|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 'ಏಕಚಕ್ರಮ್‌' ಚಿತ್ರದ 'ಬಕ'ನ ಜತೆ ಒಂದಿಷ್ಟು ಮಾತು

'ಏಕಚಕ್ರಮ್‌' ಚಿತ್ರದ 'ಬಕ'ನ ಜತೆ ಒಂದಿಷ್ಟು ಮಾತು


ಶರತ್ ಲೋಹಿತಾಶ್ವ



ಮೊನ್ನೆ ತಾನೇ ಬಿಡುಗಡೆಯಾದ ಸಂಸ್ಕೃತ ಚಲನಚಿತ್ರ ಏಕಚಕ್ರಮ್ (ಕನ್ನಡ ಅತರಣಿಕೆಯೂ ಬಂದಿದೆ) ನಲ್ಲಿ ಬಕಾಸುರನ ಪಾತ್ರವನ್ನು ಮನೋಜ್ಞವಾಗಿ ನಿರ್ವಹಿಸಿರುವ ಹೆಸರಾಂತ ಕಲಾವಿದರು.


ಕನ್ನಡ ಚಿತ್ರರಂಗದಲ್ಲಿ ಬಹುತೇಕ ಸಹಾಯಕ ಪಾತ್ರಗಳನ್ನು ಹಾಗೂ ಖಳನಾಯಕನ ಪಾತ್ರಗಳನ್ನು ನಿರ್ವಹಿಸಿದವರು ಶರತ್‌. ತೆರೆಯ ಮೇಲೆ ಖಳನ ಪಾತ್ರ ವಹಿಸಿದರೂ ನಿಜ ಜೀವನದಲ್ಲಿ ಅತ್ಯಂತ ಸಾತ್ವಿಕ, ಸಹೃದಯಿ ಹಾಗೂ ಮೊದಲ ಮಾತಿನಲ್ಲೇ ಆತ್ಮೀಯರಾಗಿಬಿಡುವ ಸ್ನೇಹಜೀವಿ ಅವರು.


ಕನ್ನಡದ ಹಿರಿಯನಟ ಲೋಹಿತಾಶ್ವ ಅವರ ಪುತ್ರರಾಗಿರುವ ಶರತ್‌, ಹಲವಾರು ಟಿವಿ ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ದೂರದರ್ಶನದಲ್ಲಿ (ಡಿಡಿ) ಪ್ರಸಾರವಾಗುತ್ತಿದ್ದ 'ಚಿದಂಬರ ರಹಸ್ಯ' ಧಾರಾವಾಹಿಯಲ್ಲಿ ನಟಿಸಿದ್ದರು. ಶರತ್ ಅವರು ಉತ್ತಮ ಗಾಯಕರೂ ಹೌದು. ಕೆಲವು ಕನ್ನಡ ಚಿತ್ರಗಳಿಗೆ ಧ್ವನಿಯನ್ನೂ ನೀಡಿದ್ದಾರೆ.


''ಏಕಚಕ್ರಮ್‌ ಚಲನಚಿತ್ರದ ನಿರ್ದೇಶಕ ಸುಚೇಂದ್ರ ಪ್ರಸಾದ್ ಅವರು ನನ್ನ ಆತ್ಮೀಯ ಗೆಳೆಯರು. ಚಿತ್ರದ ಕುರಿತ ರೂಪುರೇಷೆಗಳು ತಯಾರಾಗುತ್ತಿದ್ದ ಸಂದರ್ಭದಲ್ಲಿ ಸ್ನೇಹಿತನ ಚಿತ್ರದಲ್ಲಿ ನಾನು ನಟಿಸುವ ಪ್ರಸ್ತಾಪ ಇರಲಿಲ್ಲ. ಆದರೆ ನಂತರದ ಹಂತದಲ್ಲಿ ನಮ್ಮಿಬ್ಬರಿಗೂ ಸ್ನೇಹಿತರಾಗಿರುವ ಕೆಲವು ಮಂದಿ ಮಾತನಾಡುವ ವೇಳೆ ಇದ್ದಕ್ಕಿದ್ದಂತೆ ನನ್ನ ಹೆಸರು ಪ್ರಸ್ತಾಪವಾಯಿತು. ಕೂಡಲೇ ಚಿತ್ರದಲ್ಲಿ 'ಬಕ'ನ ಪಾತ್ರಕ್ಕೆ ಸೂಕ್ತ ವ್ಯಕ್ತಿಯನ್ನು ಹುಡುಕುತ್ತಿದ್ದ ಗೆಳೆಯ ಸುಚಿ, ನನ್ನನ್ನು ಕರೆದು ಒಪ್ಪಿಸಿಯೇ ಬಿಟ್ಟ.


