
ಹೀಗೊಂದು ಪ್ರಶ್ನೆ ಮನಸ್ಸಿನಲ್ಲಿ ಹುಟ್ಟಿಕೊಂಡಿತು. ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಲು ವಿವಿಯ ಬಗ್ಗೆ ಅಲ್ಲಲ್ಲಿ ನಡೆದ ಮಾತುಕತೆಗಳನ್ನು ಕುತೂಹಲಿಗನಾಗಿ ಕೇಳುತ್ತಿದ್ದೆ. ಮನಸ್ಸನ್ನು ಅರಳಿಸಬಲ್ಲುದು ಎಂಬುದಕ್ಕೆ ನಾನು ಕಂಡುಕೊಂಡ ಉತ್ತರ ಇಂತಿದೆ.
ಕೇವಲ ಒಂದು ತಿಂಗಳ ಮಗುವನ್ನು ಗಮನಿಸಿ. ಜೋರಾಗಿ ಅಳುತ್ತಿರುವಾಗ ಮನೆಯ ಕೋಣೆಯಿಂದ ಹೊರ ಕರಕೊಂಡು ಹೋದಲ್ಲಿ ಮಗು ಅಳು ನಿಲ್ಲಿಸುತ್ತದೆ. ಕಾರಣ ಆ ಮಗುವಿಗೆ ಪ್ರಪಂಚದ ಅರಿವು ಬೇಕಾಗಿದೆ. ಕೋಣೆಯಲ್ಲಿ ಬಂಧಿಯಾಗಲು ಇಷ್ಟಪಡುವುದಿಲ್ಲ. ಪ್ರಕೃತಿಯ ಅರಿವಿಗೋಸ್ಕರ ಹಂಬಲಿಸುತ್ತಿರುತ್ತದೆ. ನನ್ನ ಮೊಮ್ಮಗುವಿಗೆ ಈಗ ಒಂದು ವರ್ಷ ಮೂರು ತಿಂಗಳ ಪ್ರಾಯ. ಮೊದಲನೆಯ ಹುಟ್ಟುಹಬ್ಬಕ್ಕೆ ಕೊಳ್ಳುಬಾಕ ಸಂಸ್ಕೃತಿಯ ಪ್ರತೀಕವಾದ ಸೈಕಲ್ ಒಂದು ಮನೆಗೆ ಬಂತು. ಅದರಲ್ಲೊಂದು ಒತ್ತುಗುಂಡಿ. ಅಮುಕಿದಾಗ ಬರುವ ಹಾಡುಗಳು ಜಾನಿ ಜಾನಿ ಎಸ್ ಪಪ್ಪಾ ದಿಂದ ತೊಡಗಿ ಲಂಡನ್ ಬ್ರಿಜ್ ಫಾಲಿಂಗ್ ಡೌನ್ ನಲ್ಲಿ ಕೊನೆಗೊಳ್ಳುತ್ತದೆ. ಮಗು ನಾಲ್ಕೈದು ಬಾರಿ ಒತ್ತಿ ದೂರ ತಳ್ಳುತ್ತದೆ. ನಾಲ್ಕೈದು ದಿನದಲ್ಲಿ ಅದರ ಮೇಲಿನ ಆಸಕ್ತಿಯು ಕಡಿಮೆಯಾಗುತ್ತದೆ. ಅದೇ ಮಗು ಮನೆಯಿಂದ ಹೊರಗಡೆ ಹೋದಲ್ಲಿ ಮಣ್ಣು ಏನಾದರೂ ಸಿಕ್ಕಿದರೆ ಎಷ್ಟೊತ್ತಾದರೂ ಆಟವಾಡುವುದನ್ನು ನಿಲ್ಲಿಸುವುದಿಲ್ಲ. ಎಷ್ಟು ದಿನವಾದರೂ ಕುತೂಹಲವು ಕಡಿಮೆಯಾಗುವುದಿಲ್ಲ.
