ಉಜಿರೆ: ದೇಶದ ಸಮಗ್ರ ಬೆಳವಣಿಗೆಯಲ್ಲಿ ಯುವ ಸಮೂಹದ ಕೊಡುಗೆ ದೊಡ್ಡದು. ಪ್ರತಿಯೊಬ್ಬರೂ ವಿದ್ಯಾರ್ಥಿ ಜೀವನದಿಂದಲೇ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳುವುದು ಅಗತ್ಯ ಎಂದು ಬೆಳ್ತಂಗಡಿ ಠಾಣೆಯ ನಿರೀಕ್ಷಕ ಪೊಲೀಸ್ ಶಿವಕುಮಾರ್ ಹೇಳಿದರು.
ಉಜಿರೆಯ ಎಸ್.ಡಿ.ಎಮ್ ಕಾಲೇಜಿನ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಇನಿಶಿಯೇಟಿವ್ ವತಿಯಿಂದ ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಪ್ರತಿಯೊಬ್ಬ ಮಾನವನಿಗೂ ಸೇವಾ ಮನೋಭಾವ ಶ್ರೇಷ್ಠವಾದದ್ದು. ಯುವ ಸಮೂಹವು ವಿದ್ಯಾರ್ಥಿ ದೆಸೆಯಿಂದಲೇ ಇದನ್ನು ಮೈಗೂಡಿಸಿಕೊಳ್ಳುವುದರಿಂದ ಉತ್ತಮ ನಾಗರಿಕರಾಗಲು ಸಾಧ್ಯ. ಆದರೆ ಇಂದಿನ ಕಾಲದ ಯುವ ಜನತೆಯಲ್ಲಿ ಸೇವಾ ಮನೋಭಾವ ಕಡಿಮೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕೊರೋನಾ ಬಳಿಕ ಮೊಬೈಲ್ಗೆ ಹೆಚ್ಚಾಗಿ ಒಗ್ಗಿಕೊಂಡ ಕಾರಣ ವಿದ್ಯಾರ್ಥಿಗಳ ಓದುವಿಕೆಯ ಏಕಾಗ್ರತೆಗೆ ಭಂಗ ಉಂಟಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಬರುವ ಅಪರಿಚಿತ ಸಂದೇಶಗಳ ಬಗ್ಗೆ ಯುವ ಸಮೂಹ ಜಾಗರೂಕತೆಯಿಂದ ಇರಬೇಕು. ಕೋಮು ಸ್ವಾರಸ್ಯಕ್ಕೆ ಧಕ್ಕೆ ತರುವ ಯಾವುದೇ ರೀತಿಯ ಸಂದೇಶಗಳನ್ನು ರವಾನೆ ಮಾಡಬಾರದು. ಸಾಮಾಜಿಕ ಜಾಲತಾಣಗಳನ್ನು ದುರುದ್ದೇಶಗಳಿಗೆ ಬಳಸದೇ ಧನಾತ್ಮಕವಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೆಳ್ತಂಗಡಿ ಪೋಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ ನಂದಕುಮಾರ ಮಾತನಾಡಿ, ಯುವ ಸಮೂಹ ಡ್ರಗ್ಸ್, ಗಾಂಜಾ ಸೇವನೆಯಂತಹ ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬಾರದು. ವಿದ್ಯಾರ್ಥಿ ಜೀವನದಲ್ಲಿ ಒಮ್ಮೆ ಬಾರಿ ಕ್ರಿಮಿನಲ್ ಪ್ರಕರಣ ದಾಖಲಾದರೆ ಅದು ಭವಿಷ್ಯಕ್ಕೇ ಮಾರಕ. ಇಂದು ಪೋಲೀಸ್ ವ್ಯವಸ್ಥೆ ಆಧುನೀಕರಣಗೊಂಡಿರುವುದರಿಂದ ಯಾವುದೇ ವ್ಯಕ್ತಿಗಳು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ ಎಂದು ಎಚ್ಚರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಪಿ.ಎನ್. ಉದಯಚಂದ್ರ ಮಾತನಾಡಿ, ಪ್ರತಿಯೊಂದು ವಿದ್ಯಾರ್ಥಿಗಳು ತಮ್ಮನ್ನ ತಾವು ವಿವೇಚನೆಗೆ ಒಳಪಡಿಸಬೇಕು. ಹದಿಹರೆಯದ ಸಮಯದಲ್ಲಿ ಯುವ ಸಮೂಹ ಹಾದಿ ತಪ್ಪಿದರೆ ಅದನ್ನು ಸರಿ ಪಡಿಸುವುದು ಕಷ್ಟಕರ ಎಂದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ಪ್ರೊಬೆಷನರಿ ಸಬ್ ಇನ್ ಸ್ಪೆಕ್ಟರ್ ಮುರಳಿಧರ್ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಅರ್ಥಶಾಸ್ತ್ರ ವಿಭಾಗದ ಅಧ್ಯಾಪಕ ಡಾ. ಮಹೇಶ್ ಕುಮಾರ್ ಶೆಟ್ಟಿ ಕಾರ್ಯಕ್ರಮವನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮ ವನ್ನು ವಿದ್ಯಾರ್ಥಿ ಶಿವಕುಮಾರ್ ನಿರೂಪಿಸಿದರು. ವಿದ್ಯಾರ್ಥಿ ಹೇಮಂತ್ ಸ್ವಾಗತಿಸಿದರು.