ಅಡಿಕೆ ತೋಟಕ್ಕೆ ಮದ್ದು ಸಿಂಪಡಣೆ: ದೋಟಿ ಪ್ರಯೋಗದ ಅನುಭವ

Upayuktha
0

ಲಾಗಾಯ್ತಿನಿಂದಲೂ ನಮ್ಮಲ್ಲಿ ತೋಟಕ್ಕೆ ಮದ್ದು ಬಿಡುವುದು ಆರ್ದ್ರಾ ನಕ್ಷತ್ರ ಆರಂಭವಾದ ಮೇಲೆ. ಇದಕ್ಕೆ ಮುಖ್ಯ ಕಾರಣ ಗದ್ದೇ ಬೇಸಾಯ. ಏಕಕಾಲದಲ್ಲಿ ಎರಡೂ ಕೆಲಸಕ್ಕೆ ಜನ ಹೊಂದಿಸುವುದು ಸಮಸ್ಯೆ ಒಂದಾದರೆ, ಸಿಂಪಡಣೆಯನ್ನು ಎರಡು ಸರ್ತಿಗೆ ಸೀಮಿತಗೊಳಿಸುವುದು ಎರಡನೇ ಕಾರಣ. ಆರ್ದ್ರಾ ನಕ್ಷತ್ರದ ಪೂರ್ವಾರ್ಧ ಅಥವಾ ಉತ್ತರಾರ್ಧ ಬಿಸಿಲು ಬಂದೇ ಬರುತ್ತದೆ ಎಂಬುದು ಈವರೆಗಿನ ನನ್ನ ಅನುಭವ. ನಿಲಯದ ಕಲಾವಿದರೇ ಇದ್ದುದರಿಂದಾಗಿ ಅಷ್ಟೊಂದು ಸಮಸ್ಯೆ ಎಂದು ಎನಿಸಲಿಲ್ಲ. ಹಳೆಯ ತಲೆಮಾರಿನ ಮದ್ದು ಬಿಡುವವರು ನಿವೃತ್ತಿಯಾದ ಮೇಲೆ ನಮ್ಮ ಕಲಾವಿದರೇ ಊರೆಲ್ಲಾ ಹೊರಟ ಕಾರಣ ಸಮಸ್ಯೆ ಆರಂಭ. ಆದರೂ ಅನೇಕ ಕಡೆಗಳಿಗೆ ಹೋಲಿಸಿದರೆ, ಇನ್ನೂ ಅದೃಷ್ಟವಂತ. ಆ ಕಾರಣದಿಂದ ಮೂರು ವರ್ಷದಿಂದ ಕಾರ್ಬನ್ ಫೈಬರ್ ದೋಟಿಯನ್ನು ಪ್ರಾತ್ಯಕ್ಷಿಕೆಯ ಅನುಭವ ಮಾಡುತ್ತಾ ಮಾಡುತ್ತಾ ತೆಗೆಯುವುದನ್ನು ಮುಂದೆ ಹಾಕುತ್ತ ಬಂದೆ. ಈ ವರ್ಷದ ದೋಟಿ ಕ್ರಾಂತಿಯ ಪರಿಣಾಮವಾಗಿ ಯಾವುದಕ್ಕೂ ಒಂದಿರಲಿ ಎಂದು ದೋಟಿ ಮನೆಗೆ ಬಂತು.


