|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಚಿತ್ಪಾವನರ ಅಸ್ತಿತ್ವ- ಆಚಾರ ವಿಚಾರ ಭಾಷೆ ಸಂಸ್ಕೃತಿ ಧಾರ್ಮಿಕ ಸಂಪ್ರದಾಯ

ಚಿತ್ಪಾವನರ ಅಸ್ತಿತ್ವ- ಆಚಾರ ವಿಚಾರ ಭಾಷೆ ಸಂಸ್ಕೃತಿ ಧಾರ್ಮಿಕ ಸಂಪ್ರದಾಯ


ಪ್ರಪಂಚದಲ್ಲಿ ನಾನಾ ತರಹದ ಜನಾಂಗ ಇರುವಂತೆಯೇ ಭಾರತದಲ್ಲೂ ಅನೇಕ ತರಹದ ಜನಾಂಗವಿದೆ, ಅದರಲ್ಲಿ ನಮ್ಮ ಚಿತ್ಪಾವನ ಜನಾಂಗವೂ ಒಂದು. ಅದರಲ್ಲೂ ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಂಡುಬರುವಂಥ ಚಿತ್ಪಾವನ ವರ್ಗವೇ ಇನ್ನೊಂದು ರೀತಿಯದ್ದು. ಇವರೆಲ್ಲರೂ ಯಾವುದೋ ಕಾಲಘಟ್ಟದಲ್ಲಿ ಯಾವುದೋ ಕಾರಣಗಳಿಂದ ಮಹಾರಾಷ್ಟ್ರದಿಂದ ವಲಸೆ ಬಂದವರೆಂದು ಪ್ರತೀತಿ, ಅಥವಾ ವಾಸ್ತವವೂ ಇರಬಹುದು. ನಾವಿಂದು ಚಿತ್ಪಾವನರೆಂದು ಗುರುತಿಸಿಕೊಳ್ಳುವುದು ಇವರನ್ನೇ. ಮಹಾರಾಷ್ಟ್ರದಲ್ಲಿ ನಮ್ಮ ಮೂಲ ನಿವಾಸಿಗಳು ಇದ್ದರೂ ಅವರ ಸಂಪರ್ಕ ಕಡಿದು ಕೆಲವು ಶತಮಾನಗಳೇ ಆದುದರಿಂದ ನಮ್ಮ ಭಾಷೆ, ಆಚಾರ ವಿಚಾರಗಳು, ನಡೆ ನುಡಿಗಳು, ವೇಷ ಭೂಷಣಗಳು, ಸಂಪ್ರದಾಯಗಳು ಎಲ್ಲವೂ ಬದಲಾದವು. ಸ್ಥಳೀಯರಾದ ತುಳುವರ, ಕೊಂಕಣಸ್ಥರ, ಬುಡಕಟ್ಟು ಜನಾಂಗದವರ ಜತೆಗೆ ಬದುಕಿದ್ದರಿಂದ ಎಲ್ಲರ ಸಂಪ್ರದಾಯಗಳನ್ನು ನಾವು ಕಾಲೋಚಿತವಾಗಿ ಸ್ವೀಕರಿಸಿದ್ದರಿಂದ ವಿಶಿಷ್ಟವಾದ ಒಂದು ಸಂಸ್ಕೃತಿ ನಮ್ಮದಾಯಿತು.    


ಸಣ್ಣ ಸಣ್ಣ ಹಿಡುವಳಿದಾರಾಗಿದ್ದಂಥ ನಾವು ಅಲ್ಪ ತೃಪ್ತಿಯಿಂದ ಇದ್ದುದರಲ್ಲೇ ಹೊಂದಾಣಿಕೆ ಮಾಡಿಕೊಂಡು, ಸಮಾಜ ಬಾಂಧವರೊಡನೆ ಒಂದಾಗಿ ಬಾಳುತ್ತಿದ್ದರೂ ನಮ್ಮದೇ ಆದಂಥ ಜೀವನ ಶೈಲಿಯನ್ನು ಬಿಟ್ಟಿರಲಿಲ್ಲ. ನೂರಾರು ವರುಷಗಳೇ ನಮ್ಮತನದೊಂದಿಗೆ ಬದುಕಿದಂಥ ನಾವು ಇಂದು ಒಂದು ದೊಡ್ಡ ಪರಿವರ್ತನೆಯ ಹಾದಿಯಲ್ಲಿದ್ದೇವೆ. ನಾಗರಿಕತೆಯ ಹಲವಾರು ಬದಲಾವಣೆಗಳಿಂದ ಪ್ರಪಂಚದ ಜನಾಂಗವೇ ಅತಿ ಶೀಘ್ರವಾಗಿ ಹೊಸ ಹೊಸ ವ್ಯವಸ್ಥೆಗಳಿಗೆ ಹೊಂದಿಕೊಳ್ಳಲಾಗದೆ ಚಡಪಡಿಸುತ್ತಿರುವಂತೆ ನಾವು ಕೂಡ ಒಂದು ನಿರ್ಣಾಯಕ ಹಂತದಲ್ಲಿದ್ದೇವೆ. ಬಹುಶಃ ಒಂದು ಜನಾಂಗದ ಅಸ್ತಿತ್ವವಿರುವುದೇ ಸಂಪ್ರದಾಯಗಳಿಂದ, ಆಚರಣೆಗಳಿಂದ, ತನ್ನತನದ ಅಭಿಮಾನದಿಂದ ಅಂತೆಯೇ ಆರೋಗ್ಯವಂತ ಸಮಯೋಚಿತ ಬದಲಾವಣೆಗಳನ್ನು ಒಪ್ಪಿಕೊಳ್ಳುವುದರಿಂದ. ನೂರಾರು ವರ್ಷಗಳಿಂದ ಬಂದಂಥ ಆಚಾರ ವಿಚಾರಗಳು ಇಂದು ಹಠಾತ್ತಾಗಿ ನಿಂತು ಹೋಗುವ ಪರಿಸ್ಥಿತಿ ಬಂದರೆ ಅದು ಆರೋಗ್ಯಕರ ಬೆಳವಣಿಗೆ ಖಂಡಿತ ಅಲ್ಲ. ಸಾಧಾರಣ ಇಂದಿಗೆ ಐವತ್ತು ವರ್ಷಗಳಷ್ಟು ಹಿಂದಿನವರೇಗೆ ಚಿತ್ಪಾವನ ಸಂಸ್ಕೃತಿಯಲ್ಲಿ ಹೆಮ್ಮೆ ಪಡುವಂಥ ವಿಷಯಗಳೇ ಸಾಕಷ್ಟಿದ್ದವು. 


