|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಮ್ಮ- ನೂರು ಸಂವತ್ಸರಗಳನ್ನು ಪೂರ್ಣಗೊಳಿಸಿದ ತಮ್ಮ ಅಮ್ಮನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಆಪ್ತ ಬರಹ

ಅಮ್ಮ- ನೂರು ಸಂವತ್ಸರಗಳನ್ನು ಪೂರ್ಣಗೊಳಿಸಿದ ತಮ್ಮ ಅಮ್ಮನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಆಪ್ತ ಬರಹ


ಅಮ್ಮ – ಇದು ನಿಘಂಟಿನಲ್ಲಿರುವ ಮತ್ತೊಂದು ಪದ ಮಾತ್ರವಲ್ಲ. ಇದು ಪ್ರೀತಿ, ಸಹನೆ, ನಂಬಿಕೆ ಮತ್ತು ಇನ್ನೂ ಹೆಚ್ಚಿನ ಭಾವನೆಗಳ ಸಂಪೂರ್ಣ ಹರವು. ಪ್ರಪಂಚದಾದ್ಯಂತ, ಅದು ಯಾವುದೇ ದೇಶ ಅಥವಾ ಪ್ರದೇಶವಾಗಿರಲಿ, ಮಕ್ಕಳು ತಮ್ಮ ತಾಯಂದಿರ ಬಗ್ಗೆ ವಿಶೇಷ ಪ್ರೀತಿಯನ್ನು ಹೊಂದಿರುತ್ತಾರೆ. ತಾಯಿಯು ತನ್ನ ಮಕ್ಕಳಿಗೆ ಜನ್ಮ ನೀಡುವುದು ಮಾತ್ರವಲ್ಲ, ಅವರ ಮನಸ್ಸು, ಅವರ ವ್ಯಕ್ತಿತ್ವ ಮತ್ತು ಅವರ ಆತ್ಮವಿಶ್ವಾಸವನ್ನು ರೂಪಿಸುತ್ತಾಳೆ. ಅದಕ್ಕಾಗಿ ತಾಯಂದಿರು ನಿಸ್ವಾರ್ಥವಾಗಿ ತಮ್ಮ ವೈಯಕ್ತಿಕ ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ತ್ಯಾಗ ಮಾಡುತ್ತಾರೆ.


ಇಂದು, ನನ್ನ ಅಮ್ಮ ಶ್ರೀಮತಿ ಹೀರಾಬಾ ತಮ್ಮ ನೂರನೇ ವರ್ಷಕ್ಕೆ ಕಾಲಿಡುತ್ತಿರುವುದನ್ನು ಹಂಚಿಕೊಳ್ಳಲು ನನಗೆ ಅತ್ಯಂತ ಸಂತೋಷವಾಗುತ್ತಿದೆ. ಇದು ಅವರ ಜನ್ಮ ಶತಮಾನೋತ್ಸವ ವರ್ಷ. ನನ್ನ ತಂದೆ ಬದುಕಿದ್ದರೆ ಅವರೂ ಕಳೆದ ವಾರ ನೂರನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ನನ್ನ ತಾಯಿಯ ಶತಮಾನೋತ್ಸವ ವರ್ಷ ಆರಂಭವಾಗುತ್ತಿರುವುದರಿಂದ ಮತ್ತು ನನ್ನ ತಂದೆಯವರು ಶತಮಾನೋತ್ಸವವನ್ನು ಪೂರ್ಣಗೊಳಿಸುತ್ತಿದ್ದರಿಂದ 2022 ಒಂದು ವಿಶೇಷ ವರ್ಷವಾಗಿದೆ.


ಕಳೆದ ವಾರವಷ್ಟೇ, ನನ್ನ ಸೋದರ ಸಂಬಂಧಿಯು ಗಾಂಧಿನಗರದಲ್ಲಿರುವ ನನ್ನ ತಾಯಿಯ ಕೆಲವು ವೀಡಿಯೊಗಳನ್ನು ಕಳುಹಿಸಿದ್ದರು. ಸಮಾಜದ ಕೆಲವು ಯುವಕರು ಮನೆಗೆ ಬಂದಿದ್ದರು, ನನ್ನ ತಂದೆಯ ಭಾವಚಿತ್ರವನ್ನು ಕುರ್ಚಿಯ ಮೇಲೆ ಇಡಲಾಗಿತ್ತು, ಕೀರ್ತನೆ ನಡೆಯುತ್ತಿತ್ತು ಮತ್ತು ತಾಯಿ ಮಂಜೀರ ನುಡಿಸುತ್ತಾ ಭಜನೆಯಲ್ಲಿ ಮಗ್ನರಾಗಿದ್ದರು. ಅಮ್ಮ ಇನ್ನೂ ಹಾಗೆಯೇ ಇದ್ದಾರೆ - ವಯೋಸಹಜತೆಯಿಂದ ದೈಹಿಕವಾಗಿ ಕ್ಷೀಣಿಸಿರಬಹುದು, ಆದರೆ ಮಾನಸಿಕವಾಗಿ ಆಕೆ ಎಂದಿನಂತೆಯೇ ಚುರುಕಾಗಿದ್ದಾರೆ.


ಹಿಂದೆ ನಮ್ಮ ಕುಟುಂಬದಲ್ಲಿ ಹುಟ್ಟುಹಬ್ಬವನ್ನು ಆಚರಿಸುವ ಪದ್ಧತಿ ಇರಲಿಲ್ಲ. ಆದರೆ, ನನ್ನ ತಂದೆಯ ಜನ್ಮದಿನದಂದು ಅವರ ನೆನಪಿಗಾಗಿ ಯುವ ಪೀಳಿಗೆಯ ಮಕ್ಕಳು 100 ಗಿಡಗಳನ್ನು ನೆಟ್ಟರು.


ನನ್ನ ಜೀವನದಲ್ಲಿ ನಡೆದ ಒಳ್ಳೆಯದಕ್ಕೆ ಮತ್ತು ನನ್ನಲ್ಲಿರುವ ಒಳ್ಳೆಯತನಕ್ಕೆ ನನ್ನ ಹೆತ್ತವರೇ ಕಾರಣ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಇಂದು, ದೆಹಲಿಯಲ್ಲಿ ಕುಳಿತಿರುವ ನನಗೆ ಹಿಂದಿನ ನೆನಪುಗಳು ತುಂಬಿ ಬರುತ್ತವೆ.


ನನ್ನ ತಾಯಿ ಎಷ್ಟು ಅಸಾಧಾರಣಳೋ ಅಷ್ಟೇ ಸರಳ, ಎಲ್ಲಾ ತಾಯಂದಿರಂತೆ!. ನಾನು ನನ್ನ ತಾಯಿಯ ಬಗ್ಗೆ ಬರೆಯುವಾಗ, ನಿಮ್ಮಲ್ಲಿ ಅನೇಕರಿಗೆ ನಿಮ್ಮ ತಾಯಂದಿರ ಬಗ್ಗೆ ಸಾದೃಶ್ಯ ಕಂಡುಬರುತ್ತದೆ ಎಂದು ನನಗೆ ಖಾತ್ರಿಯಿದೆ. ಇದನ್ನು ಓದುವಾಗ, ನೀವು ನಿಮ್ಮ ಸ್ವಂತ ತಾಯಿಯ ಚಿತ್ರವನ್ನೇ ನೋಡಬಹುದು.


ತಾಯಿಯ ತಪಸ್ಸು ಉತ್ತಮ ಮನುಷ್ಯನನ್ನು ಸೃಷ್ಟಿಸುತ್ತದೆ. ಆಕೆಯ ಪ್ರೀತಿಯು ಮಗುವಿಗೆ ಮಾನವೀಯ ಮೌಲ್ಯಗಳು ಮತ್ತು ಸಹಾನುಭೂತಿಯನ್ನು ತುಂಬುತ್ತವೆ. ತಾಯಿ ಒಬ್ಬ ವ್ಯಕ್ತಿ ಅಥವಾ ವ್ಯಕ್ತಿತ್ವ ಮಾತ್ರವಲ್ಲ, ತಾಯ್ತನ ಎಂಬುದು ಒಂದು ಶ್ರೇಷ್ಠತೆ. ದೇವರುಗಳನ್ನು ಅವರ ಭಕ್ತರ ಸ್ವಭಾವಕ್ಕೆ ಅನುಗುಣವಾಗಿ ಸೃಷ್ಟಿಸಲಾಗಿದೆ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಅದೇ ರೀತಿ, ನಾವು ನಮ್ಮ ತಾಯಂದಿರನ್ನು ಮತ್ತು ಅವರ ತಾಯ್ತನವನ್ನು ನಮ್ಮ ಸ್ವಂತ ಸ್ವಭಾವ ಮತ್ತು ಮನಸ್ಥಿತಿಗೆ ಅನುಗುಣವಾಗಿ ಅನುಭವಿಸುತ್ತೇವೆ.


ನನ್ನ ತಾಯಿ ಗುಜರಾತ್ನ ಮೆಹ್ಸಾನಾದ ವಿಸ್ನಗರದಲ್ಲಿ ಜನಿಸಿದರು, ಇದು ನನ್ನ ತವರು ವಡ್ನಾಗರಕ್ಕೆ ಬಹಳ ಹತ್ತಿರದಲ್ಲಿದೆ. ಆಕೆಗೆ ಸ್ವಂತ ತಾಯಿಯ ವಾತ್ಸಲ್ಯ ಸಿಗಲಿಲ್ಲ. ನನ್ನ ತಾಯಿಯು ಎಳೆವಯಸ್ಸಿನಲ್ಲಿಯೇ ನನ್ನ ಅಜ್ಜಿಯನ್ನು ಸ್ಪ್ಯಾನಿಷ್ ಫ್ಲೂ ಸಾಂಕ್ರಾಮಿಕ ರೋಗದಿಂದಾಗಿ ಕಳೆದುಕೊಂಡರು. ಆಕೆಗೆ ನನ್ನ ಅಜ್ಜಿಯ ಮುಖವಾಗಲಿ, ಅವಳ ಮಡಿಲಿನ ನೆಮ್ಮದಿಯಾಗಲಿ ನೆನಪಿಲ್ಲ. ಆಕೆ ತನ್ನ ಇಡೀ ಬಾಲ್ಯವನ್ನು ತನ್ನ ತಾಯಿಯಿಲ್ಲದೆ ಕಳೆದರು. ನಾವೆಲ್ಲರೂ ಮಾಡುವಂತೆ ಅವರು ತನ್ನ ತಾಯಿಯ ಮೇಲೆ ಕೋಪತಾಪ ತೋರಿಸಲು ಸಾಧ್ಯವಾಗಲಿಲ್ಲ. ನಮ್ಮೆಲ್ಲರಂತೆ ಅವರಿಗೆ ತನ್ನ ತಾಯಿಯ ಮಡಿಲಿನಲ್ಲಿ ಮಲಗಲಾಗಲಿಲ್ಲ. ಶಾಲೆಗೆ ಹೋಗಿ ಓದು ಬರಹ ಕಲಿಯಲೂ ಆಗಲಿಲ್ಲ. ಆಕೆಯ ಬಾಲ್ಯವು ಬಡತನ ಮತ್ತು ಕಷ್ಟದಿಂದ ಕೂಡಿತ್ತು.


ಇಂದಿಗೆ ಹೋಲಿಸಿದರೆ ಅಮ್ಮನ ಬಾಲ್ಯ ಅತ್ಯಂತ ಕಷ್ಟಕರವಾಗಿತ್ತು. ಬಹುಶಃ, ದೇವರು ಆಕೆಗೆ ನೀಡಿದ್ದು ಇದನ್ನೇ ಅನ್ನಿಸುತ್ತದೆ. ಇದು ದೇವರ ಇಚ್ಛೆ ಎಂದು ತಾಯಿಯೂ ನಂಬುತ್ತಾರೆ. ಆದರೆ ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡು, ತಾಯಿಯ ಮುಖವನ್ನೂ ನೋಡಲಾಗಲಿಲ್ಲವಲ್ಲ ಎಂಬ ಕೊರಗು ಆಕೆಗೆ ನೋವು ನೀಡುತ್ತಲೇ ಇದೆ.

