|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನೆನಪಿನ ಬುತ್ತಿಯಿಂದ: ನಾನು ಚಾಲಕನಾಗಿದ್ದಾಗ...

ನೆನಪಿನ ಬುತ್ತಿಯಿಂದ: ನಾನು ಚಾಲಕನಾಗಿದ್ದಾಗ...ನಾನು ಮೆಚ್ಚಿ ಆರಿಸಿಕೊಂಡ ವೃತ್ತಿಯೆಂದರೆ ವಾಹನ ಚಲಾಯಿಸುವುದು. ಸಾಧಾರಣ ನನ್ನ ಇಪ್ಪತೈದನೇ ವಯಸ್ಸಿನಿಂದ ಇಂದಿನವರೆಗೂ ಈ ವೃತ್ತಿ ನನಗೆ ಬೇಡವೆಂದಾಗಲಿಲ್ಲ, ಅಥವಾ ಇಂದು ಕೂಡ ನನಗೆ ಅತಿಯಾದ ಖುಷಿಕೊಡುವ ವೃತ್ತಿ ಎಂದರೆ ವಾಹನ ಚಲಾಯಿಸುವುದೇ ಆಗಿದೆ. ನನ್ನ ಜೀವನದಲ್ಲಿ ನಾನು ಹಲವಾರು ವೃತ್ತಿಗಳಲ್ಲಿ ಕೈಯಾಡಿಸಿದ್ದರೂ ಅದೆಲ್ಲವೂ ಹೊಟ್ಟೆಪಾಡಿಗಾಗಿ. ಆದರೆ ವಾಹನ ಚಾಲನೆ ಎನ್ನುವ ವೃತ್ತಿ ಮಾತ್ರ ಪೂರ್ಣಾನಂದ ಸಿಗುವಂಥದ್ದೆಂದು ನನ್ನ ಭಾವ. ಅದಲ್ಲದೆ ಜೀವನದ ಹಲವು ಮಜಲುಗಳನ್ನು, ಹಲವು ಜನರ ಸಹವಾಸವನ್ನು, ಹಲವು ಊರಿನ ಪರಿಚಯವನ್ನು, ಹಲವು ಜೀವನಗಳ ಪದ್ಧತಿಗಳನ್ನು ಅನಾಯಾಸವಾಗಿ ಕಲಿಸುವುದೇ ಈ ಚಾಲಕನ ವೃತ್ತಿ. ನಾನು ನನ್ನ ಸ್ವಾನುಭವದಿಂದ ಹೇಳುವುದಾದರೆ ಚಾಲಕನ ವೃತ್ತಿಯು ಪ್ರತಿ ಕ್ಷಣವೂ ಹೊಸ ಹೊಸ ಅನುಭವಗಳ ತೆರೆಗಳನ್ನೇ ನೀಡುವ ವಿಶಾಲವಾದ ಸಾಗರದಂತೆ ಎಂದರೆ ತಪ್ಪಾಗಲಾರದು. ಆದರೆ ನಾವು ಅದನ್ನು ಆನಂದಿಸಿದಾಗ ಅಂತೆಯೇ ಅನುಭವಿಸಿದಾಗ ಮಾತ್ರ ಸ್ವೀಕರಿಸಬಹುದು ಅದಿಲ್ಲದಿರೆ ಬರಿದೆ ತೆರೆಗಳಂತೆ ಮುಂದೆ ಬರಲಾಗದೆ ಅಪ್ಪಳಿಸಿದಷ್ಟೆ ಸಾಧನೆಯಾಗಬಹುದು. ಚಾಲನೆಯ ವೃತ್ತಿ ದೇವರು ನನಗೆ ಕೊಟ್ಟ ವರವೆಂದೇ ನಾನು ಭಾವಿಸಿದ್ದೇನೆ. ಇರಲಿ,  ಇದರಲ್ಲಿ ನನಗಾದ ಕೆಲವು ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂಬ ಬಯಕೆ ಅದ್ಯಾಕೋ ಮನಸ್ಸಿಗೆ ಬಂದಿರುವಾಗ ಸುಮ್ಮನೆ ಕೂರಲುಂಟೇ?   


