|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅವಕಾಶವೂ ಅದೃಷ್ಟವೂ: ಸಾಧನೆಯ ಹಿಂದೆ ಇರುತ್ತದೆ ಹಲವು ಆಯಾಮ

ಅವಕಾಶವೂ ಅದೃಷ್ಟವೂ: ಸಾಧನೆಯ ಹಿಂದೆ ಇರುತ್ತದೆ ಹಲವು ಆಯಾಮ


ಅವಕಾಶ ಬೇರೆ ಅದೃಷ್ಟ ಬೇರೆ. ಅವಕಾಶ ಇದ್ದವರೆಲ್ಲ ಅದೃಷ್ಟವಂತರಾಗದೇ ಇರಬಹುದು. ಆದರೆ ಅದೃಷ್ಟವಂತರೆಲ್ಲ ಅವಕಾಶದಿಂದಲೇ ಮೇಲೆ ಬರಬೇಕು. ಅದೃಷ್ಟ ಎಂದರೆ ದೃಷ್ಟಿಗೆ ಗೋಚರಿಸದಿರುವುದು. ಆದರೆ ಅವಕಾಶ ಹಾಗಲ್ಲ ಕಣ್ಣೆದುರೇ ಕಾಣಿಸುವುದು. ಯಾರು ಅವಕಾಶವನ್ನು ಸದುಪಯೋಗಪಡಿಸಿ ಕೊಳ್ಳುವನೋ ಆತನೇ ಸಾಧಕನಾಗುತ್ತಾನೆ. ಬರಿದೆ ಅದೃಷ್ಟವೆಂದು ಕೂತರೆ ಸಾಧನೆಯಿಂದಲೇ ಅದೃಶ್ಯನಾಗುತ್ತಾನೆ. ಅವಕಾಶಗಳು ಎಲ್ಲರಿಗೂ ಸಿಗುವುದಿಲ್ಲ. ಅದರ ಹಿಂದೆ ಹಲವಾರು ಆಯಾಮಗಳಿರುತ್ತವೆ. ಅದೃಷ್ಟ ಒಳ್ಳೆಯದಿದ್ದರೆ ಒಳ್ಳೆಯ ಅವಕಾಶಗಳು ಸಿಗುವಂತೆ, ಅದೃಷ್ಟಹೀನರಿಗೆ ಸಿಕ್ಕ ಅವಕಾಶಗಳೂ ತಪ್ಪಿ ಹೋಗುವುದಿದೆ. ಸಾಧನೆಯಿಂದಲೇ ಉತ್ತುಂಗಕ್ಕೆ ಏರುವವರು ಕೆಲವರಾದರೆ, ಯಾರದೋ ಸಾಧನೆಯ ಫಲವನ್ನು ಉಪಯೋಗಿಸಿಕೊಂಡು ಮೇಲೇರುವವರು ಕೆಲವರು. ಇಲ್ಲಿ ಏಕಲವ್ಯನೂ ಇದ್ದಾನೆ. ಆತನ ಶ್ರೇಯಸ್ಸನ್ನು ಬಯಸದಿರುವ ಅರ್ಜುನನೂ ಇದ್ದಾನೆ. ತನ್ನ ಶಿಷ್ಯನೇ ಸರ್ವಶ್ರೇಷ್ಠನಾಗಬೇಕೆಂಬ ಸಂಕುಚಿತ ಮನೋಭಾವದ ದ್ರೋಣನೂ ಇದ್ದಾನೆ. ಇವೆಲ್ಲದರ ನಡುವೆ ಅವಕಾಶವನ್ನೇ ಸೃಷ್ಟಿ ಮಾಡಿ ವೀರನಾದಂಥ ಭಭ್ರುವಾಹನನೂ ಇದ್ದಾನೆ. ನಾವೇನಾಗಬೇಕೋ ಅದು ನಮ್ಮಿಂದಲೇ ಸಾಧ್ಯ. ಪೂರಕವಾಗಿ ಇನ್ನೊಬ್ಬರನ್ನು ಆಶ್ರಯಿಸಬಹುದೇ ಹೊರತು ಇನ್ನೊಬ್ಬನಿಂದಲೇ ನಮ್ಮ ಸಾಧನೆ ಯಾವತ್ತೂ ಪೂರ್ಣವಾಗದು.  


