|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಗು ನಗುತಾ ನಲಿ.... ವಿಶ್ವ ನಗುವಿನ ದಿನ

ನಗು ನಗುತಾ ನಲಿ.... ವಿಶ್ವ ನಗುವಿನ ದಿನ

ಪ್ರತಿ ವರ್ಷ ಮೇ ಮೊದಲ ಭಾನುವಾರ ಆಚರಿಸಲಾಗುತ್ತದೆ


ಚಿತ್ರದಲ್ಲಿ- ಬೇಬಿ ಶಾರ್ವರಿ


ಪ್ರತಿ ವರ್ಷ ಮೇ ತಿಂಗಳ ಮೊದಲ ಭಾನುವಾರದಂದು ವಿಶ್ವ ನಗುವಿನ ದಿನ ಎಂದು ಆಚರಿಸಿ ಸಂಭ್ರಮಿಸಲಾಗುತ್ತದೆ. ಮೊದಲ ಬಾರಿಗೆ ಈ ಆಚರಣೆ 1998ರಲ್ಲಿ ಭಾರತ ದೇಶದ ಮುಂಬಯಿ ನಗರದಲ್ಲಿ ಆರಂಭವಾಯಿತು. ಡಾ|| ಮದನ್ ಕಟಾರಿಯಾ ಈ ವಿಶ್ವ ನಗು ಅಭಿಯಾನದ ರೂವಾರಿಯಾಗಿರುತ್ತಾರೆ. ಮನಬಿಚ್ಚಿ ಮನಸು ಹಗುರಾಗಿಸಿ ನಕ್ಕಾಗ ಮುಖದ ಸ್ನಾಯುಗಳು ಚೆನ್ನಾಗಿ ವಿಕಸನಗೊಂಡು ಮನಸ್ಸು ಮುದವಾಗುತ್ತದೆ ಎಂಬ ಕಲ್ಪನೆಯೊಂದಿಗೆ ಈ ಅಭಿಯಾನ ಆರಂಭವಾಯಿತು. ಕ್ರಮೇಣ ‘ನಗುವಿನ ಸಂಘಗಳು’ (Laughter club) ಹುಟ್ಟಿಕೊಂಡು ವಿಶ್ವದೆಲ್ಲೆಡೆ ಆರಂಭವಾಯಿತು. ಸಾರ್ವಜನಿಕ ಸ್ಥಳಗಳಾದ ಪಾರ್ಕ್‍ಗಳಲ್ಲಿ ಜನರು ಒಟ್ಟು ಸೇರಿ ನಗುವ ಕಾರ್ಯಕ್ರಮ ಆರಂಭಿಸಿದರು. ಮುಂದೇ ಅದೇ ‘ನಗು ಸಂಘ’ (Laughter club) ಎಂದು ಪ್ರಸಿದ್ಧಿಗೆ ಬಂತು. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಜಗತ್ತಿನ ಸುಮಾರು 115 ರಾಷ್ಟ್ರಗಳಲ್ಲಿ ಲಕ್ಷಾಂತರ ನಗೆ ಸಂಘಗಳು ಜನರನ್ನು ನಗಿಸಿ, ಜನರ ಆರೋಗ್ಯವನ್ನು ಹೆಚ್ಚಿಸುತ್ತಿರುವುದು ಆಶಾದಾಯಕ ಸಂಗತಿ.


ನಕ್ಕರೇ ಅದುವೇ ಸ್ವರ್ಗ

ಈಗಿನ ಯಾಂತ್ರಿಕ ಬದುಕಿನಲ್ಲಿ ನಗು ಎನ್ನುವುದು ಕೂಡಾ ಒಂದು ಹಣ ಸಂಪಾದನೆಯ ಮಾರ್ಗ ಎಂಬ ಸತ್ಯ ಹಲವರಿಗೆ ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು. ಸುಂದರವಾದಂತ ದಂತ ಪಂಕ್ತಿಗಳಿಂದ ಮನಬಿಚ್ಚಿ ನಿಷ್ಕಲ್ಮಶವಾಗಿ ಹೃದಯತುಂಬಿ ನಕ್ಕಲ್ಲಿ, ಮನುಷ್ಯನಿಗೆ ಯಾವುದೇ ರೋಗ ಬರಲಿಕ್ಕಿಲ್ಲ ಎಂದು ತಿಳಿದವರು ಹೇಳುತ್ತಾರೆ. ಜಗತ್ತಿನಲ್ಲಿ ಉಚಿತವಾಗಿ ನಿರಾಯಾಸವಾಗಿ ಸಿಗುವ ಒಂದೇ ವಸ್ತು ಎಂದರೆ ನಗು. ನಗು ಎನ್ನುವುದು ಸಾಂಕ್ರಾಮಿಕ. ನಗುವಿನಿಂದ ಒಬ್ಬ ವ್ಯಕ್ತಿ ತನ್ನ ಜೊತೆಗಿರುವವರನ್ನು ತನ್ನ ಮೋಡಿಗೆ ಬೀಳಿಸುವ, ಪರಸ್ಪರ ಅನ್ಯೋನ್ಯತೆ ಬೆಳೆಸುವ, ವಿಶ್ವಾಸ ವೃದ್ಧಿಸುವ ನವಚೈತನ್ಯ ಮೂಡಿಸುವ ಅದ್ಬುತ ಶಕ್ತಿ ನಗುವಿಗೆ ಇದೆ.


