|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರೋಗ ನಿರೋಧಕ ಶಕ್ತಿ ಮತ್ತು ಆಹಾರ

ರೋಗ ನಿರೋಧಕ ಶಕ್ತಿ ಮತ್ತು ಆಹಾರ



ನಮ್ಮ ದೇಹಕ್ಕೆ ಯಾವುದೇ ರೋಗ ಬರಬಾರದು ಎಂದಾದಲ್ಲಿ ನಮ್ಮ ದೇಹದ ಇಮ್ಯುನಿಟಿ ಅಥವಾ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಆಹಾರಗಳನ್ನು ಸೇವಿಸುವುದು ಅತೀ ಅವಶ್ಯಕ. ರೋಗ ಬರದಂತೆ ತಡೆಯುವಲ್ಲಿ ಕೆಲವೊಂದು ಆಹಾರ ವಸ್ತುಗಳು ಈ ನಿಟ್ಟಿನಲ್ಲಿ ಬಹುಮುಖ್ಯ ಭೂಮಿಕೆ ವಹಿಸುತ್ತದೆ. ಈ ಕಾರಣದಿಂದಲೇ ನಮ್ಮ ಹಿರಿಯರು ಮಾತು ಬಲ್ಲವನಿಗೆ ಜಗಳವಿಲ್ಲ. ಊಟ ಬಲ್ಲವನಿಗೆ ರೋಗವಿಲ್ಲ ಎಂದು ಹೇಳಿದ್ದಾರೆ. ನಾವು ನಮ್ಮ ದೈನಂದಿನ ಜೀವನದಲ್ಲಿ ಈ ಆಹಾರಗಳನ್ನು ದಿನನಿತ್ಯ ಉಪಯೋಗಿಸಿದಲ್ಲಿ ಖಂಡಿತವಾಗಿಯೂ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸಿ ನೂರು ಕಾಲ ಸುಖವಾಗಿ ಬಾಳುವುದರಲ್ಲಿ ಸಂದೇಹವೇ ಇಲ್ಲ.


ನಮ್ಮ ದೇಹದ ರಕ್ಷಣಾ ವ್ಯವಸ್ಥೆಗೆ ಪೂರಕವಾಗಿ ಕೆಲಸ ಮಾಡುವ ಆಹಾರಗಳು ಯಾವುದೆಂದರೆ  ಹುಳಿ ಅಂಶ ಜಾಸ್ತಿ  ಇರುವ ಸಿಟ್ರಸ್ ಹಣ್ಣುಗಳು, ಕ್ಯಾಪ್ಸಿಕಮ್ ಅಥವಾ ದೊಣ್ಣೆ ಮೆಣಸಿನ ಕಾಯಿ, ಬ್ರೋಕೋಲಿ, ಬೆಳ್ಳುಳ್ಳಿ, ಶುಂಠಿ, ಸೊಪ್ಪು ತರಕಾರಿಗಳು, ಅರಶಿನ, ಬಾದಾಮ್, ಮೊಸರು, ಪಪ್ಪಾಯಿ ಹಣ್ಣು ಇತ್ಯಾದಿಗಳು.


ಸಿಟ್ರಸ್ ಹಣ್ಣುಗಳು: ಸಿಟ್ರಸ್ ಹಣ್ಣುಗಳು ಅಥವಾ  ಹುಳಿ ಅಂಶ ಹೆಚ್ಚಾಗಿರುವ ಹಣ್ಣುಗಳಲ್ಲಿ ವಿಟಮಿನ್ ‘ಸಿ’  ಬಹಳ ಹೇರಳವಾಗಿ ಇರುತ್ತವೆ. ನಮಗೆ ಶೀತವಾದಾಗಲೆಲ್ಲಾ ನಾವು ಕಿತ್ತಳೆ ಮುಸುಂಬಿ ತಿನ್ನುವ ಉದ್ದೇಶವೇ ಇದಾಗಿರುತ್ತದೆ. ವಿಟಮಿನ್ ‘ಸಿ’ ಬಿಳಿ ರಕ್ತಕಣಗಳ ಉತ್ಪಾದನೆಯನ್ನು ವೃದ್ಧಿಸುತ್ತದೆ. ದ್ರಾಕ್ಷಿ, ಮುಸುಂಬಿ, ಕಿತ್ತಳೆ, ಲಿಂಬೆ ಇವೆಲ್ಲದರಲ್ಲಿಯೂ ವಿಟಮಿನ್ ‘ಸಿ’ ಹೇರಳವಾಗಿದೆ. ನಮ್ಮ ದೇಹ ವಿಟಮಿನ್ ‘ಸಿ’ಯನ್ನು ಉತ್ಪಾದಿಸುವುದಿಲ್ಲ ಮತ್ತು  ಶೇಖರಣೆ ಮಾಡುವುದಿಲ್ಲ. ಈ ಕಾರಣದಿಂದ ದಿನನಿತ್ಯದ ಆಹಾರದಲ್ಲಿ ನಮಗೆ ವಿಟಮಿನ್ ‘ಸಿ’ ಅತೀ ಅವಶ್ಯಕ. ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ‘ಸಿ’ ಸಿಕ್ಕಿದ್ದಲ್ಲಿ ದೇಹಕ್ಕೆ ಸೋಂಕು ತಗಲದಂತೆ ಅಥವಾ ಸೋಂಕು ಬರದಂತೆ ತಡೆದುಕೊಳ್ಳುವ ಶಕ್ತಿ ಬರುತ್ತದೆ.


