ವಿಶ್ವ ಭೂಮಿ ದಿನ-ಏಪ್ರಿಲ್ 22
ಮಂಗಳೂರು: ನಗರೀಕರಣ, ಕೈಗಾರಿಕೀಕರಣ ಮತ್ತು ಅಭಿವೃದ್ಧಿಯ ಕುಂಟು ನೆಪ ಇಟ್ಟುಕೊಂಡು ನಮ್ಮ ಸುತ್ತಲಿನ ಗಿಡ ಮರಗಳನ್ನು ನಾಶ ಮಾಡಿ ಪರಿಸರವನ್ನು ಹಾಳುಮಾಡುತ್ತಿದ್ದೇವೆ. ನೈಸರ್ಗಿಕ ಕಾಡನ್ನು ಬರಿದು ಮಾಡಿ, ಕಾಂಕ್ರೀಟ್ ಕಾಡಿನಲ್ಲಿ ಆಮ್ಲಜನಕ ಸಿಲಿಂಡರ್ ಮನೆಯಲ್ಲಿಟ್ಟುಕೊಂಡು ಉಸಿರಾಡಲು ಪಡಬಾರದ ಪಾಡು ಮನುಷ್ಯ ಇಂದು ಅನುಭವಿಸುತ್ತಿದ್ದಾನೆ. ಇನ್ನಾದರೂ ನಾವು ಎಚ್ಚೆತ್ತುಕೊಂಡು ನಮ್ಮ ಮನೆ ಸುತ್ತಮುತ್ತ ಹಸಿರು ಮರಗಿಡಗಳನ್ನು ಬೆಳೆಸಿ ಶುದ್ಧ ಆಮ್ಲಜನಕಯುಕ್ತ ಗಾಳಿ ಸಿಗುವಂತೆ ಮಾಡಬೇಕು. ಇಲ್ಲವಾದಲ್ಲಿ ಮುಂದೊಂದು ದಿನ ಆಮ್ಲಜನಕ ಸಿಲಿಂಡರ್ ಬೆನ್ನಿಗೆ ಕಟ್ಟಿಕೊಂಡು ಓಡಾಡಬೇಕಾದೀತು ಎಂದು ಖ್ಯಾತ ಪರಿಸರವಾದಿ ಮಾಧವ ಉಳ್ಳಾಲ ಅಭಿಪ್ರಾಯಪಟ್ಟರು.
ಗೃಹರಕ್ಷಕದಳ ಮತ್ತು ಪೌರರಕ್ಷಣಾ ಪಡೆಯ ವತಿಯಿಂದ ನಗರದ ಮೇರಿಹಿಲ್‍ನಲ್ಲಿರುವ ದ.ಕ. ಜಿಲ್ಲಾ ಗೃಹರಕ್ಷಕದಳದ ಕಛೇರಿಯಲ್ಲಿ ಇಂದು (ಏ.22) ವಿಶ್ವ ಭೂಮಿ ದಿನಾಚರಣೆಯ ಅಂಗವಾಗಿ ಜಿಲ್ಲಾ ಕಛೇರಿಯ ಆವರಣದಲ್ಲಿ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ಅವರು ಗಿಡಗಳನ್ನು ನೆಟ್ಟು ವಿಶ್ವ ಭೂಮಿ ದಿನಾಚರಣೆಯನ್ನು ಸಾಂಕೇತಿಕವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಪ ಸಮಾದೇಷ್ಟರಾದ ರಮೇಶ್, ಕಛೇರಿ ಅಧೀಕ್ಷಕರಾದ ರತ್ನಾಕರ, ಪ್ರಥಮ ದರ್ಜಿ ಸಹಾಯಕಿ ಶ್ರೀಮತಿ ಅನಿತಾ ಟಿ.ಎಸ್, ದಲಾಯತ್ ಮೀನಾಕ್ಷಿ, ಗೃಹರಕ್ಷಕರಾದ ದಿವಾಕರ್, ದುಷ್ಯಂತ್, ಸುಲೋಚನ, ಜಯಲಕ್ಷ್ಮಿ ಮುಂತಾದವರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