ಈ ಹೆಣಗಾಟಗಳಿಂದಾಗಿ ತಾಯಿಯು ಬಾಲ್ಯವನ್ನು ಅನುಭವಿಸಲಾಗಲಿಲ್ಲ, ಆಕೆಯು ತನ್ನ ವಯಸ್ಸಿಗೆ ಮೀರಿ ಬೆಳೆಯುವಂತೆ ಮಾಡಿತು. ಕುಟುಂಬದಲ್ಲಿ ಹಿರಿಯ ಮಗುವಾಗಿದ್ದ ಅವರು ಮದುವೆಯ ನಂತರ ಹಿರಿಯ ಸೊಸೆಯಾದರು. ಆಕೆಯ ಬಾಲ್ಯದಲ್ಲಿ, ಇಡೀ ಕುಟುಂಬವನ್ನು ನೋಡಿಕೊಳ್ಳುತ್ತಿದ್ದರು ಮತ್ತು ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಿದ್ದರು. ಮದುವೆಯ ನಂತರವೂ ಆಕೆ ಈ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸಿದರು. ದುರ್ಭರವಾದ ಜವಾಬ್ದಾರಿಗಳು ಮತ್ತು ದೈನಂದಿನ ಹೋರಾಟಗಳ ಹೊರತಾಗಿಯೂ, ತಾಯಿ ಇಡೀ ಕುಟುಂಬವನ್ನು ಸಹನೆ ಮತ್ತು ಸ್ಥೈರ್ಯದಿಂದ ಒಟ್ಟಿಗೆ ಹಿಡಿದಿಟ್ಟರು.


ವಡ್ನಾಗರದಲ್ಲಿ, ನಮ್ಮ ಕುಟುಂಬವು ಶೌಚಾಲಯ ಅಥವಾ ಸ್ನಾನದ ಮನೆಯಂತಹ ಐಷಾರಾಮಗಳಿರಲಿ, ಕಿಟಕಿಯೂ ಇಲ್ಲದ ಪುಟ್ಟ ಮನೆಯಲ್ಲಿ ವಾಸಿಸುತ್ತಿತ್ತು. ಮಣ್ಣಿನ ಗೋಡೆಗಳು ಮತ್ತು ಮಣ್ಣಿನ ಹೆಂಚುಗಳ ಛಾವಣಿಯಿದ್ದ ಒಂದು ಕೋಣೆಯನ್ನೇ ನಾವು ನಮ್ಮ ಮನೆ ಎಂದು ಕರೆಯುತ್ತಿದ್ದೆವು. ನಾವೆಲ್ಲರೂ-ನನ್ನ ಹೆತ್ತವರು, ನನ್ನ ಒಡಹುಟ್ಟಿದವರು ಮತ್ತು ನಾನು ಅದರಲ್ಲಿಯೇ ಇದ್ದೆವು.


ನನ್ನ ತಂದೆಯವರು ತಾಯಿಗೆ ಅಡುಗೆ ಮಾಡಲು ಸುಲಭವಾಗುವಂತೆ ಬಿದಿರು ಬೊಂಬುಗಳು ಮತ್ತು ಮರದ ಹಲಗೆಗಳಿಂದ ಮಚಾನ್ ಮಾಡಿದ್ದರು. ಇದು ನಮ್ಮ ಅಡುಗೆಮನೆಯಾಗಿತ್ತು. ಅಮ್ಮ ಅಡುಗೆ ಮಾಡಲು ಮಚ್ಚಾನದ ಮೇಲೆ ಹತ್ತುತ್ತಿದ್ದರು ಮತ್ತು ಮನೆಯವರೆಲ್ಲರೂ ಅದರ ಮೇಲೆ ಕುಳಿತು ಊಟ ಮಾಡುತ್ತಿದ್ದೆವು.

ಸಾಮಾನ್ಯವಾಗಿ, ಅಭಾವವು ಒತ್ತಡಕ್ಕೆ ಕಾರಣವಾಗುತ್ತದೆ. ಆದರೂ, ನನ್ನ ಪೋಷಕರು ದೈನಂದಿನ ಹೊಯ್ದಾಟಗಳ ಆತಂಕವು ಕುಟುಂಬದ ವಾತಾವರಣ ಹದಗೆಡಲು ಬಿಡಲಿಲ್ಲ. ನನ್ನ ತಂದೆ ತಾಯಿಯರಿಬ್ಬರೂ ತಮ್ಮ ಜವಾಬ್ದಾರಿಗಳನ್ನು ಹಂಚಿಕೊಂಡು ಜಾಗರೂಕತೆಯಿಂದ ಕುಟುಂಬವನ್ನು ನಿರ್ವಹಿಸಿದರು.

ಗಡಿಯಾರದ ಗಂಟೆ ಬಾರಿಸಿದಂತೆ, ನನ್ನ ತಂದೆ ಬೆಳಗ್ಗೆ ನಾಲ್ಕು ಗಂಟೆಗೆ ಕೆಲಸಕ್ಕೆ ಹೋಗುತ್ತಿದ್ದರು. ಅವರ ಹೆಜ್ಜೆ ಸಪ್ಪಳವು ಅಕ್ಕಪಕ್ಕದವರಿಗೆ ಈಗ ನಾಲ್ಕು ಗಂಟೆಯಾಗಿದೆ ಮತ್ತು ದಾಮೋದರ್ ಕಾಕಾ ಕೆಲಸಕ್ಕೆ ಹೋಗುತ್ತಿದ್ದಾರೆ ಎಂದು ಹೇಳುತ್ತಿದ್ದವು. ತನ್ನ ಪುಟ್ಟ ಚಹಾ ಅಂಗಡಿಯನ್ನು ತೆರೆಯುವ ಮೊದಲು ಸ್ಥಳೀಯ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವುದು ಅವರ ಮತ್ತೊಂದು ದೈನಂದಿನ ಆಚರಣೆಯಾಗಿತ್ತು.


ತಾಯಿಯೂ ಅಷ್ಟೇ ಸಮಯಪಾಲನೆ ಮಾಡುತ್ತಿದ್ದರು. ಅವರು ಕೂಡ ನನ್ನ ತಂದೆಯೊಂದಿಗೆ ಏಳುತ್ತಿದ್ದರು ಮತ್ತು ಬೆಳಗ್ಗೆಯೇ ಅನೇಕ ಕೆಲಸಗಳನ್ನು ಮುಗಿಸುತ್ತಿದ್ದರು. ಕಾಳುಗಳನ್ನು ಅರೆಯುವುದರಿಂದ ಹಿಡಿದು ಅಕ್ಕಿ ಮತ್ತು ಬೇಳೆಯನ್ನು ಜರಡಿ ಹಿಡಿಯುವವರೆಗೆ ತಾಯಿಗೆ ಯಾರದೇ ನೆರವಿರಲಿಲ್ಲ. ಕೆಲಸ ಮಾಡುವಾಗ ಆಕೆ ತನ್ನ ನೆಚ್ಚಿನ ಭಜನೆ ಮತ್ತು ಸ್ತೋತ್ರಗಳನ್ನು ಗುನುಗುತ್ತಿದ್ದರು. ನರಸಿ ಮೆಹ್ತಾ ಜಿ ಯವರ ಜನಪ್ರಿಯ ಭಜನೆ 'ಜಲ್ಕಮಲ್ಛಡಿ ಜಾನೇ ಬಾಲಾ, ಸ್ವಾಮಿ ಅಮರೋ ಜಗ್ಸೆ' ಇಷ್ಟಪಡುತ್ತಿದ್ದರು. ‘ಶಿವಾಜಿ ನೂ ಹಲಾರ್ದು’ಎಂಬ ಲಾಲಿ ಹಾಡು ಸಹ ಅವರಿಗೆ ಇಷ್ಟವಾಗಿತ್ತು.



ಮಕ್ಕಳಾದ ನಾವು ನಮ್ಮ ಓದನ್ನು ಬಿಟ್ಟು ಮನೆಕೆಲಸಗಳಲ್ಲಿ ಸಹಾಯ ಮಾಡಬೇಕೆಂದು ತಾಯಿ ನಿರೀಕ್ಷಿಸುತ್ತಿರಲಿಲ್ಲ. ಆಕೆ ಎಂದಿಗೂ ನಮ್ಮ ಸಹಾಯವನ್ನು ಕೇಳಲಿಲ್ಲ. ಆದರೂ, ತಾಯಿಯ ಕಷ್ಟವನ್ನು ನೋಡಿ, ಆಕೆಗೆ ಸಹಾಯ ಮಾಡುವುದು ನಮ್ಮ ಕರ್ತವ್ಯವೆಂದು ನಾವೇ ತಿಳಿದೆವು. ನಾನು ಊರಿನ ಕೆರೆಯಲ್ಲಿ ಈಜುವುದನ್ನು ನಿಜವಾಗಿಯೂ ಆನಂದಿಸುತ್ತಿದ್ದೆ. ಹಾಗಾಗಿ ಮನೆಯಿಂದ ಕೊಳೆಯಾದ ಬಟ್ಟೆಗಳನ್ನೆಲ್ಲ ತೆಗೆದುಕೊಂಡು ಹೋಗಿ ಕೆರೆಯಲ್ಲಿ ಒಗೆಯುತ್ತಿದ್ದೆ. ಬಟ್ಟೆ ಒಗೆಯುವುದು ಮತ್ತು ನನ್ನ ಆಟ ಎರಡೂ ಒಟ್ಟಿಗೆ ನಡೆಯುತ್ತಿದ್ದವು.


ಮನೆಯ ಖರ್ಚನ್ನು ನಿಭಾಯಿಸಲು ತಾಯಿ ಕೆಲವು ಮನೆಗಳಲ್ಲಿ ಪಾತ್ರೆಗಳನ್ನು ತೊಳೆಯುತ್ತಿದ್ದರು. ನಮ್ಮ ಅಲ್ಪ ಆದಾಯಕ್ಕೆ ಪೂರಕವಾಗಿ ಚರಖಾದಲ್ಲಿ ನೂಲುತ್ತಿದ್ದರು. ಹತ್ತಿ ಬಿಡಿಸುವುದರಿಂದ ಹಿಡಿದು ನೂಲುವವರೆಗೆ ಎಲ್ಲವನ್ನೂ ಮಾಡುತ್ತಿದ್ದರು. ಇಂತಹ ಕಷ್ಟದ ಕೆಲಸದ ನಡುವೆಯೂ ಹತ್ತಿಗಿಡದ ಮುಳ್ಳು ನಮಗೆ ಚುಚ್ಚದಂತೆ ಕಾಳಜಿ ವಹಿಸುತ್ತಿದ್ದರು.


ತಾಯಿ ಇತರರ ಮೇಲೆ ಅವಲಂಬಿತರಾಗುತ್ತಿರಲಿಲ್ಲ ಅಥವಾ ಇತರರನ್ನು ತನ್ನ ಕೆಲಸ ಮಾಡುವಂತೆ ಕೇಳುತ್ತಿರಲಿಲ್ಲ. ಮುಂಗಾರು ಮಳೆಯು ನಮ್ಮ ಮಣ್ಣಿನ ಮನೆಗೆ ಅದರದೇ ಆದ ಸಮಸ್ಯೆಗಳನ್ನು ತರುತ್ತಿತ್ತು. ಆದಾಗ್ಯೂ, ನಮಗೆ ತೊಂದರೆಗಳು ಆದಷ್ಟು ಕಡಿಮೆಯಾಗುವಂತೆ ತಾಯಿ ನೋಡಿಕೊಳ್ಳುತ್ತಿದ್ದರು. ಜೂನ್ ತಿಂಗಳ ಬಿಸಿಲಿನಲ್ಲಿ, ಅವಳು ನಮ್ಮ ಮಣ್ಣಿನ ಮನೆಯ ಛಾವಣಿಯ ಮೇಲೆ ಹತ್ತಿ ಹೆಂಚುಗಳನ್ನು ಸರಿಪಡಿಸುತ್ತಿದ್ದಳು. ಆದರೆ, ಆಕೆಯ ಈ ಎಲ್ಲ ಪ್ರಯತ್ನಗಳ ಹೊರತಾಗಿಯೂ, ನಮ್ಮ ಮನೆಯು ಮಳೆಯ ಆರ್ಭಟವನ್ನು ತಡೆದುಕೊಳ್ಳಲಾರದಷ್ಟು ಹಳೆಯದಾಗಿತ್ತು.