ಕ್ಯಾಪ್ಸಿಕಮ್: ಇದೊಂದು ವಿಶೇಷ ತರಕಾರಿಯಾಗಿದ್ದು, ಹಣ್ಣಿಗಿಂತಲೂ ಹೆಚ್ಚು ವಿಟಮಿನ್ ‘ಸಿ’ ಇದ್ದಲ್ಲಿ ಇರುತ್ತದೆ. ಇದರ ಜೊತೆಗೆ ಬೀಡಾ ಕೆರೋಟಿನ್ ಕೂಡಾ ಹೆಚ್ಚು ಇರುತ್ತದೆ. ನಮ್ಮ ದೇಹದ ರಕ್ಷಣಾ ವ್ಯವಸ್ಥೆಯನ್ನು ದೃಢಗೊಳಿಸುವುದರ ಜೊತೆಗೆ ಚರ್ಮದ ಕಾಂತಿ ಮತ್ತು ಕಣ್ಣಿನ ಆರೋಗ್ಯವನ್ನು ವೃದ್ಧಿಸುತ್ತದೆ.


ಬ್ರೋಕೋಲಿ: ಇದೊಂದು ಸಮತೋಲಿತ ಆಹಾರವಾಗಿದ್ದು, ಕೋಸುಗಡ್ಡೆ ಎಂದು ಕರೆಯುತ್ತಾರೆ. ಇದರಲ್ಲಿ ವಿಟಮಿನ್ A,C, ಮತ್ತು E ಹೇರಳವಾಗಿರುತ್ತದೆ. ಇದರ ಜೊತೆಗೆ ಖನಿಜಾಂಶಗಳು, ಆಂಟಿ ಆಕ್ಸಿಡೆಂಟ್‍ಗಳು ಮತ್ತು ನಾರಿನಾಂಶ ಹೇರಳವಾಗಿದೆ. ದೈನಂದಿನ ಆಹಾರದಲ್ಲಿ ಇದು ಅತ್ಯಂತ ಆರೋಗ್ಯಪೂರ್ಣ ಆಹಾರವಾಗಿದೆ ಮತ್ತು ಅನಗತ್ಯವಾಗಿ ಹೆಚ್ಚು ಬೇಯಿಸಿದಲ್ಲಿ ಇದರ ಶಕ್ತಿ ಕುಂದುವ ಸಾಧ್ಯತೆ ಇದೆ.


ಬೆಳ್ಳುಳ್ಳಿ: ಬೆಳ್ಳುಳ್ಳಿ ಎನ್ನುವುದು ಅತ್ಯಂತ  ಶಕ್ತಶಾಲಿ ಆಹಾರವಾಗಿದೆ. ಎಲ್ಲಾ ಆಹಾರದ ಜೊತೆ ಸೇರಿಕೊಳ್ಳುತ್ತದೆ. ಸೋಂಕು ತಡೆಯಲು ರಕ್ಷಣಾ ವ್ಯವಸ್ಥೆ ದೃಢವಾಗಲು ಬೆಳ್ಳುಳ್ಳಿಅತೀ ಅಗತ್ಯ. ರಕ್ತದೊತ್ತಡ ನಿಯಂತ್ರಿಸಿ, ರಕ್ತನಾಳಗಳು ಪೆಡಸಾದಂತೆ ತಡೆಯುತ್ತದೆ. ಬೆಳ್ಳುಳ್ಳಿಯೊಳಗಿರುವ ಸಲ್ಫರ್ ಇರುವ ಆಲಿಸಿನ್ ಎಂಬ ವಸ್ತುಗಳು ಬೆಳ್ಳುಳ್ಳಿಗೆ ರೋಗ ನಿರೋಧಕತೆ ಶಕ್ತಿ ನೀಡುತ್ತದೆ.