ನಾನು ಬಾಡಿಗೆ ವಾಹನದಲ್ಲಿದ್ದಾಗ ಆಗಿರುವ ಕೆಲವು ಅನುಭವಗಳನ್ನು ಒಂದೊಂದಾಗಿ ನೋಡೋಣ. ಮಾನವನ ವ್ಯವಹಾರಕ್ಕೂ ಆತನ ಸ್ವಭಾವಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಗೊತ್ತಾದದ್ದೇ ನನಗೆ ಚಾಲಕನಾದ ಮೇಲೆ. ನನ್ನ ಚಾಲನೆಯ ವೃತ್ತಿಯಲ್ಲಿ ಒಂದೈದು ವರ್ಷಗಳಷ್ಟು ಕಾಲ ಬಾಡಿಗೆ ವಾಹನವನ್ನೂ ಓಡಿಸಿದ್ದೆ. ಒಂದೂರಿಂದ ಇನ್ನೊಂದೂರಿಗೆ ಅಥವಾ ಒಂದಿಡೀ ದಿನಕ್ಕೆ ಇಂತಿಷ್ಟು ಬಾಡಿಗೆ ಎಂದು ಪರಸ್ಪರ ಮಾತಾಡಿಕೊಂಡು ನಿಗದಿಯಾದ ಮೇಲೆಯೇ ನಾವು ಮುಂದುವರಿಯುವುದು. ಅಂಥ ಪ್ರತಿಯೊಂದು ಬಾಡಿಗೆಯೂ ಒಂದೊಂದು ಕಥೆಯನ್ನು, ಒಂದೊಂದು ಮಾನವ ಸ್ವಭಾವವನ್ನು ಪರಿಚಯಿಸುವುದರಲ್ಲಿ ಸಂಶಯವಿಲ್ಲ. ಕೆಲವರು ವಾಹನ ಹತ್ತಿದ ಮೇಲೆ ಇಳಿಯುವಲ್ಲಿವರೆಗೆ ಮಾತಿನ ಮಲ್ಲರೇ ಆಗಿರುತ್ತಿದ್ದರೆ, ಕೆಲವರು ಮಾತಿಗೆ ಲೆಕ್ಕಾಚಾರ ಹಾಕಿ ಬೇಕಾದಷ್ಟೇ ಮಾತನ್ನು ವ್ಯಯ ಮಾಡುವವರು ಇರುತ್ತಾರೆ.


ಇನ್ನು ಕೆಲವರು ತನಗೂ ವಾಹನಕ್ಕೂ ಹಾಗೆಯೇ ಚಾಲಕನಿಗೂ ಯಾವುದೇ ಸಂಬಂಧವೇ ಇಲ್ಲವೇನೋ ಎಂಬಂತೆ ಮೌನದಿಂದಲೇ ಮುದುಡಿಕೊಳ್ಳುವವರೂ ಇದ್ದಾರೆ. ಕೆಲವರು ತಾವೆಲ್ಲಿ ಊಟ ಉಪಾಹಾರ ಸೇವಿಸುತ್ತಾರೋ ಅಲ್ಲಿ ಚಾಲಕನನ್ನೂ ಜತೆಗೆ ಕರಕೊಂಡು ಹೋಗಿ ಅವರ ಕುಟುಂಬದ ಸದಸ್ಯನಂತೆ ನೋಡಿಕೊಂಡರೆ, ಕೆಲವರು ಚಾಲಕನಿಗೂ ತಮಗೂ ಸಂಬಂಧವೇ ಇರದಂತೆ ಅವರಷ್ಟಕ್ಕೇ ಹೋಗಿ ಹೊಟ್ಟೆ ತುಂಬಿಸಿ ಬರುವವರೂ ಇದ್ದಾರೆ. ಕೊನೆಪಕ್ಷ ಹೊಟ್ಟೆಗೇನು ತಿಂದೆ ಎಂಬ ಶಿಷ್ಟಾಚಾರದ ಮಾತನ್ನಾಡದವರು  ಕೆಲವರಿದ್ದರೆ. ಐವತ್ತೋ ನೂರೋ ಕೊಟ್ಟು ಕಾಫಿ ತಿಂಡಿ ಮಾಡಿಕೊಂಡು ಬನ್ನಿ ಎಂದು ಕಳುಹಿಸುವವರೂ ಇದ್ದಾರೆ. ಕೆಲವರಿಗೆ ಚಾಲಕನೆಂದು ತಾತ್ಸಾರವಾದರೆ, ಕೆಲವರಿಗೆ ವೃತ್ತಿ ಯಾವುದಾದರೇನು ಆತ್ಮಗೌರವ ಎಲ್ಲರಿಗೂ ಇದೆ ಎಂಬ ಭಾವ. ಇದೆಲ್ಲವೂ ಸ್ವಭಾವಕ್ಕೆ ಸಂಬಂಧ ಪಟ್ಟ ವಿಷಯಗಳು. 