ಮಳೆಗಾಲದಲ್ಲಿ ನಮ್ಮ ಮನೆಯ ಛಾವಣಿ ಸೋರುತ್ತಿತ್ತು. ಮನೆಗೆ ನೀರು ನುಗ್ಗುತ್ತಿತ್ತು. ಮಳೆನೀರನ್ನು ಸಂಗ್ರಹಿಸಲು ತಾಯಿ ಬಕೆಟ್ ಮತ್ತು ಪಾತ್ರೆಗಳನ್ನು ಸೋರುತ್ತಿದ್ದ ಮಳೆ ನೀರಿನ ಕೆಳಗೆ ಇಡುತ್ತಿದ್ದರು. ಈ ಪ್ರತಿಕೂಲ ಪರಿಸ್ಥಿತಿಯಲ್ಲೂ ತಾಯಿ ಸ್ಥೈರ್ಯದ ಪ್ರತೀಕವಾಗಿದ್ದರು. ಹಲವಾರು ದಿನಗಳವರೆಗೆ ಆಕೆ ಈ ನೀರನ್ನು ಬಳಸುತ್ತಿದ್ದರು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಜಲ ಸಂರಕ್ಷಣೆಗೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕೆ!


ತಾಯಿ ಮನೆಯನ್ನು ಒಪ್ಪವಾಗಿಡಲು ಇಷ್ಟಪಡುತ್ತಿದ್ದರು ಮತ್ತು ಅದನ್ನು ಸ್ವಚ್ಛಗೊಳಿಸಲು ಮತ್ತು ಸುಂದರಗೊಳಿಸಲು ಸಾಕಷ್ಟು ಸಮಯವನ್ನು ಕಳೆಯುತ್ತಿದ್ದರು. ಹಸುವಿನ ಸಗಣಿಯಿಂದ ನೆಲವನ್ನು ಸಾರಿಸುತ್ತಿದ್ದರು. ಹಸುವಿನ ಸಗಣಿಯ ಬೆರಣಿಯನ್ನು ಉರಿಸಿದಾಗ ಹೆಚ್ಚಿನ ಹೊಗೆ ಬರುತ್ತಿತ್ತು. ತಾಯಿ ನಮ್ಮ ಕಿಟಕಿಗಳಿಲ್ಲದ ಮನೆಯಲ್ಲಿ ಅದರಲ್ಲಿಯೇ ಅಡುಗೆ ಮಾಡುತ್ತಿದ್ದರು! ಗೋಡೆಗಳು ಮಸಿಯಿಂದ ಕಪ್ಪಾಗುತ್ತಿದ್ದವು ಮತ್ತು ಅವುಗಳಿಗೆ ಹೊಸ ಸುಣ್ಣ ಹೊಡೆಯುವ ಅಗತ್ಯವಿರುತ್ತಿತ್ತು. ಇದನ್ನೂ ತಾಯಿ ಕೆಲವು ತಿಂಗಳಿಗೊಮ್ಮೆ ಸ್ವತಃ ಮಾಡುತ್ತಿದ್ದರು. ಇದು ನಮ್ಮ ಪಾಳುಬಿದ್ದ ಮನೆಗೆ ತಾಜಾತನದ ಪರಿಮಳವನ್ನು ನೀಡುತ್ತಿತ್ತು. ಮನೆಯನ್ನು ಅಲಂಕರಿಸಲು ಸಾಕಷ್ಟು ಚಿಕ್ಕ ಮಣ್ಣಿನ ಬಟ್ಟಲುಗಳನ್ನೂ ಮಾಡುತ್ತಿದ್ದರು ಮತ್ತು ಮನೆಯ ಹಳೆಯ ವಸ್ತುಗಳನ್ನು ಮರುಬಳಕೆ ಮಾಡುವಲ್ಲಿ ಪ್ರಸಿದ್ಧವಾದ ಭಾರತೀಯ ಅಭ್ಯಾಸದಲ್ಲಿ ಅಮ್ಮ ಚಾಂಪಿಯನ್ ಆಗಿದ್ದರು.


ಅಮ್ಮನ ಮತ್ತೊಂದು ವಿಶಿಷ್ಟ ಅಭ್ಯಾಸ ನನಗೆ ನೆನಪಿದೆ. ಆಕೆ ಹಳೆಯ ಕಾಗದವನ್ನು ನೀರಿನಲ್ಲಿ ಅದ್ದಿ ಹುಣಸೆ ಬೀಜಗಳೊಂದಿಗೆ ಅಂಟಿನಂತಹ ಪೇಸ್ಟ್ ಅನ್ನು ತಯಾರಿಸುತ್ತಿದ್ದರು. ಈ ಪೇಸ್ಟ್ನಿಂದ ಗೋಡೆಗಳ ಮೇಲೆ ಕನ್ನಡಿಯ ತುಂಡುಗಳನ್ನು ಅಂಟಿಸಿ ಸುಂದರವಾದ ಚಿತ್ರಗಳನ್ನು ಮಾಡುತ್ತಿದ್ದರು. ಬಾಗಿಲಿಗೆ ನೇತು ಹಾಕಲು ಮಾರುಕಟ್ಟೆಯಿಂದ ಸಣ್ಣ ಪುಟ್ಟ ಅಲಂಕಾರಿಕ ವಸ್ತುಗಳನ್ನು ತರುತ್ತಿದ್ದರು.


ಹಾಸಿಗೆ ಸ್ವಚ್ಛವಾಗಿರಬೇಕು ಮತ್ತು ಸರಿಯಾಗಿ ಹಾಸಿರಬೇಕು ಎಂದು ತಾಯಿ ತುಂಬಾ ಗಮನಿಸುತ್ತಿದ್ದರು. ಹಾಸಿಗೆಯ ಮೇಲಿನ ಧೂಳನ್ನು ಸಹ ಅವರು ಸಹಿಸುತ್ತಿರಲಿಲ್ಲ. ಸ್ವಲ್ಪವೇ ಸುಕ್ಕು ಕಂಡರೂ ಅದನ್ನು ಕೊಡವಿ ಮತ್ತೆ ಹಾಸುತ್ತಿದ್ದರು. ಈ ಅಭ್ಯಾಸದ ಬಗ್ಗೆ ನಾವೆಲ್ಲರೂ ಬಹಳ ಎಚ್ಚರದಿಂದ ಇದ್ದೆವು. ಇಂದಿಗೂ, ಈ ವಯಸ್ಸಿನಲ್ಲೂ, ತನ್ನ ಹಾಸಿಗೆಯ ಮೇಲೆ ಒಂದೇ ಒಂದು ಸುಕ್ಕುಇರಬಾರದು ಎಂದು ನಮ್ಮ ತಾಯಿ ಬಯಸುತ್ತಾರೆ!


ಪರಿಪೂರ್ಣತೆಯ ಬಗೆಗಗಿನ ಅವರ ಪ್ರಯತ್ನವು ಈಗಲೂ ಚಾಲ್ತಿಯಲ್ಲಿದೆ. ಅವರು ಗಾಂಧಿನಗರದಲ್ಲಿ ನನ್ನ ಸಹೋದರ ಮತ್ತು ನನ್ನ ಸೋದರ ಸಂಬಂಧಿಯ ಕುಟುಂಬಗಳೊಂದಿಗೆ ಉಳಿದುಕೊಂಡಿದ್ದರೂ, ಈ ವಯಸ್ಸಿನಲ್ಲೂ ಅ ತನ್ನ ಎಲ್ಲಾ ಕೆಲಸಗಳನ್ನು ಸ್ವತಃ ಮಾಡಲು ಪ್ರಯತ್ನಿಸುತ್ತಾರೆ.

ಶುಚಿತ್ವದ ಬಗ್ಗೆ ಅವರ ಗಮನ ಇಂದಿಗೂ ಸ್ಪಷ್ಟವಾಗಿದೆ. ನಾನು ಅವರನ್ನು ಭೇಟಿ ಮಾಡಲು ಗಾಂಧಿನಗರಕ್ಕೆ ಹೋದಾಗ, ನನಗೆ ತನ್ನ ಕೈಯಾರೆ ಸಿಹಿತಿಂಡಿಗಳನ್ನು ತಿನ್ನಿಸುತ್ತಾರೆ. ಚಿಕ್ಕ ಮಗುವಿನ ತಾಯಿಯಂತೆ, ನಾನು ತಿಂದ ನಂತರ ನ್ಯಾಪ್ಕಿನ್ ನಿಂದ ನನ್ನ ಮುಖವನ್ನು ಒರೆಸುತ್ತಾರೆ. ಅವರು ಯಾವಾಗಲೂ ತನ್ನ ಸೀರೆಗೆ ಕರವಸ್ತ್ರ ಅಥವಾ ಸಣ್ಣ ಟವೆಲ್ ಅನ್ನು ಸಿಕ್ಕಿಸಿಕೊಂಡಿರುತ್ತಾರೆ.


ಅಮ್ಮನ ಶುಚಿತ್ವದ ಮೇಲಿನ ಉಪಕಥೆಗಳ ಬಗ್ಗೆ ನಾನು ರಿಮ್ಗಟ್ಟಲೆ ಬರೆಯಬಲ್ಲೆ. ಅವರು ಇನ್ನೊಂದು ಗುಣವನ್ನು ಹೊಂದಿದ್ದರು - ಸ್ವಚ್ಛತೆ ಮತ್ತು ನೈರ್ಮಲ್ಯದಲ್ಲಿ ತೊಡಗಿರುವವರಿಗೆ ತುಂಬಾ ಗೌರವ ನೀಡುತ್ತಿದ್ದರು. ನನಗೆ ನೆನಪಿದೆ, ವಡ್ನಾಗರದಲ್ಲಿರುವ ನಮ್ಮ ಮನೆಯ ಪಕ್ಕದ ಚರಂಡಿಯನ್ನು ಸ್ವಚ್ಛಗೊಳಿಸಲು ಯಾರಾದರೂ ಬಂದಾಗ, ತಾಯಿ ಅವರಿಗೆ ಚಹಾ ನೀಡದೆ ಕಳುಹಿಸುತ್ತಿರಲಿಲ್ಲ. ನಮ್ಮ ಮನೆಯು ಸಫಾಯಿ ಕರ್ಮಚಾರಿಗಳಿಗೆ ಕೆಲಸದ ನಂತರ ಚಹಾಕ್ಕೆ ಪ್ರಸಿದ್ಧವಾಯಿತು.


ನಾನು ಯಾವಾಗಲೂ ನೆನಪಿಸಿಕೊಳ್ಳುವ ತಾಯಿಯ ಮತ್ತೊಂದು ಅಭ್ಯಾಸವೆಂದರೆ ಇತರ ಜೀವಿಗಳ ಬಗ್ಗೆ ಅವರ ವಿಶೇಷ ವಾತ್ಸಲ್ಯ. ಪ್ರತಿ ಬೇಸಿಗೆಯಲ್ಲಿ, ಅವರು ಪಕ್ಷಿಗಳಿಗೆ ನೀರಿನ ಪಾತ್ರೆಗಳನ್ನು ಇಡುತ್ತಿದ್ದರು. ನಮ್ಮ ಮನೆಯ ಸುತ್ತ ಮುತ್ತಲಿನ ಬೀದಿನಾಯಿಗಳು ಎಂದಿಗೂ ಹಸಿವಿನಿಂದ ಇರದಂತೆ ನೋಡಿಕೊಳ್ಳುತ್ತಿದ್ದರು.

ನನ್ನ ತಂದೆ ಚಹಾ ಅಂಗಡಿಯಿಂದ ತರುತ್ತಿದ್ದ ಹಾಲಿನ ಕೆನೆಯಿಂದ ತಾಯಿ ರುಚಿಕರವಾದ ತುಪ್ಪವನ್ನು ಮಾಡುತ್ತಿದ್ದರು. ಈ ತುಪ್ಪ ಕೇವಲ ನಮ್ಮ ಬಳಕೆಗೆ ಮಾತ್ರವಾಗಿರಲಿಲ್ಲ. ನಮ್ಮ ನೆರೆಹೊರೆಯಲ್ಲಿರುವ ಹಸುಗಳಿಗೂ ಅದರ ಪಾಲು ಸಿಗುತ್ತಿತ್ತು. ತಾಯಿ ಹಸುಗಳಿಗೆ ಪ್ರತಿದಿನ ರೊಟ್ಟಿ ತಿನ್ನಿಸುತ್ತಿದ್ದರು. ಒಣ ರೊಟ್ಟಿಗಳ ಮೇಲೆ ಮನೆಯಲ್ಲಿ ಮಾಡಿದ ತುಪ್ಪ ಮತ್ತು ಪ್ರೀತಿಯನ್ನು ಸುರಿದು ಅವುಗಳಿಗೆ ನೀಡುತ್ತಿದ್ದರು.