ಶುಂಠಿ: ಶುಂಠಿ ಕೂಡಾ  ದೇಹದ ಆರೋಗ್ಯವನ್ನು ವೃದ್ಧಿಸುತ್ತದೆ. ದೇಹದಲ್ಲಿನ ಉರಿಯೂತವನ್ನು ತಗ್ಗಿಸುವಲ್ಲಿ  ಶುಂಠಿ ಮಹತ್ತರ ಪಾತ್ರ ವಹಿಸುತ್ತದೆ. ವಾಕರಿಕೆ ನಿವಾರಿಸಲು ಉರಿಯೂತ ತಗ್ಗಿಸಲು ಮತ್ತು ಕೊಲೆಸ್ಟ್ರಾಲ್ ನಿಯಂತ್ರಿಸಲು ಶುಂಠಿ ಅತೀ ಅಗತ್ಯವಾಗಿರುತ್ತದೆ. ಹಿತಮಿತವಾಗಿ ಸೇವಿಸುವುದು ಒಳ್ಳೆಯದು.


ಹಸಿರು ಸೊಪ್ಪುಗಳು: ಬಸಳೆ, ಹರಿವೆ ಮುಂತಾದ ಹಸಿ ಸೊಪ್ಪುಗಳಿಂದ ಕೂಡಿದ ಆಹಾರದಲ್ಲಿ ವಿಟಮಿನ್ ‘ಸಿ’ ಜೊತೆಗೆ ಆಂಟಿಆಕ್ಸಿಡೆಂಟ್‍ಗಳು, ಬೀಟಾ ಕೆರೋಟಿನ್‍ಗಳು ಹೇರಳವಾಗಿದೆ. ಸೋಂಕು ತಡೆಯುವಲ್ಲಿ ಮತ್ತು ರಕ್ಷಣಾ ವ್ಯವಸ್ಥೆಯನ್ನು ದೃಢವಾಗಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಈ ಆಹಾರವನ್ನು ಹೆಚ್ಚಾಗಿ ಬೇಯಿಸಬಾರದು. ವಿಟಮಿನ್ A ಕೂಡಾ ಈ ಸೊಪ್ಪುಗಳಲ್ಲಿ ಹೇರಳವಾಗಿರುತ್ತದೆ.


ಬಾದಾಮ್: ಇದರಲ್ಲಿ ವಿಟಮಿನ್ ‘ಇ’ ಹೇರಳವಾಗಿರುತ್ತದೆ. ದೇಹದ ರಕ್ಷಣಾ ವ್ಯವಸ್ಥೆಯಲ್ಲಿ ಸದೃಢವಾಗಿಸುವಲ್ಲಿ  ವಿಟಮಿನ್ ಸಿ ಯಷ್ಟೇ ಪ್ರಾಮುಖ್ಯತೆಯನ್ನು ವಿಟಮಿನ್ ‘ಇ’ ಹೊಂದಿದೆ. ಬಾದಾಮ್‍ನಲ್ಲಿ ಆರೋಗ್ಯಪೂರ್ಣವಾದ ಕೊಬ್ಬು ಕೂಡಾ ಅಗತ್ಯ ಪ್ರಮಾಣದಲ್ಲಿ ಇರುತ್ತದೆ.


ಅರಶಿನ: ದೇಹದ ಉರಿಯೂತ ತಗ್ಗಿಸಲು ಅರಶಿನ ಅತೀ ಅಗತ್ಯ. ಅರಶಿನದಲ್ಲಿರುವ ‘ಕರ್ರ್‍ಕ್ಯುಮಿನ್’ ಎಂಬ ರಾಸಾಯನಿಕ ವಿಶೇಷವಾದ ಹಳದಿ ಬಣ್ಣವನ್ನು ಒದಗಿಸುತ್ತದೆ. ದೇಹದ ಸ್ನಾಯುಗಳಿಗೆ ಉಂಟಾದ ಗಾಯವನ್ನು ಸರಿಪಡಿಸಲು ‘ಅರಶಿನ’ ಅತೀ ಅಗತ್ಯ. ಗಂಟುಗಳಿಗೆ ಉಂಟಾದ ಉರಿಯೂತವನ್ನು ತಗ್ಗಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.