ಮನೆಗೆ ಅತಿಥಿ ಬಂದಾಗ ಆತನೊಡನೆ ವರ್ತಿಸುವುದರಿಂದ ತೊಡಗಿ ಜೀವನದ ಪ್ರತಿಯೊಂದು ಘಟ್ಟದಲ್ಲೂ ದೇಶಕಾಲಕ್ಕನುಗುಣವಾಗಿ ನಮ್ಮದೇ ಆದಂಥ ಅಥವಾ ನಮ್ಮ ವ್ಯವಹಾರವನ್ನು ನೋಡಿ ನಾವು ಚಿತ್ಪಾವನರೇ ಆಗಿರಬೇಕೆಂದು ತಿಳಿದುಕೊಳ್ಳುವಂಥ ನಡತೆ ನಮ್ಮಲ್ಲಿತ್ತು ಎನ್ನಲು ಹೆಮ್ಮೆ ಎನಿಸುತ್ತದೆ. ಹೆಂಗಸರು ಉಡುವ ಹದಿನೆಂಟು ಮೊಳದ ಕಚ್ಚೆ ಸೀರೆ, ಗಂಡಸರು ಉಡುವ ಕಚ್ಚೆ ವೇಷ್ಟಿ, ತಲೆಗೊಂದು ಕರಿಯ ಟೋಪಿ, ಹೆಗಲಿಗೊಂದು ಶಾಲು ಇದೆಲ್ಲ ಲಕ್ಷಣಗಳಿರುವವರೇ ಚಿತ್ಪಾವನರು ಎನಿಸಿದ್ದರು ಆ ಕಾಲದಲ್ಲಿ. ಮನೆಯ ಹಿರಿಯರು ಸಮಾಜದಲ್ಲಿ ಯಾವ ರೀತಿ ವರ್ತಿಸಬೇಕು ಎಂದು ಅವರೇ ನಡೆದು ತೋರಿಸುತ್ತಿದ್ದರು. ಅವರನ್ನು ನೋಡಿ ಸಹಜವಾಗಿ ಮಕ್ಕಳೂ ಅವರಂತೆ ಆಗುತ್ತಿದ್ದರು. ಉದಾಹರಣೆಗೆ ಮನೆಗೆ ಯಾರೇ ಅತಿಥಿಗಳು ಬಂದರೂ 'ಬನ್ನಿ ಕೂತುಕೊಳ್ಳಿ' ಎಂದು ಹೇಳಿ ಒಳಗೆ ಹೋಗಿ ಒಂದು ಚೆಂಬು ನೀರು, ಒಂದಷ್ಟು ಸಣ್ಣ ಬೆಲ್ಲದ ತುಂಡುಗಳು, ನೀರು ಕುಡಿಯಲು ಗ್ಲಾಸು ಇವಿಷ್ಟನ್ನು ಅತಿಥಿ ಕೇಳದೆಯೇ ತಂದಿಡುವ ಸಂಪ್ರದಾಯ. ಅದೇ ರೀತಿ ನೀರು ಕೊಡುವಾಗಲೂ ಎಡಗೈನಿಂದ ನೀರಿನ ಚೊಂಬನ್ನು ಹಿಡಿದು, ನೀರನ್ನು ಬಲಗೈಲಿರುವ ಗ್ಲಾಸಿಗೆ ಸುರಿದು ಕೊಡಬೇಕು. ಎಡಗೈಲಿ ಕೊಡುವಂತಿಲ್ಲ. ಹಾಗೆಯೇ ಪಾನೀಯಗಳನ್ನು ಎರಡು ಕೈಯಿಂದ ತಂದರೂ ಬಲಗೈನಲ್ಲಿ ಒಬ್ಬರಿಗೆ ಕೊಟ್ಟು ಎಡಗೈಲಿದ್ದದ್ದನ್ನು ಬಲಗೈಗೆ ಹಸ್ತಾಂತರಿಸಿ ಬಲಗೈಯಲ್ಲೇ  ಕೊಡಬೇಕು. ಇದೆಲ್ಲ ಸಣ್ಣ ಸಣ್ಣ ವಿಷಯವಾದರೂ ಅದರಲ್ಲೊಂದು ಶ್ರದ್ಧೆ ನಿಯಮ ಇದ್ದರೆ ಅಂಥ ಕ್ರಿಯೆಯೂ ಆತನ ಸಂಸ್ಕಾರವನ್ನು ತಿಳಿಸುತ್ತದೆ. ಚಿತ್ಪಾವನ ಸಮಾಜದಲ್ಲಿ ಇಂಥ ಹಲವಾರು ಸೂಕ್ಷ್ಮತೆಗಳು ಇಂದಿಗೂ ಉಳಿದುಕೊಂಡಿವೆಯಾದರೆ ಅಂದು ಹಿರಿಯರ ಮಾರ್ಗದರ್ಶನವೇ ಕಾರಣ.  


