ಆತ್ಮಸಾಕ್ಷಿಗೆ ಅನುಗುಣವಾಗಿ ಮೌಲ್ಯಮಾಪನ ಮಾಡಿ: ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ

Upayuktha
0

ವಿವಿ ಕಾಲೇಜು: ಮೌಲ್ಯಮಾಪಕರೊಂದಿಗೆ ಸಮಾಲೋಚನೆ, ಬೇಡಿಕೆ ಈಡೇರಿಸುವ ಭರವಸೆ



ಮಂಗಳೂರು: ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡುವಾಗ ಆತ್ಮಸಾಕ್ಷಿಗೆ ಅನುಗುಣವಾಗಿ ಮಾಡಿ. ಮೌಲ್ಯಮಾಪನದ ವೇಳೆ ತಪ್ಪು ಮರುಕಳಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅದರಂತೆ, ಮೌಲ್ಯಮಾಪಕರ ಬೇಡಿಕೆಗಳನ್ನು ಪರಿಗಣಿಸಿ ಕುಂದುಕೊರತೆ ಹೋಗಲಾಡಿಸಲಾಗುವುದು. ಶೈಕ್ಷಣಿಕ ವಾತಾವರಣ ಹಾಳಾಗದಂತೆ ನೋಡಿಕೊಳ್ಳುವುದು ನಮ್ಮ ಹೊಣೆ, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಹೇಳಿದರು. 


ಮಂಗಳವಾರ ನಗರದ ವಿಶ್ವವಿದ್ಯಾನಿಲಯದ ರವೀಂದ್ರ ಕಲಾಭವನದಲ್ಲಿ ಪದವಿ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ತೊಡಗಿರುವ  ಮೌಲ್ಯಮಾಪಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಮೌಲ್ಯಮಾಪಕರ ಪ್ರಯಾಣ ಭತ್ಯೆ, ತುಟ್ಟಿ ಭತ್ಯೆಗಳನ್ನು ಹೆಚ್ಚಿಸುವ ಬಗ್ಗೆ, ಅದು ಸೂಕ್ತ ಸಮಯದಲ್ಲಿ ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು. ಎಲ್ಲರ ಸಹಕಾರದೊಂದಿಗೆ ಜ್ಯೇಷ್ಠತಾ ಪಟ್ಟಿಯನ್ನು ನವೀಕರಣಗೊಳಿಸಲಾಗುವುದು. ಆದರೆ ವಿಶ್ವವಿದ್ಯಾನಿಲಯದ ಘನತೆಯನ್ನು ಎತ್ತಿ ಹಿಡಿಯುವುದು ಎಲ್ಲರ ಆದ್ಯತೆಯಾಗಬೇಕು, ಎಂದರು.  


ಪರೀಕ್ಷಾಂಗ ಕುಲಸಚಿವ ಪ್ರೊ. ಪಿ ಎಲ್ ಧರ್ಮ ಮಾತನಾಡಿ, ಮೌಲ್ಯಮಾಪಕರ ಪ್ರಯಾಣ ಭತ್ಯೆಯನ್ನು ತಡಮಾಡದೆ ಕೊಡುವುದು ದೊಡ್ಡ ಸವಾಲಾದರೂ, ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುವುದು, ಎಂದರು. “ಪ್ರಶ್ನೆ ಪತ್ರಿಕೆ ತಯಾರಿಸುವಾಗಲೇ, ಮೌಲ್ಯಮಾಪನ ಯೋಜನೆ (ಸ್ಕೀಮ್) ಯನ್ನೂ ತಯಾರಿಸಿ ಒಪ್ಪಿಸುವುದು ಉತ್ತಮ ಸಲಹೆ. ಶುಲ್ಕ ಪರಿಷ್ಕರಣಾ ಸಮಿತಿಯ ನಿರ್ಧಾರದಂತೆ, ಸಿಂಡಿಕೇಟ್ ಮೂಲಕ ಟಿಎ- ಡಿಎ ಹೆಚ್ಚಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು. ಪ್ರಶ್ನೆ ಪತ್ರಿಕೆಗಳಲ್ಲಿ ಕನ್ನಡದಲ್ಲೂ ಪ್ರಶ್ನೆಗಳು ಇರುವಂತೆ ನೋಡಿಕೊಳ್ಳಲಾಗುವುದು. ಜ್ಯೇಷ್ಠತಾ ಪಟ್ಟಿಯ ಡಿಜಿಲೀಕರಣವನ್ನು ಪೂರ್ಣಗೊಳಿಸಲು ಪ್ರಾಧ್ಯಾಪಕರು ಸರಿಯಾದ ಸಮಯದಲ್ಲಿ ಮಾಹಿತಿ ಒದಗಿಸುವುದು ಮುಖ್ಯವಾಗುತ್ತದೆ” ಎಂದರು. 


ಮೌಲ್ಯಮಾಪನ ಕೇಂದ್ರದ ಮುಖ್ಯಸ್ಥ ಪ್ರೊ. ರಮೇಶ್ ಕಾರ್ಲ ಪ್ರಾಸ್ತಾವಿಕವಾಗಿ ಮಾತನಾಡಿ, ನೂತನ ಎನ್ಇಪಿ ಮಾದರಿಯ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೂ ಮೌಲ್ಯಮಾಪಕರು ಸಿದ್ಧವಾಗಿರಬೇಕಾಗಿದೆ ಎಂದರಲ್ಲದೆ, ಪ್ರಶ್ನೆಪತ್ರಿಕೆಗಳ ಸಿದ್ಧತೆಗೆ ಕನಿಷ್ಠ ಒಂದು ತಿಂಗಳ ಕಾಲಾವಧಿಯನ್ನಾದರೂ ನೀಡಬೇಕು, ಎಂದು ಮನವಿ ಮಾಡಿಕೊಂಡರು. ವಿವಿ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಅತಿಥಿಗಳನ್ನು ಸ್ವಾಗತಿಸಿದರು. ಮುಕ್ತಾ  (MUCTA) ಅಧ್ಯಕ್ಷ ಪಾರ್ಶ್ವನಾಥ ಅಜ್ರಿ ಧನ್ಯವಾದ ಸಮರ್ಪಿಸಿದರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top