||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪರೀಕ್ಷೆಗಳನ್ನೊಡ್ಡಿ ಉನ್ನತಿಗೆ ಕಾರಣನಾಗುವವನು ಗಣಪತಿ: ರಾಘವೇಶ್ವರ ಶ್ರೀ

ಪರೀಕ್ಷೆಗಳನ್ನೊಡ್ಡಿ ಉನ್ನತಿಗೆ ಕಾರಣನಾಗುವವನು ಗಣಪತಿ: ರಾಘವೇಶ್ವರ ಶ್ರೀ

ಗಿರಿನಗರ ಮಹಾಗಣಪತಿಗೆ ಅಷ್ಟಬಂಧ-ಬ್ರಹ್ಮಕಲಶೋತ್ಸವ ಸಮಾರಂಭಬೆಂಗಳೂರು: ಜೀವನದಲ್ಲಿ ಪರೀಕ್ಷೆಗಳು ಬೇಕು. ಗಣಪತಿ ಕೇವಲ ವಿಘ್ನಪರಿಹರಿಸುವವನು ಮಾತ್ರವಲ್ಲ. ವಿಘ್ನಕರ್ತನೂ ಆಗಿದ್ದಾನೆ. ವಿಘ್ನಗಳೆಂಬ ಪರೀಕ್ಷೆಗಳನ್ನು ಒಡ್ಡಿ; ಜೀವನದಲ್ಲಿ ಉನ್ನತಿ ಸಾಧಿಸುವಂತೆ ಗಣಪತಿ ಮಾಡುತ್ತಾನೆ ಎಂದು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.


ಗಿರಿನಗರದ ಮಹಾಗಣಪತಿ ದೇವಾಲಯದಲ್ಲಿ ನಡೆದ ಅಷ್ಟಬಂಧ ~ ಪುನಃಪ್ರತಿಷ್ಠೆ ~ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಧರ್ಮಸಭೆಯಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ಇತ್ತೀಚಿಗೆ ದೇವಾಲಯಗಳಲ್ಲಿ ಶಾಸ್ತ್ರದ ಬದಲು ಶೋ ಮಾತ್ರ ಇರುವಂತಹ ವಿಕಟ ಸಂದರ್ಭಗಳನ್ನು ನೋಡುವಂತಾಗಿದೆ. ವಾಸ್ತು, ಜ್ಯೋತಿಷ್ಯ, ಆಗಮಗಳು ಸರಿಯಾಗಿದ್ದಾಗ ಮಾತ್ರ ದೇವಾಲಯಕ್ಕೆ ಶೋಭೆ. ಸೃಷ್ಟಿಯಲ್ಲಿ ಎಲ್ಲವೂ ಹೊಸತಾಗುವುದು ಜಗತ್ತಿನ ನಿಯಮ. ಹಾಗೆಯೇ ದೇವಾಲಯದಲ್ಲೂ ದೇವರ ಮೂರ್ತಿಯನ್ನು ಪುನಃಪ್ರತಿಷ್ಠೆ ಮಾಡುವ ಕ್ರಮ ಇದೆ. 

ಭಾರತದ ಪರಂಪರೆ ಅನುಪಮವಾಗಿದ್ದು, ಪರಂಪರೆಯನ್ನು ಮೂಡ ನಂಬಿಕೆ ಎನ್ನಲಾಗದು. ನಮ್ಮ ಆಚರಣೆಗಳು ವೈಜ್ಞಾನಿಕವಾಗಿದ್ದು, ತಿಳಿದಷ್ಟೂ ಬೆರಗು ಹುಟ್ಟಿಸುವ ಸಂಸ್ಕೃತಿ ನಮ್ಮದು ಎಂದರು.