ಇನ್ನು ಊಟಕ್ಕೆ ಕೂತರೆ ಅಲ್ಲಿಯೂ ಹಲವಾರು ನಿಯಮಗಳಿವೆ. ಇದೆಲ್ಲವನ್ನೂ ನಾವು ಸಣ್ಣವರಿರುವಾಗ ಸಹಜವಾಗಿ ಪಾಲಿಸುತ್ತಿದ್ದೆವು. ಊಟದ ಪಂಕ್ತಿಯಲ್ಲಿ ಎಲ್ಲರಿಗೂ ಅವರವರದ್ದೇ ಆದಂಥ ಜಾಗಗಳಿದ್ದವು. ಅಲ್ಲಿ ಬೇರೆ ಯಾರೂ ಕೂರುವಂತಿಲ್ಲ. ಯಜಮಾನನ ಸ್ಥಾನ ಒಂದಾದರೆ ಅತಿಥಿಗಳ ಸ್ಥಾನ ಇನ್ನೊಂದು. ಯಜಮಾನ ಊಟ ಪ್ರಾರಂಭಿಸದೆ ಇತರರು ಪ್ರಾರಂಭಿಸುವಂತಿಲ್ಲ. ಊಟದ ಮಧ್ಯದಲ್ಲಿ ಬೇಕು ಬೇಡಗಳ ಹೊರತಾಗಿ ಅನ್ಯ ಮಾತಿಲ್ಲ. ಒಂದೆರಡು ಬಾರಿಯಾದರೂ ಗೋವಿಂದ ಸ್ಮರಣೆ. ಒಂದು ಸಲ ಬಡಿಸಿದ ವ್ಯಂಜನ ವಿಚಾರಣೆ ಆದ ಮೇಲೆ ಪುನಃ ಕೇಳುವಂತಿಲ್ಲ. ಮಜ್ಜಿಗೆ ಊಟದ ನಂತರ ಪುನಃ ಅನ್ನ ಬೇಕೆನ್ನುವಂತಿಲ್ಲ. ಊಟಕ್ಕೆ ನೀರು ಪ್ರತಿಯೊಬ್ಬರೂ ಇಟ್ಟುಕೊಳ್ಳಬೇಕು. ನೀರನ್ನು ಕಚ್ಚಿ ಕುಡಿಯುವಂತಿಲ್ಲ. ಯಜಮಾನ ಊಟವಾಗಿ ಏಳದೆ ಇತರರು ಏಳುವಂತಿಲ್ಲ... ಇತ್ಯಾದಿ. ಹಾಗೆಂದು ನಾವೆಲ್ಲರೂ ಈ ಅಲಿಖಿತ ನಿಯಮವನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದರೂ ಯಾರಿಗೂ ಇದು ಅತಿಯೆಂದೆನಿಸದೆ ಊಟದ ಕಾರ್ಯಕ್ರಮ ಬಹಳ ಸೊಗಸಾಗಿ ಹೊಟ್ಟೆ ತುಂಬುವಂತೆ ಆಗುತ್ತಿತ್ತು. ಅಲ್ಲದೆ ಊಟದಲ್ಲೇ ಗಮನವಿರುತ್ತಿದ್ದುದರಿಂದ ಎಲ್ಲ ವ್ಯಂಜನಗಳ ರುಚಿ ಹಾಗೂ ಹೊಟ್ಟೆ ತುಂಬಿದ ಅನುಭವವೂ ಆಗುತ್ತಿತ್ತು. ಮಾತ್ರವಲ್ಲ ಊಟವನ್ನು ಅನುಭವಿಸುತ್ತಿದ್ದೆವು. ಅಂತೆಯೇ ಮಾಡಿದಂಥ ವ್ಯಂಜನಗಳು ಎಲ್ಲರಿಗೂ ಸಮನಾಗಿ ಹಂಚಿ ಬಡಿಸಲೂ ಅನುಕೂಲವಾಗುತ್ತಿತ್ತು. ಊಟದ ವೇಳೆಯು ಪ್ರತಿ ನಿತ್ಯವೂ ಒಂದೇ ಆಗಿರುವುದರಿಂದ ಆರೋಗ್ಯವೂ ಚೆನ್ನಾಗಿರುತ್ತಿತ್ತು.  


ಪ್ರತಿಯೊಂದು ಮನೆಯಲ್ಲೂ ಬ್ರಾಹ್ಮಣರ ಸಂಪ್ರದಾಯಗಳೇ ಆಚರಣೆಯಲ್ಲಿದ್ದವು. ಹಬ್ಬಗಳು ಹರಿದಿನಗಳು, ಉಪವಾಸಾದಿ ವ್ರತಗಳು, ಸಾಯಂಕಾಲದಲ್ಲಿ ದೇವರ ಸ್ತೋತ್ರ ಭಜನೆ, ಗಂಡಸರ ಅಥವಾ ಉಪನಯನವಾದಂಥ ಮಾಣಿಗಳಿಂದ ಸಂಧ್ಯಾವಂದನೆ ಮುಂತಾದ ಎಲ್ಲವೂ ಎಲ್ಲರ ಮನೆಯಲ್ಲೂ ನಡೆಯುತ್ತಿತ್ತು ಏಕಪ್ರಕಾರವಾಗಿ.


ಹೀಗಿರುವ ಹಿನ್ನೆಲೆಯಿಂದ ಬಂದಂಥ ಚಿತ್ಪಾವನರು ಸಹಜವಾಗಿಯೇ ಬುದ್ಧಿವಂತರು, ಸಹನಶೀಲರು, ಸಂತೃಪ್ತರು ಆಗಿರುತ್ತಿದ್ದರೆ,  ಅದು ನಮ್ಮ ಹೆಗ್ಗಳಿಕೆ ಎಂದರೆ ತಪ್ಪಲ್ಲ. ಹಾಗಾದರೆ ಇವತ್ತು ನಾವು ನಾವಾಗಿಯೇ ಉಳಿದಿದ್ದೇವೆಯೇ ಎಂದರೆ, ಉತ್ತರ ಸಮಾಧಾನಕರವಾಗಿಲ್ಲವೆಂದೇ ಹೇಳಬೇಕು. ಇದು ಯಾಕೆ ಹೀಗೆ ಎಂದಾಗ ಕಾರಣಗಳು ಬಹಳವಿದೆ. ಆದರೆ ನನ್ನ ಅಭಿಪ್ರಾಯದಂತೆ ಮೊದಲನೆ ಕಾರಣವೇ ಕುಟುಂಬ ಯೋಜನೆ. ಚಿತ್ಪಾವನರು ಹೆಚ್ಚಿನವರೆಲ್ಲ ಕೃಷಿಕರಾಗಿದ್ದರಿಂದ, ಕೃಷಿಗೆ ಜನಬಲವೇ ಪ್ರಧಾನವಾಗಿದ್ದರಿಂದ ಈ ಕುಟುಂಬ ಯೋಜನೆ ಎನ್ನುವುದು ಕೃಷಿಕ್ಷೇತ್ರಕ್ಕೆ ಮಾರಕವೇ. ಹಾಗೆಂದು ಹಿಂದಿನಂತೆ ಎಂಟ್ಹತ್ತು ಮಕ್ಕಳ ಸಂಸಾರ ಬೇಕೆನ್ನುವುದಲ್ಲ ಆದರೆ ಕಡಿಮೆ ಪಕ್ಷ ಎರಡು ಮೂರು ಮಕ್ಕಳಾದರೂ ಕೃಷಿಕನಾದವನಿಗೆ ಅನಿವಾರ್ಯ. ಕುಟುಂಬ ಯೋಜನೆ ಎನ್ನುವ ಪರಿಕಲ್ಪನೆಯನ್ನು ಬಹುಷಃ ಚಿತ್ಪಾವನರಷ್ಟು  ಶೀಘ್ರವಾಗಿ ಯಾರೂ ಪರಿಗಣಿಸಿಲ್ಲ. ಹಿಂದೆ ಹತ್ತಾರು ಮಕ್ಕಳಿದ್ದಾಗ ಬಡತನ ಸಹಜವಾಗಿಯೇ ಇತ್ತು. ಒಂದು ಕಾರಣ ಸಣ್ಣ ಸಣ್ಣ ಆಸ್ತಿಗಳು, ದುಡಿಯವಂಥ ಕಾಯಬಲ ಕಡಿಮೆ ಇರುವುದು, ಆದಾಯ ಮೂಲಗಳ ಕೊರತೆ.. ಇತರ ಜನಾಂಗಕ್ಕೆ ಹೋಲಿಸಿದರೆ ಚಿತ್ಪಾವನರ ಕಾಯಬಲ ಅಷ್ಟಕ್ಕಷ್ಟೆ. ಆದ್ದರಿಂದ ಪೌರೋಹಿತ್ಯ, ಅಡುಗೆ, ಸಂಗೀತ ಮುಂತಾದ ಅನೇಕ ವೃತ್ತಿಗಳಲ್ಲಿ ತೊಡಗಿ ಅತ್ತ ಬೇಸಾಯ ಕೃಷಿಯನ್ನೂ ಮಾಡಿ ಇತ್ತ ಸಣ್ಣ ಕೃಷಿಯೇತರ ಆದಾಯದೊಡನೆ ಅವಿಭಕ್ತ ಕುಟುಂಬದ ಪರಿಕಲ್ಪನೆಯಲ್ಲಿ ಸೌಖ್ಯವನ್ನು ಕಾಣುತ್ತಿದ್ದವರು ನಾವು ಚಿತ್ಪಾವನರು. ಆಗ ನಮಗೆ ತೋಟದ ಕೆಲಸಕ್ಕೆ ಕಾರ್ಮಿಕರು ಸಿಗುತ್ತಿದ್ದರು. ಆದರೆ ಕ್ರಮೇಣ ಈ ಕುಟುಂಬ ಯೋಜನೆಯನ್ನು ಅವರು ಕೂಡ ಅನುಷ್ಠಾನಗೊಳಿಸಲು ಪ್ರಾರಂಭಿಸಿದ್ದರಿಂದ ಕಾರ್ಮಿಕರ ಸಮಸ್ಯೆ ಕಾಡಲಾರಂಭಿಸಿತು. ಯಂತ್ರಗಳಿಲ್ಲದೆ ಕೃಷಿ ಅಸಾಧ್ಯವೆನ್ನುವ ಇಂದಿನ ಮಟ್ಟಕ್ಕೆ ಬಂತು.  


