|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗೋವಾ- ಕೇರಳ ಮಾದರಿ ಪ್ರವಾಸೋದ್ಯಮಕ್ಕೆ ಆದ್ಯತೆ: ಸಿಎಂ ಬೊಮ್ಮಾಯಿ

ಗೋವಾ- ಕೇರಳ ಮಾದರಿ ಪ್ರವಾಸೋದ್ಯಮಕ್ಕೆ ಆದ್ಯತೆ: ಸಿಎಂ ಬೊಮ್ಮಾಯಿ

ಬಂಟ್ವಾಳ: ಜಿಲ್ಲಾ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆ 


ಬಂಟ್ವಾಳ:  ಅವಿಭಜಿತ ಕರಾವಳಿ ಜಿಲ್ಲೆಯಲ್ಲಿ ಟೆಂಪಲ್ ಟೂರಿಸಂ ಸೇರಿದಂತೆ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶಗಳು ಇದ್ದರೂ ನ್ಯಾಯ ಸಿಕ್ಕಿಲ್ಲ. ಗೋವಾ ಮತ್ತು ಕೇರಳ ಮಾದರಿಯಲ್ಲಿ ಕರಾವಳಿ ಜಿಲ್ಲೆಯನ್ನು ಪ್ರವಾಸೋದ್ಯಮ ಮೂಲಕ ಸಮಗ್ರ ಅಭಿವೃದ್ಧಿಪಡಿಸಿ ಉದ್ಯೋಗಾವಕಾಶ ಹೆಚ್ಚಳಕ್ಕೆ ಆದ್ಯತೆ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು. 


ಇಲ್ಲಿನ ಬಂಟರ ಭವನದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಮಂಗಳೂರು ಮತ್ತು ಕಾರವಾರ ಬಂದರು ವಿಸ್ತರಣೆಗೆ ಈಗಾಗಲೇ ಬಜೆಟ್‌ನಲ್ಲಿ ಅನುದಾನ ಘೋಷಿಸಿದ್ದು, ಕೇಂದ್ರ ಸರಕಾರ ಈ ಯೋಜನೆ ಕೈಗೆತ್ತಿಕೊಂಡಿದೆ. ಮುಂದಿನ ದಿನಗಳಲ್ಲಿ 8 ಮೀನುಗಾರಿಕಾ ಬಂದರುಗಳ ಡ್ರೆಜ್ಜಿಂಗ್ ಕೈಗೆತ್ತಿಕೊಂಡು ಹೆಚ್ಚಿನ ದೋಣಿಗಳ ನಿಲುಗಡೆಗೆ ಅವಕಾಶ ಸಿಗಲಿದೆ. ಸಾಮಾನ್ಯ ಮೀನುಗಾರ ಕೂಡಾ ಆಳ ಮೀನುಗಾರಿಕೆ ಮಾಡಲು 100 ಹೈಸ್ಪೀಡ್ ಬೋಟ್ ವಿತರಣೆ ಮತ್ತು ಸಬ್ಸಿಡಿ ದರದಲ್ಲಿ ಇಂಧನ ಪೂರೈಕೆಗೆ ಸಕರ್ಾರ ಬದ್ಧವಾಗಿದೆ ಎಂದರು. ಜಿಲ್ಲೆಗೊಂದು ಕೈಗಾರಿಕಾ ಪಾರ್ಕ್‌  ರಚನೆಗೆ ಜಮೀನು ಗುರುತಿಸಲು ಆಯಾಯ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಇಲ್ಲಿನ ಅಕ್ರಮ-ಸಕ್ರಮ, ಕಾನ-ಬಾನ, ಕುಮ್ಕಿ, ಡೀಮ್ಡ್ ಫಾರೆಸ್ಟ್ ಜಮೀನು ಮತ್ತಿತರ ಸಮಸ್ಯೆ ನಿವಾರಣೆಗೆ ಪ್ರಯತ್ನ ನಡೆದಿದೆ ಎಂದರು.


ಬಿಜೆಪಿ ಕಾರ್ಯಕರ್ತರ ಗೌರವ ಕಾಂಗ್ರೆಸ್ ನಾಯಕರಿಗಿಲ್ಲ:

ಕರಾವಳಿ ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಪಕ್ಷ ಸಂಘಟನಾತ್ಮಕ ಮತ್ತು ಬಲಿಷ್ಟವಾಗಿ ಬೆಳೆದು ಬಂದು ನವ ಕರ್ನಾಟಕ ನಿರ್ಮಾಣಕ್ಕೆ ರಾಜ್ಯಕ್ಕೆ ಸ್ಪೂರ್ತಿಯಾಗಿದೆ. ಜಗತ್ತಿನಲ್ಲಿ ಗರಿಷ್ಟ ಸಂಖ್ಯೆಯ ಸದಸ್ಯರನ್ನು ಹೊಂದಿರುವ ಬಿಜೆಪಿ ಚೀನಾದ ಕಮ್ಯೂನಿಸ್ಟ್ ಪಕ್ಷವನ್ನೂ ಮೀರಿ ಬೆಳೆದಿದೆ. ದೇಶದಲ್ಲಿ ಶತಮಾನದ ಹಿನ್ನೆಲೆ ಹೊಂದಿರುವ ಕಾಂಗ್ರೆಸ್ ಪ್ರತೀ ದಿನ ಕ್ಷೀಣಿಸುತ್ತಿದ್ದು, ಬಿಜೆಪಿ ಕಾರ್ಯಕರ್ತರಿಗೆ ಇರುವ ಗೌರವ ಕಾಂಗ್ರೆಸ್ ನಾಯಕರಿಗೆ ಸಿಗುತ್ತಿಲ್ಲ ಎಂದು ಅವರು ಲೇವಡಿ ಮಾಡಿದರು.