ಒಂದು ಅಗಳು ಆಹಾರವನ್ನೂ ವ್ಯರ್ಥ ಮಾಡಬಾರದು ಎಂದು ತಾಯಿ ಹೇಳುತ್ತಿದ್ದರು. ನಮ್ಮ ನೆರೆಹೊರೆಯಲ್ಲಿ ಮದುವೆಗಳು ನಡೆದಾಗ ಯಾವುದೇ ಆಹಾರವನ್ನು ವ್ಯರ್ಥ ಮಾಡಬೇಡಿ ಎಂದು ನಮಗೆ ನೆನಪಿಸುತ್ತಿದ್ದರು. ಮನೆಯಲ್ಲಿ - ನೀವು ತಿನ್ನಬಹುದಾದಷ್ಟನ್ನು ಮಾತ್ರ ಹಾಕಿಸಿಕೊಳ್ಳಿ- ಎಂಬ ಸ್ಪಷ್ಟವಾದ ನಿಯಮವಿತ್ತು

ಇಂದಿಗೂ ತಾಯಿ ತಟ್ಟೆಯಲ್ಲಿ ಎಷ್ಟು ತಿನ್ನಲು ಸಾಧ್ಯವೋ ಅಷ್ಟು ಮಾತ್ರ ಹಾಕಿಸಿಕೊಳ್ಳುತ್ತಾರೆ ಮತ್ತು ಒಂದು ತುತ್ತು ಕೂಡ ವ್ಯರ್ಥ ಮಾಡುವುದಿಲ್ಲ. ಸಮಯಕ್ಕೆ ಸರಿಯಾಗಿ ತಿನ್ನುತ್ತಾರೆ ಮತ್ತು ಆಹಾರವು ಸರಿಯಾಗಿ ಜೀರ್ಣವಾಗಲು ಅಗಿದು ತಿನ್ನುತ್ತಾರೆ.


ತಾಯಿ ಇತರರ ಸಂತೋಷದಲ್ಲಿ ತನ್ನ ಸಂತೋಷವನ್ನು ಕಂಡುಕೊಳ್ಳುತ್ತಾರೆ. ನಮ್ಮ ಮನೆ ಚಿಕ್ಕದಾಗಿರಬಹುದು, ಆದರೆ ಅವರು ತುಂಬಾ ವಿಶಾಲ ಹೃದಯದವರು. ನನ್ನ ತಂದೆಯ ಆಪ್ತ ಸ್ನೇಹಿತರೊಬ್ಬರು ಹತ್ತಿರದ ಹಳ್ಳಿಯಲ್ಲಿದ್ದರು. ಅವರ ಅಕಾಲಿಕ ಮರಣದ ನಂತರ, ನನ್ನ ತಂದೆ ತನ್ನ ಸ್ನೇಹಿತನ ಮಗ ಅಬ್ಬಾಸ್ ನನ್ನು ನಮ್ಮ ಮನೆಗೆ ಕರೆತಂದರು. ಅವನು ನಮ್ಮಲ್ಲಿಯೇ ಇದ್ದು ಓದು ಮುಗಿಸಿದ. ತಾಯಿಯು ನಮ್ಮೆಲ್ಲರಂತೆಯೇ ಅಬ್ಬಾಸ್ ಬಗ್ಗೆಯೂ ಪ್ರೀತಿ ಮತ್ತು ಕಾಳಜಿಯನ್ನು ಹೊಂದಿದ್ದರು. ಪ್ರತಿ ವರ್ಷ ಈದ್ನಂದು ಅವನ ನೆಚ್ಚಿನ ಖಾದ್ಯಗಳನ್ನು ತಯಾರಿಸುತ್ತಿದ್ದರು. ಹಬ್ಬ ಹರಿದಿನಗಳಲ್ಲಿ ನೆರೆಹೊರೆಯ ಮಕ್ಕಳು ನಮ್ಮ ಮನೆಗೆ ಬಂದು ಅಮ್ಮನ ವಿಶೇಷ ಅಡುಗೆಯನ್ನು ಸವಿಯುವುದು ಮಾಮೂಲಿಯಾಗಿತ್ತು.


ಒಬ್ಬ ಸಾಧು ನಮ್ಮ ನೆರೆಹೊರೆಗೆ ಭೇಟಿ ನೀಡಿದಾಗ, ತಾಯಿ ಅವರನ್ನು ನಮ್ಮ ಬಡಮನೆಗೆ ಊಟಕ್ಕೆ ಕರೆಯುತ್ತಿದ್ದರು. ತನ್ನ ನಿಸ್ವಾರ್ಥ ಸ್ವಭಾವಕ್ಕೆ ತಕ್ಕಂತೆ, ತನಗಾಗಿ ಏನನ್ನೂ ಕೇಳದೆ ಮಕ್ಕಳಾದ ನಮಗೆ ಆಶೀರ್ವದಿಸುವಂತೆ ಸಾಧುಗಳಲ್ಲಿ ವಿನಂತಿಸುತ್ತಿದ್ದರು. “ಇತರರ ಸಂತೋಷದಲ್ಲಿ ಸಂತೋಷ ಕಾಣುವಂತೆ ಮತ್ತು ಅವರ ದುಃಖಗಳಲ್ಲಿ ಸಹಾನುಭೂತಿ ಹೊಂದಿರುವಂತೆ, ಭಕ್ತಿ (ದೈವಿಕ ಭಕ್ತಿ) ಮತ್ತು ಸೇವಾ ಮನೋಭಾವ (ಇತರರಿಗೆ ಸೇವೆ) ಇರುವಂತೆ ನನ್ನ ಮಕ್ಕಳಿಗೆ ಆಶೀರ್ವದಿಸಿ” ಎಂದು ಸಾಧುಗಳಿಗೆ ಕೇಳಿಕೊಳ್ಳುತ್ತಿದ್ದರು.


ನನ್ನ ಮೇಲೆ ಮತ್ತು ಅವರು ನೀಡಿದ ಸಂಸ್ಕಾರಗಳ ಬಗ್ಗೆ ತಾಯಿಗೆ ಯಾವಾಗಲೂ ಅಪಾರವಾದ ವಿಶ್ವಾಸವಿದೆ. ನಾನು ಸಂಘದಲ್ಲಿ ಕೆಲಸ ಮಾಡುವಾಗ ದಶಕಗಳ ಹಿಂದಿನ ಘಟನೆಯೊಂದು ನೆನಪಾಗುತ್ತಿದೆ. ನಾನು ಸಾಂಸ್ಥಿಕ ಚಟುವಟಿಕೆಗಳಲ್ಲಿ ಬಹಳ ನಿರತನಾಗಿದ್ದೆ ಮತ್ತು ನನ್ನ ಕುಟುಂಬದೊಂದಿಗೆ ಸಂಪರ್ಕದಲ್ಲಿರಲು ಸಾಧ್ಯವಾಗಲಿಲ್ಲ. ಆ ಅವಧಿಯಲ್ಲಿ ನನ್ನ ಅಣ್ಣ ತಾಯಿಯನ್ನು ಬದರಿನಾಥ್ ಮತ್ತು ಕೇದಾರನಾಥಕ್ಕೆ ಕರೆದೊಯ್ದರು. ಬದರಿನಾಥದಲ್ಲಿ ದರ್ಶನ ಮುಗಿಸಿದ ನಂತರ ನನ್ನ ತಾಯಿ ಕೇದಾರನಾಥಕ್ಕೆ ಬರುತ್ತಾರೆ ಎಂದು ಅಲ್ಲಿನ ಸ್ಥಳೀಯರಿಗೆ ತಿಳಿಯಿತು.


ಆದರೆ, ಹವಾಮಾನವು ಹಠಾತ್ತನೆ ಹದಗೆಟ್ಟಿತು. ಕೆಲವರು ಕಂಬಳಿಗಳೊಂದಿಗೆ ಕೆಳಗಿಳಿದು ಬಂದರು. ಅವರು ನೀವು ನರೇಂದ್ರ ಮೋದಿಯವರ ತಾಯಿಯೇ ಎಂದು ರಸ್ತೆಗಳಲ್ಲಿ ಬರುತ್ತಿದ್ದ ವಯಸ್ಸಾದ ಮಹಿಳೆಯರನ್ನು ಕೇಳುತ್ತಿದ್ದರು. ಅಂತಿಮವಾಗಿ, ಅವರು ತಾಯಿಯನ್ನು ಭೇಟಿಯಾದರು ಮತ್ತು ಅವರಿಗೆ ಕಂಬಳಿ ಮತ್ತು ಚಹಾವನ್ನು ನೀಡಿದರು. ಅವರು ಕೇದಾರನಾಥದಲ್ಲಿ ತಂಗಲು ಆರಾಮದಾಯಕ ವ್ಯವಸ್ಥೆ ಮಾಡಿದರು. ಈ ಘಟನೆಯು ತಾಯಿಯ ಮೇಲೆ ಗಾಢವಾದ ಪ್ರಭಾವ ಬೀರಿತು. ನಂತರ ಆಕೆ ನನ್ನನ್ನು ಭೇಟಿಯಾದಾಗ, "ಜನರು ನಿಮ್ಮನ್ನು ಗುರುತಿಸುವಂತೆ ಕೆಲವು ಒಳ್ಳೆಯ ಕೆಲಸವನ್ನು ಮಾಡುತ್ತಿದ್ದೀರಿ ಎಂದು ತೋರುತ್ತದೆ." ಎಂದು ಹೇಳಿದ್ದರು.


ಇಂದು, ಹಲವು ವರ್ಷಗಳ ನಂತರ, ನಿಮ್ಮ ಮಗ ದೇಶದ ಪ್ರಧಾನಿಯಾಗಿದ್ದಾನೆ ಎಂದು ಹೆಮ್ಮೆಪಡುತ್ತೀರಾ ಎಂದು ಜನರು ಕೇಳಿದಾಗಲೆಲ್ಲಾ, ತಾಯಿ ಅತ್ಯಂತ ಗಾಢವಾದ ಪ್ರತಿಕ್ರಿಯೆಯನ್ನು ನೀಡುತ್ತಾರೆ. “ನನಗೂ ನಿಮ್ಮಂತೆಯೇ ಹೆಮ್ಮೆ ಇದೆ. ಇಲ್ಲಿ ಯಾವುದೂ ನನ್ನದಲ್ಲ. ನಾನು ದೇವರ ಯೋಜನೆಗಳಲ್ಲಿ ಕೇವಲ ಸಾಧನ ಮಾತ್ರವಾಗಿದ್ದೇನೆ.” ಎಂದು ಹೇಳುತ್ತಾರೆ.


ಯಾವುದೇ ಸರ್ಕಾರಿ ಅಥವಾ ಸಾರ್ವಜನಿಕ ಕಾರ್ಯಕ್ರಮಗಳಿಗೆ ತಾಯಿ ನನ್ನೊಂದಿಗೆ ಎಂದಿಗೂ ಬರುವುದಿಲ್ಲ ಎಂಬುದನ್ನು ನೀವು ಗಮನಿಸಿರಬಹುದು. ಈ ಹಿಂದೆ ಎರಡು ಬಾರಿ ಮಾತ್ರ ನನ್ನ ಜೊತೆಗಿದ್ದರು. ಮೊದಲನೆಯ ಬಾರಿಗೆ, ನಾನು ಏಕತಾ ಯಾತ್ರೆಯನ್ನು ಮುಗಿಸಿ ಲಾಲ್ ಚೌಕ್ನಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿ ಶ್ರೀನಗರದಿಂದ ಹಿಂದಿರುಗಿದ ನಂತರ ಅಹಮದಾಬಾದ್ನಲ್ಲಿ ನಡೆದ ಸಾರ್ವಜನಿಕ ಸಮಾರಂಭವೊಂದರಲ್ಲಿ ಅವರು ನನ್ನ ಹಣೆಗೆ ತಿಲಕವನ್ನು ಇಟ್ಟಿದ್ದರು.