ಅವಿಭಕ್ತ ಕುಟುಂಬದಲ್ಲಿ ಎಲ್ಲರೂ ಪರಸ್ಪರ ಹೊಂದಾಣಿಕೆಯಿಂದ ಇರಲೇಬೇಕು. ಆದ್ದರಿಂದ ಸಹಬಾಳ್ವೆ  ಎನ್ನುವುದು ಜನ್ಮದಾರಭ್ಯದಿಂದ ಬಂದಂಥ ನಿಯಮ. ಪ್ರತಿಯೊಬ್ಬರಿಗೂ ಕುಟುಂಬದ ಶ್ರೇಯಸ್ಸಿನ ಅಥವಾ ಅಭಿವೃದ್ಧಿಯ ಬಾಧ್ಯತೆ ಇರುತ್ತದೆ. ಆದ್ದರಿಂದ ಕುಟುಂಬ ಎಂಬ ಕಲ್ಪನೆಯಲ್ಲಿ ಯಜಮಾನನೂ ಸಂಪೂರ್ಣ ಸ್ವತಂತ್ರನಲ್ಲ. ಕುಟುಂಬದ ಸದಸ್ಯರ ಅಭಿಪ್ರಾಯಕ್ಕೂ ಬೆಲೆ ಕೊಡಬೇಕಾದುದರಿಂದ ಅವನು ಕೂಡ ಸ್ವತಂತ್ರನೂ ಹೌದು, ಪರತಂತ್ರನೂ ಹೌದು. ಆದರೆ ಯಾವಾಗ ಕುಟುಂಬಗಳು ಒಡೆದು (ಕಾರಣಗಳು ಏನೇ ಇರಬಹುದು) ಸ್ವತಂತ್ರವಾಗತೊಡಗಿದವೋ ಆವಾಗ ಸ್ವಾತಂತ್ರ್ಯವೆನ್ನುವುದು ಸ್ವೇಚ್ಛೆಯಾಯಿತು. ಸ್ವೇಚ್ಛಾಚರದಲ್ಲಿ ಬಾಧ್ಯತೆಗಳು ಕಳೆದು ಹೋದವು. ಬಾಧ್ಯತೆಯೇ ಇಲ್ಲದ ಮೇಲೆ ಬೇಕು ಬೇಡಗಳೂ ಒಬ್ಬನದೇ ನಿರ್ಧಾರಗಳಾದವು. ಅಲ್ಲಿಗೆ ಸಂಪ್ರದಾಯಗಳು ನಶಿಸಿದಂತೆಯೇ. ಹಾಗಾದರೆ ಪಟ್ಟಣ ಸೇರಿದವರೆಲ್ಲ ಸಂಪ್ರದಾಯ ಮುರಿದಿಹರೇ ಎಂದರೆ, ಇಲ್ಲ ಕೆಲವರಾದರೂ ಪಟ್ಟಣದಲ್ಲಿದ್ದೂ ಸಾಧ್ಯವಾದಷ್ಟು ಸಂಪ್ರದಾಯ ಆಚಾರ ವಿಚಾರಗಳನ್ನು ಪಾಲಿಸಿಕೊಂಡು ಬಂದವರೂ ಇದ್ದಾರೆ. ಅದೇರೀತಿ ಹಳ್ಳಿಯಲ್ಲಿದ್ದುಕೊಂಡು ಎಲ್ಲವನ್ನೂ ಬಿಟ್ಟವರೂ ಇದ್ದಾರೆ. ಎಂದರೆ ಮನಸ್ಸಿದ್ದರೆ, ಅಭಿಮಾನವಿದ್ದರೆ, ಚಿತ್ಪಾವನಿ ಸಂಸ್ಕೃತಿಯನ್ನು ಇನ್ನೂ ಹೆಚ್ಚು ಕಾಲ ಉಳಿಸಬಹುದು, ಅನುಭವಿಸಬಹುದು. 


