|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಾವಯವ ಕೃಷಿಯಿಂದ ನಿರೀಕ್ಷಿತ ಫಸಲು ತೆಗೆಯಲು ಸಾಧ್ಯವೇ?

ಸಾವಯವ ಕೃಷಿಯಿಂದ ನಿರೀಕ್ಷಿತ ಫಸಲು ತೆಗೆಯಲು ಸಾಧ್ಯವೇ?


  


ಅದೊಂದು ರೈತರ ಸಭೆ. ದಿನಪೂರ್ತಿ ಕಾರ್ಯಕ್ರಮ. ಸಾವಯವ ಕೃಷಿಯ ಬಗ್ಗೆ ವಿಚಾರಗೋಷ್ಠಿಯೂ ಇತ್ತು. ಭಾಗವಹಿಸಿದ ಸಂಪನ್ಮೂಲ ವ್ಯಕ್ತಿಗಳಲ್ಲಿ ನಾನೂ ಒಬ್ಬನಾಗಿದ್ದೆ. ಗೋಷ್ಠಿಯ ಕೊನೆಯಲ್ಲಿ ರೈತರ ಮಧ್ಯದಿಂದ ಪ್ರಶ್ನೆಯೊಂದು ಬಂತು. ಸಾವಯವ ಕೃಷಿಯಿಂದ ನಿರೀಕ್ಷಿತ ಫಸಲು ತೆಗೆಯಲು ಸಾಧ್ಯವೇ? ಪ್ರಶ್ನೆ ನನ್ನನ್ನೇ ಉದ್ದೇಶಿಸಿ ಬಂದುದರಿಂದ ಉತ್ತರಿಸುವುದು ನನ್ನ ಕರ್ತವ್ಯವಾಗಿತ್ತು.


ನಿರೀಕ್ಷಿತ ಫಸಲು ಎಷ್ಟು ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ ವ್ಯತ್ಯಾಸವಿರಬಹುದು. ಕೆಲವರ ನಿರೀಕ್ಷೆ ದೊಡ್ಡದೂ ಇರಬಹುದು. ಈ ಹಿನ್ನೆಲೆಯಿಂದ ಯೋಚಿಸಿದಾಗ ಕೃಷಿಯನ್ನು ಉದ್ಯಮ ಎಂದು ಕರೆಯಬೇಕಾಗುತ್ತದೆ. ಆದರೆ ಕೃಷಿಗೂ ಉದ್ಯಮಕ್ಕೂ ಬಹಳ ವ್ಯತ್ಯಾಸವಿದೆ. ಉದ್ಯಮದಲ್ಲಿನಿರ್ಜೀವ ವಸ್ತುಗಳೊಂದಿಗೆ ಒಡನಾಟ. ಕೀಲೆಣ್ಣೆಯೋ, ವಿದ್ಯುತೋ ಬಳಸಿದಲ್ಲಿ ಅವಕ್ಕೆ ಜೀವ ಬರುತ್ತದೆ. ಬೇಕೆಂದಾಗ ಉತ್ಪಾದಿಸಬಹುದು ಬೇಡವೆಂದಾಗ ಉತ್ಪಾದನೆ ನಿಲ್ಲಿಸಬಹುದು. ಉದಾಹರಣೆ ಮೋಟಾರ್ ಬೈಕುಗಳು ಕಾರುಗಳು ಮೊಬೈಲ್ ಗಳು ಯಾವುದೇ ಯಂತ್ರೋಪಕರಣಗಳು ಇತ್ಯಾದಿ ಇತ್ಯಾದಿ. ಇಂತಿಷ್ಟು ಉತ್ಪಾದನೆಯ ಗುರಿ ಎಂದು ವಿಧಿಸಿಕೊಂಡರೆ ಅಷ್ಟೇ ಉತ್ಪಾದಿಸಿ ಕೊಳ್ಳಬಹುದು. ಯಾವುದೇ ಭಾವನೆಗಳಿಗೆ ಅಲ್ಲಿ ಸಂಬಂಧ ಇರುವುದಿಲ್ಲ.