ಗದ್ದೆ ಬೇಸಾಯ ನಂತರ ಮದ್ದು ಬಿಡಲು ಮುಹೂರ್ತ ನಿಶ್ಚಯಿಸಿದ್ದೆ ತಡ, ಮರವೇರುವ ಒಬ್ಬಾತನಿಗೆ ಕಾಲಿಗೆ ಗಾಯ ವೇನೋ ಆಗಿ ಮರವೇರಲು ಅಸಾಧ್ಯ ಎಂದು ತಿಳಿಸಿದ. ಬಂದ ಮತ್ತೊಬ್ಬನಿಗೆ ದೋಟಿಯನ್ನು ಕೊಟ್ಟು ಹೇಗಾಗುವುದು ಎಂದು ಪರೀಕ್ಷಿಸಲು ತಿಳಿಸಿದೆ. ಮರವೇರಲು ಬಲು ನಿಷ್ಣಾತನಾತ. ಒಂದೆರಡು ಸಾರಿ ಮದ್ದು ಬಿಟ್ಟು ರೋಗ ಅತೀವವಾದರೆ ಅಡಿಕೆಯನ್ನು ಉಳಿಸಿಕೊಳ್ಳಬಹುದು ಎಂದು ಸಲಹೆಯನ್ನು ಕೊಟ್ಟ. ಆನಂತರ ಇನ್ನು ನಾನು ಮರವೇರಿ ಬಿಡುವೆನೆಂದು, ತಳೆ, ಮಣೆ ಇತ್ಯಾದಿಗಳನ್ನು ತಯಾರು ಮಾಡುವಾಗ ಧೋ ಎಂದು ಮಳೆ ಸುರಿಯಿತು. ಮಳೆ ಬಿಟ್ಟ ತಕ್ಷಣ ಮರ ಏರುವುದು ಅಸಾಧ್ಯ ಎಂದು ಕಂಡು ದೋಟಿಯನ್ನು ಮುಂದುವರಿಸಿದ.


ಸಂಜೆಯವರೆಗೂ ದೋಟಿಯಲ್ಲಿ ಔಷಧಿ ಸಿಂಪಡಣೆ ಮಾಡಿ ಅಣ್ಣೆರೇ ಇಂದು ಬಾರಿ ಎಡ್ಡೆ ಆಪುಂಡು ಶರೀರಗು ಶ್ರಮ ಇಜ್ಜಿ. ಕಣ್ಣುಗು ಮರ್ದು ಬೂರುನೆ ಒಂಜಿ ಸಮಸ್ಯೆ ಅಂತ ಶಿಫಾರಸು ಪತ್ರವನ್ನು ಕೊಟ್ಟಿರುತ್ತಾನೆ.


ಆತ ಔಷಧಿ ಸಿಂಪಡಣೆ ಮಾಡುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ, ಸಹಾಯಕನಾದ ರಾಜಸ್ಥಾನಿ ವಲಸೆ ಕಾರ್ಮಿಕ ಆಗಾಗ ಸಿಂಪಡಣೆಗೆ ಪ್ರಯತ್ನಿಸಿದ. ನಾನೂ ಪ್ರೋತ್ಸಾಹಿಸಿದೆ. ಮರುದಿನ ಹಳಬ ಮರಹತ್ತಿ ಬಿಡುವುದು ಹೊಸಬ ದೋಟಿಯಲ್ಲಿ ಬಿಡುವುದು ಮುಂದುವರೆಯಿತು. ಮರವೇರುವವರು ಇಲ್ಲದಾಗ, ಮಳೆ ಬಂದು ಬಿಟ್ಟು ಕಾಲು ಗಂಟೆಯ ಒಳಗೆ ಮರವೇರಲು ಅಸಾಧ್ಯವಾದಾಗ, ದೋಟಿ ಪರಮ ಉಪಕಾರಿಯಾಗಬಲ್ಲುದು. 30,40 ಅಡಿಯವರೆಗೆ ಹೆಣ್ಣುಮಕ್ಕಳಿಗೂ ಬಿಡಬಹುದು.


ನನ್ನ ತೋಟದಲ್ಲಿ ಸಾಕಷ್ಟು 70 ಅಡಿ ಮೇಲಿನ ಮರಗಳೂ ಇವೆ. ಅಸಹಾಯಕರಾದ ಕಾಲದಲ್ಲಿ, ಅಡಿಕೆಯನ್ನು ಮಹಾಳಿಯಿಂದ ಉಳಿಸಿಕೊಳ್ಳಲು ಪ್ರತಿ ಮನೆಯಲ್ಲೂ ಇರಬೇಕಾದ ಒಂದು ವ್ಯವಸ್ಥೆಯೆಂದು ನನಗನ್ನಿಸಿತು.

-ಎ.ಪಿ. ಸದಾಶಿವ ಮರಿಕೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top