ಇವತ್ತು ಇರುವ ಒಂದು ಅಥವಾ ಎರಡು ಮಕ್ಕಳ ಭವಿಷ್ಯ ಕೃಷಿಯಿಂದ ಸಾಧ್ಯವಿಲ್ಲವೆನ್ನುವ ಮಿಥ್ಯೆ ಎಲ್ಲರಲ್ಲೂ ಆವರಿಸಿದ್ದರಿಂದ, ನಗರದ ಆಕರ್ಷಣೆ ಜಾಸ್ತಿಯಾದ್ದರಿಂದ, ಹೆತ್ತವರಿಗೂ ಮಕ್ಕಳು ಪಟ್ಟಣವನ್ನೇ ಸೇರಬೇಕೆಂಬ ಅಭಿಲಾಷೆ ಇರುವುದರಿಂದ ಹೆಚ್ಚಿನ ಚಿತ್ಪಾವನರ ಮನೆಗಳು ವೃದ್ಧಾಶ್ರಮದ ಹಾದಿ ಹಿಡಿದಿವೆ. ಅವಿಭಕ್ತ ಕುಟುಂಬದಲ್ಲಿ ಸಂಸ್ಕಾರಗಳು ಹಿರಿಯರಿಂದ ಕಿರಿಯರಿಗೆ ಸಹಜವಾಗಿ ಹರಿದು ಬರುವುದರಿಂದ ಚಿತ್ಪಾವನರದ್ದೇ ಆದಂಥ ವೈಶಿಷ್ಟ್ಯಗಳು ತಲೆತಲಾಂತರದಿಂದ ಉಳಿದುಕೊಂಡಿತ್ತು. ಯಾವಾಗ ಮಕ್ಕಳು ನಗರಗಳಿಗೆ ವಲಸೆ ಪ್ರಾರಂಭಿಸಿದರೋ ಆಗ ಹಿರಿಯರಿಂದ ದೂರವಾಗಿ ಯಾವ ಮಾರ್ಗದರ್ಶನಗಳೂ ಸಿಗದೆ ಮುಂದಿನ ತಲೆಮಾರು ಅಂದರೆ, ಅವರ ಮಕ್ಕಳು ಅನಾಥರಾಗತೊಡಗಿದ್ದು  ನಮಗೆ ಅರಿವಾದಾಗ ನಮ್ಮ ಹಾದಿ ಹಿಂತಿರುಗಲಾರದಷ್ಟು ಕ್ರಮಿಸಿ ಆಗಿದ್ದು ನಮ್ಮ ದುರ್ದೈವ. ಪಟ್ಟಣಗಳಲ್ಲಿ ಗಂಡ ಹೆಂಡತಿ ದುಡಿಯಲು ಹೊರಗೆ ಹೋದಾಗ ಆದಾಯವೇನೋ ಬರುತ್ತದೆ. ಆದರೆ ಮುಂದಿನ ತಲಾಮಾರಿಗೆ ನಮ್ಮ ವಿಶಿಷ್ಟವಾದ ಸಂಸ್ಕಾರಗಳು ಸಿಗದೆ ಅತ್ತ ನಗರಕ್ಕೂ ಸಲ್ಲದ ಇತ್ತ ಹಳ್ಳಿಗೂ ಸಲ್ಲದ ಒಂದು ವಿಚಿತ್ರ ಮನಸ್ಥಿತಿಯ ಅಸಮತೋಲನ ಮಕ್ಕಳಲ್ಲಿ ಉಂಟಾಗುತ್ತದೆ. ಅಲ್ಲಿಗೆ ನಮ್ಮ ಸಂಸ್ಕಾರಗಳು ಕೈಬಿಟ್ಟು ಹೋದಂತೆ. ಇದೆಲ್ಲವನ್ನೂ ಒಂದೇ ಗುಟುಕಿಗೆ ಕಬಳಿಸುವಂತೆ ಮೊಬೈಲ್ ಎಂಬ ಮಾಯಾಜಾಲವೂ ಮಕ್ಕಳ ಅಥವಾ ಹಿರಿಯರ ಬಳಿ ಸೇರಿಕೊಂಡರಂತು ಕೇಳಬೇಕೇ. ಮೊಬೈಲ್ ಹಾಳು ಎನ್ನುವುದಲ್ಲ. ಆದರೆ ಅದರ ಬಳಕೆಯ ವಿಧಾನ ನಿರ್ಣಾಯಕವಾಗುತ್ತದೆ.    


ಮಕ್ಕಳು ನಗರ ಸೇರಿದಂತೆ ಊರು ಖಾಲಿಯಾಗತೊಡಗಿತು. ಚಿತ್ಪಾವನರ ಆಸ್ತಿ ಬದುಕು ನೋಡಿಕೊಳ್ಳುವವರಿಲ್ಲದೆ ಅನ್ಯರ ಪಾಲಾಗತೊಡಗಿತು. ಅದರೊಡನೆ ಶತಶತಮಾನಗಳ ಭದ್ರತೆಯ ಕೋಟೆ ಬಿರುಕು ಬಿಟ್ಟದ್ದು ಮಾತ್ರವಲ್ಲ ಕೆಲವು ಕಡೆ ಧರಾಶಾಹಿಯೂ ಆಯಿತು. ತಳಪಾಯವೇ ಕುಸಿಯುತ್ತಿರುವಾಗ ಸಂಸ್ಕಾರ, ಆಚಾರ ವಿಚಾರ, ಸಂಸ್ಕೃತಿ, ಸಂಪ್ರದಾಯ ಎಲ್ಲವೂ ಕುಸಿಯುವುದರಲ್ಲಿ ಸಂದೇಹವಿಲ್ಲ. ಹಾಗಾದರೆ ನಮ್ಮ ಚಿತ್ಪಾವನರ ವಿಶಿಷ್ಟವಾದ ಸಂಸ್ಕೃತಿ ಬಹುಷಃ ಕಾಲಗರ್ಭದಲ್ಲಿ ಲೀನವಾಗುವ ದಿನಗಳು ಬಹಳ ದೂರವಿರದು. ಕೃಷಿ ಎಂದಮೇಲೆ ಹಟ್ಟಿ, ದನಕರು, ಬೆಕ್ಕು, ನಾಯಿ, ನೆರೆಕರೆ, ಇತ್ಯಾದಿ ಸಮಷ್ಟಿಯಾದ ವ್ಯವಸ್ಥೆ ಬೇಕು. ಇದರಲ್ಲಿ ಯಾವುದೇ ಒಂದು ಊನವಾದರೂ ಕೃಷಿ ಅಸಾಧ್ಯ. ಹಿಂದೆ ಹಲವಾರು ಮಕ್ಕಳಿದ್ದುದರಿಂದ ಎಲ್ಲರಿಗೂ ವಿದ್ಯೆ ಕಲಿಯುವ ಅವಕಾಶಗಳಿಲ್ಲದಿದ್ದುದರಿಂದ  ಕೆಲವರಾದರೂ ದನಕರು ಹಟ್ಟಿ ಕೃಷಿಯೆಂದು ಮನೆಯಲ್ಲಿರುತ್ತಿದ್ದರು. ಕೃಷಿಕನಾದರೂ ಮದುವೆಯಾಗಲು ಹೆಣ್ಣುಗಳು ಸಿಗುತ್ತಿದ್ದುದರಿಂದ ಮನೆತನಗಳು ಉಳಿದಿದ್ದವು. 