ಗುರು ದಾರಿತೋರಿಸಿದರೆ, ಗಣಪತಿ ವಿಘ್ನವನ್ನು ನಿವಾರಿಸುತ್ತಾನೆ. ಜೀವನದಲ್ಲಿ ಗುರಿಮುಟ್ಟಲು ಗುರು ಗಣಪತಿಯರ ಅನುಗ್ರಹ ಮುಖ್ಯ ಎಂದ ಶ್ರೀಗಳು, ಗಿರಿನಗರದಲ್ಲಿ ಶ್ರೀಮಹಾಗಣಪತಿ ದೇವರು ಹಾಗೂ ದೊಡ್ಡ ಗುರುಗಳ ಸಮಾಧಿ ಎರಡೂ ಇದೆ. ಇವೆರಡೂ ನಮಗೆ ಶ್ರದ್ಧೆಯ ಕೇಂದ್ರಗಳು ಎಂದರು.


 ಅಂದು ಸಂನ್ಯಾಸ ಸ್ವೀಕರಿಸುವುದಕ್ಕೂ ಮೊದಲು ಇದೇ ಮಹಾಗಣಪತಿಯ ಸನ್ನಿಧಿಗೆ ಬಂದು, ಪ್ರಾರ್ಥಿಸಿ; ಆನಂತರ ನಾವು ಸಂನ್ಯಾಸ ಸ್ವೀಕಾರ ಮಾಡಿದ್ದೆವು ಎಂದು 1994ರ ನೆನಪು ಮಾಡಿಕೊಂಡರು.


ಬಸವನಗುಡಿ ಶಾಸಕರು ಹಾಗೂ ಅಷ್ಟಬಂಧ ಸಮಿತಿಯ ಗೌರವಾಧ್ಯಕ್ಷ ಶ್ರೀ ಎಲ್ ಎ ರವಿಸುಬ್ರಹ್ಮಣ್ಯ ಮಾತನಾಡಿ, ಶ್ರೀರಾಮಚಂದ್ರಾಪುರ ಮಠ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಸೇವೆ ಅಪಾರವಾಗಿದ್ದು, ಶ್ರೀಗಳ ಮಾರ್ಗದರ್ಶನದಿಂದ ಅಷ್ಟಬಂಧ ಕಾರ್ಯಕ್ರಮ ಸುಲಲಿತವಾಗಿ ಸಂಪನ್ನವಾಗಿದೆ. ಗಿರಿನಗರದ ನಿರ್ಮಾತೃಗಳಾದ ದಿವಂಗತ ಶ್ರೀ ಕೃಷ್ಣ ಭಟ್ಟರು ಈ ಬಡಾವಣೆ ನಿರ್ಮಿಸುವಾಗಲೆ ದೇವಾಲಯಗಳಿಗೆ ಜಾಗ ನೀಡಿ ಬಡಾವಣೆ ನಿರ್ಮಿಸಿದ್ದಾರೆ. ಗಿರಿನಗರದ ಮಹಾಗಣಪತಿ ದೇವರ ಅನುಗ್ರಹದಿಂದ ನಮ್ಮ ಕ್ಷೇತ್ರ ಪ್ರಶಾಂತವೂ, ಸುಭಿಕ್ಷವೂ ಆಗಿದೆ ಎಂದರು.


ಪ್ರಸಿದ್ದ ದೈವಜ್ಞರಾದ ವಿಷ್ಣು ಪುಚ್ಚಕ್ಕಾಡು ಮಾತನಾಡಿ, ದೇವಾಲಯಗಳನ್ನು ನಿರ್ಮಿಸಿದ ಮೇಲೆ ಪ್ರತಿ 12 ವರ್ಷಕ್ಕೊಮ್ಮೆ ಅಷ್ಟಬಂಧ ಮಾಡಬೇಕೆಂದು ಆಗಮ ಶಾಸ್ತ್ರ ಹೇಳುತ್ತದೆ. ನಗರದಲ್ಲಿ ಅನೇಕ ದೇವಾಲಯಗಳು ಇರುವುದನ್ನು ನೋಡುತ್ತೇವೆ. ಆದರೆ ಶಾಸ್ತ್ರೋಕ್ತ ವಾಸ್ತು ವಿನ್ಯಾಸ, ಶಾಸ್ತ್ರಬದ್ಧ ಪ್ರತಿಷ್ಠಾಪನೆ, ಶಾಸ್ತ್ರೀಯ ಪೂಜೆ ~ ಪದ್ಧತಿಗಳು ಲುಪ್ತವಾಗುತ್ತಿವೆ. ಆದರೆ ಗಿರಿನಗರದ ಶ್ರೀಮಹಾಗಣಪತಿ ದೇವಾಲಯ ಶಾಸ್ತ್ರಬದ್ಧವಾಗಿ ಎಲ್ಲವನ್ನೂ ಆಚರಿಸುತ್ತಿರುವುದು ಅನುಕರಣೀಯ ಎಂದರು.


