ಮಂಜು ಮುಸುಕಿದ ಮುಳ್ಳಯ್ಯನಗಿರಿ
ಪ್ರವಾಸಿಗರ ಕಣ್ಮನ ತಣಿಸುವ ಹಸಿರ ಸಿರಿ
ತಣ್ಣನೆ ಮುತ್ತಿಕ್ಕುವ ಕುಳಿರ್ಗಾಳಿಯ ಚೆಲುವ ಪರಿ
ಮಲೆನಾಡ ಹಸಿರುಡುಗೆಯ ಸೊಬಗಿನ ವೈಯಾರಿ
ಗಿರಿಯಲ್ಲಿ ಕವಿದ ಮಂಜು ಹಸಿರನ್ನು ತಬ್ಬಿಹುದು
ಅಂಬರ ಚುಂಬಿಸುವ ನಶೆಯಲ್ಲಿ ತೇಲಾಡಿಹುದು
ಮುಸಲಧಾರೆಯ ಸದ್ದು ಕಿವಿಗಿಂಪು ನೀಡುತಿಹುದು
ಪುಟ್ಟ ಪಾದದಿ ನಲಿವ ಗೆಜ್ಜೆಯ ನಾದದಂತಿಹುದು
ಹಸಿರ ಕಾನನದ ನಡುವೆ ರವಿ ರಶ್ಮಿಯ ಮಾಟವು
ಮುಳ್ಳಯ್ಯನಗಿರಿಯ ಸೊಬಗು ಭೂಲೋಕದ ಸ್ವರ್ಗವು
ಖಗ ಮೃಗಗಳ ನಲಿದಾಟ ಪಕ್ಷಿಗಳಿಂಪಿನ ರಾಗವು
ಸೋಜಿಗದ ಚಲುವಲ್ಲಿ ತೇಲಾಡಿದೆ ತನುಮನವು
ಮೈಮನ ಪುಳಕಿತಗೊಳ್ಳುವ ಸೊಬಗಿನೈಸಿರಿ
ಮಲೆನಾಡಿನಲಿ ಮೈದಳೆವುದು ಈ ವನರಾಶಿ
ಮನಸೂರೆಗೊಳ್ಳುವ ಸೌಂದರ್ಯ ಈ ಸನ್ನಿಧಾನವು
ಮಲೆನಾಡಿನ ಮಧುವೈಸಿರಿಯು ಈ ತಾಣವು
-ಆಶಾ ಶಿವು ಬೆಂಗಳೂರು