ಚಿತ್ರದಲ್ಲಿ- ದೀಕ್ಷಿತಾ ಜೇಡರಕೋಡಿ


ನಾವು ಯಾಕಾಗಿ ನಗಬೇಕು?

1. ನಗು ನಮ್ಮ ಮನಸ್ಸಿಗೆ ಉಲ್ಲಾಸ, ಸಂತಸ ಮತ್ತು ಸಮಾಧಾನ ನೀಡುತ್ತದೆ.

2. ನಗುವಿನಿಂದ ನಮ್ಮ ಶ್ವಾಸಕೋಶದ ಪ್ರಕ್ರಿಯೆಯನ್ನು ಸುಗಮಗೊಳಿಸಬಹುದು.

3. ನಗುವಿನಿಂದ ಮಾನಸಿಕ ತಳಮಳ, ಭಯ, ಆತಂಕ ಮತ್ತು ಮನೋ ವ್ಯಾಕುಲತೆಯನ್ನು ಶಮನ ಮಾಡಬಹುದು.

4. ನಗು ನಮ್ಮ ಮನಸ್ಸಿಗೆ ಧೈರ್ಯ ಮತ್ತು ಸದೃಢತೆಯನ್ನು ನೀಡಿ, ಮನೋ ಸ್ಥಿತಿಯನ್ನು ಉಚ್ಚಾಯ ಸ್ಥಿತಿಯಲ್ಲಿ ಇಡುತ್ತದೆ.

5. ಧನಾತ್ಮಕ ಮತ್ತು ಆಶಾದಾಯಕ ದೃಷ್ಟಿಕೋನವನ್ನು ಬೆಳೆಸುವಲ್ಲಿ ಸಹಾಯಮಾಡುತ್ತದೆ.

6. ನಗು ನಮ್ಮ ವ್ಯಕ್ತಿತ್ವಕ್ಕೆ ಹೊಸ ಮೆರುಗು ಮತ್ತು ಆಯಾಮವನ್ನು, ದಿಶೆಯನ್ನು ನೀಡುತ್ತದೆ.

7. ಯಾತನಾಮಯ ಮತ್ತು ನೋವಿನ ಸ್ಥಿತಿಗಳಲ್ಲಿ ಮಾನಸಿಕ ದೃಢತೆಯನ್ನು, ಧೈರ್ಯವನ್ನು ನೀಡಿ ಮನಸ್ಸಿಗೆ ಉಲ್ಲಾಸ ಮತ್ತು ಮುದವನ್ನು ನೀಡುತ್ತದೆ.

8. ದೇಹದಲ್ಲಿರುವ ಪ್ರತಿಯೊಂದು ಗ್ರಂಥಿಗಳಿಂದಲೂ ಆರೋಗ್ಯಕ್ಕೆ ಪೂರಕವಾದ ದ್ರವ್ಯಗಳು ಸ್ರವಿಸಲ್ಪಟ್ಟು ಜೀವಕೋಶಗಳಿಗೆ ಹೊಸ ಚೈತನ್ಯವನ್ನು ನೀಡುತ್ತದೆ.

9. ನಮ್ಮ ಬದುಕಿಗೆ ನಗು ಹೊಸ ಆಯಾಮವನ್ನು ನೀಡಿ ಬಾಳಿಗೆ ಬೆಳಕು ನೀಡುತ್ತದೆ. ನೀವು ಮನಬಿಚ್ಚಿ ನಕ್ಕಾಗ ನಿಮ್ಮ ದೇಹಕ್ಕೆ ಹೆಚ್ಚಿನ ಆಕ್ಸಿಜನ್ ಸೇರಿಕೊಂಡು, ನಿಮ್ಮ ಹೃದಯ, ಶ್ವಾಸಕೋಶ ಮತ್ತು ಸ್ನಾಯುಗಳನ್ನು ಉದ್ರೇಕಿಸುತ್ತದೆ. ನಿಮ್ಮ ದೇಹದಲ್ಲಿ ಸ್ರವಿಸಲ್ಪಡುವ ‘ಎಂಡೊರ್‍ಫಿನ್’ ಎಂಬ ನಗಿಸುವ ರಸದೂತವನ್ನು ಹೆಚ್ಚು ಸ್ರವಿಸುವಂತೆ ಮಾಡುತ್ತದೆ ಮತ್ತು ನಿಮ್ಮನ್ನು ಮಾನಸಿಕವಾಗಿ ಮತ್ತಷ್ಟು ಉಲ್ಲಸಿತರನ್ನಾಗಿ ಮಾಡುತ್ತದೆ.

