ಸುಳ್ಯ: ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕಿನ ಜನರಲ್ ಮ್ಯಾನೇಜರ್ ಹುದ್ದೆಗೆ ಮೊದಲ ಬಾರಿಗೆ ದಕ್ಷಿಣ ಕನ್ನಡ, ಉಡುಪಿ ಭಾಗದಿಂದ ವ್ಯಕ್ತಿಯೊಬ್ಬರು ಆಯ್ಕೆಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಮರ ಪಡ್ನೂರು ಗ್ರಾಮದ ಪೋನಡ್ಕದ ವಸಂತ ಕುಮಾರ್ ಪಿಪಿ ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕಿನ ಜನರಲ್ ಮ್ಯಾನೇಜರ್ ಆಗಿ ಪದೋನ್ನತಿ ಪಡೆದುಕೊಂಡಿದ್ದಾರೆ. ಇವರು ದಿ. ಪಿ. ಎಸ್. ಪರಮೇಶ್ವರಯ್ಯ ಪೋನಡ್ಕ ಹಾಗೂ ದಿ. ಸಾವಿತ್ರಿ ಪಿಪಿ ಅವರ ಪುತ್ರ.
32 ವರ್ಷಗಳ ಹಿಂದೆ ಸಾಮಾನ್ಯ ಕ್ಲರ್ಕ್ ಆಗಿ ಅಪೆಕ್ಸ್ ಬ್ಯಾಂಕಿನಲ್ಲಿ ಕರ್ತವ್ಯವನ್ನು ಆರಂಭಿಸಿದ್ದ ಇವರು ಸತತ ಪರಿಶ್ರಮ ಹಾಗೂ ತಮ್ಮ ಪ್ರತಿಭೆಯ ಮೂಲಕ ಈ ಹಂತಕ್ಕೆ ತಲುಪಿದ್ದಾರೆ. ಇವರು ಪ್ರತಿಭಾನ್ವಿತ ವಿದ್ಯಾರ್ಥಿಯು ಆಗಿದ್ದರು. ಮಂಗಳೂರು ವಿವಿ ನಡೆಸಿದ್ದ ಬಿಬಿಎಂ ಪರೀಕ್ಷೆಯಲ್ಲಿ (1987) ಏಳನೇ ರಾಂಕ್ ಪಡೆದುಕೊಂಡಿದ್ದರು. ಜೇನುಕೃಷಿ, ಚೆಸ್, ಮೊಬೈಲ್ ಫೋಟೋಗ್ರಫಿ, ಹನಿಗವನ ರಚನೆ, ಕೈದೋಟ ಮಾಡುವುದು ಇವರ ನೆಚ್ಚಿನ ಹವ್ಯಾಸ. ಬ್ಯಾಂಕ್ ತಮ್ಮನ್ನು ನಿಯುಕ್ತಿ ಗೊಳಿಸಿದ್ದ ಬ್ರಾಂಚ್ ಗಳಲ್ಲೆಲ್ಲ ಪುಟ್ಟ ಕೈದೋಟವನ್ನು ತಯಾರು ಮಾಡುವ ಮೂಲಕ, ಆ ಪರಿಸರವನ್ನು ಆಹ್ಲಾದಕರವನ್ನಾಗಿ ಪರಿವರ್ತಿಸಿದ್ದಾರೆ.