ಬದಿಯಡ್ಕ: ಇತ್ತೀಚೆಗೆ ಅಗಲಿದ ಹಿರಿಯ ಕವಿ- ಸಂಘಟಕ, ಪ್ರಗತಿಪರ ಕೃಷಿಕ ಪೊಟ್ಟಿಪ್ಪಲ ನಾರಾಯಣ ಭಟ್ ಅವರಿಗೆ ನೆಲ್ಲಿಕಟ್ಟೆಯ ಬಳಿ ಪ್ರಕೃತಿ ಆಯುರ್ವೇದ ಕೇಂದ್ರದಲ್ಲಿ ಅಂತ್ಯೇಷ್ಟಿ ಸಮಾರಂಭದ ಸಂದರ್ಭದಲ್ಲಿ ನುಡಿನಮನ ಸಲ್ಲಿಸಲಾಯಿತು.
ಗಡಿನಾಡ ಕನ್ನಡ ಸಾಹಿತ್ಯ-ಸಾಂಸ್ಕೃತಿಕ ಸಂಘ, ಕರುನಾಡ ಹಣತೆ ಕೇರಳ ರಾಜ್ಯ ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆ, ಗುರುಕುಲ ಕಲಾ ಪ್ರತಿಷ್ಠಾನ ಕೇರಳ ಮೊದಲಾದ ವೇದಿಕೆಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕವಿ ಸಾಹಿತಿಗಳಾದ ಡಾ. ವಸಂತಕುಮಾರ ಪೆರ್ಲ, ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಕಕ್ಕೆಪದವು ಶಂಕರನಾರಾಯಣ ಭಟ್, ಡಾ. ಸುರೇಶ್ ನೆಗಳಗುಳಿ, ವಿಜಯ ಕಾನ, ಗೋವಿಂದ ಭಟ್ ಎದುರ್ತೊಡು, ರಾಜೇಶ್, ವಿದ್ಯಾಪೂರ್ಣ, ಪ್ರೇಮಲತಾ, ಸುಂದರ ಬಾರಡ್ಕ, ನರಸಿಂಹ ಭಟ್, ಈಶ್ವರ ಭಟ್ ಸಂಪತ್ತಿಲ, ಕೆ. ಎಂ. ಶರ್ಮ, ಶಂಕರನಾರಾಯಣ ಭಟ್ ಸಂಪತ್ತಿಲ ಮೊದಲಾದವರು ಈ ಸಂದರ್ಭದಲ್ಲಿ ಮಾತಾಡಿ ಕವಿ ಪೊಟ್ಟಿಪ್ಪಲ ನಾರಾಯಣ ಭಟ್ಟರ ವ್ಯಕ್ತಿತ್ವದ ವಿವಿಧ ಮುಖಗಳನ್ನು ಹಾಗೂ ಸಮಾಜಕ್ಕೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಿದರು.
ಸೊಸೆ ಡಾ. ವಾಣಿಶ್ರೀ ಸ್ವಾಗತಿಸಿದರು. ಪುತ್ರ ಡಾ. ಗಿರೀಶ್ ಪೊಟ್ಟಿಪ್ಪಲ ಅತಿಥಿಗಳಿಗೆ ನೆನಪಿನ ಕಾಣಿಕೆ ನೀಡಿದರು. ವೇದಿಕೆಯ ಕಾರ್ಯದರ್ಶಿ ಗುರುರಾಜ್ ಎಂ.ಆರ್. ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಮಾಡಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