ಕೆಲವರಲ್ಲಿ ಯಾವುದೇ ಸಾಧನೆಗಳಿಲ್ಲದಿದ್ದರೂ ಅವಕಾಶಗಳು ಹೇರಳವಾಗಿ ದೊರಕುತ್ತವೆ. ಇದು ರಾಜಕೀಯದಲ್ಲಿ ಕಂಡು ಬರುವ ಸಾಮಾನ್ಯ ವಿಚಾರ. ಇಲ್ಲಿ ಆಗಿ ಹೋದಂಥ ಅಥವಾ ಪ್ರಸ್ತುತ ಇರುವಂಥ ಮಂತ್ರಿಗಳಿರಬಹುದು ರಾಜಕೀಯ ನಾಯಕರಿರಬಹುದು ಇವರಲ್ಲಿ ಹೆಚ್ಚಿನವರು ಅದೃಷ್ಟ ಎಂಬ ಅರ್ಹತೆಯಿಂದ ಬಂದವರಾದರೆ, ಸಾಧನೆಗಳಿಂದ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ಬಂದವರು ಬೆರಳೆಣಿಕೆಯಷ್ಟು ಜನರು ಮಾತ್ರ. ಇಲ್ಲಿ ನೆಹರೂ ಇದ್ದಾರೆ ವಲ್ಲಭಭಾಯ್ ಪಟೇಲರೂ ಇದ್ದಾರೆ. ದೇವೇಗೌಡರೂ ಇದ್ದಾರೆ ವಾಜಪೇಯಿಜಿಯೂ ಇದ್ದಾರೆ. ರಾಹುಲ್ ಗಾಂಧಿಯೂ ಇದ್ದಾರೆ ಮೋದೀಜಿಯವರೂ ಇದ್ದಾರೆ. ಯಾರ ಯಾರ ಸಾಧನೆ ಏನೇನೆಂಬುದು ಓದುಗರಿಗೆ ಬಿಟ್ಟ ವಿಚಾರ. ಅದೇರೀತಿ ನಮ್ಮ ದೈನಂದಿನ ವ್ಯವಹಾರಗಳಲ್ಲೂ ಇದರ ಪರಿಚಯ ನಮಗಾಗುತ್ತಲೇ ಇರುತ್ತದೆ. ರೈತನಾದವನು ಸಾಧನೆಯಿಂದ ಹಲವು ಬೆಳೆಗಳನ್ನು ಬೆಳೆಸಿ ಇನ್ನೇನು ಫಸಲು ಕೈಗೆ ಸಿಗುತ್ತದೆ ಎಂದಾಗ ಅತಿವೃಷ್ಟಿಯೋ, ಅನಾವೃಷ್ಟಿಯೋ, ಕೀಟ-ರೋಗಗಳ ಬಾಧೆಯೋ, ಕಳ್ಳತನವೋ ಯಾವುದೋ ಒಂದರ ಪರಿಣಾಮದಿಂದ ಫಲ ದಕ್ಕದೇ ಇರುವುದಿದೆ. ಇಂಥ ಘಟನೆಗಳು ಅವಕಾಶವಿದ್ದರೂ ಅದೃಷ್ಟ ಕೈ ಕೊಡಬಹುದಾದಂಥವು. ಇನ್ನು ಕೆಲವೊಮ್ಮೆ ಆಗಬಾರದ್ದು ಆದರೂ ಪರಿಣಾಮ ಮಾತ್ರ ಒಳ್ಳೆಯದೇ ಆಗಿರುತ್ತದೆ. ಅಥವಾ ಕೆಟ್ಟದ್ದನ್ನೂ ಒಳ್ಳೆಯದನ್ನಾಗಿ ಪರಿವರ್ತಿಸುವ ಅವಕಾಶವನ್ನು ಸೃಷ್ಟಿಸುವವರೂ ಇದ್ದಾರೆ. ಉದಾಹರಣೆಗೆ ಇತ್ತೀಚಿನ ಲಾಕ್ಡೌನ್ ಎನ್ನುವಂಥದ್ದು. ಇದು ಹಲವರ ಅನ್ನ ಕಸಿದರೆ ಹಲವರಿಗೆ ಅನ್ನ ಕೊಟ್ಟಿದೆ. ಹಲವರು ಆಸ್ತಿ-ಪಾಸ್ತಿ, ಪ್ರಾಣ ಕಳಕೊಂಡರೆ, ಹಲವರು ಆಸ್ತಿ-ಪಾಸ್ತಿ ಮನೆ ಮಾಡಿಕೊಂಡವರೂ ಇದ್ದಾರೆ. ಯಾರಾತ ಅನ್ಯರ ದೌರ್ಬಲ್ಯವನ್ನು ಅವಕಾಶವಾಗಿ ಪರಿವರ್ತಿಸುವನೋ ಆತನು ಯಾವಾಗಲೂ ವ್ಯವಹಾರದಲ್ಲಿ ಸೋಲುವುದು ಕಡಿಮೆ. ಅವಕಾಶ ಎನ್ನುವುದು ಸಾಧಕನ ಹೆಬ್ಬಾಗಿಲು. ಉಪಯೋಗಿಸಿಕೊಂಡರೆ ಉನ್ನತಿ, ಉಪೇಕ್ಷಿಸಿದರೆ ಅವನತಿ.  


