|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಂಗಳೂರು ರಾಮಕೃಷ್ಣ ಮಠದ ಅಮೃತ ಮಹೋತ್ಸವ | ಸೇವೆಯ ಜತೆಗೆ ಆತ್ಮೋನ್ನತಿಯ ಕಾರ್ಯ ಶ್ಲಾಘನೀಯ

ಮಂಗಳೂರು ರಾಮಕೃಷ್ಣ ಮಠದ ಅಮೃತ ಮಹೋತ್ಸವ | ಸೇವೆಯ ಜತೆಗೆ ಆತ್ಮೋನ್ನತಿಯ ಕಾರ್ಯ ಶ್ಲಾಘನೀಯ

 ಸ್ವಾಮಿ ಗೌತಮಾನಂದಜಿ ಮಹಾರಾಜ್ ಮೆಚ್ಚುಗೆ


ಮಂಗಳೂರು: ಮಾನವ ಕುಲದ ಸೇವೆ ಭಗವಂತನ ಸೇವೆಗೆ ಸಮನಾದುದು. ಮಂಗಳೂರಿನ ರಾಮಕೃಷ್ಣ ಮಠದ ಸನ್ಯಾಸಿಗಳು ಭಕ್ತರ ಜತೆಗೂಡಿ ಸೇವೆಯ ಜೊತೆಗೆ ಆತ್ಮೋನ್ನತಿಯ ಕಾರ್ಯ ನಡೆಸುತ್ತಿರುವುದು ಶ್ಲಾಘನೀಯ. ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಮಂಗಳೂರಿನ ರಾಮಕೃಷ್ಣ ಮಠವು ಆಧ್ಯಾತ್ಮಿಕ ಮಾತ್ರವಲ್ಲದೆ ಸಾಮಾಜಿಕವಾಗಿಯೂ ಉತ್ತಮ ಕಾರ್ಯ ನಿರ್ವಹಿಸಿದೆ ಎಂದು ಪಶ್ಚಿಮ ಬಂಗಾಳದ ಬೇಲೂರಿನ ರಾಮಕೃಷ್ಣ ಮಠದ ಉಪಾಧ್ಯಕ್ಷರಾದ ಸ್ವಾಮಿ ಗೌತಮಾನಂದಜಿ ಮಹಾರಾಜ್ ಮೆಚ್ಚುಗೆ ವ್ಯಕ್ತಪಡಿಸಿದರು.


ರಾಮಕೃಷ್ಣ ಮಠದ 75ನೇ ವರ್ಷದ ಅಮೃತ ಸಂಭ್ರಮ ಆಚರಣೆಯ ಪ್ರಯುಕ್ತ ಎರಡು ದಿನಗಳ ಉತ್ಸವವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.


ಮಾನವತೆಯೇ ವಿಶ್ವ ಧರ್ಮ ಎಂದು ಸ್ವಾಮಿ ವಿವೇಕಾನಂದರು ಸಾರಿದ್ದರು. ಆ ನಿಟ್ಟಿನಲ್ಲಿ ನಾವು ಒಟ್ಟಾಗಿ ನಮ್ಮ ಕರ್ತವ್ಯ ನಿರ್ವಹಿಸಬೇಕು. ಮಂಗಳೂರಿನ ರಾಮಕೃಷ್ಣ ಆಶ್ರಮ ಯಾವುದೇ ಸದ್ದುಗದ್ದಲವಿಲ್ಲದೆ ಸಮಾಜಕಾರ್ಯಗಳನ್ನು ಮಾಡುತ್ತಿದೆ. ಇಲ್ಲಿನ ಮಠದಿಂದ ಇನ್ನಷ್ಟು ಸೇವಾ ಕಾರ್ಯಗಳು ನಡೆಯಲಿ ಎಂದು ಹಾರೈಸಿದರು.


ಸ್ಮರಣ ಸಂಚಿಕೆ ಬಿಡುಗಡೆ:

ಅಮೃತ ಮಹೋತ್ಸವ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಆಶೀರ್ವಚನ ನೀಡಿದ ಪಶ್ಚಿಮ ಬಂಗಾಳದ ಬೇಲೂರು ಮಠದ ವಿಶ್ವಸ್ಥರಾದ ಸ್ವಾಮಿ ಮುಕ್ತಿದಾನಂದಜಿ, ಇಲ್ಲಿನ ರಾಮಕೃಷ್ಣ ಮಠ ಅದದ್ಭುತವಾದ ಸೇವಾ ಕಾರ್ಯ ಮತ್ತು ಪ್ಗತಿಪರ ಚಟುವಟಿಕೆಗಳಿಂದ ದೇಶದ ಗಮನ ಸೆಳೆದಿದೆ. ಸೇವೆ ಮತ್ತು ಅಧ್ಯಾತ್ಮದ ಮೂಲಕ ಪ್ರಸಿದ್ಧಿ ಪಡೆದಿದೆ ಎಂದು ಶ್ಲಾಘಿಸಿದರು.


ಮಂಗಳೂರಿನ ರಾಮಕೃಷ್ಣ ಆಶ್ರಮ 1947ರಲ್ಲಿ ಆರಂಭ:

ಮಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಅವರು ಅಧ್ಯಕ್ಷತೆವಹಿಸಿ ಮಾತನಾಡಿ, ಸ್ವಾಮಿ ವಿವೇಕಾನಂದರು ಮದ್ರಾಸ್‌ಗೆ ಆಗಮಿಸಿದ್ದಾಗ ಅಲ್ಲಿಗೆ ತೆರಳಿದ್ದ ಯುವಕರ ತಂಡವೊಂದು ಮಂಗಳೂರಿನಲ್ಲಿ ವಿವೇಕಾನಂದರ ಭಾವಧಾರೆಯ್ನು ಪ್ರಚುರಪಡಿಸಿತು. ಅದರ ಫಲವಾಗಿ 1947ರ ಜೂನ್ 3ರಂದು ಮಂಗಳೂರಿನಲ್ಲಿ ರಾಮಕೃಷ್ಣ ಆಶ್ರಮ ಆರಂಭವಾಯಿತು. ಬಳಿಕ ಹಲವು ಮಂದಿ ಸ್ವಾಮೀಜಿಗಳು ಈ ಸಂಸ್ಥೆಯನ್ನು ಮುನ್ನಡೆಸಿದ್ದಾರೆ. ಇಂದು ಇಲ್ಲಿನ ರಾಮಕೃಷ್ಣ ಮಠ ಅಧ್ಯಾತ್ಮ ಮತ್ತು ಸೇವಾ ಚಟುವಟಿಕೆ ಮೂಲಕ ಸ್ವಯಂಸೇವಕರ ತಂಡದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದರು.


ಮಠದ ಸಾಕ್ಷ್ಯಚಿತ್ರವನ್ನು ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಡಾ. ಎನ್ ವಿನಯ್ ಹೆಗ್ಡೆ ಬಿಡುಗಡೆ ಮಾಡಿದರು. ಕಳೆದ 75 ವರ್ಷಗಳಿಂದ ಮಂಗಳೂರಿನ ರಾಮಕೃಷ್ಣ ಮಠ ಮಂಗಳೂರಿಗೆ, ಸಮಾಜಕ್ಕೆ ಕೊಡುಗೆ ನೀಡಿದೆ. ಇದಕ್ಕಾಗಿ ಧನ್ಯವಾದ ಸಲ್ಲಿಸಲು ಅಮೃತ ಮಹೋತ್ಸವ ಸೂಕ್ತ ಸಮಯ. ಮಠದ ಸೇವಾ ಕಾರ್ಯಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.


ವೆಬ್‌ಸೈಟ್ ಅನಾವರಣ:

ಮಠದ ವೆಬ್‌ಸೈಟ್ ಅನ್ನು ಸಂಸದ ನಳಿನ್ ಕುಮಾರ್ ಕಟೀಲು ಅನಾವರಣಗೊಳಿಸಿದರು. ಜಗದ್ಗುರು ಭಾರತ ಎಂಬುದು ಸ್ವಾಮಿ ವಿವೇಕಾನಂದರ ಕಲ್ಪನೆ. ಭಾರತ ಜಗದ್ಗುರುವಾಗುವುದು ಇನ್ನೊಂದು ದೇಶದ ಮೇಲೆ ಆಕ್ರಮಣ ನಡೆಸಿ ಅಲ್ಲ; ತನ್ನ ಪರಮ ವೈಭವದೆಡೆಗೆ ಸಾಗುವ ಮೂಲಕ, ತಾಯಿ ಭಾರತಿಯು ಜಗತ್ತಿಗೆ ಮಾರ್ಗದರ್ಶನ ಮಾಡುವ ಮೂಲಕ ಜಗದ್ಗುರು ಆಗಬೇಕಿದೆ. ಶಿಕ್ಷಣ, ಸಂಸ್ಕಾರ, ಅಧ್ಯಾತ್ಮ, ಸಾಮಾಜಿಕ ಚಟುವಟಿಕೆ, ಸ್ವಚ್ಛ ಭಾರತದ ಮೂಲಕ ಸ್ವಾಮಿ ವಿವೇಕಾನಂದರ ಕನಸುಗಳನ್ನು ರಾಮಕೃಷ್ಣ ಮಠ ಸಾಕಾರಗೊಳಿಸುತ್ತಿದೆ. ಸ್ವಾಮಿ ವಿವೇಕಾನಂದರ ಕನಸನ್ನು ನನಸಾಗಿಸುವತ್ತ ಪ್ರಧಾನಿ ನರೇಂದ್ರ ಮೋದಿಯವರು ಶ್ರಮಿಸುತ್ತಿದ್ದಾರೆ ಎಂದರು.


ಶಾಸಕ ವೇದವ್ಯಾಸ ಕಾಮತ್ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ವಿಧಾನ ಪರಿಷತ್‌ ಸದಸ್ಯ ಡಾ. ಮಂಜುನಾಥ ಭಂಡಾರಿ, ಮೇಯರ್ ಪ್ರೇಮಾನಂದ ಶೆಟ್ಟಿ ಅವರೂ ರಾಮಕೃಷ್ಣ ಮಠದ ಸೇವಾ ಚಟುವಟಿಕೆಗಳನ್ನು ಶ್ಲಾಘಿಸಿದರು.


ಇದೇ ಸಂದರ್ಭದಲ್ಲಿ ಉದ್ಯಮಿ ರವೀಂದ್ರ ಪೈ ಅವರು ಅವರು, ಅಮೃತ ಭವನ ಕಟ್ಟಡಕ್ಕೆ 25 ಲಕ್ಷ ರೂ.ಗಳ ನೆರವನ್ನು ಘೋಷಿಸಿದರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post