||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಧ್ಯಾತ್ಮ: ಆತ್ಮೋನ್ನತಿಗೆ 'ಅನಂತ'ನೇ ಗತಿ

ಅಧ್ಯಾತ್ಮ: ಆತ್ಮೋನ್ನತಿಗೆ 'ಅನಂತ'ನೇ ಗತಿಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ ಎನ್ನುವಂತೆ ಪ್ರಪಂಚಕ್ಕೆ ಬಂದಂಥ ಎಲ್ಲ ಜೀವಿಗಳು ಕೂಡ ಜೀವನವೆಂಬ ಪ್ರವಾಹದೊಡನೆ ಮರಣವೆಂಬ ಸಾಗರಕ್ಕೆ ಸೇರಲೇಬೇಕು. ಭುವಿಯ ಮೇಲೆ ಬಿದ್ದಂಥ ಒಂದು ಹನಿ ನೀರಾದರೂ ಅದರ ಗುರಿ ಸಾಗರವೇ ಇರುವಂತೆ.. ಆಕಾಶದಿಂದ ಬಿದ್ದಂಥ ನೀರು ನೂರು ಪ್ರತಿಶತ ಶುದ್ಧವಾಗಿಯೇ ಇರುತ್ತದೆ. ಅದು ಬಿದ್ದ ವಾತಾವರಣ, ಚಲಿಸುವ ದಾರಿ, ಬಳಸಿಕೊಳ್ಳುವ ಅಥವಾ ಕಲುಷಿತಗೊಳಿಸುವ ಜನಸಮುದಾಯ, ಪ್ರಕೃತಿಯ ವೈಪರೀತ್ಯ ಮುಂತಾದವುಗಳಿಂದ ಶುದ್ಧವಾಗಿದ್ದ ನೀರು ಕೂಡ ಮಲಿನವಾಗುವ ಸಾಧ್ಯತೆಗಳೇ ಜಾಸ್ತಿ. ಅಂತು ಸಾಗರ ಸೇರುವಲ್ಲಿ ಈ ನೀರು ಪ್ರವಾಹದಿಂದ ಅಂಟಿಕೊಂಡ ಯಾವತ್ತೂ ಕೊಳೆಯನ್ನು ಜತೆಯಾಗಿಯೇ ಧರಿಸಿಕೊಂಡು ಲೀನವಾಗುತ್ತದೆ. ಸಾಗರ ಸೇರಿದ ಮೇಲೆ ಅದನ್ನು ಪ್ರತ್ಯೇಕಿಸಲು ದೇವರ ಹೊರತಾಗಿ ಅನ್ಯರಿಗೆ ಅಸಾಧ್ಯ.  


ಜೀವಿಗಳೂ ಹಾಗೆಯೇ ಅಲ್ಲವೆ. ಹುಟ್ಟುವಾಗ ಪ್ರತಿಶತ ನೂರರಷ್ಟು ಶುದ್ಧವಾಗಿರುತ್ತವೆ. ನಂತರದ ಅವರವರ ಜೀವನ ಪ್ರವಾಹದಲ್ಲಿ, ಅವರವರ ಅವಶ್ಯಕತೆಗಳಿಗನುಗುಣವಾಗಿ, ಅವರವರ ಆಸಕ್ತಿಗನುಗುಣವಾಗಿ, ಅವರವರ ಸ್ವಭಾವಕ್ಕನುಗುಣವಾಗಿ, ಅವರವರ ಕರ್ಮಾನುಸಾರವಾಗಿ ಮರಣದವರೆಗೆ ಮುಂದುವರೆಯುತ್ತವೆ. ಯಾವಾಗ ಮರಣವೆಂಬ ಸಾಗರದಲ್ಲಿ ಈ ಜೀವಿಗಳು ಲೀನವಾದವೋ ಆಗ ಅದರಿಂದ ಬೇರ್ಪಡಿಸಲು ಪರಮೇಶ್ವರನಿಗೆ ಮಾತ್ರ ಸಾಧ್ಯ. ಆದರೂ ಅವರವರ ಸಂಚಿತ ಕರ್ಮ ಅವರೊಡನೆ ಇರುವುದೂ ಸತ್ಯ. ಪ್ರತಿಯೊಂದು ನೀರ ಹನಿಯೂ ಕಲ್ಮಶದೊಡನೆಯೇ ಇರುವಂತೆ. ಎಷ್ಟೇ ಕಲುಷಿತವಾದರೂ ಕಲ್ಮಶದಿಂದ ನೀರನ್ನು ಬೇರ್ಪಡಿಸಲು ಆಗುತ್ತದೆ. ಯಾವಾಗ ಸೂರ್ಯ ಕಿರಣಗಳು ನೀರನ್ನು ಸ್ಪರ್ಶಿಸುವವೋ ಆವಾಗಲೇ ನೀರು ಆವಿಯಾಗತೊಡಗುತ್ತದೆ. ಆದರೆ ಅಲ್ಲೊಂದು ಸೂಕ್ಷ್ಮವಿದೆ. ಎಲ್ಲಿವರೆಗೆ ಕಲ್ಮಶದ ಜತೆಗೆ ನೀರು ಇರುವುದೋ ಅಲ್ಲಿವರೆಗೆ ಅದಕ್ಕೆ ಮೇಲ್ಮುಖದ ಚಲನೆ ಇಲ್ಲ. ಯಾಕೆಂದರೆ ಮೇಲೆ ಹೋಗಬೇಕಾದರೆ ಪರಿಶುದ್ಧತೆ ಅಗತ್ಯ. ಕಶ್ಮಲಗಳ ಹೊರತಾಗಿ ಇರುವ ನೀರು ಮಾತ್ರ ಸೂರ್ಯನಾದರೂ ಮೇಲೆತ್ತಬಲ್ಲನು.  