ತಾಯಿಗೆ ಅದು ಅತ್ಯಂತ ಭಾವನಾತ್ಮಕ ಕ್ಷಣವಾಗಿತ್ತು. ಏಕೆಂದರೆ ಏಕತಾ ಯಾತ್ರೆಯ ಸಮಯದಲ್ಲಿ ಫಗ್ವಾರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಕೆಲವು ಜನರು ಸಾವನ್ನಪ್ಪಿದ್ದರು. ಆ ಸಮಯದಲ್ಲಿ ತಾಯಿ ತುಂಬಾ ಚಿಂತಿತರಾಗಿದ್ದರು. ಆ ಸಮಯದಲ್ಲಿ ನನ್ನ ಬಗ್ಗೆ ತಿಳಿಯಲು ಇಬ್ಬರು ಕರೆ ಮಾಡಿದ್ದರು. ಒಬ್ಬರು ಅಕ್ಷರಧಾಮ ದೇವಾಲಯದ ಶ್ರದ್ಧೆ ಪ್ರಮುಖ ಸ್ವಾಮಿ ಮತ್ತು ಎರಡನೆಯವರು ಅಮ್ಮ. ತಾಯಿಯ ನೆಮ್ಮದಿ ಮುಗಿಲು ಮುಟ್ಟಿತ್ತು.


ಎರಡನೆಯ ನಿದರ್ಶನವೆಂದರೆ, ನಾನು 2001 ರಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗ. ಎರಡು ದಶಕಗಳ ಹಿಂದೆ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭವು ತಾಯಿ ನನ್ನೊಂದಿಗೆ ಭಾಗವಹಿಸಿದ ಕೊನೆಯ ಸಾರ್ವಜನಿಕ ಕಾರ್ಯಕ್ರಮ. ಅಂದಿನಿಂದ, ಅವರು ಒಂದೇ ಒಂದು ಸಾರ್ವಜನಿಕ ಕಾರ್ಯಕ್ರಮಕ್ಕೆ ನನ್ನೊಂದಿಗೆ ಬಂದಿಲ್ಲ.


ನನಗೆ ಇನ್ನೊಂದು ಘಟನೆ ನೆನಪಿದೆ. ನಾನು ಗುಜರಾತ್ ಮುಖ್ಯಮಂತ್ರಿಯಾದಾಗ ನನ್ನ ಎಲ್ಲ ಶಿಕ್ಷಕರನ್ನು ಸಾರ್ವಜನಿಕವಾಗಿ ಸನ್ಮಾನಿಸಲು ಬಯಸಿದ್ದೆ. ನನ್ನ ಜೀವನದಲ್ಲಿ ತಾಯಿ ದೊಡ್ಡ ಗುರು ಎಂದು ನಾನು ಭಾವಿಸಿದೆ ಮತ್ತು ನಾನು ಅವರನ್ನು ಗೌರವಿಸಬೇಕು ಎಂದು ತೀರ್ಮಾನಿಸಿದೆ. ನಮ್ಮ ಧರ್ಮಗ್ರಂಥಗಳು ಕೂಡ ‘ನಾಸ್ತಿ ಮಾತ್ರಮೊ ಗುರುಃʼ- ತಾಯಿಗಿಂತ ದೊಡ್ಡ ಗುರುವಿಲ್ಲ ಎಂದು ಹೇಳುತ್ತವೆ. ಕಾರ್ಯಕ್ರಮಕ್ಕೆ ಬರುವಂತೆ ನಾನು ತಾಯಿಯನ್ನು ವಿನಂತಿಸಿದೆ, ಆದರೆ ಅವರು ನಿರಾಕರಿಸಿದರು. “ನೋಡಿ, ನಾನು ಸಾಮಾನ್ಯ ವ್ಯಕ್ತಿ. ನಾನು ನಿಮಗೆ ಜನ್ಮ ನೀಡಿರಬಹುದು, ಆದರೆ ನೀವು ಸರ್ವಶಕ್ತನಿಂದ ಕಲಿಸಲ್ಪಟ್ಟಿರುವುದು ಮತ್ತು ಬೆಳೆಸಲ್ಪಟ್ಟಿರುವಿರಿ” ಎಂದು ಆಕೆ ಹೇಳಿದರು. ಆ ದಿನ ನನ್ನ ತಾಯಿಯನ್ನುಳಿದು ಎಲ್ಲಾ ಶಿಕ್ಷಕರನ್ನು ಗೌರವಿಸಲಾಯಿತು.


ಇದೆಲ್ಲಕ್ಕಿಂತ ಹೆಚ್ಚಾಗಿ, ಕಾರ್ಯಕ್ರಮಕ್ಕೂ ಮೊದಲು, ನಮ್ಮ ಸ್ಥಳೀಯ ಶಿಕ್ಷಕರಾದ ಜೇತಾಭಾಯಿ ಜೋಶಿ ಅವರ ಕುಟುಂಬದಿಂದ ಯಾರಾದರೂ ಕಾರ್ಯಕ್ರಮಕ್ಕೆ ಬರುತ್ತಾರೆಯೇ ಎಂದು ಅವರು ವಿಚಾರಿಸಿದರು. ಜೋಶಿಯವರು ನನ್ನ ಆರಂಭಿಕ ಕಲಿಕೆಯನ್ನು ಮೇಲ್ವಿಚಾರಣೆ ಮಾಡಿದವರು ಮತ್ತು ನನಗೆ ವರ್ಣಮಾಲೆಯನ್ನು ಕಲಿಸಿದವರು. ತಾಯಿಯು ಅವರನ್ನು ನೆನಪಿಸಿಕೊಂಡು ವಿಚಾರಿಸಿದಾಗ ಅವರು ತೀರಿಹೋಗಿರುವ ವಿಷಯ ತಿಳಿಯಿತು. ಅವರು ಕಾರ್ಯಕ್ರಮಕ್ಕೆ ಬರದಿದ್ದರೂ, ನಾನು ಜೇತಾಭಾಯಿ ಜೋಶಿ ಅವರ ಕುಟುಂಬದ ಯಾರನ್ನಾದರೂ ಕರೆದಿದ್ದೇನೆಯೇ ಎಂಬುದನ್ನು ಖಚಿತಪಡಿಸಿಕೊಂಡರು.


ಔಪಚಾರಿಕವಾಗಿ ಶಿಕ್ಷಣ ಪಡೆಯದೆ ಕಲಿಯಲು ಸಾಧ್ಯ ಎಂದು ತಾಯಿ ನನಗೆ ಮನವರಿಕೆ ಮಾಡಿಕೊಟ್ಟರು. ಅವರ ಆಲೋಚನಾ ಕ್ರಮ ಮತ್ತು ದೂರಗಾಮಿ ಚಿಂತನೆಯು ಯಾವಾಗಲೂ ನನ್ನಲ್ಲಿ ಆಶ್ಚರ್ಯ ಹುಟ್ಟಿಸುತ್ತದೆ.


ತಾಯಿಯು ಯಾವಾಗಲೂ ನಾಗರಿಕಳಾಗಿ ತನ್ನ ಕರ್ತವ್ಯಗಳ ಬಗ್ಗೆ ಬಹಳ ಜಾಗೃತರಾಗಿರುತ್ತಾರೆ. ಚುನಾವಣೆಗಳು ಪ್ರಾರಂಭವಾದಾಗಿನಿಂದ, ಅವರು ಪಂಚಾಯತ್ನಿಂದ ಸಂಸತ್ತಿನವರೆಗೆ ಪ್ರತಿ ಚುನಾವಣೆಯಲ್ಲೂ ಮತ ಚಲಾಯಿಸಿದ್ದಾರೆ. ಕೆಲ ದಿನಗಳ ಹಿಂದೆ ಗಾಂಧಿನಗರ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಮತ ಚಲಾಯಿಸಿದರು.


ಸಾರ್ವಜನಿಕರು ಮತ್ತು ದೇವರ ಆಶೀರ್ವಾದ ಇರುವುದರಿಂದ ನನಗೆ ಏನೂ ಆಗುವುದಿಲ್ಲ ಎಂದು ತಾಯಿ ಆಗಾಗ್ಗೆ ಹೇಳುತ್ತಿರುತ್ತಾರೆ. ಜನರ ಸೇವೆಯನ್ನು ಮುಂದುವರಿಸಲು ಬಯಸಿದರೆ ಆರೋಗ್ಯಕರ ಜೀವನಶೈಲಿಯನ್ನು ನಡೆಸುವುದು ಮತ್ತು ವೈಯಕ್ತಿಕ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳುವುದು ಅವಶ್ಯಕ ಎಂದು ಅವರು ನನಗೆ ನೆನಪಿಸುತ್ತಿರುತ್ತಾರೆ.

ಮೊದಲು, ತಾಯಿ ಚಾತುರ್ಮಾಸ ಆಚರಣೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ನವರಾತ್ರಿಯ ಸಮಯದಲ್ಲಿ ನನ್ನ ಸ್ವಂತ ಅಭ್ಯಾಸಗಳು ಅವರಿಗೆ ತಿಳಿದಿವೆ. ಈಗ, ನಾನು ಬಹಳ ಸಮಯದಿಂದ ಕಟ್ಟುನಿಟ್ಟಾಗಿ ಪಾಲಿಸುತ್ತಿರುವ ಈ ವೈಯಕ್ತಿಕ ನಿಯಮಗಳನ್ನು ಸಡಿಲಿಸಬೇಕೆಂದು ನನಗೆ ಹೇಳಲು ಪ್ರಾರಂಭಿಸಿದ್ದಾರೆ.


ಜೀವನದಲ್ಲಿ ಅಮ್ಮ ಯಾವುದರ ಬಗ್ಗೆಯೂ ದೂರುವುದನ್ನು ನಾನು ಕೇಳಿಲ್ಲ. ಅವರು ಯಾರ ಬಗ್ಗೆಯೂ ದೂರುವುದಿಲ್ಲ ಅಥವಾ ಯಾರಿಂದಲೂ ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದಿಲ್ಲ.


ಇಂದಿಗೂ ತಾಯಿಯ ಹೆಸರಿನಲ್ಲಿ ಯಾವುದೇ ಆಸ್ತಿ ಇಲ್ಲ. ಆಕೆ ಚಿನ್ನದ ಆಭರಣಗಳನ್ನು ಧರಿಸಿರುವುದನ್ನು ನಾನು ನೋಡಿಲ್ಲ ಮತ್ತು ಅವರಿಗೆ ಅದರಲ್ಲಿ ಆಸಕ್ತಿಯೂ ಇಲ್ಲ. ಮೊದಲಿನಂತೆಯೇ, ಅವರು ತನ್ನ ಸಣ್ಣ ಕೋಣೆಯಲ್ಲಿ ಅತ್ಯಂತ ಸರಳವಾದ ಜೀವನವನ್ನು ಮುಂದುವರಿಸಿದ್ದಾರೆ.


ತಾಯಿಗೆ ದೇವರಲ್ಲಿ ಅಪಾರವಾದ ನಂಬಿಕೆ ಇದೆ, ಆದರೆ ಅದೇ ಸಮಯದಲ್ಲಿ, ಅವರು ಮೂಢನಂಬಿಕೆಗಳಿಂದ ದೂರವಿದ್ದಾರೆ ಮತ್ತು ಅದೇ ಗುಣಗಳನ್ನು ನಮ್ಮಲ್ಲಿ ತುಂಬಿದ್ದಾರೆ. ಅವರು ಸಾಂಪ್ರದಾಯಿಕವಾಗಿ ಕಬೀರಪಂಥಿಯಾಗಿದ್ದಾರೆ ಮತ್ತು ಅವರ ದೈನಂದಿನ ಪ್ರಾರ್ಥನೆಗಳಲ್ಲಿ ಆ ಪದ್ಧತಿಗಳನ್ನು ಅನುಸರಿಸುತ್ತಿದ್ದಾರೆ. ಅವರು ತಮ್ಮ ಮಣಿಮಾಲೆಯೊಂದಿಗೆ ಜಪ ಮಾಡುತ್ತಾ ಸಾಕಷ್ಟು ಸಮಯವನ್ನು ಕಳೆಯುತ್ತಾರೆ. ದಿನನಿತ್ಯದ ಪೂಜೆ ಮತ್ತು ಜಪದಲ್ಲಿ ಮಗ್ನರಾಗುವ ಅವರು ಆಗಾಗ್ಗೆ ನಿದ್ರೆಯನ್ನು ಸಹ ತ್ಯಜಿಸುತ್ತಾರೆ. ಕೆಲವೊಮ್ಮೆ, ನನ್ನ ಕುಟುಂಬ ಸದಸ್ಯರು ಆಕೆಯು ನಿದ್ರೆ ಮಾಡಲಿ ಎಂದು ಪ್ರಾರ್ಥನೆಯ ಮಣಿಮಾಲೆಯನ್ನು ಮರೆಮಾಚಿ ಇಡುತ್ತಾರೆ.