ಈಗಿನ ಹೊಸ ತಲೆಮಾರಿಗೆ ಹಿಂದಿನ ಆಚರಣೆಗಳೆಲ್ಲ ಅವೈಜ್ಞಾನಿಕವಾಗಿ ಕಾಣಲಾರಂಭಿಸಿದ್ದು, ದೇವರು, ದೈವ, ಪಿತೃಗಳಿಗೆ ಮಾಡುವ ಶ್ರಾದ್ಧ, ಹಬ್ಬಗಳು, ಶಿಷ್ಟಾಚಾರಗಳು ಇದರಲ್ಲಿರುವ ನಂಬಿಕೆಗಳು ಮೂಢವೆಂದು ಆಧುನಿಕರು ಪರಿಗಣಿಸಿದ್ದು ಸಂಸ್ಕೃತಿ ನಾಶಕ್ಕೆ ಕಾರಣವಾಗಿದೆ. ಹಿಂದಿನ ಆಚಾರ ವಿಚಾರಗಳಲ್ಲಿದ್ದ ಸತ್ಯವನ್ನು ಕಾಣದೆ ಮೂಢರಾದವರು ನಂಬಿಕೆಯನ್ನೇ ಮೂಢವೆಂದು ಹೇಳಿದಾಗ ಅದು ಸತ್ಯವಾಗುವುದೇ.? ಹಿಂದಿನವರ ಶ್ರದ್ಧೆ ಅರ್ಥವಾಗದಿದ್ದಾಗ ಅದನ್ನು ಪ್ರಶ್ನಿಸುವುದು ತಪ್ಪಲ್ಲ. ಆದರೆ ಕಿರಿಯರ ಪ್ರಶ್ನೆಗಳಿಗೆ ಹಿರಿಯರಾದವರು ಸರಿಯಾದ ಉತ್ತರ ಕೊಡುವಲ್ಲಿ ವಿಫಲರಾದರೆ ಅಂಥ ಶ್ರದ್ಧೆಗಳನ್ನು ಯುವಜನ ಅಂಧ ಶ್ರದ್ಧೆ ಎಂದರೆ ಅದರಲ್ಲಿ ಹೆತ್ತವರ ಪಾಲೂ ಇದೆ. ಆದ್ದರಿಂದ ನಾವೇನು ಮಾಡುವೆವೊ ಅದನ್ನು ತಿಳಿದು ಮಾಡಿದಾಗ ನಮ್ಮ ಸಂಪ್ರದಾಯಗಳು ಸುಸಂಸ್ಕೃತವಾಗಿರುವುದಕ್ಕೆ ಸಾಧ್ಯ. 


ಶ್ರದ್ಧೆ ಅಂಧವೋ, ನಂಬಿಕೆ ಮೂಢವೋ ಅಥವಾ ಶ್ರದ್ಧೆ ನಂಬಿಕೆ ಇರದೆ ಮೂಢರಾದರೋ ತಿಳಿದವರಾರು. ದಾಸರು ಹೇಳಿದಂತೆ ಮನವ ಶೋಧಿಸಬೇಕು ನಿತ್ಯ. ನಾವು ವಿಜ್ಞಾನ ಎಂದುಕೊಂಡು ಹೊರಟರೆ ವಿಜ್ಞಾನ ಕೂಡ ಈ ಕ್ಷಣದವರೆಗೆ ಏನಿದೆಯೋ ಅದು ನಾಳೆ ಬದಲಾಗಲೂ ಬಹುದು ಎಂದು ಹೇಳುವಾಗ, ಬದಲಾದ ಗಳಿಗೆಯಿಂದ ಹಿಂದಿನ ವಿಚಾರ ಮೂಢವೇ ತಾನೆ. ಕೆಲವೊಂದು ವಿಚಾರಗಳನ್ನು ನಾವು ಅತಿಯಾಗಿ ಪ್ರಶ್ನಿಸಲಾಗದು. ತನಗೂ ಸಮಾಜಕ್ಕೂ ಕೆಡುಕಾಗದಿದ್ದರೆ ಸಂಪ್ರದಾಯಗಳನ್ನು ಪಾಲಿಸುವುದರಲ್ಲಿ ಅರ್ಥವಿದೆ. ಹಾಗೆ ನೋಡಿದರೆ ಇಂದಿನ ಕಾಲದಲ್ಲಿ ಕೂಡ ಅನೇಕ ವಿಚಾರಗಳನ್ನು ಪ್ರಶ್ನಿಸದೆ ಒಪ್ಪಿಕೊಂಡಿರುವ ನಾವು ಅದನ್ನು ಮೂಢ ನಂಬಿಕೆ ಎನ್ನುವುದಿಲ್ಲ. ಕಾರಣ ಇದು ವರ್ತಮಾನದ ಬದುಕು. ಉದಾಹರಣೆಗೆ ಸಮವಸ್ತ್ರ ತೊಡದಿದ್ದರೆ ಪಾಠ ಕಲಿಯಲಾಗದೆ? ಖಾಕಿ ವಸ್ತ್ರ ತೊಡದಿದ್ದರೆ ಪೋಲಿಸರಿಗೆ ಅಪರಾಧಿಗಳನ್ನು ಹಿಡಿಯಲಾಗದೆ? ಲುಂಗಿ ಉಟ್ಟುಕೊಂಡರೆ ವೈದ್ಯ ವೃತ್ತಿ ಅಸಾಧ್ಯವೇ? ಅಂಗಿ ಹಾಕದೆ ಯಾಕೆ ಊಟ ಮಾಡಬೇಕು? ಬಣ್ಣದ ಅಂಗಿ ಹಾಕಿದಾಗ ವಾಹನ ಚಲಾಯಿಸಲಾಗದೆ? ಇದೆಲ್ಲ ಪ್ರಶ್ನೆಗಳಿಗೆ ಉತ್ತರವಿದ್ದರೂ ದೇಶ ಕಾಲಕ್ಕನುಗುಣವಾಗಿ ನಡೆದುಕೊಂಡು ಹೋಗುವ ರೀತಿಯಲ್ಲೇ ವರ್ತಿಸುವುದು ತಾನೆ ನಾಗರಿಕತೆ. ಯಾವ ಯಾವ ವೃತ್ತಿಗೆ ಯಾವ ಯಾವ ನಿಯಮಗಳಿವೆಯೋ ಅದನ್ನು ಆಚರಿಸುವುದು ಮೂಢನಂಬಿಕೆ ಅಲ್ಲ. ಅದು ಶಿಸ್ತು ಮತ್ತು ಜವಾಬ್ದಾರಿ ಎನಿಸುವುದು. ಆದ್ದರಿಂದ ನಾವು ನಮ್ಮ ಸಂಸ್ಕೃತಿಯನ್ನುಳಿಸಿಕೊಳ್ಳಬೇಕಾದರೆ ಕೆಲವೊಂದು ಹಳೆ ಸಂಪ್ರದಾಯಗಳಿಗೆ ಮೂಢನಂಬಿಕೆ ಎನ್ನದೆ ಆಚರಿಸಲೇಬೇಕು.