ಇದೇರೀತಿ ಬಾಡಿಗೆ ಕೊಡುವಲ್ಲಿ ಕೂಡ ಹಲವು ವಿಧಗಳಿವೆ.. ಕೆಲವರು ಉದಾರ ಮನೋಭಾವದವರು. ಇವರು ನಾವು ಹೇಳಿದ ಬಾಡಿಗೆಗೆ ಒಂದಷ್ಟು ಸೇರಿಸಿ ಕೊಡುವವರು. ಅಂತೆಯೇ ನಿಮಗೆ ಮುಂದೆಯೂ ಒಳ್ಳೆಯ ಬಾಡಿಗೆ ಸಿಗಲಿ ಎಂದು ಹಾರೈಸಿ ಕಳುಹಿಸುವವರು.


ಇಂಥವರು ಎಲ್ಲ ವ್ಯವಹಾರಗಳಲ್ಲೂ ಮಾನವೀಯತೆಯ ಜತೆ ಎಲ್ಲರ ಹಿತವನ್ನು ಬಯಸುವವರು. ಇಂಥವರ ಸಂಖ್ಯೆ ವಿರಳವಾದರೂ ಪ್ರತಿಯೊಬ್ಬರ ಸಾಧನೆಗೂ ಇವರು ಪ್ರೇರಣೆಯನ್ನು ನೀಡುವವರೆಂದರೆ ತಪ್ಪಲ್ಲ. ಇನ್ನು ಕೆಲವರು ಬಾಡಿಗೆ ಕೊಡುವಾಗ ನಾವೆಷ್ಟು ಹೇಳುತ್ತೇವೋ ಚರ್ಚೆಯಿಲ್ಲದೆ ಅಷ್ಟನ್ನೇ ಕೊಡುವವರು. ವಿಶೇಷವೆಂದರೆ ನೂರು ರೂ. ಬಾಡಿಗೆ ಆಗುವಲ್ಲಿ ನೂರ ಇಪ್ಪತೈದು ಹೇಳಿದರೂ ಆಕ್ಷೇಪವಿಲ್ಲ, ಬರಿದೆ ಎಪ್ಪತೈದು ಹೇಳಿದರೂ ಕಡಿಮೆ ಯಾಕೆ ಎಂದೂ ಕೇಳುವುದಿಲ್ಲ. ಅಂತು ಅವರಿಗೆ ಅವರ ವ್ಯವಹಾರ ಮುಖ್ಯ ಹೊರತು ಬಾಡಿಗೆಯ ಬಗ್ಗೆ ತಲೆ ಕೆಡಿಸಿಕೊಳ್ಳಲಾರರು.