ವಯಸ್ಸಾಗಿದ್ದರೂ, ತಾಯಿಗೆ ಉತ್ತಮ ಜ್ಞಾಪಕ ಶಕ್ತಿ ಇದೆ. ಅವರು ದಶಕಗಳ ಹಿಂದಿನ ಘಟನೆಗಳನ್ನು ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತಾರೆ. ಕೆಲವು ಸಂಬಂಧಿಕರು ಅವರನ್ನು ಭೇಟಿ ಮಾಡಿದಾಗ, ಅವರು ತಕ್ಷಣವೇ ಅವರ ಅಜ್ಜಿಯರ ಹೆಸರನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಅದಕ್ಕೆ ಅನುಗುಣವಾಗಿ ಅವರನ್ನು ಗುರುತಿಸುತ್ತಾರೆ.


ಅವರು ಪ್ರಪಂಚದ ಬೆಳವಣಿಗೆಗಳ ಬಗ್ಗೆ ತಿಳಿದಿರುತ್ತಾರೆ. ಇತ್ತೀಚಿಗೆ ನಾನು ಅವರನ್ನು ದಿನ ಎಷ್ಟು ಹೊತ್ತು ಟಿವಿ ನೋಡುತ್ತೀಯಾ ಎಂದು ಕೇಳಿದೆ. ಟಿವಿಯಲ್ಲಿ ಹೆಚ್ಚಿನವರು ಪರಸ್ಪರ ಜಗಳವಾಡುತ್ತಿರುತ್ತಾರೆ, ಶಾಂತವಾಗಿ ಸುದ್ದಿಗಳನ್ನು ಓದುವ ಮತ್ತು ಎಲ್ಲವನ್ನೂ ವಿವರಿಸುವವರನ್ನು ಮಾತ್ರ ನೋಡುತ್ತೇನೆ ಎಂದು ಅವರು ಉತ್ತರಿಸಿದರು. ತಾಯಿಯು ತುಂಬಾ ಜಾಡನ್ನು ಹಿಡಿಯುತ್ತಾರೆ ಎಂದು ನನಗೆ ಸಖೇದಾಶ್ಚರ್ಯವಾಯಿತು.


ಅಮ್ಮನ ತೀಕ್ಷ್ಣವಾದ ನೆನಪಿನ ಶಕ್ತಿಗೆ ಸಂಬಂಧಿಸಿದ ಇನ್ನೊಂದು ಘಟನೆಯನ್ನು ನಾನು ಹೇಳುತ್ತೇನೆ. 2017ರಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕಾಶಿಯಲ್ಲಿ ಪ್ರಚಾರ ಮಾಡಿದ ನಂತರ ನಾನು ಅಹಮದಾಬಾದ್ಗೆ ಹೋಗಿದ್ದೆ. ನಾನು ಅವರಿಗೆ ಸ್ವಲ್ಪ ಪ್ರಸಾದವನ್ನು ತೆಗೆದುಕೊಂಡು ಹೋಗಿದ್ದೆ. ನಾನು ಅಮ್ಮನನ್ನು ಭೇಟಿಯಾದಾಗ, ಅವರು ಕಾಶಿ ವಿಶ್ವನಾಥ ಮಹಾದೇವನಿಗೆ ಪೂಜೆ ಸಲ್ಲಿಸಿದೆಯಾ ಎಂದು ಕೇಳಿದರು. ತಾಯಿ ಇನ್ನೂ ಕಾಶಿ ವಿಶ್ವನಾಥ ಮಹಾದೇವ ಎಂದು ಪೂರ್ಣ ಹೆಸರನ್ನು ಬಳಸುತ್ತಾರೆ. ನಂತರ ಮಾತುಕತೆಯ ಸಮಯದಲ್ಲಿ, ಯಾರದೋ ಮನೆಯ ಆವರಣದಲ್ಲಿ ದೇವಸ್ಥಾನವಿದೆ ಎಂಬಂತೆ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಹೋಗುವ ಮಾರ್ಗಗಳು ಇನ್ನೂ ಹಾಗೆಯೇ ಇವೆಯೇ ಎಂದು ಅವರು ನನ್ನನ್ನು ಕೇಳಿದರು. ನನಗೆ ಆಶ್ಚರ್ಯವಾಯಿತು ಮತ್ತು ನೀನು ದೇವಸ್ಥಾನಕ್ಕೆ ಯಾವಾಗ ಭೇಟಿ ನೀಡಿದ್ದು ಎಂದು ಕೇಳಿದೆ. ಬಹಳ ವರ್ಷಗಳ ಹಿಂದೆ ಕಾಶಿಗೆ ಹೋಗಿದ್ದೆ, ಆದರೆ ಎಲ್ಲವೂ ನೆನಪಿದೆ ಎಂದು ಅವರು ಉತ್ತರಿಸಿದರು.


ತಾಯಿ ಅತ್ಯಂತ ಸೂಕ್ಷ್ಮ ಮತ್ತು ಕಾಳಜಿಯುಳ್ಳವರು ಮಾತ್ರವಲ್ಲದೆ ಸಾಕಷ್ಟು ಪ್ರತಿಭಾವಂತರು. ಚಿಕ್ಕ ಮಕ್ಕಳಿಗೆ ಚಿಕಿತ್ಸೆ ನೀಡಲು ಅಸಂಖ್ಯಾತ ಮನೆಮದ್ದುಗಳು ಅವರಿಗೆ ಗೊತ್ತು. ನಮ್ಮ ವಡ್ನಾಗರದ ಮನೆಯಲ್ಲಿ, ಪ್ರತಿದಿನ ಬೆಳಗ್ಗೆ, ಪೋಷಕರು ತಮ್ಮ ಮಕ್ಕಳ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದರು.


ಚಿಕಿತ್ಸೆಗಾಗಿ ಆಕೆಗೆ ಆಗಾಗ್ಗೆ ನುಣ್ಣನೆಯ ಪುಡಿಯ ಅಗತ್ಯವಿರುತ್ತಿತ್ತು. ಈ ಪುಡಿಯನ್ನು ಸಂಗ್ರಹಿಸುವುದು ಮಕ್ಕಳೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿತ್ತು. ತಾಯಿ ನಮಗೆ ಒಲೆಯಿಂದ ಬೂದಿ, ಒಂದು ಬಟ್ಟಲು ಮತ್ತು ಒಳ್ಳೆಯ ಬಟ್ಟೆಯನ್ನು ಕೊಡುತ್ತಿದ್ದರು. ಬಟ್ಟಲಿಗೆ ಬಟ್ಟೆ ಕಟ್ಟಿ ಅದರ ಮೇಲೆ ಒಂದಿಷ್ಟು ಬೂದಿ ಹಾಕುತ್ತಿದ್ದೆವು. ನಂತರ ನಾವು ನಿಧಾನವಾಗಿ ಬೂದಿಯನ್ನು ಬಟ್ಟೆಯ ಮೇಲೆ ಉಜ್ಜುತ್ತಿದ್ದೆವು, ಇದರಿಂದ ನುಣ್ಣನೆಯ ಕಣಗಳು ಮಾತ್ರ ಬಟ್ಟಲಿನಲ್ಲಿ ಸಂಗ್ರಹವಾಗುತ್ತಿದ್ದವು. “ನಿಮ್ಮ ಕೆಲಸವನ್ನು ಚೆನ್ನಾಗಿ ಮಾಡಿ. ಬೂದಿಯ ದೊಡ್ಡ ಕಣಗಳಿಂದ ಮಕ್ಕಳಿಗೆ ತೊಂದರೆಯಾಗಬಾರದು” ಎಂದು ತಾಯಿ ನಮಗೆ ಹೇಳುತ್ತಿದ್ದರು.


ತಾಯಿಯ ಸಹಜ ವಾತ್ಸಲ್ಯ ಮತ್ತು ಸಮಯಪ್ರಜ್ಞೆಯನ್ನು ಪ್ರತಿಬಿಂಬಿಸುವ ಇನ್ನೊಂದು ನಿದರ್ಶನವನ್ನು ನಾನು ನೆನಪಿಸಿಕೊಳ್ಳಬಲ್ಲೆ. ಒಮ್ಮೆ ನಮ್ಮ ಮನೆಯವರು ನರ್ಮದಾ ಘಾಟ್ಗೆ ನನ್ನ ತಂದೆ ಮಾಡಲು ಬಯಸಿದ ಪೂಜೆಗಾಗಿ ಹೋಗಿದ್ದೆವು. ಸುಡುಬಿಸಿಲನ್ನು ತಪ್ಪಿಸಲು, ನಾವು ಮೂರು ಗಂಟೆಗಳ ಪ್ರಯಾಣಕ್ಕಾಗಿ ಮುಂಜಾನೆಯೇ ಹೊರಟೆವು. ಬಸ್ಸಿನಿಂದ ಇಳಿದ ನಂತರ ಇನ್ನೂ ಸ್ವಲ್ಪ ದೂರ ಕಾಲ್ನಡಿಗೆಯಲ್ಲಿ ಹೋಗಬೇಕಿತ್ತು. ವಿಪರೀತ ಸೆಕೆಯಾಗಿದ್ದರಿಂದ ನದಿಯ ದಡದಲ್ಲಿ ನೀರಿನಲ್ಲಿ ನಡೆಯತೊಡಗಿದೆವು. ನೀರಿನಲ್ಲಿ ನಡೆಯುವುದು ಸುಲಭವಲ್ಲ, ಬಹಳ ಬೇಗ ನಾವು ದಣಿದೆವು ಮತ್ತು ಹಸಿವಾಗತೊಡಗಿತು. ತಾಯಿ ತಕ್ಷಣ ನಮ್ಮ ಅಸ್ವಸ್ಥತೆಯನ್ನು ಗಮನಿಸಿದರು ಮತ್ತು ನನ್ನ ತಂದೆಯನ್ನು ನಿಲ್ಲಿಸಿ ಸ್ವಲ್ಪ ವಿಶ್ರಾಂತಿ ಪಡೆಯಲು ಹೇಳಿದರು. ಹತ್ತಿರ ಎಲ್ಲಿಂದಾದರೂ ಬೆಲ್ಲ ಖರೀದಿಸಿ ತರುವಂತೆ ಹೇಳಿದರು. ತಂದೆಯವರು ಓಡಿ ಹೋಗಿ ಬೆಲ್ಲ ತಂದರು. ಬೆಲ್ಲ ಮತ್ತು ನೀರು ನಮಗೆ ತ್ವರಿತ ಶಕ್ತಿಯನ್ನು ನೀಡಿತು ಮತ್ತು ನಾವು ಮತ್ತೆ ನಡೆಯಲು ಪ್ರಾರಂಭಿಸಿದೆವು. ಆ ನಿತ್ರಾಣಗೊಳಿಸುವ ಸೆಕೆಯಲ್ಲಿ ಪೂಜೆಗೆ ಹೋಗುವಾಗ, ತಾಯಿಯ ಜಾಗರೂಕತೆ ಮತ್ತು ನನ್ನ ತಂದೆ ವೇಗವಾಗಿ ಬೆಲ್ಲವನ್ನು ತಂದಿದ್ದು, ನನಗೆ ಆ ಕ್ಷಣಗಳು ಇನ್ನೂ ಸ್ಪಷ್ಟವಾಗಿ ನೆನಪಿವೆ.


ಬಾಲ್ಯದಿಂದಲೂ, ತಾಯಿ ಇತರರ ಆಯ್ಕೆಗಳನ್ನು ಗೌರವಿಸುವುದು ಮಾತ್ರವಲ್ಲದೆ ತನ್ನ ಆದ್ಯತೆಗಳನ್ನು ಇತರರ ಮೇಲೆ ಹೇರುವುದರಿಂದ ದೂರವಿರುವುದನ್ನು ನಾನು ಗಮನಿಸಿದ್ದೇನೆ. ತಾಯಿಯು ವಿಶೇಷವಾಗಿ ನನ್ನ ಸ್ವಂತ ವಿಷಯದಲ್ಲಿ, ನನ್ನ ನಿರ್ಧಾರಗಳನ್ನು ಗೌರವಿಸಿದರು. ಯಾವುದೇ ಅಡೆತಡೆಗಳನ್ನು ಸೃಷ್ಟಿಸಲಿಲ್ಲ ಮತ್ತು ನನ್ನನ್ನು ಪ್ರೋತ್ಸಾಹಿಸಿದರು. ಬಾಲ್ಯದಿಂದಲೂ ನನ್ನೊಳಗೆ ವಿಭಿನ್ನ ಮನಸ್ಥಿತಿ ಬೆಳೆಯುತ್ತಿದೆ ಎಂದು ಅವರು ಭಾವಿಸಿದ್ದಳು. ನನ್ನ ಸಹೋದರ ಸಹೋದರಿಯರಿಗೆ ಹೋಲಿಸಿದರೆ ನಾನು ಸ್ವಲ್ಪ ಭಿನ್ನವಾಗಿರುತ್ತಿದ್ದೆ.