ಸಾಧನೆ ತಿಳಿಸಿ: ಡಿವಿಎಸ್ 

ಕೇಂದ್ರ ಮಾಜಿ ಸಚಿವ, ಸಂಸದ ಡಿ.ವಿ.ಸದಾನಮದ ಗೌಡ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರದ ಸಾಧನೆಗಳನ್ನು ಬೂತ್ ಮಟ್ಟದಲ್ಲಿ ಜನ ಸಾಮಾನ್ಯರಿಗೆ ತಿಳಿಸುವ ಮಹತ್ತರ ಜವಾಬ್ದಾರಿ ಪಕ್ಷದ ಕಾರ್ಯಕರ್ತರಿಗೆ ಇದೆ. ವಿರೋಧಿಗಳೇ ನಮ್ಮ ಅಸ್ತ್ರವಾಗಬೇಕೇ ವಿನಃ ವಿರೋಧಿಗಳ ಕೈಗೆ ನಾವು ಅಸ್ತ್ರವಾಗಬಾರದು ಎಂದರು. 


ಕರಾವಳಿ ದೇವರ ಮೂಲೆ: ಶ್ರೀರಾಮಲು

ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಮಾತನಾಡಿ, ಕರಾವಳಿ ಜಿಲ್ಲೆ ಬಿಜೆಪಿಗೆ ದೇವರ ಮೂಲೆ ಇದ್ದ ಹಾಗಿದೆ. ಸುಬ್ರಹ್ಮಣ್ಯ ಸ್ವಾಮಿ ನಾಡಿನ ಕಾರ್ಯಕರ್ತರು ಶ್ರಮಿಸಿದರೆ ರಾಜ್ಯದಲ್ಲಿ 150 ಸೀಟು ಗೆದ್ದು ಬಿಜೆಪಿಯ ವಿಜಯ ಪತಾಕೆ ಹಾರಲು ಪ್ರೇರಣೆ ಸಿಗಲಿದೆ ಎಂದರು. ಕಾಂಗ್ರೆಸ್ಸಿನಲ್ಲಿ ಕಳೆದು ಹೋಗಿರುವ ಕೂಸಿನಂತೆ ಇರುವ ಸಿದ್ಧರಾಮಯ್ಯ ಬಿಜೆಪಿ ಕಿತ್ತೊಗೆಯಿರಿ ಎನ್ನಲು ಅದೇನು ಕೊತ್ತಂಬರಿ ಸೊಪ್ಪಾ...? ಎಂದು ಪ್ರಶ್ನಿಸಿದರು.  


ಅಭಿವೃದ್ಧಿ ಮತ್ತು ಹಿಂದುತ್ವ ಆಧಾರದಲ್ಲಿ ಚುನಾವಣೆ: ಸುನಿಲ್ 

ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಹಿಂದುತ್ವ ಮತ್ತು ಅಭಿವೃದ್ಧಿ ವಿಚಾರದಲ್ಲಿ ಚುನಾವಣೆ ಎದುರಿಸುತ್ತಿದ್ದು, ಕಳೆದ ಮೂರು ವರ್ಷ  ಬಿಜೆಪಿ ಸರಕಾರದಿಂದ ವಿವಿಧ ಸೌಲಭ್ಯ ಪಡೆದ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ ಸಮಾವೇಶ ನಡೆಸುವ ಅಗತ್ಯವಿದೆ ಎಂದರು. 


ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡುಬಿದ್ರೆ ಮಾತನಾಡಿದರು. 


ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ ನಾರಾಯಣ,  ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ ಸವದಿ, ನಿರ್ಮಲ್ ಕುಮಾರ್ ಸುರಾನ, ರಾಜ್ಯ ಕಾರ್ಯದರ್ಶಿ  ವಿನಯ್ ಬಿದರೆ,  ನಯನ ಗಣೇಶ್, ಶಾಸಕರಾದ ಸಂಜೀವ ಮಠಂದೂರು, ಉಮಾನಾಥ ಕೋಟ್ಯಾನ್, ಹರೀಶ್ ಪೂಂಜ, ಡಾ.ವೈ.ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ಜಿಲ್ಲಾ ಸಹಪ್ರಭಾರಿ ಭಾರತೀಶ್, ರಾಜೇಶ್ ಕಾವೇರಿ ಇದ್ದರು.  


ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಸ್ವಾಗತಿಸಿ, ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ವಂದಿಸಿದರು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ  ಸುಧೀರ್ ಶೆಟ್ಟಿ ಕಣ್ಣೂರು, ರಾಮದಾಸ್ ಬಂಟ್ವಾಳ್, ಬೂಡಾ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಕಪ್ಪು ಬಾವುಟ ಪ್ರದರ್ಶನ:

ಸಚಿವ ಈಶ್ವರಪ್ಪ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ಎಸ್ ಡಿ ಪಿ ಐ ಕಾರ್ಯಕರ್ತರು ವಳಚ್ಚಿಲ್ ಮತ್ತು ಫರಂಗಿಪೇಟೆಯಲ್ಲಿ ಮುಖ್ಯಮಂತ್ರಿ ಕಾರಿಗೆ ಕಪ್ಪು ಬಾವುಟ ಪ್ರದರ್ಶನಕ್ಕೆ ಮುಂದಾದರು. ಇದನ್ನು ಗಮನಿಸಿದ ಪೊಲೀಸರು ಮುಖ್ಯಮಂತ್ರಿ ಅಗಮಿಸುವ ಮೊದಲೇ ಅವರನ್ನು ಸ್ಥಳದಿಂದ ಚದುರಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post