ಸಂಸ್ಕೃತ ಭಾಷೆಯಲ್ಲಿ ನನಗೆ ಹೆಚ್ಚಿನ ಜ್ಞಾನ, ಹಿಡಿತ ಎರಡೂ ಇರಲಿಲ್ಲ. ಆದರೆ ನಂತರ ಚಿತ್ರದಲ್ಲಿ ಪಾತ್ರಕ್ಕೆ ನ್ಯಾಯ ಒದಗಿಸಬೇಕೆಂಬ ಕಾರಣಕ್ಕೆ ಸಂಸ್ಕೃತದ ಸಂಭಾಷಣೆಗಳನ್ನು ಗೆಳೆಯನಿಂದಲೇ ಕಲಿತೆ. ಗೆಳೆಯ ಸುಚೇಂದ್ರ ಪ್ರಸಾದ್‌ ಎಲ್ಲ ರಂಗಗಳಲ್ಲೂ ಸವ್ಯಸಾಚಿಯೇ. ಅಡುಗೆಯಲ್ಲಿ, ನಟನೆಯಲ್ಲಿ, ಭಾಷೆಯ ಪಾಂಡಿತ್ಯದ ವಿಚಾರದಲ್ಲಿ, ಸಾಹಿತ್ಯ ಲೋಕದಲ್ಲಿ, ನಾಟಕ ರಂಗದಲ್ಲಿ, ನಿರ್ದೇಶನದಲ್ಲಿ- ಹೀಗೆ ಎಲ್ಲದರಲ್ಲೂ ಸುಚೇಂದ್ರ ಪ್ರಸಾದ್‌ ಅವರಿಗೆ ಉತ್ತಮ ಜ್ಞಾನ ಮತ್ತು ಹಿಡಿತವಿದೆ. ಆದರೆ ಅಹಂಭಾವ ಎನ್ನುವುದು ಆತನ ಹತ್ತಿರವೂ ಸುಳಿಯುವುದಿಲ್ಲ. ಇಂತಹ ಕೊರಳ ಗೆಳೆಯನ ನಿರ್ದೇಶನದ ಚಿತ್ರದಲ್ಲಿ ಸ್ನೇಹಕ್ಕಾಗಿಯೇ ನಟಿಸಿದ್ದೇನೆ.''


- ಹೀಗೆಂದು ಉಪಯುಕ್ತ ನ್ಯೂಸ್ ಜತೆ ಮಾತನಾಡಿದ ಶರತ್‌ ಲೋಹಿತಾಶ್ವ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು.


ಏಕಚಕ್ರಮ್ ಚಿತ್ರ ಅತ್ಯುತ್ತಮವಾಗಿ ಮೂಡಿಬಂದಿದೆ. ಜಗತ್ತಿನಾದ್ಯಂತ 36 ಸಂಸ್ಕೃತ ವಿಶ್ವವಿದ್ಯಾಲಯಗಳ ಮೂಲಕ ಈ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನಗಳು ಜಾರಿಯಲ್ಲಿವೆ. ಅಲ್ಲದೆ ನಾನಾ ಕಡೆಗಳಲ್ಲಿ ಆಯಾ ಊರಿನ ಸಂಘ-ಸಂಸ್ಥೆಗಳು ಆಸಕ್ತಿ ತೋರಿದರೆ ಅವುಗಳ ಮೂಲಕವಾಗಿಯೂ ಜನರಿಗೆ ತಲುಪಿಸುವ ಪ್ರಯತ್ನ ನಡೆಯುತ್ತಿದೆ.


ಶರತ್‌ ಲೋಹಿತಾಶ್ವ ಅವರು ಕನ್ನಡವಷ್ಟೇ ಅಲ್ಲ, ಮಲಯಾಳಂ, ತಮಿಳು ಮತ್ತು ತುಳು ಚಲನಚಿತ್ರಗಳಲ್ಲೂ ನಟಿಸಿ ಜನಪ್ರಿಯತೆ ಗಳಿಸಿದ್ದಾರೆ. ಅಂಬರ್ ಕೇಟರರ್ಸ್‌- ಅವರು ನಟಿಸಿದ ತುಳು ಚಲನಚಿತ್ರ.


ಜನಿಸಿದ್ದು ತುಮಕೂರಿನ ತೊಂಡಗೆರೆಯಲ್ಲಿ, 1972, ಮೇ 5ರಂದು. ರಂಗಭೂಮಿ ಮೂಲಕ ನಟನಾ ಕ್ಷೇತ್ರಕ್ಕೆ ಪಾದಾರ್ಪಣೆ. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಇಂಗ್ಲಿಷ್‌ ಎಂಎ ಓದಿದ ಬಳಿಕ ಸ್ವಲ್ಪ ಕಾಲ ಉಪನ್ಯಾಸಕರಾಗಿಯೂ ಕೆಲಸ ಮಾಡಿದ್ದಾರೆ. ಅನಂತರ ತಮ್ಮ ತಂದೆಯವರ ಹೆಜ್ಜೆಗಳನ್ನೇ ಅನುಸರಿಸಿ ನಟನೆಯನ್ನೇ ಪೂರ್ಣಕಾಲಿಕ ವೃತ್ತಿಯಾಗಿ ಅಳವಡಿಸಿಕೊಂಡರು.

-ಚಂದ್ರಶೇಖರ ಕುಳಮರ್ವ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

0 تعليقات

إرسال تعليق

Post a Comment (0)

أحدث أقدم