ನನ್ನ ವಿಭಿನ್ನ ಅಭ್ಯಾಸಗಳು ಮತ್ತು ಅಸಾಮಾನ್ಯ ಪ್ರಯೋಗಗಳಿಗೆ ಬೇಕಾದ ವಿಶೇಷ ಅಗತ್ಯಗಳನ್ನು ಸರಿಹೊಂದಿಸಲು ತಾಯಿಯು ಆಗಾಗ್ಗೆ ವಿಶೇಷ ಪ್ರಯತ್ನಗಳನ್ನು ಮಾಡಬೇಕಾಗಿತ್ತು. ಆದಾಗ್ಯೂ, ಅವರು ಅದನ್ನು ಎಂದಿಗೂ ಹೊರೆ ಎಂದು ಪರಿಗಣಿಸಲಿಲ್ಲ ಮತ್ತು ಯಾವುದೇ ಕಿರಿಕಿರಿಯನ್ನು ತೋರಲಿಲ್ಲ. ಉದಾಹರಣೆಗೆ, ನಾನು ಸಾಮಾನ್ಯವಾಗಿ ಕೆಲವು ತಿಂಗಳುಗಳವರೆಗೆ ಉಪ್ಪನ್ನು ತ್ಯಜಿಸುತ್ತಿದ್ದೆ ಅಥವಾ ಕೆಲವು ವಾರಗಳವರೆಗೆ ಯಾವುದೇ ಧಾನ್ಯಗಳನ್ನು ಸೇವಿಸುವುದನ್ನು ನಿಲ್ಲಿಸಿ, ಕೇವಲ ಹಾಲು ಕುಡಿಯುತ್ತಿದ್ದೆ. ಕೆಲವೊಮ್ಮೆ, ನಾನು ಆರು ತಿಂಗಳವರೆಗೆ ಸಿಹಿತಿಂಡಿಗಳನ್ನು ತಿನ್ನುತ್ತಿರಲಿಲ್ಲ. ಚಳಿಗಾಲದಲ್ಲಿ ಬಯಲಿನಲ್ಲಿ ಮಲಗುತ್ತಿದ್ದೆ ಮತ್ತು ಮಡಕೆಯ ತಣ್ಣೀರಿನಿಂದ ಸ್ನಾನ ಮಾಡುತ್ತಿದ್ದೆ. ನಾನು ನನ್ನನ್ನು ಪರೀಕ್ಷಿಸಿಕೊಳ್ಳುತ್ತಿದ್ದೇನೆ ಎಂದು ತಾಯಿಗೆ ತಿಳಿದಿತ್ತು ಮತ್ತು ಯಾವುದಕ್ಕೂ ಆಕ್ಷೇಪಿಸಲಿಲ್ಲ. ಅವರು "ಪರವಾಗಿಲ್ಲ, ನಿನ್ನ ಇಷ್ಟದಂತೆ ಮಾಡು" ಎಂದು ಹೇಳುತ್ತಿದ್ದರು.


ನಾನು ವಿಭಿನ್ನ ದಾರಿಯಲ್ಲಿ ಹೋಗುತ್ತಿದ್ದೇನೆ ಎಂದು ಅಮ್ಮ ಗ್ರಹಿಸಿದ್ದರು. ಒಮ್ಮೆ ನಮ್ಮ ಮನೆಯ ಸಮೀಪದಲ್ಲಿರುವ ಗಿರಿ ಮಹಾದೇವ ದೇವಸ್ಥಾನಕ್ಕೆ ಒಬ್ಬ ಮಹಾತ್ಮರು ಬಂದಿದ್ದರು. ನಾನು ಬಹಳ ಭಕ್ತಿಯಿಂದ ಅವರ ಸೇವೆ ಮಾಡಲು ಪ್ರಾರಂಭಿಸಿದೆ. ಆ ಸಮಯದಲ್ಲಿ, ತಾಯಿಯು ತನ್ನ ಸಹೋದರಿಯ ವಿವಾಹದ ಬಗ್ಗೆ ತುಂಬಾ ಉತ್ಸುಕರಾಗಿದ್ದರು, ವಿಶೇಷವಾಗಿ ಅದು ಆಕೆಗೆ ತನ್ನ ಸಹೋದರನ ಮನೆಗೆ ಹೋಗುವ ಅವಕಾಶವಾಗಿತ್ತು. ಮನೆಯವರೆಲ್ಲ ಸೇರಿ ಮದುವೆ ತಯಾರಿಯಲ್ಲಿ ತೊಡಗಿದ್ದಾಗ ನನಗೆ ಬರಲು ಇಷ್ಟವಿಲ್ಲ ಎಂದು ಆಕೆಗೆ ಹೇಳಿದೆ. ತಾಯಿಯು ಕಾರಣವನ್ನು ಕೇಳಿದರು, ನಾನು ಮಹಾತ್ಮರಿಗೆ ಮಾಡುತ್ತಿರುವ ನನ್ನ ಸೇವೆಯ ಬಗ್ಗೆ ವಿವರಿಸಿದೆ.


ಸ್ವಾಭಾವಿಕವಾಗಿ, ನಾನು ಅವಳ ಸಹೋದರಿಯ ಮದುವೆಗೆ ಬರುತ್ತಿಲ್ಲ ಎಂದು ತಾಯಿ ನಿರಾಶರಾದರು. ಆದರೆ ಅವರು ನನ್ನ ನಿರ್ಧಾರವನ್ನು ಗೌರವಿಸಿದರು. "ಪರವಾಗಿಲ್ಲ, ನಿನ್ನ ಇಚ್ಛೆಯಂತೆ ಮಾಡು" ಎಂದು ಅವರು ಹೇಳಿದರು. ಆದರೆ, ಮನೆಯಲ್ಲಿ ನಾಣು ಒಬ್ಬಂಟಿಯಾಗಿ ಹೇಗಿರುತ್ತಾನೆ ಎಂದು ಅಮ್ಮ ಚಿಂತಿಸುತ್ತಿದ್ದಳು. ಅವರು ಹೊರಡುವ ಮೊದಲು ನನಗೆ ಕೆಲವು ದಿನಗಳಿಗಾಗುವಷ್ಟು ಆಹಾರ ಮತ್ತು ತಿಂಡಿಗಳನ್ನು ಮಾಡಿಟ್ಟು ಹೋದರು!


ನಾನು ಮನೆ ಬಿಟ್ಟು ಹೊರಡಲು ನಿರ್ಧರಿಸಿದಾಗ, ನಾನು ಅವರಿಗೆ ಹೇಳುವ ಮೊದಲೇ ನನ್ನ ನಿರ್ಧಾರವನ್ನು ತಾಯಿ ಗ್ರಹಿಸಿದ್ದರು. ನಾನು ಹೊರಗೆ ಹೋಗಿ ಜಗತ್ತನ್ನು ಅರ್ಥಮಾಡಿಕೊಳ್ಳಲು ಬಯಸುತ್ತೇನೆ ಎಂದು ನಾನು ಆಗಾಗ್ಗೆ ನನ್ನ ಹೆತ್ತವರಿಗೆ ಹೇಳುತ್ತಿದ್ದೆ. ನಾನು ಅವರಿಗೆ ಸ್ವಾಮಿ ವಿವೇಕಾನಂದರ ಬಗ್ಗೆ ಹೇಳುತ್ತಿದ್ದೆ ಮತ್ತು ನಾನು ರಾಮಕೃಷ್ಣ ಮಿಷನ್ ಮಠಕ್ಕೆ ಭೇಟಿ ನೀಡಬೇಕು ಎಂದು ಹೇಳುತ್ತಿದ್ದೆ. ಇದು ಹಲವು ದಿನಗಳ ಕಾಲ ನಡೆದಿತ್ತು.


ಅಂತಿಮವಾಗಿ, ನಾನು ಮನೆ ಬಿಟ್ಟು ಹೊರಡುವ ನನ್ನ ಆಸೆಯನ್ನು ಬಿಚ್ಚಿಟ್ಟೆ ಮತ್ತು ಅವರ ಆಶೀರ್ವಾದವನ್ನು ಕೇಳಿದೆ. ನನ್ನ ತಂದೆ ತುಂಬಾ ನಿರಾಶೆಗೊಂಡರು ಮತ್ತು ಕಿರಿಕಿರಿಯಿಂದ "ನಿನ್ನಿಷ್ಟ" ಎಂದರು. ಅವರ ಆಶೀರ್ವಾದವಿಲ್ಲದೆ ನಾನು ಮನೆ ಬಿಟ್ಟು ಹೋಗುವುದಿಲ್ಲ ಎಂದು ಹೇಳಿದೆ. ಆದರೆ, ಅಮ್ಮ ನನ್ನ ಆಸೆಗಳನ್ನು ಅರ್ಥಮಾಡಿಕೊಂಡು, “ನಿನ್ನ ಮನಸ್ಸು ಹೇಳಿದಂತೆ ಮಾಡು”ಎಂದು ಆಶೀರ್ವದಿಸಿದರು, ನನ್ನ ತಂದೆಯನ್ನು ಸಮಾಧಾನಪಡಿಸಲು, ಅವರು ನನ್ನ ಜಾತಕವನ್ನು ಜ್ಯೋತಿಷಿಗೆ ತೋರಿಸಲು ಕೇಳಿದರು. ನನ್ನ ತಂದೆ ಜ್ಯೋತಿಷ್ಯ ತಿಳಿದ ಸಂಬಂಧಿಕರ ಬಳಿ ಹೋದರು. ನನ್ನ ಜಾತಕವನ್ನು ಅಧ್ಯಯನ ಮಾಡಿದ ನಂತರ, “ಅವನ ಹಾದಿ ವಿಭಿನ್ನವಾಗಿದೆ. ದೇವರು ಅವನಿಗಾಗಿ ಆರಿಸಿರುವ ಮಾರ್ಗದಲ್ಲಿ ಮಾತ್ರ ಅವನು ಹೋಗುತ್ತಾನೆ.” ಎಂದು ಅವರು ಹೇಳಿದರು.


ಕೆಲವು ಗಂಟೆಗಳ ನಂತರ, ನಾನು ಮನೆಯಿಂದ ಹೊರಟೆ. ಅಷ್ಟೊತ್ತಿಗಾಗಲೇ ನನ್ನ ತಂದೆ ಕೂಡ ನನ್ನ ನಿರ್ಧಾರವನ್ನು ಒಪ್ಪಿ ಆಶೀರ್ವಾದ ಮಾಡಿದ್ದರು. ಹೊರಡುವ ಮೊದಲು, ಅಮ್ಮ ನನಗೆ ಮೊಸರು ಮತ್ತು ಬೆಲ್ಲವನ್ನು ಉಣಿಸಿದರು, ಒಂದು ಮಂಗಳಕರ ಹೊಸ ಆರಂಭಕ್ಕಾಗಿ. ಇನ್ನು ಮುಂದೆ ನನ್ನ ಜೀವನವು ತುಂಬಾ ವಿಭಿನ್ನವಾಗಿರುತ್ತದೆ ಎಂದು ಅವರು ತಿಳಿದಿದ್ದರು. ತಾಯಂದಿರು ತಮ್ಮ ಭಾವನೆಗಳನ್ನು ನಿಯಂತ್ರಿಸುವಲ್ಲಿ ಅತ್ಯಂತ ಪ್ರವೀಣರಾಗಿರುತ್ತಾರೆ. ಆದರೆ ಅವರ ಮಗು ಮನೆ ಬಿಟ್ಟು ಹೊರಟಾಗ ಅವರಿಗೆ ಕಷ್ಟವಾಗುತ್ತದೆ. ತಾಯಿ ಕಣ್ಣೀರು ಹಾಕಿದರು. ಆದರೆ ನನ್ನ ಭವಿಷ್ಯಕ್ಕಾಗಿ ಅವರ ಅಪಾರ ಆಶೀರ್ವಾದವಿತ್ತು.