ಇನ್ನು ಭಾಷೆ ಎನ್ನುವಲ್ಲಿಗೆ ಬಂದರೆ, ನಮ್ಮ ಚಿತ್ಪಾವನಿ ಭಾಷೆಯೇ ವಿಶಿಷ್ಟವಾದದ್ದು. ವಂಶಪಾರಂಪರ್ಯದಿಂದ ಬಂದರೆ ಮಾತ್ರ ನಿರರ್ಗಳವಾಗಿ ಮಾತಾಡಬಹುದು ಹೊರತು ಹೊಸತಾಗಿ ಕಲಿತು ಮಾತಾಡುವುದು ಬಹಳ ಕಷ್ಟ ಅಥವಾ ಅಸಾಧ್ಯವೂ ಕೂಡ. ಒಂದು ವೇಳೆ ಯಾರಾದರು ಕಲಿತರೂ ಉಚ್ಚಾರಗಳಲ್ಲಿ ಗೊತ್ತಾಗುತ್ತದೆ ಇವರು ಹುಟ್ಟಿನಿಂದ ಕಲಿತ ಭಾಷೆಯಲ್ಲವೆಂದು. ಇಂಥ ಭಾಷೆ ಕೂಡ ಇಂದು ತನ್ನತನವನ್ನು ಕಳೆದುಕೊಳ್ಳತೊಡಗಿದೆ. ಇದಕ್ಕೆ ಮೂಲ ಕಾರಣ ಹಳ್ಳಿಯನ್ನು ಉಪೇಕ್ಷಿಸಿದ್ದು ಒಂದಾದರೆ ಚಿತ್ಪಾವನೇತರ ಸಂಬಂಧಗಳಿಂದ ಮದುವೆಯಾಗುವುದೂ ಆಗಿದೆ.  ಹಿಂದಿನ ಕಾಲದಲ್ಲಿ ನಮ್ಮ ಜಾತಿಯೊಳಗೇ ಮದುವೆಗಳಾಗುತ್ತಿದ್ದುದರಿಂದ ಭಾಷೆಯ ಸಮಸ್ಯೆ ಇರಲಿಲ್ಲ ಮತ್ತು ಭಾಷೆಯೂ ಜೀವಂತವಾಗಿರುತ್ತಿತ್ತು. ಅನ್ಯ ಭಾಷೆಯ ಸಂಬಂಧಗಳು ಪ್ರಾರಂಭವಾದ ಮೇಲೆ ವ್ಯವಹಾರಕ್ಕೆ ಗಂಡ ಹೆಂಡತಿ ಕನ್ನಡ ಭಾಷೆಯನ್ನೇ ಮಾಧ್ಯಮವಾಗಿರಿಸಿಕೊಂಡಿದ್ದರಿಂದ ಸಹಜವಾಗಿ ಮಕ್ಕಳಿಗೆ ಕನ್ನಡವೇ ಮಾತೃ ಭಾಷೆ ಯಾಗತೊಡಗಿತು. ನಮ್ಮ ಭಾಷೆ ಮಾತಾಡುವಾಗಲೂ ಕನ್ನಡ, ಇಂಗ್ಲೀಷ್  ಭಾಷೆಯ ಶಬ್ದಗಳು ನಮ್ಮ ಭಾಷೆಯ ಶಬ್ದಗಳು ಒಟ್ಟಾಗಿ ವಿಚಿತ್ರವಾದ ಭಾಷೆ ಸೃಷ್ಟಿಯಾಗತೊಡಗಿತು. ಮಕ್ಕಳನ್ನು ಹಿರಿಯರು ತಿದ್ದಲಿಲ್ಲ. ಬದಲಾಗಿ ಇತರ ಭಾಷೆಯ ಶಬ್ದ ಪ್ರಯೋಗ ಅದರಲ್ಲೂ ಇಂಗ್ಲೀಷ್ ಶಬ್ದಗಳನ್ನು ಸೇರಿಸಿ ನಮ್ಮ ಭಾಷೆ ಮಾತಾಡಿದಾಗ ಅದು ಹೆಮ್ಮೆಯೆಂದೆನಿಸಿತ್ತು. ಹೀಗೆ ಭಾಷೆಯ ಸೌಂದರ್ಯ ದಿನದಿಂದ ದಿನಕ್ಕೆ ಕೆಡತೊಡಗಿದ್ದು ನಮಗೆ ಅರಿವಾದಾಗ ಕಾಲ ಮುಂದೋಡಿತ್ತು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