ಅದೇರೀತಿ ಜೀವಿಗಳು ಅದ್ಯಾವ ಕರ್ಮಗಳನ್ನು ಮಾಡಿದರೂ ಅವರವರ ಕರ್ಮಕ್ಕನುಗುಣವಾಗಿ ಅವರವರ ಆತ್ಮಕ್ಕೆ ಅವರವರದೇ ಆದ ದಾರಿ ಇದೆ. ನಾವು ಯಾವತ್ತಿನವರೆಗೆ ಕಶ್ಮಲಗಳನ್ನು ಕಳೆದು ಕೊಳ್ಳುವುದಿಲ್ಲವೋ ಅಲ್ಲಿವರೆಗೆ ಯಾವ ಆತ್ಮಕ್ಕೂ ಮೇಲ್ಮುಖ ಪಯಣವಿಲ್ಲ. ಪಾಪ ಕರ್ಮಗಳನ್ನು ನೆಚ್ಚಿಕೊಂಡಷ್ಟು, ಅದರಿಂದ ಪಾಪಗಳು  ಹೆಚ್ಚಾದಷ್ಟು ಅಧೋಗತಿಯೇ ಗುರಿಯಾಗುತ್ತದೆ. ಹೇಗೆ ಕಶ್ಮಲ ಹೆಚ್ಚಾದ ನೀರು ಸಾಗರದಲ್ಲಿ ಪಾತಾಳಕ್ಕೆ ಒತ್ತಲ್ಪಡುತ್ತದೋ ಅದೇ ರೀತಿ. ಆದ್ದರಿಂದ ಯಾವ ಆತ್ಮ ಉನ್ನತಿಯನ್ನು ಬಯಸುವುದೋ ಅದು ಪಾಪಗಳೆಂಬ ಕಶ್ಮಲಗಳನ್ನು ತ್ಯಜಿಸಲೇಬೇಕು. ಆವಾಗ ದೇವನ ಅನುಗ್ರಹವೆಂಬ ದಿವ್ಯಾಗ್ನಿಯು ನಮ್ಮನ್ನು ಸ್ಪರ್ಶಿಸಿದರೆ ನಮ್ಮ ಪಯಣವು ಮೇಲ್ಮುಖವಾಗುವುದರಲ್ಲಿ ಸಂದೇಹವಿಲ್ಲ. ಅದಕ್ಕೆಂದೇ ಹಿಂದಿನ ಜ್ಞಾನಿಗಳು ನಮಗೆ ಅರ್ಥವಾಗುವಂತೆ ಸರಳವಾಗಿ ಹೇಳಿದ್ದಾರೆ. ಯಾವನು ಪುಣ್ಯಾತ್ಮನೋ ಆತ ಸ್ವರ್ಗಕ್ಕೆ ಏರುತ್ತಾನೆ, ಯಾವನು ಪಾಪಾತ್ಮನೋ ಆತ ನರಕಕ್ಕೆ ಇಳಿಯುತ್ತಾನೆ ಎಂದು. ಅಂತೆಯೇ ಸಾಗರಕ್ಕೆ ಅದೆಷ್ಟೋ ಕೋಟಿ ವರ್ಷಗಳಿಂದ ಸೂರ್ಯನು ಶಾಖವನ್ನು ಕೊಡುತ್ತಲೇ ಇದ್ದಾನೆ. ಹಾಗೆಂದು ಎಲ್ಲ ನೀರನ್ನು ಆತ ಸೆಳೆದುಕೊಳ್ಳಲಾರ. ತನ್ನೆಡೆಗೆ ಬರುವ ಯೋಗ್ಯತೆ ಯಾವ ನೀರಿಗಿದೆಯೋ ಅದನ್ನು ಮಾತ್ರ ಸೆಳೆದುಕೊಳ್ಳುವ. ಹಾಗೆಯೇ ನಾವು ಸರಳ ಜೀವನವೋ, ಸಾಧನೆಯೋ, ಪುಣ್ಯ ಕಾರ್ಯಗಳೋ ಮಾಡುತ್ತಲೇ ಇದ್ದರೂ ದೇವನು ನಮ್ಮ ಯೋಗ್ಯತೆಯನ್ನು ಅಳೆದು ಅರ್ಹತೆ ಇದ್ದಲ್ಲಿ ಮಾತ್ರ ಆತನೆಡೆಗೆ ಸೆಳೆದುಕೊಳ್ಳಬಲ್ಲ. ಅದಿಲ್ಲದಿದ್ದರೆ ಸಾಗರದಲ್ಲಿ ತನ್ನ ಸರದಿಗಾಗಿ ಕಾದು