10. ನಮ್ಮ ವ್ಯಕ್ತಿಗಳ ನಡುವಿನ ಸಂಬಂಧಗಳನ್ನು ಸದೃಢಗೊಳಿಸುತ್ತದೆ. ಜೊತೆಗಿದ್ದವರನ್ನು ಮತ್ತಷ್ಟು ಉಲ್ಲಸಿತರನ್ನಾಗಿ ಮಾಡಿ ಕಾರ್ಯಕ್ಷಮತೆಯನ್ನು ವೃದ್ಧಿಸುತ್ತದೆ. ಸಣ್ಣಪುಟ್ಟ ವೈಮನಸ್ಸು, ಭಿನ್ನಾಭಿಪ್ರಾಯಗಳನ್ನು ದೂರ ಮಾಡಿ ವಿವಾದಗಳನ್ನು ಅಂತ್ಯ ಮಾಡುತ್ತದೆ. ಒಟ್ಟಿನಲ್ಲಿ ನಗು ಎನ್ನುವುದು ಉಚಿತವಾಗಿ ದೊರಕುವ ಔಷಧಿ.

11. ಮನಬಿಚ್ಚಿ ನಕ್ಕಾಗ ನಿಮ್ಮ ‘ಮೂಡನ್ನು’ ಹೆಚ್ಚು ಉನ್ಮಾದಗೊಳಿಸುತ್ತದೆ. ಖಿನ್ನತೆಯನ್ನು ಕಡಿಮೆ ಮಾಡಿ, ಆತಂಕವನ್ನು ಕ್ಷಣಿಕವಾಗಿ ಇಲ್ಲದಾಗಿಸಿ, ಮನಸನ್ನು ಮುದಗೊಳಿಸಿ ತಾತ್ಕಾಲಿಕವಾಗಿ ನಿಮ್ಮನ್ನು ಖುಷಿಯಾಗಿಸುತ್ತದೆ.

12. ನಾವು ನಕ್ಕಾಗ ನಮ್ಮಲ್ಲಿ ಧನಾತ್ಮಕ ಚಿಂತನೆಗಳು ಹುಟ್ಟಿಕೊಳ್ಳುತ್ತದೆ. ಇದು ನಮ್ಮ ದೇಹದಲ್ಲಿ ಸ್ರವಿಸಲ್ಪಡುವ ಉತ್ತಮ ರಸದೂತಗಳನ್ನು ಹೆಚ್ಚಿಸುವಂತೆ ಮಾಡಿ, ದೇಹದ ರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಶಕ್ತಿಶಾಲಿಯಾಗಿಸುತ್ತದೆ.


ವೈಜ್ಞಾನಿಕವಾಗಿ ನಗುವಿನ ಪರಿಣಾಮಗಳ ಬಗ್ಗೆ ಬಹಳಷ್ಟು ಸಂಶೋಧನೆಗಳು ನಡೆದಿದೆ. ಮಾನಸಿಕ, ದೈಹಿಕ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ‘ನಗು’ ಪರಿಣಾಮಕಾರಿ ಪಾತ್ರ ವಹಿಸುತ್ತದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ಮನಸ್ಸು ಒಮ್ಮೆ ಹಾಯಾಗಿ ನಕ್ಕಲ್ಲಿ ಸುಮಾರು 30 ನಿಮಿಷಗಳ ಕಾಲ ಸ್ನಾಯುಗಳು ಸಡಿಲಗೊಂಡು ರಕ್ತ ಸಂಚಾರ ಸುಗಮವಾಗಿ ಆ ಮೂಲಕ ಹೃದಯದ ಕೆಲಸ ಕಾರ್ಯಗಳು ಯಶಸ್ವಿಯಾಗುವಂತೆ ಪರೋಕ್ಷವಾಗಿ ಕಾರಣವಾಗುತ್ತದೆ. ನಗುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದಲ್ಲದೆ, ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಅದಕ್ಕಾಗಿಯೇ ನಗುವಿನಲ್ಲಿದೆ ಸ್ವರ್ಗ, ನಗಬಾರದೇಕೆ? ಎಂದು ಕವಿವರ್ಯರು ಮಾರ್ಮಿಕವಾಗಿ ನುಡಿದಿದ್ದಾರೆ