ಕೃಷಿಯೆಂದರೆ ಸಜೀವ ವಸ್ತುಗಳೊಂದಿಗೆ ಸಂಬಂಧ. ಅದು ಯಾವಾಗಲೂ ಉಸಿರಾಡುತ್ತದೆ, ತನ್ನ ಕೆಲಸವನ್ನು ಸಹಜವಾಗಿ ಮಾಡುತ್ತಲೇ ಇರುತ್ತದೆ. ನಮ್ಮ ದೇಹದ ಒಳಾಂಗಗಳು ನಮ್ಮ ಅರಿವಿಗೆ ಬಾರದಂತೆ ತನ್ನ ಕೆಲಸವನ್ನು ನಿರ್ವಹಿಸಿದಂತೆ ಪ್ರಕೃತಿಯಲ್ಲಿ ಸಹಜವಾಗಿ ನಡೆಯುತ್ತಲೇ ಇರುತ್ತದೆ. ಉದ್ಯಮದಲ್ಲಿ ಬೇಕಾದಾಗ ಜೀವ ಕೊಟ್ಟಂತೆ, ಬೇಡ ಎಂದಾದಾಗ ಜೀವ ತೆಗೆದಂತೆ ಕೃಷಿಯಲ್ಲಿ ಸಾಧ್ಯವಿಲ್ಲ.ಕೃಷಿಯೆಂದರೆ ಜೀವದೊಂದಿಗೆ ಜೀವಿಗಳ ಸಂಬಂಧ. ಹಾಗಾಗಿ ಇದೊಂದು ಜೀವನ ಪದ್ಧತಿಯೇ ವಿನಹ ಉದ್ಯಮವಲ್ಲ. ಜೀವಿಗಳಿಗೆ ಆಹಾರ ಕೊಟ್ಟಂತೆ, ಸಸ್ಯಗಳಿಗೂ ಸಹಜ ಆಹಾರ ಕೊಟ್ಟಲ್ಲಿ ಒಂದಷ್ಟು ಜಾಸ್ತಿ ಉತ್ಪಾದನೆಯನ್ನು ಹೆಚ್ಚಿಸಲು ಸಾಧ್ಯ.


ನಮ್ಮ ಮನೆಗಳನ್ನು ಉದಾಹರಣೆಯಾಗಿ ತೆಗೆದುಕೊಳ್ಳಿ. ಗಂಡನಾಗಲಿ ಹೆಂಡತಿಯಾಗಲಿ, ನೀರೀಕ್ಷೆ ತಾನು ಹೇಳಿದಂತೆ ಇನ್ನೊಬ್ಬ ಕೇಳಬೇಕು ಎಂದು. ನಮ್ಮ ನಿರೀಕ್ಷೆಯಂತೆ ಎಂದಾದರೂ ಇರಲು ಸಾಧ್ಯವೇ? ನಿರೀಕ್ಷೆಗೆ ತಕ್ಕಂತೆ  ಬಗ್ಗಿಸಲು ಹೊರಟರೆ ಸಂಸಾರ ಒಡೆಯುವುದಿಲ್ಲವೇ? ನಿರೀಕ್ಷೆಯಂತೆ ಮಕ್ಕಳಿಲ್ಲದಿದ್ದರೆ ಸಹಿಸಿಕೊಳ್ಳುವುದಿಲ್ಲವೇ? ಇಲ್ಲೆಲ್ಲವೂ ನಮ್ಮ ನಿರೀಕ್ಷೆಗೆ ತಕ್ಕಂತೆ ಇಲ್ಲದಿದ್ದರೂ ನಾವು ಬಗ್ಗಿ ತಗ್ಗಿ ಸಂಸಾರವನ್ನು ಸುಖವಾಗಿ ಸಾಗಿಸಿದಂತೆ ಕೃಷಿಯೆಂಬ ಸಂಸಾರವನ್ನು ಸಾಗಿಸಬೇಕಾಗುತ್ತದೆ. ಬಗ್ಗಿಸ ಹೊರಟಾಗ ಸಂಸಾರದಲ್ಲಿ ವಿರೋಧಗಳು ಬಂದಂತೆ, ಅಸಹಜವಾದ ರಾಸಾಯನಿಕಗಳನ್ನು ಬಳಸಿದಾಗ ಪ್ರಕೃತಿಯಲ್ಲಿ ವಿರೋಧಗಳು ಹುಟ್ಟಿಕೊಳ್ಳುತ್ತವೆ. ಬಗ್ಗಿಸಲು ಹೊರಟಷ್ಟು ವಿರೋಧಗಳು ಜಾಸ್ತಿ.