ಒಮ್ಮೆ ನಾನು ಮನೆಯಿಂದ ಹೊರಬಂದಾಗ, ನಾನು ಎಲ್ಲಿದ್ದರೂ ಮತ್ತು ಹೇಗಿದ್ದರೂ ತಾಯಿಯ ಆಶೀರ್ವಾದ ನನ್ನೊಂದಿಗಿತ್ತು. ತಾಯಿ ಯಾವಾಗಲೂ ನನ್ನೊಂದಿಗೆ ಗುಜರಾತಿ ಭಾಷೆಯಲ್ಲಿ ಮಾತನಾಡುತ್ತಾರೆ. ಗುಜರಾತಿಯಲ್ಲಿ, ಕಿರಿಯ ಅಥವಾ ಸಮಾನ ವಯಸ್ಕರಿಗೆ ʼ'ನೀವು' ಎಂದು ಹೇಳಲು 'ತು' ಬಳಸಲಾಗುತ್ತದೆ. ನಾವು ದೊಡ್ಡವರು ಅಥವಾ ಹಿರಿಯರಿಗೆ 'ನೀವು' ಎಂದು ಹೇಳಬೇಕಾದರೆ, ನಾವು 'ತಮೆ' ಎಂದು ಹೇಳುತ್ತೇವೆ. ಬಾಲ್ಯದಲ್ಲಿ, ತಾಯಿ ನನ್ನನ್ನು ಯಾವಾಗಲೂ 'ತು' ಎಂದು ಕರೆಯುತ್ತಿದ್ದರು. ಆದರೆ, ಒಮ್ಮೆ ನಾನು ಮನೆ ಬಿಟ್ಟು ಹೊಸ ಹಾದಿ ಹಿಡಿದಾಗ ಅವರು ‘ತು’ಬಳಸುವುದನ್ನು ನಿಲ್ಲಿಸಿದರು. ಅಂದಿನಿಂದ, ಅವರು ಯಾವಾಗಲೂ ನನ್ನನ್ನು 'ತಮೆ' ಅಥವಾ 'ಆಪ್' ಎಂದು ಸಂಬೋಧಿಸುತ್ತಾರೆ.


ತಾಯಿ ಯಾವಾಗಲೂ ನನಗೆ ಬಲವಾದ ಸಂಕಲ್ಪವನ್ನು ಹೊಂದಲು ಮತ್ತು ಬಡವರ ಕಲ್ಯಾಣದತ್ತ ಗಮನಹರಿಸುವಂತೆ ಪ್ರೇರೇಪಿಸುತ್ತಿದ್ದಾರೆ. ಗುಜರಾತಿನ ಮುಖ್ಯಮಂತ್ರಿ ನಾನೇ ಎಂದು ನಿರ್ಧರಿಸಿದಾಗ ನಾನು ರಾಜ್ಯದಲ್ಲಿ ಇರಲಿಲ್ಲ ಎಂದು ನನಗೆ ನೆನಪಿದೆ. ನಾನು ಗುಜರಾತಿಗೆ ಹೋದ ಕೂಡಲೇ, ನಾನು ನೇರವಾಗಿ ತಾಯಿಯನ್ನು ಭೇಟಿ ಮಾಡಲು ಹೋದೆ. ಅವರು ಅತ್ಯಂತ ಭಾವಪರವಶಳಾಗಿದ್ದರು ಮತ್ತು ನಾನು ಮತ್ತೆ ಅವಳೊಂದಿಗೆ ಇರುತ್ತೇನೆಯೇ ಎಂದು ವಿಚಾರಿಸಿದರು. ಆದರೆ ಅವರಿಗೆ ನನ್ನ ಉತ್ತರ ಗೊತ್ತಿತ್ತು! "ಸರ್ಕಾರದಲ್ಲಿ ನಿಮ್ಮ ಕೆಲಸ ಏನೆಂದು ನನಗೆ ಅರ್ಥವಾಗುವುದಿಲ್ಲ, ಆದರೆ ನೀವು ಎಂದಿಗೂ ಲಂಚ ತೆಗೆದುಕೊಳ್ಳಬಾರದು ಎಂಬುದು ನನ್ನ ಬಯಕೆ." ಎಂದು ತಾಯಿ ಹೇಳಿದ್ದರು.

ದೆಹಲಿಗೆ ತೆರಳಿದ ನಂತರ, ಅವರೊಂದಿಗಿನ ನನ್ನ ಭೇಟಿಗಳು ಮೊದಲಿಗಿಂತ ಕಡಿಮೆಯಾಗಿವೆ. ಕೆಲವೊಮ್ಮೆ ನಾನು ಗಾಂಧಿನಗರಕ್ಕೆ ಭೇಟಿ ನೀಡಿದಾಗ, ನಾನು ಸ್ವಲ್ಪ ಕಾಲ ತಾಯಿಯನ್ನು ಭೇಟಿ ಮಾಡುತ್ತೇನೆ. ನಾನು ಮೊದಲಿನಂತೆ ಅವರನ್ನು ಭೇಟಿಯಾಗಲು ಆಗುವುದಿಲ್ಲ. ಆದಾಗ್ಯೂ, ನನ್ನ ಅನುಪಸ್ಥಿತಿಯ ಬಗ್ಗೆ ನಾನು ತಾಯಿಯಿಂದ ಯಾವುದೇ ಅಸಮಾಧಾನವನ್ನು ಕೇಳಿಲ್ಲ. ಅವರ ಪ್ರೀತಿ ಮತ್ತು ವಾತ್ಸಲ್ಯ ಹಾಗೆಯೇ ಇದೆ; ಅವರ ಆಶೀರ್ವಾದ ಹಾಗೆಯೇ ಇರುತ್ತದೆ. “ನೀವು ದೆಹಲಿಯಲ್ಲಿ ಸಂತೋಷವಾಗಿದ್ದೀರಾ? ನಿಮಗೆ ಇಷ್ವವಾ?" ಎಂದು ತಾಯಿ ಆಗಾಗ ನನ್ನನ್ನು ಕೇಳುತ್ತಾರೆ.


ನಾನು ಅವರ ಬಗ್ಗೆ ಚಿಂತಿಸಬಾರದು ಮತ್ತು ದೊಡ್ಡ ಜವಾಬ್ದಾರಿಗಳ ಮೇಲಿನ ಗಮನವನ್ನು ಕಳೆದುಕೊಳ್ಳಬಾರದು ಎಂದು ಅವರು ನನಗೆ ಕೇಳುತ್ತಾರೆ. ನಾನು ಅವರೊಂದಿಗೆ ಫೋನ್ನಲ್ಲಿ ಮಾತನಾಡಿದಾಗ, "ಯಾರಿಗೂ ಯಾವುದೇ ತಪ್ಪು ಅಥವಾ ಕೆಡಕು ಮಾಡಬೇಡಿ ಮತ್ತು ಬಡವರಿಗಾಗಿ ಕೆಲಸ ಮಾಡಿ." ಎಂದು ಹೇಳುತ್ತಾರೆ.

ನಾನು ನನ್ನ ಹೆತ್ತವರ ಜೀವನವನ್ನು ಹಿಂತಿರುಗಿ ನೋಡಿದರೆ, ಅವರ ಪ್ರಾಮಾಣಿಕತೆ ಮತ್ತು ಸ್ವಾಭಿಮಾನ ಅವರ ದೊಡ್ಡ ಗುಣಗಳಾಗಿವೆ. ಬಡತನ ಮತ್ತು ಅದರ ಸವಾಲುಗಳ ಹೊರತಾಗಿಯೂ, ನನ್ನ ಪೋಷಕರು ಎಂದಿಗೂ ಪ್ರಾಮಾಣಿಕತೆಯ ಹಾದಿಯನ್ನು ಬಿಡಲಿಲ್ಲ ಅಥವಾ ತಮ್ಮ ಸ್ವಾಭಿಮಾನದಲ್ಲಿ ರಾಜಿ ಮಾಡಿಕೊಂಡಿಲ್ಲ. ಯಾವುದೇ ಸವಾಲನ್ನು ಜಯಿಸಲು ಅವರ ಬಳಿ ಇರುವ ಏಕೈಕ ಮಂತ್ರವೆಂದರೆ- ಕಠಿಣ ಪರಿಶ್ರಮ, ನಿರಂತರ ಪರಿಶ್ರಮ!


ನನ್ನ ತಂದೆ ತಮ್ಮ ಜೀವನದಲ್ಲಿ ಯಾರಿಗೂ ಹೊರೆಯಾಗಲಿಲ್ಲ. ತಾಯಿ ಕೂಡ ಹಾಗೆಯೇ ಇರಲು ಪ್ರಯತ್ನಿಸುತ್ತಾರೆ - ಅವರು ಸಾಧ್ಯವಾದಷ್ಟು ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾರೆ.


ಈಗ, ನಾನು ತಾಯಿಯನ್ನು ಭೇಟಿಯಾದಾಗ, ಅವರು "ನನಗೆ ಯಾರ ಸೇವೆಯೂ ಬೇಡ, ನನ್ನ ಎಲ್ಲಾ ಅಂಗಗಳು ಕೆಲಸ ಮಾಡುತ್ತಿರುವಾಗಲೇ ಹೋಗಿಬಿಡಬೇಕು.” ಎಂದು ಹೇಳುತ್ತಾರೆ.


ನನ್ನ ತಾಯಿಯ ಜೀವನ ಕಥೆಯಲ್ಲಿ, ನಾನು ಭಾರತದ ಮಾತೃಶಕ್ತಿಯ ತಪಸ್ಸು, ತ್ಯಾಗ ಮತ್ತು ಕೊಡುಗೆಯನ್ನು ನೋಡುತ್ತೇನೆ. ನಾನು ತಾಯಿಯನ್ನು ಮತ್ತು ಅವರಂತಹ ಕೋಟ್ಯಂತರ ಮಹಿಳೆಯರನ್ನು ನೋಡಿದಾಗ, ಭಾರತೀಯ ಮಹಿಳೆಯರಿಗೆ ಸಾಧಿಸಲಾಗದ್ದು ಯಾವುದೂ ಇಲ್ಲ ಎಂದು ನಾನು ಕಂಡುಕೊಂಡಿದ್ದೇನೆ.


ಕಷ್ಟದ ಪ್ರತಿಯೊಂದು ಕಥೆಗಳಾಚೆಯೂ ತಾಯಿಯ ಅದ್ಭುತ ಕಥೆಯೊಂದು ಇರುತ್ತದೆ.


ಪ್ರತಿ ಹೋರಾಟಕ್ಕಿಂತ ಹೆಚ್ಚಿನದು, ತಾಯಿಯ ಬಲವಾದ ಸಂಕಲ್ಪ.


ಅಮ್ಮಾ, ನಿಮಗೆ ಜನ್ಮದಿನದ ಶುಭಾಶಯಗಳು.


ಜನ್ಮ ಶತಮಾನೋತ್ಸವ ವರ್ಷಕ್ಕೆ ಕಾಲಿಡುತ್ತಿರುವ ನಿಮಗೆ ಶುಭಾಶಯಗಳು.


ನಿಮ್ಮ ಜೀವನದ ಬಗ್ಗೆ ಸಾರ್ವಜನಿಕವಾಗಿ ಬರೆಯುವ ಧೈರ್ಯವನ್ನು ನಾನು ಇದುವರೆಗೆ ತೋರಿಸಿರಲಿಲ್ಲ.


ನಿಮ್ಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಮತ್ತು ನಮ್ಮೆಲ್ಲರಿಗೂ ನಿಮ್ಮ ಆಶೀರ್ವಾದಕ್ಕಾಗಿ ನಾನು ದೇವರನ್ನು ಪ್ರಾರ್ಥಿಸುತ್ತೇನೆ.


ನಿಮ್ಮ ಪಾದಕಮಲಗಳಿಗೆ ನನ್ನ ನಮಸ್ಕಾರಗಳು.


- ನರೇಂದ್ರ ದಾಮೋದರದಾಸ್ ಮೋದಿ


(ಕೃಪೆ: https://www.narendramodi.in/)

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

0 Comments

Post a Comment

Post a Comment (0)

Previous Post Next Post