ಪ್ರಕೃತಿಯೊಂದಿಗಿನ ಸಮನ್ವಯದ ಬದುಕೇ ನೈಜ ಪರಿಸರ ಪ್ರಜ್ಞೆ: ಪ್ರತಾಪ್ ಸಿಂಹ ನಾಯಕ್

Upayuktha
0


ಉಜಿರೆ: ಮಾನವನು ಕೂಡ ಪ್ರಕೃತಿಯ ಅವಿಭಜಿತ ಭಾಗವಾದ್ದರಿಂದ, ಪ್ರಕೃತಿಯ ಜೊತೆಗೆ ಬದುಕುವ ಪರಿಪಾಠವನ್ನು ಬೆಳಿಸಿಕೊಳ್ಳಬೇಕು ಎಂದು ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಹೇಳಿದರು.


ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣೆ ಕಾರ್ಯಪಡೆ, ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಮತ್ತು ಉಜಿರೆಯ ಶ್ರೀ ಧ.ಮ ಕಾಲೇಜು ಸಹಭಾಗಿತ್ವದಲ್ಲಿ ಉಜಿರೆಯ ಸಿದ್ದವನ ಗುರುಕುಲದಲ್ಲಿ  ನಡೆದ ಪಶ್ಚಿಮ ಘಟ್ಟಗಳ ಸಂರಕ್ಷಣೆ, ಮಹತ್ವ ಹಾಗೂ ನೇತ್ರಾವತಿ ಮತ್ತು ಇತರೆ ಉಪನದಿಗಳ ಪವಿತ್ರತೆ- ಪ್ರಾಮುಖ್ಯತೆ ಕುರಿತಾದ ವಿಚಾರ ಸಂಕಿರಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡಿದರು.


ನಮ್ಮ ಹಿರಿಯರು ಪ್ರಕೃತಿಯನ್ನು ಧಾರ್ಮಿಕ ನೆಲೆಗಟ್ಟಿನ ಮೂಲಕ ಸಂರಕ್ಷಿಸಿ ಪ್ರಸ್ತುತ ಪೀಳಿಗೆಗೆ ವರ್ಗಾಯಿಸಿದ್ದಾರೆ. ಹಾಗಾಗಿ ಪ್ರಕೃತಿಯನ್ನು ತನ್ನ ಮೂಲಸ್ವರೂಪದಲ್ಲಿಯೇ ಮುಂದಿನ ಪೀಳಿಗೆಗೆ ನೀಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಈ ಘನ ಜವಾಬ್ದಾರಿಯನ್ನು ನಮಗೆ ಪುನರ್ಮನನ ಮಾಡಿಸುವ ಕಾರ್ಯಕ್ರಮ ಇದಾಗಲಿ ಎಂದು ಆಶಿಸಿದರು.


ಮಾನವನ ಸ್ವಾರ್ಥ ಕೇಂದ್ರಿತ ಕಾರ್ಯಚಟುವಟಿಕೆಗಳಿಂದ ಪ್ರಕೃತಿ ಪತನೋನ್ಮುಖವಾಗಿ ಸಾಗುತ್ತಿದೆ. ಪರಿಸರದ ಉಳಿವಿನಲ್ಲಿಯೇ ನಮ್ಮೆಲ್ಲರ ಅಸ್ತಿತ್ವವು ಅಡಗಿದೆ ಎಂಬ ಸತ್ಯವನ್ನು ಮನದಟ್ಟು ಮಾಡಿಕೊಂಡು ಪರಿಸರ ಸಂರಕ್ಷಣೆಯತ್ತ ಕಾರ್ಯಪ್ರವೃತ್ತರಾಗಬೇಕು ಎಂದರು.


ಕಾರ್ಯಕ್ರಮದಲ್ಲಿ ಉದ್ಘಾಟಕರಾದ ಡಾ. ಡಿ ವೀರೇಂದ್ರ ಹೆಗ್ಗಡೆ, ಡಾ. ಹೇಮಾವತಿ ಹೆಗ್ಗಡೆ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ.ಸುರೇಂದ್ರ ಕುಮಾರ್, ಮಂಗಳೂರು ವೃತ್ತದ ಮುಖ್ಯ ಸಂರಕ್ಷಣಾ ಅಧಿಕಾರಿ ಪ್ರಕಾಶ್ ಎಸ್ ನಟಾಲ್ಕರ್, ಡಿ.ಎಫ್.ಓ ದಿನೇಶ್  ಉಪಸ್ಥಿತರಿದ್ದರು.


ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣೆ ಕಾರ್ಯಪಡೆಯ ಅಧ್ಯಕ್ಷ ರವಿ ಕುಶಾಲಪ್ಪ ಸ್ವಾಗತಿಸಿ, ಎಸ್.ಡಿ.ಎಂ ಕಾಲೇಜು ಪ್ರಾಂಶುಪಾಲ ಡಾ. ಪಿ.ಎನ್ ಉದಯಚಂದ್ರ ವಂದನಾರ್ಪಣೆ ನೆರವೇರಿಸಿದರು. ಡಾ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.


ಎಸ್.ಡಿಎಂ ಅರ್ಬೊರೇಟಮ್ ನ ಸಸ್ಯಗಳ ಮಾಹಿತಿ ಇರುವ ನೂತನ ಆಪ್ ನ್ನು ಡಾ.ಡಿ ವೀರೇಂದ್ರ ಹೆಗ್ಗಡೆಯವರು ಲೋಕಾರ್ಪಣೆಗೊಳಿಸಿದರು. ರವಿ ಕುಶಾಲಪ್ಪ ಅವರು ಗ್ರೀನ್ ಸೋಲ್ಜರ್ ಗಳಿಗೆ ಟಿ- ಶರ್ಟ್ ವಿತರಣೆ ಮಾಡಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top