ಪಪ್ಪಾಯ: ಇದೊಂದು ವಿಶಿಷ್ಟ ಹಣ್ಣಾಗಿದ್ದು, ವಿಟಮಿನ್ ‘ಸಿ’ ಹೇರಳವಾಗಿದೆ. ಪಾಪೈನ್ ಎಂಬ ಜೀರ್ಣಶಕ್ತಿ ವೃದ್ಧಿಸುವ ಕಿಣ್ಣನ್ನು ಪಪ್ಪಾಯ ಹಣ್ಣು ಹೊಂದಿದ್ದು, ಜೀರ್ಣಾಂಗ ವ್ಯವಸ್ಥೆಗೆ ಪೂರಕವಾಗಿ ಕೆಲಸ ಮಾಡುತ್ತದೆ. ಇದಲ್ಲದೆ, ಪೊಟಾಸಿಯಂ, ವಿಟಮಿನ್ ‘ಬಿ’ ಮತ್ತು ಪೊಲಿಕ್ ಆಸಿಡ್ ಕೂಡಾ ಹೊಂದಿದ್ದು, ದೇಹದ ರಕ್ಷಣಾ ವ್ಯವಸ್ಥೆಯನ್ನು ಸದೃಢಗೊಳಿಸುತ್ತದೆ.


ಕೊನೆಮಾತು:

ನಮ್ಮ ದೈನಂದಿನ ಜೀವನದಲ್ಲಿ ನಾವು ಸೇವಿಸುವ ಆಹಾರಗಳು ನಮ್ಮ ದೇಹದ ಆರೋಗ್ಯಕ್ಕೆ ಪೂರಕವಾಗಿರಬೇಕೇ ಹೊರತು ಮಾರಕವಾಗಿರಬಾರದು. ಈಗಿನ ಕಾಲಘಟ್ಟದಲ್ಲಿ ನಾವು ತಿನ್ನುವ ಆಹಾರ, ಕುಡಿಯುವ ನೀವು ಸೇವಿಸುವ ಗಾಳಿ ಎಲ್ಲವೂ ಕಲುಷಿತವಾಗಿದೆ. ಸಂಸ್ಕರಿಸಿದ ಎಲ್ಲಾ ಹೆಚ್ಚಿನ  ಆಹಾರಗಳಲ್ಲಿ  ಬಣ್ಣ ಬರಿಸುವ ರಾಸಾಯನಿಕಗಳು ಮತ್ತು ಆಹಾರ ಹಾಳಾಗದಂತೆ ಬಳಸುವ ರಾಸಾಯನಿಕಗಳಿಂದಾಗಿ  ಆಹಾರವೇ ವಿಷವಾಗಿ ಪರಿವರ್ತನೆಯಾಗಿದೆ. ನಾವು ತಿನ್ನುವ ಆಹಾರ ಪರಿಶುದ್ದವಾಗಿರಬೇಕು ಮತ್ತು ಆದಷ್ಟು ತಾಜಾ ಆಹಾರವಾಗಿದ್ದಲ್ಲಿ ಉತ್ತಮ. ಶೇಖರಿಸಿದ, ಸಂಸ್ಕರಿಸಿದ, ಬಣ್ಣ ಬದಲಿಸಿದ ಆಹಾರಗಳಿಂದ ನಮ್ಮ ದೇಹಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ನಾವು ತಿನ್ನುವ ಆಹಾರವೇ ನಮಗೆ ಔಷಧಿಯಂತಿರಬೇಕು. ಇಲ್ಲವಾದಲ್ಲಿ ಔಷಧಿಯನ್ನೇ ಆಹಾರದಂತೆ ಸೇವಿಸುವ ದಿನಗಳು ದೂರವಿಲ್ಲ.

-ಡಾ|| ಮುರಲೀ ಮೋಹನ ಚೂಂತಾರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 تعليقات

إرسال تعليق

Post a Comment (0)

أحدث أقدم