ಅಷ್ಟಬಂಧ ಸಮಿತಿಯ ಅಧ್ಯಕ್ಷರಾದ ಡಾ. ಬಿ.ಕೆ ವಿಶ್ವನಾಥ್ ಭಟ್ ಪ್ರಾಸ್ತಾವಿಕ ಮಾತನಾಡಿ; ಈ ದೇವಾಲಯ ಗಿರಿನಗರದ ಮೊಟ್ಟಮೊದಲ ದೇವಾಲಯವಾಗಿದೆ. 1984 ರಲ್ಲಿ ಶ್ರೀರಾಮಚಂದ್ರಾಪುರಮಠದ ಹಿಂದಿನ ಗುರುಗಳಾದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ, ಗಿರಿನಗರದ ನಿರ್ಮಾತೃ ಬಿ ಕೃಷ್ಣಭಟ್ ಈ ದೇವಾಲಯ ನಿರ್ಮಿಸಿದ್ದರು ಎಂದು ನೆನಪಿಸಿದರು.


ಸಭಾ ಕಾರ್ಯಕ್ರಮದಲ್ಲಿ ಚಿತ್ತಾಪುರದ ಸವಿತಾ ಪೀಠ ಮಹಾಸಂಸ್ಥಾನದ ಶ್ರೀ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ, ಸಿಗಂದೂರು ಪ್ರಧಾನ ಅರ್ಚಕರಾದ ಶ್ರೀ ಶೇಷಗಿರಿ ಭಟ್, ಡಾ. ವಿದ್ಯಾಭಟ್, ಕಾರ್ಪೊರೇಟರ್ ನಂದಿನಿ ವಿಠಲ್ ಉಪಸ್ಥಿತರಿದ್ದರು.


ಇದಕ್ಕೂ ಮೊದಲು ಬೆಳಗ್ಗೆ ಶ್ರೀಮಹಾಗಣಪತಿ, ಸುಬ್ರಹ್ಮಣ್ಯ ಹಾಗೂ ನಾಗದೇವರ ಪುನಃಪ್ರತಿಷ್ಠೆ ~ ಅಷ್ಟಬಂಧ ಕಾರ್ಯಕ್ರಮಗಳು ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ನಡೆದವು. ಸುಬ್ರಹ್ಮಣ್ಯ ದೇವರಿಗೆ ನೂತನ ಶಿಲಾಮಯ ಗುಡಿ, ಸುವರ್ಣ ಕವಚಗಳ ಸಮರ್ಪಣೆ ನಡೆದವು. ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಹವ್ಯಕ ಮಹಾಸಭೆಯ ಅಧ್ಯಕ್ಷರಾದ ಡಾ.ಗಿರಿಧರ ಕಜೆ, ಹೈಕೋರ್ಟ್ ಸೀನಿಯರ್ ಅಡ್ವಕೇಟ್ ಶ್ರೀ ರಾಘವನ್ ಉಪಸ್ಥಿತರಿದ್ದರು. ಶಾಸಕರು ಸಹಸ್ರಮೋದಕ ಹವನದಲ್ಲಿ ಯಜಮಾನರಾಗಿ ಭಾಗಿಯಾದರು. ಕೇರಳದ ಶ್ರೀ ಅನಂತಪದ್ಮನಾಭ ದೇವಾಲಯದ ಪ್ರಧಾನ ಅರ್ಚಕರಾದ ಶ್ರೀ ನಾರಾಯಣ ಪಟ್ಟೇರಿ, ಶ್ರೀ ಶಿವಪ್ರಸಾದ್ ಮುಂತಾದ ತಂತ್ರಿಗಳು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

0 Comments

Post a Comment

Post a Comment (0)

Previous Post Next Post