ಮತ್ತೆ ಕೆಲವರಿರುತ್ತಾರೆ ಭಾರಿ ಲೆಕ್ಕಾಚಾರದ ವ್ಯವಹಾರದವರು. ಮಾತ್ರವಲ್ಲ ಪ್ರತಿಯೊಂದು ಕಡೆಯಲ್ಲೂ ಚೌಕಾಶಿ ಇಲ್ಲದೆ ಒಂದು ಹೆಜ್ಜೆಯನ್ನೂ ಮುಂದಿಡದವರು. ಇವರಿಗೆ ನಾವು ಎಷ್ಟು ಕಡಿಮೆ ಬಾಡಿಗೆ ಹೇಳಿದರೂ ಕೊಡುವಾಗ ಅದರಲ್ಲಿ ಒಂದಷ್ಟು ಕಡಿತ ಮಾಡಿಕೊಟ್ಟಾಗಲೇ ಸಮಾಧಾನ. ಅಂದರೆ ಇಂಥವರ ಸಹವಾಸದಿಂದ ನಾವು ಪಾಠ ಕಲಿತು ಕೊಳ್ಳುವುದು ಬಹಳವಿದೆ. ಬಾಡಿಗೆಗೆ ಗಾಡಿ ಓಡಿಸುವವರೆಂದರೆ ಯಾರಲ್ಲಿಯೂ ನಿಷ್ಠುರವಾದಿಗಳಾಗಿರಲು ಆಗುವುದಿಲ್ಲ. ನಮ್ಮ ವ್ಯವಹಾರ ಸ್ನೇಹದ ಮೂಲಕವೇ ನಡೆಯಬೇಕಾಗಿರುವುದರಿಂದ ನಾವು ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಆವಾಗ ಇಂಥವರೊಡನೆ ಪಳಗಿದ ಚಾಲಕನಾದರೆ ಧಾರಾಳಿಗೆ ಮತ್ತು ಹೇಳಿದಷ್ಟೇ ಕೊಡುವವರಿಗೆ ಸರಿಯಾದ ಬಾಡಿಗೆಯನ್ನೇ ಹೇಳಿದರೆ, ಚೌಕಾಶಿಯವನಿಗೆ ಆತ ಅದೆಷ್ಚು ಕಡಿತಗೊಳಿಸಬಹುದೆಂಬ ಲೆಕ್ಕಾಚಾರ ಹಾಕಿ ಅದಷ್ಟನ್ನು ಸೇರಿಸಿ ಹೇಳುತ್ತಾನೆ. ಆವಾಗ ಆತನ ಕಡಿತಕ್ಕೊಳಗಾದರೂ ನಾವು ಅಪಾಯದಿಂದ ಪಾರಾದಂತೇ.


ಬಾಡಿಗೆಗೆ ವಾಹನ ಓಡಿಸುವಾಗ ನಮಗೆ ಸಾಧಾರಣ ಎಲ್ಲರ ಮನೆಯ ಪರಿಚಯ ಮಾತ್ರವಾಗುವುದಲ್ಲದೆ ಅವರ ಸುಖ ಕಷ್ಟಗಳು, ಅವರ ಅವಶ್ಯಕತೆಗಳು, ಅವರ ಸ್ವಭಾವಗಳು ನಮಗರಿವಾಗುತ್ತದೆ. ಪರಸ್ಪರ ಸಹಕಾರ ಮನೋಭಾವವಿದ್ದರೆ ಸಮಾಜ ಸೇವೆಗೂ ಒಳ್ಳೆಯ ಅವಕಾಶ. ಈ ಉದ್ಯೋಗಕ್ಕೆ ಅತ್ಯಂತ ಅವಶ್ಯಕತೆ ಇರುವುದೆಂದರೆ ವಿಶ್ವಾಸ, ತಾಳ್ಮೆ ಮತ್ತು ಸಮಯಪ್ರಜ್ಞೆ. ಇದನ್ನು ನಾವು ಯಾವ ಬೆಲೆಯನ್ನು ತೆತ್ತಾದರೂ ಕಾಯ್ದುಕೊಳ್ಳಲೇ ಬೇಕು. ಇಲ್ಲಿಯೂ ಹಲವರಿಂದ ಹಲವು ದರ್ಶನಗಳಾಗುತ್ತವೆ. ಸಮಯಕ್ಕೆ ಸರಿಯಾಗಿ ಹೊರಟು ನಿಲ್ಲುವವರು, ಗಾಡಿ ಬಂದ ಮೇಲೆ ಸ್ನಾನಕ್ಕೆ ಹೊಡುವವರು, ಒಂದು ನಿಮಿಷ ತಡವಾದರೂ ಚಡಪಡಿಸಿ ನಡೆಯಲು ಪ್ರಾರಂಭಿಸುವವರು ಇತ್ಯಾದಿ. ಅಂತೆಯೇ ಕೆಲವೊಮ್ಮೆ ಉತ್ತಮ ಸೇವೆ ಒದಗಿಸುವ ಚಾಲಕನಾದಲ್ಲಿ ತಮ್ಮ ಪ್ರಯಾಣವನ್ನು ಚಾಲಕನ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿದ ಪ್ರಸಂಗಗಳೂ ಇವೆ. ಇದು ನನ್ನ ಅನುಭವಕ್ಕೂ ಬಂದಿದೆ.