ನಗು ಎನ್ನುವುದು ಒಂದು ಕಲೆ. ಈ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ. ಧನಾತ್ಮಕ ಚಿಂತನೆಯುಳ್ಳ ಎಲ್ಲ ಮನುಷ್ಯರೂ ನಗುವಿನಲ್ಲಿಯೇ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಂಡುಕೊಳ್ಳುತ್ತಾರೆ. ಅಂತಹ ವ್ಯಕ್ತಿಗಳ ಜೊತೆ ಹೆಚ್ಚು ಹೆಚ್ಚು ವ್ಯವಹರಿಸಿದಲ್ಲಿ ನಮಗೂ ಧನಾತ್ಮಕ ಚಿಂತನೆಗಳು ಮೂಡಿ ಬಂದು ಮಾನಸಿಕ ಒತ್ತಡ ಕಡಿಮೆಯಾಗಿ ನಾವು ಕೂಡ ಹೆಚ್ಚು ಹೆಚ್ಚು ನಗುನಗುತ್ತಾ ನೂರು ಕಾಲ ಬದುಕಬಹುದು.


ನಾವು ಬದುಕುತ್ತಿರುವ ಈಗಿನ ಲೆಕ್ಕಾಚಾರದ ಜಗತ್ತಿನಲ್ಲಿ ನಗಲೂ ಕೂಡಾ ವ್ಯಾಪಾರಿ ಮನೋಭಾವ ತಾಳುವಂತಹ ಪರಿಸ್ಥಿತಿ ಬಂದೊದಗಿದೆ. ಜೀವನ ಎನ್ನುವುದು ಬಹುದೊಡ್ಡ ಪ್ರಯಾಣ. ಈ ಪ್ರಯಾಣದಲ್ಲಿ ಸಾಕಷ್ಟು ಸಮಸ್ಯೆಗಳು, ಸವಾಲುಗಳು ಬರುವುದು ಸಹಜ, ನಮ್ಮ ಜೀವನವೇ ನಮಗೆ ಸವಾಲಾದಾಗ, ಜಟಿಲವಾದಾಗ, ಸಮಸ್ಯೆಯಾಗಿ, ಕಂಟಕವಾಗಿ ನಾವು ತುಂಬಾ ಗಂಭೀರವಾಗಿ, ಬದುಕಿನ ಸವಾಲುಗಳನ್ನು ಎದುರಿಸುವಲ್ಲಿ ಸೋಲುತ್ತೇವೆ. ಎದುರಾದ ಸಮಸ್ಯೆಗಳನ್ನು ಸಾಧ್ಯವಾದಷ್ಟು ಮುಕ್ತ ಮನಸ್ಸಿನಿಂದ ನಿರ್ಮಲವಾಗಿ, ಸಮಾಧಾನದಿಂದ ಎದುರಿಸುವುದನ್ನು ಕಲಿತಾಗ, ಸಮಸ್ಯೆಗಳೇ ಹೊಸತನ್ನು ಮಾಡಲು, ಕಲಿಯಲು ಪ್ರೇರೇಪಿಸುತ್ತದೆ. ನಗುನಗುತ್ತಾ ಇದ್ದರೆ ಜೀವನದಲ್ಲಿ ಬರುವಂತಹಾ ಎಂತಹುದೇ ಕಷ್ಟಗಳನ್ನು ಲೀಲಾಜಾಲವಾಗಿ ಎದುರಿಸಬಹುದು. ಬದುಕಿನ ಮಹತ್ತರವಾದ ಗಳಿಗೆಯಲ್ಲಿ, ಕಷ್ಟಕಾಲದಲ್ಲಿ ಆಶಾಕಿರಣವನ್ನು, ಬದುಕಿಗೆÀ ಹೊಸ ಚೈತನ್ಯವನ್ನು, ದಾರಿಯನ್ನು ತೋರುವ ಶಕ್ತಿ ನಗುವಿಗೆ ಖಂಡಿತಾ ಇದೆ. ಅದಕ್ಕಾಗಿಯೇ ಬಲ್ಲವರು ಹೇಳುತ್ತಾರೆ. ನಕ್ಕರೆ ಅದೇ ಸ್ವರ್ಗ, ನಗಬಾರದೇಕೆ?


-ಡಾ|| ಮುರಲೀ ಮೋಹನ್ ಚೂಂತಾರು 

ಬಾಯಿ, ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು

BDS, MDS,DNB,MOSRCSEd(U.K), FPFA, M.B.A

ಸುರಕ್ಷಾದಂತ ಚಿಕಿತ್ಸಾಲಯ

ಹೊಸಂಗಡಿ – 671 323

ಮೊ: 09845135787  

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post