ಕುಳಿತಿರುವ ಮೇಲ್ಮಟ್ಟದ ನೀರಿನಂತೆ ಕಶ್ಮಲಗಳನ್ನು ಅಂಟಿಸಿಕೊಳ್ಳದೆ ನಾವು ಆತನ ಅನುಗ್ರಹಕ್ಕೆ ಕಾದುಕೊಂಡಿರಬೇಕು. ಮೇಲಿನಿಂದ ಭುವಿಗಳಿಯುವಾಗ ಯಾವ ಪರಿಶುದ್ಧತೆ ಇದ್ದಿತೋ ಅಂಥ ಪರಿಶುದ್ಧವಾದ ನೀರಿಗೆ ಮಾತ್ರ ಮೇಲೇರುವುದಕ್ಕೆ ಸಾಧ್ಯತೆ ಇರುವಂತೆ ಹುಟ್ಟುವಾಗ ಯಾವ ಮುಗ್ಧತೆಯೊಂದಿಗೆ ಜೀವವಿರುವುದೋ ಆ ಮುಗ್ಧತೆ ಬರುವಲ್ಲಿವರೆಗೆ ಜೀವಾತ್ಮನೂ ಕಾಯಬೇಕಾಗುವುದು ಮೇಲ್ಮುಖದ ನಡೆಗೆ.  


ಮೇಲೆ ಹೋದಂಥ ನೀರು ಮೋಡವಾಗತೊಡಗಿದಾಗ ಮತ್ತೆ ಭುವಿಯೆಂಬ ಮಾಯೆ ಆ ನೀರನ್ನು ಸೆಳೆದುಕೊಂಡು ಪುನಃ ಪ್ರವಾಹದೊಡನೆ ಬೆರೆಸುವುದು. ಮತ್ತೆ ಯಥಾ ಪ್ರಕಾರ ಕೆರೆ ಬಾವಿಗಳಲ್ಲಿ ಬಂಧಿತವಾಗುವುದೋ, ಸಾಗರ ಸೇರುವುದೋ, ಸೂರ್ಯನಿಗಾಗಿ ಕಾಯುತ್ತಿರುವುದೋ ಅದು ಅದರ ಪ್ರಾರಬ್ಧ ಕರ್ಮ. ಮಾನವನೂ ಕೂಡ ಅಂದು ಶಂಕರಾಚಾರ್ಯರು ಹೇಳಿದ ಪುನರಪಿ ಜನನಂ ಪುನರಪಿ ಮರಣಂ.. ಎಂಬುದಕ್ಕೆ ಅಂಟಿಕೊಂಡಂತೆ. ನಮಗೆ ಲೌಕಿಕ ಜೀವನದಲ್ಲೂ ಅನುಭವವಾಗುವ ಕೆಲವು ವಿಚಾರಗಳನ್ನು ನೋಡಬಹುದು. ಯಾವಾಗಲೂ ಶುದ್ಧ ಮನಸ್ಸಿನವರು ಮಾತ್ರ ಮೇಲೇರಬಲ್ಲರು. ಅಂತೆಯೇ ಕೆಟ್ಟವರು ಅಧಃಪಾತಕ್ಕೇ ಹೋಗುವರು. ಮೇಲ್ನೋಟಕ್ಕೆ ಕೆಟ್ಟವರೆನಿಸಿದವರು ನಮ್ಮ ವ್ಯವಹಾರದಲ್ಲಿ ಮೇಲ್ದರ್ಜೆಯಲ್ಲಿದ್ದರೂ ದೇವರ ದೃಷ್ಟಿಯಲ್ಲಿ ಅವರದು ಅಧಃಪಾತದ ನಡಿಗೆಯೇ ಆಗಿರುವುದು. ಬೆಂಕಿಯಾದರೂ ಮೇಲೇರುವಾಗ ಯಾವ ಹವಿಸ್ಸನ್ನೂ ಕೊಂಡೊಯ್ಯವುದಿಲ್ಲ. ಅಗ್ನಿಯೊಂದಿಗೆ ಯಾವ ಹವಿಸ್ಸು ದಹಿಸಿಕೊಳ್ಳುವುದೋ ಅದು ಮೇಲೇರಬಹುದೇ ಹೊರತು ಮೊಂಡುತನ ತೋರಿದ ಹವಿಸ್ಸು ಅತ್ತ ಮೇಲೇರಲೂ ಆಗದೆ ಇತ್ತ ಇರಲೂ ಆಗದೆ ಚಡಪಡಿಸುತ್ತಿರುತ್ತದೆ.