ಇದನ್ನು ಇನ್ನೊಂದು ದೃಷ್ಟಿಯಿಂದ ನೋಡಿದರೆ ಇನ್ನೊಂದು ಸತ್ಯವೇ ಕಾಣುತ್ತದೆ. ನಾವು ಹಿಂದೂಗಳಾದವರು ಪುನರ್ಜನ್ಮದಲ್ಲಿ ನಂಬಿಕೆ ಇರುವವರು. ಪ್ರತಿಯೊಂದು ಜೀವಿಯ ಉದಯವೂ ಪೂರ್ವಜನ್ಮದ ಮುಂದುವರಿಕೆಯೇ ಆಗಿದೆ. ಅಥವಾ ಹಿಂದಿನ ಜನ್ಮಗಳ ಕರ್ಮಫಲಗಳ ಲೆಕ್ಕಾಚಾರ ಚುಕ್ತಾ ಮಾಡಲು ದೇವ ಕೊಡುವ ಅವಕಾಶವೂ ಆಗಿದೆ. ಇಲ್ಲಿ ಎಲ್ಲರೂ ಸ್ವತಂತ್ರರು ಹೌದು. ಅದೇ ಕಾಲಕ್ಕೆ ಎಲ್ಲರೂ ಪರತಂತ್ರರೂ ಹೌದು. ಭೂಮಿಯಲಿ ಕರಕೊಂಡು ಬಂದು ಬಿಟ್ಟಂಥ ದೇವ ಬರಿದೆ ಬಿಟ್ಟು ಹೂರಟು ಹೋಗುವುದಿಲ್ಲ. ಬದಲಾಗಿ ಬದುಕುವ ಎಲ್ಲ ಅವಕಾಶಗಳನ್ನೂ ಕೊಟ್ಟು ಹೋಗುತ್ತಾನೆ. ನಾವು ಅಂಥ ಅವಕಾಶಗಳನ್ನು ಕೈಚೆಲ್ಲಿ ಕುಳಿತಾಗ ದೇವನಾದರೂ ಏನೂ ಮಾಡಲಾರ. ಆತನ ಜವಾಬ್ದಾರಿ ವ್ಯವಸ್ಥೆ ಮಾಡಿಕೊಡುವುದು ಮಾತ್ರ. ವ್ಯವಸ್ಥೆಯನ್ನು ಉಪಯೋಗಿಸಿಕೊಳ್ಳುವ ಜಾಣತನ ನಮ್ಮ ಸ್ವ ಇಚ್ಛೆಗೆ ಬರಬೇಕು. ಸರ್ವಶಕ್ತನಾದರೂ ದೇವ ನಮಗೂ ಒಂದಷ್ಟು ಸ್ವಾತಂತ್ರ್ಯ ಕೊಟ್ಟು ನಿರ್ಲಿಪ್ತನಾಗಿರುತ್ತಾನೆ. ಮಾತ್ರವಲ್ಲ ಅದಕ್ಕೆ ಸಾಕ್ಷಿಯೂ ಆಗಿರುತ್ತಾನೆ. ಪ್ರತಿಯೊಂದು ಜೀವಿಯ ಉನ್ನತಿಯೂ ಬೇರೆಬೇರೆಯದ್ದೇ ಆಗಿರುವಾಗ ಒಬ್ಬನ ಅವಕಾಶವೇ ಇನ್ನೊಬ್ಬನದೂ ಆಗಬೇಕೆಂದಿಲ್ಲ, ಆಗುವುದೂ ಇಲ್ಲ. ಅದೃಷ್ಟದಿಂದ ಎಲ್ಲರೂ ಉದ್ಧಾರವಾಗುತ್ತಾರೋ ಇಲ್ಲವೋ ಆದರೆ ಅವಕಾಶಗಳ ಸದ್ಬಳಕೆಯಿಂದ ಆತ್ಮೋನ್ನತಿ ಖಂಡಿತ ಸಾಧ್ಯ. ಅದೇರೀತಿ ಪ್ರತಿಯೊಂದು ಜಾತಿಗೂ ಇರಬಹುದು, ಪ್ರತಿಯೊಂದು ಸ್ವಭಾವಕ್ಕೂ ಇರಬಹುದು, ಪ್ರತಿಯೊಂದು ಪ್ರಾಣಿಗೂ ಇರಬಹುದು ಸ್ವತಂತ್ರವಾಗಿ ಬದುಕುವ ಹಕ್ಕು ಇರುವಂತೆ, ಸ್ವತಂತ್ರವಾದ ಮೋಕ್ಷದ ದಾರಿಯೂ ಇದೆ. ನಾವು ಯಾವ ಪರಿಸರ ಅಥವಾ ಸಂಸ್ಕಾರದಲ್ಲಿ ಜನಿಸುವೆವೊ ಅದು ದೈವೇಚ್ಛೆ. ಜನಿಸಿದೊಡನೆ ನಮ್ಮ ಪಾಲಿನ ಕರ್ಮವನ್ನು ತರ್ಕ ವಾದಗಳನ್ನು ಮಾಡಿ ತಪ್ಪಿಸಿಕೊಳ್ಳುವುದೋ, ದೇವನಿತ್ತ ಅವಕಾಶಗಳನ್ನುಪಯೋಗಿಸಿ ತರ್ಕಾತೀತವಾಗಿ ನಿಯತ ಕರ್ಮವನು  ಮಾಡುವುದೋ ಅದು ನಮ್ಮಿಚ್ಛೆ. ಇಲ್ಲಿ ದೇವನೇನನ್ನೂ ಹೇಳಲಾರ. ಆತ ಬರಿದೆ ಸಾಕ್ಷಿ ಮಾತ್ರ. ಯಾಕೆಂದರೆ ದೇವನಾದವನು ಯಾವುದೇ ಕೆಟ್ಟ ಕೆಲಸ ಮಾಡಲು ಪ್ರೇರೇಪಿಸಲಾರ, ಅಂತೆಯೇ ಒಳ್ಳೆಯ ಕೆಲಸಕ್ಕೂ ಪ್ರೇರೇಪಿಸಲಾರ. ಆತ ತಟಸ್ಥನಾದರೂ ಮಾಡಿದ ಕರ್ಮಕ್ಕೆ ಫಲವನ್ನು ಮಾತ್ರ ಒಂದಿನಿತೂ ದಯೆಯಿರದೆ ನೀಡುವುದು ಕೂಡ ಅಷ್ಟೇ ಸತ್ಯ. 

