಾದ ಡಾ. ಯತೀಶ್ ಕುಮಾರ್, ಡಾ. ಜಯರಾಜ್, ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಸುರೇಶ್, ಯೋಗ ವಿಜ್ಞಾನ ವಿಭಾಗದ ಉಮಾನಾಥ ಕೆ, ರಂಗಪ್ಪ ಮೊದಲಾದವರು ಉಪಸ್ಥಿತರಿದ್ದರು. ಈ ಮೊದಲು ಯೋಗ ಶಿಕ್ಷಕರ ಮಾರ್ಗದರ್ಶನದಲ್ಲಿ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ವೈದ್ಯರೂ ಸೇರಿದಂತೆ ನೂರಾರು ಮಂದಿ ಯೋಗಾಭ್ಯಾಸ ನಡೆಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top