ಅಂತೆಯೇ ಜೀವಿಗಳು ಕೂಡ ಜ್ಞಾನವೆಂಬ ಅಗ್ನಿಯೊಡನೆ ಸೇರಿಕೊಂಡಾಗ ಔನ್ನತ್ಯವನ್ನು ಸಾಧಿಸಬಹುದು. ಅದಿಲ್ಲ ಇದ್ದಿಲಿನಂತೆ, ಬೂದಿಯಂತೆ ದಿನ ದಿನವೂ ಶಿಥಿಲವಾಗಿ ಅಧೋಗತಿಯನ್ನು ಕಾಣುವುದು. ಒಟ್ಟಾರೆ ಹೇಳುವುದಾದರೆ ಅಹಂಭಾವ ಬಿಟ್ಟು ಹಗುರವಾಗಬೇಕು. ಎಲ್ಲ ಭಾರವನ್ನೂ ಕಳಕೊಂಡು ಹಗುರವಾಗಬೇಕು. ವಸುಧೆಯ ಗುರುತ್ವಾಕರ್ಷಣೆಗಿಂತ ವಾಸುದೇವನೆಡೆಗೆ ಕರಕೊಂಡು ಹೋಗುವ ಗುರುವಿನ ಆಕರ್ಷಣೆಗೊಳಗಾದರೆ ಆತ್ಮೋನ್ನತಿಯು ಸಹಜವಾಗಿ ಘಟಿಸುವುದು.. ಸರ್ವ ದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ.... ಎನ್ನುವಂತೆ ಯಾವ ದೇವರಿಗೆ ವಂದಿಸಿದರೂ ಕೇಶವನಿಗೇ ಅರ್ಪಿತವಾಗುವುದಾದರೆ ಅದರ ಹಿಂದೆ ಆ ಭಾವದ ಅವಶ್ಯಕತೆ ಇದೆ. ಯಾವುದೇ ಜೀವಿಯು ಕೇಶವನೆಡೆಗೆ ಹೋಗಬೇಕಾದರೆ ಕೇಶವನಿಗೊಂದು ಕೃತಜ್ಞತಾ ಭಾವದ ನಮಸ್ಕಾರ ಸಾಕು. ಆ ನಮಸ್ಕಾರ ಕೇಶವನು ಸ್ವೀಕರಿಸಿದರೆ ಆತ್ಮೊನ್ನತಿ ಆದಂತೆಯೇ. ನಾವು ಕೇಶವನನ್ನು ನೋಡಲಾಗದು. ಆದರೆ ಕೇಶವ ನಮ್ಮನ್ನು ನೋಡಬಹುದು, ಮೇಲೆತ್ತಬಹುದು. ದೇವರನ್ನು ನಮಸ್ಕರಿಸುವುದೆಂದರೆ ಬರಿದೆ ಕೈ ಮುಗಿಯುವ ಕ್ರಿಯೆಯಲ್ಲ. ಕೈ ಮುಗಿದರೂ ಮುಗಿಯದಿದ್ದರೂ ದೇವರಿಗೆ ಅದರ ಅಗತ್ಯವಿಲ್ಲ, ಅದನ್ನು ಆತ ನೋಡುವುದೂ ಇಲ್ಲ. ಆದರೆ ಅನ್ಯಥಾ ಶರಣಂ ನಾಸ್ತಿ ಎನ್ನುವ ದೈನ್ಯತಾ ಭಾವ ಮಾತ್ರ ನಮ್ಮನ್ನು ಹಗುರವಾಗಿಸುವುದು ಹಾಗೂ ಏರಿಸಬಲ್ಲುದು. ನಮ್ಮದಾಗಲಿ ಎಂದಿಗೂ ಏರುವ ದಾರಿ. ಬೇಡ ನಮಗೆಂದಿಗೂ ಜಾರುವ ದಾರಿ... 


-ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post