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


ಆದ್ದರಿಂದ ನಮ್ಮ ಒಳಿತು ಕೆಡುಕು ನಮ್ಮಲ್ಲೇ ಇದೆ. ದೇವನೆಂದರೆ ಕ್ರಿಕೆಟ್ನಲ್ಲಿ ಅಂಪೈರ್ ಇರುವಂತೆ. ಬ್ಯಾಟ್ಸ್ಮನ್  ಸಿಕ್ಸರ್ ಬಾರಿಸಿದಾಗಲೂ, ಔಟಾದಾಗಲೂ, ಬೌಲರ್ ವಿಕೆಟ್ ಕಬಳಿಸಿದಾಗಲೂ, ಕ್ಷೇತ್ರ ರಕ್ಷಕ ಕ್ಯಾಚ್ ಹಿಡಿದಾಗಲೂ ತನಗೇನೂ ಆಗಿಲ್ಲವೆಂಬಂತೆ ತಟಸ್ಥನಾಗಿದ್ದರೂ ಫಲವನ್ನು ಕೂಡಲೇ ನೀಡುವಂತೆ ದೇವನೂ ನಮಗಿರುವನು. ಸಿಕ್ಸರ್ ಬಾರಿಸಿದಾಗ ಅಂಪೈರ್ ಖುಷಿ ಪಡಬಹುದು, ಮನುಜ ಒಳ್ಳೆಯ ಕೆಲಸ ಮಾಡುವಾಗ ದೇವ ತೃಪ್ತನಾದಂತೆ. ಆಟಗಾರ ತಪ್ಪುಆಡಿ ಔಟಾದಾಗ ಅಂಪೈರ್ ಗೆ ಬೇಸರವಾಗಬಹುದು, ಮನುಜ ಕೆಟ್ಟ ಕೆಲಸದಿಂದ ಚಡಪಡಿಸುವಾಗ ದೇವ ಅತೃಪ್ತನಾದಂತೆ.


ಹಾಗೆಂದು ತಮ್ಮ ಭಾವೋದ್ವೇಗವನ್ನು ಅಂಪೈರ್ ಗೂ ದೇವನಿಗೂ ಪ್ರಕಟ ಪಡಿಸಲಾಗದು. ಆದ್ದರಿಂದ ಅದೃಷ್ಟ, ದೇವರ ದಯೆ, ಜ್ಯೋತಿಷ್ಯ, ವಾಸ್ತು, ದೋಷ ಪರಿಹಾರ ಮುಂತಾದ ವಿಚಾರಗಳಲ್ಲಿ ತಲೆ ಹಾಕದೆ, ಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ ಸತ್ಯವನ್ನು ಮನನ ಮಾಡಿಕೊಂಡರೆ, ತನ್ನ ಉನ್ನತಿಗೆ ತಾನೇ ಕಾರಣ ಎಂಬ ಸತ್ಯ ಅರಿತರೆ, ತನ್ನ ಕರ್ತವ್ಯ ಲೋಪಕ್ಕೆ ಇನ್ನೊಬ್ಬನನ್ನು ಹೊಣೆಯನ್ನಾಗಿಸದಿದ್ದರೆ, ತನ್ನನ್ನು ಇತರರಿಗೆ ಹೋಲಿಸದೆ ತನ್ನಂತೆ ತಾನೊಬ್ಬನೇ ಎಂದರಿತರೆ ಅದೃಷ್ಟವೂ ಅವಕಾಶವೂ ನಮ್ಮ ಅಂಕೆಯಲ್ಲಿರುವುದಕ್ಕೆ ಸಂಶಯವೇ ಇಲ್ಲ.. ಯೋಚಿಸಬೇಕಲ್ಲವೇ? 

-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ


web counter

0 Comments

Post a Comment

Post a Comment (0)

Previous Post Next Post