ಮೇಲಿನ ಚಿಂತನೆಯನ್ನು ಇಟ್ಟುಕೊಂಡು ಕೃಷಿ ಮಾಡಿದಾಗ, ಇಳುವರಿಗೆ ಯಾವುದೇ ಕೊರತೆಯಾಗುವುದಿಲ್ಲ. ನಮ್ಮ ಜೀವನದ ಎಲ್ಲಾ ಆವಶ್ಯಕತೆಗಳನ್ನು ತೀರಿಸುವಷ್ಟು ಇಳುವರಿ ಕೃಷಿಯಲ್ಲಿ ಸಿಗುತ್ತದೆ. ಆದರೆ ನಮ್ಮ ದುರಾಸೆಯನ್ನು ತೀರಿಸುವಷ್ಟು ಖಂಡಿತ ಸಿಗಲಾರದು.


ಸಂಸಾರ ಒಮ್ಮೆ ಒಡೆದು ಹಾಳಾದರೆ ಮತ್ತೆ ಪುನಹ ಸರಿ ಮಾಡುವುದು ಕಷ್ಟ. ರಾಸಾಯನಿಕ ಬಳಕೆಯ ಮೂಲಕ ಪ್ರಕೃತಿ ಹಾಳಾದರೆ , ಮತ್ತೆ ಸರಿಮಾಡುವುದು ಬಹಳ ಬಹಳ ಕಷ್ಟ.ಸರಿ ಆಗದೆಯೂ ಇರಬಹುದು. ಆದರೆ ಉದ್ಯಮ ಇಂದು ಹಾಳಾದರೆ ನಾಳೆ ಇನ್ನೊಂದು ಉದ್ಯಮವನ್ನು ಸುರುಮಾಡಬಹುದು.  ಎಲ್ಲಿ ಅತಿಯಾದ ನಿರೀಕ್ಷೆ ಇದೆಯೋ, ಅಲ್ಲಿ ನಿರಾಸೆ ಮತ್ತು ಹತಾಶೆ ಇರುತ್ತದೆ ಎಂಬುದು ನೆನಪಿಡಬೇಕಾದದ್ದು. ಹಾಗಾಗಿ ನೀರೀಕ್ಷೆ ಎಷ್ಟು ಏನು ಹೇಗೆ ಎಂಬುದನ್ನು ಅವರವರ ಭಾವಕ್ಕೆ ಬಿಟ್ಟಿದ್ದೇನೆ ಅಂತಂದೆ.


ನನ್ನ ಉತ್ತರದಿಂದ ಅವರಿಗೆ ಸಂತೋಷವಾಯಿತೋ, ಅಲ್ಲ ಅಸಂಬದ್ಧ ಎಂದು ಗ್ರಹಿಸಿದರೋ ನನಗೆ ಗೊತ್ತಿಲ್ಲ. ಅದು ಓದುಗನಿಗೆ, ಕೇಳುಗನಿಗೆ ಚಿಂತನೆಗೆ ಬಿಟ್ಟದ್ದು.


ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ತಿಳಿಸಿದಂತೆ, ಫಲಾಪೇಕ್ಷೆಯಿಲ್ಲದೆ ಮನಃಪೂರ್ವಕ ದುಡಿಮೆಯಿರಲಿ, ಫಲ ಕೊಡುವವನು ನಾನು ಎಂಬ ಮಾತಿನಂತೆ ಕೆಲಸ ಮಾಡಿದಾಗ ನನ್ನ ಮಟ್ಟಿಗೆ ನಿರೀಕ್ಷೆಯಂತೆ ಸಂತೃಪ್ತ ಜೀವನ ಸಾಗಿದೆ ಎಂಬ ಮಾತಿನೊಂದಿಗೆ ವಿರಮಿಸುತ್ತೇನೆ.

-ಎ.ಪಿ. ಸದಾಶಿವ ಮರಿಕೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post