ಅದೇರೀತಿ ಸಮಾಜದಿಂದ ಪಾಠ ಕಲಿಯುವ ಮನಸ್ಥಿತಿ ಇದ್ದಲ್ಲಿ ಪ್ರತಿಯೊಂದು ಮನೆಯಲ್ಲೂ ವಿಶೇಷವಾದಂಥ ಕೆಲವಾರು ಶಿಸ್ತುಗಳು, ಆಚಾರ ವಿಚಾರಗಳು, ಜೀವನ ಕ್ರಮಗಳು, ಸಿದ್ಧಾಂತಗಳು ಇರುತ್ತವೆ. ಅದರಲ್ಲಿ ನಮಗೆ ನಮ್ಮ ಜೀವನದ ಉತ್ಕರ್ಷಕ್ಕೆ ಬೇಕಾದ ವಿಷಯಗಳನ್ನು ಆರಿಸಿಕೊಳ್ಳಬಹುದು, ಅಳವಡಿಸಿಕೊಳ್ಳಬಹುದು. ಅಂತೆಯೇ ಬೇರೆ ಬೇರೆ ಸ್ಥಳಗಳಿಗೆ ಹೋಗುವುದರಿಂದ ಯಾವುದೇ ಹೆಚ್ಚಿನ ಖರ್ಚಿಲ್ಲದೆ ಹಲವಾರು ಪುಣ್ಯಸ್ಥಳಗಳನ್ನೋ, ಪ್ರೇಕ್ಷಣೀಯ ಸ್ಥಳಗಳನ್ನೋ ಸುಲಭವಾಗಿ ನೋಡಬಹುದು. ಮಾತ್ರವಲ್ಲ ಆಯಾಯಾ ಸ್ಥಳಗಳಲ್ಲಿ ಸಿಗಬಹುದಾದಂಥ ವಿಷೇಷವಾದ ವಸ್ತುಗಳನ್ನೂ ಖರೀದಿಸಬಹುದು. ನಾವು ಬಾಡಿಗೆಗೆ ವಾಹನ ಓಡಿಸುವವರು ಎಲ್ಲರ ಕಷ್ಟ ಸುಖದಲ್ಲಿ ಭಾಗಿಯಾಗುವುದರಿಂದ ನಮ್ಮ ಕಷ್ಟ ಸುಖಕ್ಕೂ ಸಂಬಂಧಗಳ ಹೊರತಾಗಿ ಮಾನವೀಯ ಸಂಬಂಧಗಳ ಸಹಕಾರ ಹಾಗೂ ಸ್ನೇಹಾಚಾರ ವಿಪುಲವಾಗಿ ದೊರೆಯುತ್ತದೆ. ಇದೂ ನನ್ನ ಅನುಭವಕ್ಕೆ ಬಂದದ್ದೇ ಆಗಿದೆ. ಯಾವುದೇ ಕ್ಷಣದಲ್ಲಿ ಯಾವುದೇ ವಿಧದಲ್ಲಿ ನಮಗೆ ಏನಾದರೂ ಕಷ್ಟವಿದೆಯೆಂದು ತಿಳಿದಾಗ ಈ ನಮ್ಮ ಹಿತೈಷಿಗಳೆಲ್ಲರೂ ಸರ್ವ ರೀತಿಯಲ್ಲೂ ಸ್ಪಂದಿಸುವವರೇ ಆಗಿರುವುದು ಸಾಧಾರಣ ಎಲ್ಲ ಬಾಡಿಗೆ ವಾಹನ ಓಡಿಸುವವರ ಅನುಭವವೇ ಆಗಿದೆ. ನಾವು ಮಾನವೀಯ ದೃಷ್ಟಿಯಿಂದ ಈ ವ್ಯವಹಾರ ಮಾಡಿದರೆ ಅದರ ಪ್ರತಿಫಲ ನಮಗೆ ಯಾವಾಗಲೂ ಕಟ್ಟಿಟ್ಟ ಬುತ್ತಿಯೇ.


ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ ಎನ್ನುವಂತೆ ನಾವು ನಿಷ್ಕಲ್ಮಶದ ಸೇವೆ ಒದಗಿಸಿದರೆ ನಮಗೆ ಅದು ನೂರು ಪಟ್ಟು ಪ್ರತಿಫಲ ಕೊಡುವುದರಲ್ಲಿ ಸಂಶಯವೇ ಇಲ್ಲ. ಅದಕ್ಕಾಗಿಯೇ ನಾನು ಚಾಲಕನ ವೃತ್ತಿಯನ್ನು ಪ್ರೀತಿಸುತ್ತೇನೆ. ಆದಾಯದ ದೃಷ್ಟಿಯಲ್ಲಿ ಇಂದು ಈ ವೃತ್ತಿ ಹಲವಾರು ಕಾರಣಗಳಿಂದ ಅಷ್ಟೊಂದು ಲಾಭದಾಯಕವಲ್ಲ. ಆದರೆ ಸೇವಾ ದೃಷ್ಟಿಯಿಂದ ಇದೊಂದು ಅತ್ಯುನ್ನತವಾದ ವೃತ್ತಿ ಎಂದೇ ಹೇಳಬಹುದು. ಬೇಜವಾಬ್ದಾರಿಯ ಚಾಲನೆಗಳಿಂದ ಹಲವಾರು ಜೀವಗಳು ಹೋಗಿರುವಂತೆ, ಜವಾಬ್ದಾರಿಯುತ ಚಾಲನೆಯಿಂದ, ಸಮಯ ಪ್ರಜ್ಞೆಯಿಂದ, ಆರೋಗ್ಯದ ಏರುಪೇರಾದಾಗ ಆಸ್ಪತ್ರೆಗಳಿಗೆ ರೋಗಿಯನ್ನು ಕರಕೊಂಡು ಹೋಗುವುದರಿಂದ ಹಲವಾರು ಜೀವಗಳು ಉಳಿದದ್ದೂ ಇದೆ. ಆದ್ದರಿಂದ ಚಾಲಕನಾದವನು ಪ್ರತಿಕ್ಷಣದಲ್ಲಿ, ಪ್ರತಿ ರಸ್ತೆಯಲ್ಲಿ ನೂರಕ್ಕೆ ನೂರರಷ್ಟು ಜಾಗೃತನಾಗಿರಬೇಕು ಹಾಗೂ ತಾನು ಅನ್ಯರ ಜೀವಗಳಿಗೂ ಹೊಣೆಯಾಗಿದ್ದೇನೆ ಎಂಬ ಅರಿವಿರಬೇಕು... ಹೀಗೆ ಹಲವಾರು ವಿಚಾರಗಳಿವೆ ಮುಂದೆ ನೋಡೋಣ... ನಮಸ್ಕಾರ 

-ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post