ನಮ್ಮ ಚಿತ್ಪಾವನ ಭಾಷೆಯ ಅವನತಿಗೆ ಇನ್ನೊಂದು ಕಾರಣವೆಂದರೆ ಚಿತ್ಪಾವನ ಭಾಷೆಗೆ ಲಿಪಿ ಇಲ್ಲದುದು. ಲಿಪಿ ಇಲ್ಲದಿದ್ದರೆ ಕನ್ನಡ ಅಥವಾ ಹಿಂದಿ ಲಿಪಿಯನ್ನು ನಾವು ಉಪಯೋಗಿಸಿಕೊಳ್ಳಬಹುದು. ಆದರೆ ನಮ್ಮ ಭಾಷೆಯಲ್ಲಿ ಸಾಹಿತ್ಯ ರಚನೆ ಇಲ್ಲವೆನ್ನುವಷ್ಟು ಕಡಿಮೆ. ಎಲ್ಲೋ ಒಂದಿಬ್ಬರು ಕೆಲವು ಪದ್ಯಗಳನ್ನು ಬರೆದದ್ದೇ ಸಾಧನೆಯಾದಾಗ ಭಾಷೆಗೆ ಜೀವನಾಡಿಗಳೇ ಇಲ್ಲವಾಗುವುದು ಸಹಜವೇ. ಇವತ್ತು ಸಂಸ್ಕೃತ ಭಾಷೆಯನ್ನು ಮೃತ ಭಾಷೆ ಎನ್ನುವ ಬುದ್ಧಿ ಜೀವಿಗಳ ಒಂದು ವರ್ಗವಿದೆ. ಸಂಸ್ಕೃತ ಭಾಷೆಯಲ್ಲಿ ಅಗಾಧವಾದ ಸಾಹಿತ್ಯವಿಲ್ಲದಿರುತ್ತಿದ್ದರೆ ಖಂಡಿತವಾಗಿಯೂ ಸಂಸ್ಕೃತ ಭಾಷೆ ಮೃತಭಾಷೆಯೇ ಆಗುತ್ತಿತ್ತು. ಪುಣ್ಯವಶಾತ್ ಇವತ್ತು ಸಾಹಿತ್ಯದಲ್ಲಿ ಮೇರುಪರ್ವತದಂತೆ ಕಂಗೊಳಿಸುವ ಸಂಸ್ಕೃತ ಭಾಷೆಗೆ ಸಾಹಿತ್ಯವೇ ಅಮೃತತ್ವವನು ಕೊಟ್ಟಿದೆ. ಈ ನಿಟ್ಟಿನಲ್ಲಿ ನೋಡಿದಾಗ ಲಿಪಿಯೂ ಇಲ್ಲದೆ, ಸಾಹಿತ್ಯವೂ ಇಲ್ಲದೆ, ಭಾಷಾಭಿಮಾನವೂ ಇಲ್ಲದೆ ಭಾಷೆ ಇಷ್ಟು ದಿನಗಳಾದರೂ ಜೀವಂತವಿದ್ದದ್ದೇ ಅದ್ಭುತ. ಬಹುಶಃ ಮುಂದಿನ ತಲೆಮಾರುಗಳು ಚಿತ್ಪಾವನ ಭಾಷೆಯ ಕೊನೆಯ ಕೊಂಡಿಗಳಾಗಿರುವವು ಎಂಬುದೇ ಬೇಸರದ ವಿಷಯ. ಅದೆಷ್ಟೋ ಮನೆತನಗಳು ಬೆಳೆದು ಬಾಳಿ ಅಳಿದು ಹೋಗಿವೆ. ಅಂತೆಯೇ ಹಲವಾರು ಭಾಷೆಗಳೂ ಅಳಿದು ಹೋಗಿವೆ. ಪ್ರಸ್ತುತ ವರ್ತಮಾನದಲ್ಲಿ ನಮ್ಮ ಚಿತ್ಪಾವನಿ ಭಾಷೆ ಮಂಚೂಣಿಯಲ್ಲಿದೆ. 


ಇದೆಲ್ಲವೂ ನಮಗೆ ಗೊತ್ತಿದೆ. ಹಾಗಾದರೆ ಇದನ್ನು ಉಳಿಸುವ ಬಗೆ ಏನು? ಇದು ಇವತ್ತಿನ ಪ್ರಸ್ತುತತೆ. ಸಾಧ್ಯವೇ..? ಸಂಸ್ಕಾರ, ಆಚಾರ ವಿಚಾರ, ಸಂಪ್ರದಾಯ, ಭಾಷೆ ಇವೆಲ್ಲವೂ ಒಂದಕ್ಕೊಂದು ಪೂರಕ. ಭಾಷೆಯೊಂದುಳಿದರೆ  ಎಲ್ಲವೂ ಉಳಿಯುತ್ತದೆ. ಭಾಷೆ ಅಳಿದರೆ ಭಾಷೆಯ ಜೊತೆಗಿದ್ದ ಎಲ್ಲವೂ ಅಂದರೆ ಒಂದು ಸಂಸ್ಕೃತಿಯೇ ನಾಶವಾದಂತೆ. ಯಾವ ಕಾಲದಲ್ಲಿ ಏನಾಗಬೇಕೋ ಅದಕ್ಕೆ ವೇದಿಕೆ ಬಹಳ ಕಾಲದಿಂದ ನಿರ್ಮಾಣವಾಗುತ್ತದೆ. ಹಿಂದೆ ಕೃಷ್ಣ ಮನಸ್ಸು ಮಾಡಿದ್ದರೆ ಏನೂ ಮಾಡಬಹುದಿತ್ತು ಎಂದು ನಮಗೆ ಅನ್ನಿಸಿದರೂ  ಯಾದವರ, ಕೌರವರ ನಾಶವನ್ನು ತಡೆಯಲಿಲ್ಲ. ಅಭಿಮನ್ಯುವಿನ ಸಾವನ್ನು ತಪ್ಪಿಸಲಿಲ್ಲ. ದ್ರೌಪದಿಯ ಅಪಮಾನ ನಡೆದೇ ಹೋಯಿತು. ಕಾಲ ಕಾಲಕ್ಕಾಗುವ ಎಲ್ಲ ಕ್ರಿಯೆಗಳೂ ಅದ್ಯಾವುದೋ ನಿಗೂಢತೆಯಲ್ಲಿ ನಡೆದೇ ಹೋಗುತ್ತವೆ. ನಾವೆಲ್ಲ ಬರಿದೆ ದಾಳಗಳು. ಇದಿಷ್ಟೇ ನಮಗೆ ಇವತ್ತು ಸಮಾಧಾನ ತರುವ ವಿಷಯ. ಯಾವುದೇ ಒಂದು ವಿಷಯದ ನಾಶಕ್ಕೆ ಬಹಳ ಸಮಯ ಬೇಡ. ಆದರೆ ಅದರ ಉಳಿಯುವಿಕೆಗೆ ಬಹಳ ಪ್ರಯತ್ನ ಬೇಕು. ಪ್ರಯತ್ನ ಮಾಡೋಣ... ಯಾರಿಗೆ ಗೊತ್ತು ಮುಂದೊಂದು ದಿನ ಚಿತ್ಪಾವನ ಸಂಸ್ಕೃತಿಗೂ ಒಳ್ಳೆಯ ಹೆಸರು ಬರಬಹುದು... 

ಕಾಲಾಯ ತಸ್ಮೈನಮಃ...

**********

-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ

web counter

0 Comments

Post a Comment

Post a Comment (0)

Previous Post Next Post