ಸೇವಾ ಸೌಧದ ನಿರ್ಮಾಣಕ್ಕೆ ಶ್ರೀರಕ್ಷೆಯಾಗಿ ರಾಮತಾರಕ ಮಂತ್ರದ ಜಪಾನುಷ್ಠಾನ ಮನೆಮನೆಯಲ್ಲಿ ನಡೆಯಲಿ ಎಂಬ ಆದೇಶ ಬಂತು. ಸಂಜೆಯ ಹೊತ್ತು ಮಗು ಏನೋ ಹಠ ಮಾಡುತ್ತಿದ್ದ ಸಮಯದಲ್ಲಿ ನಾನು ಜಪವನ್ನು ಸುರುಮಾಡಿದೆ. ಹಠ ಮಾಡುತ್ತಿದ್ದ ಮಗು ಮುಗುಳ್ನಗುತ್ತಾ ನನ್ನ ತೊಡೆಯೇರಿ ತನ್ನ ಕಾಲಿಗೆ ಕೈಯನ್ನು ತಟ್ಟುತ್ತಾ ಸಂತೋಷವನ್ನು ಅನುಭವಿಸ ಹೊರಟಿತು. ನಿದ್ರೆ ಬರುವ ಹೊತ್ತಾದರೆ ಮಂತ್ರ ಜಪ ಮಾಡುತ್ತಿದ್ದರೆ ಕೂಡಲೇ ಸುಖನಿದ್ರೆಗೆ ಜಾರುದನ್ನು ಗಮನಿಸಿದೆ. ಕುತೂಹಲಿಗನಾಗಿ ಒಂದು ದಿನ ನಿದ್ರೆಯ ಹೊತ್ತಿಗೆ ಸೈಕಲ್ ಗುಂಡಿಯನ್ನು ಅದುಮಿದೆ. ಕಿರುಚಿಕೊಂಡು ಅಳ ಹತ್ತಿತು. ನನ್ನಾಕೆ ದೇವರ ಕೋಣೆಯಲ್ಲಿ ಕುಳಿತು ಪ್ರತಿದಿನವೂ ಶ್ಲೋಕಗಳನ್ನು ಹೇಳಲು ಸುರು ಮಾಡುತ್ತಿದ್ದಂತೆ ಮಗು ಓಡೋಡಿ ಬಂದು ಅಜ್ಜಿಯ ತೊಡೆಯನ್ನು ಏರುವುದನ್ನು ಗಮನಿಸಿದೆ. ಕೇವಲ ಶ್ರವಣ ಮಾತ್ರದಿಂದ ಮನಸ್ಸು ಯಾವ ಹೊತ್ತಿನಲ್ಲೂ ಅರಳುತ್ತದೆ ಎಂದಾದರೆ, ಅದನ್ನು ಅರ್ಥ ಸಹಿತವಾಗಿ ಕಲಿತಲ್ಲಿ ಅದೆಷ್ಟು ಮನಸ್ಸನ್ನು ಅರಳಿಸಬಹುದು ಎಂಬುದನ್ನು ಗಮನಿಸಿ. ಒತ್ತಿದ ಸೈಕಲ್ ಗುಂಡಿ ನಿದ್ರೆಗೆ ಜಾರುವ ಹೊತ್ತಲ್ಲಿ ಮನಸ್ಸನ್ನು ಕೆರಳಿಸುವ ಕಾರಣ ತನ್ನ ಅಸಮಾಧಾನವನ್ನು ಪ್ರಕಟಿಸಿತು. ತಾಯಿ ಹಾಡುವ ಜೋಗುಳವನ್ನು ಸುಶ್ರಾವ್ಯವಾಗಿ ಹಾಡುವ ಸಂಗೀತದ ಮುಖಾಂತರ ಕೇಳಿಸಿದರೆ ಮಗು ಇಷ್ಟಪಡದೆ ಇರುವುದನ್ನು ಗಮನಿಸಿದ್ದೇನೆ. ರಾಗ ತಾಳಗಳಿದ್ದು ಪ್ರೇಮವಿಲ್ಲದ ಗಾನ ಮೆಚ್ಚನು ಹರಿ ಮೆಚ್ಚನು ಎಂಬ ದಾಸರ ಹಾಡು ಇದರಿಂದ ಬಂದುದು ಎಂಬ ಅರಿವಾಗುವುದು.
ದೇವರಂತ ಮನಸ್ಸಿನ ಮಗುವಿಗೆ ಹೃದಯದ ರಾಗ ಮುಖ್ಯವೇ ಹೊರತು ಸಂಗೀತದ ಮೇಲೆ ಪ್ರೀತಿಯಿಂದ ಬರುವ ರಾಗ ರುಚಿಸುವುದಿಲ್ಲ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸೂಕ್ಷ್ಮವಾಗಿ ಗಮನಿಸುವ ಮಗು, ಮನುಷ್ಯರನ್ನು ಸೂಕ್ಷ್ಮವಾಗಿ ಗಮನಿಸುವ ಮಗು, ಒಳಿತು-ಕೆಡುಕುಗಳನ್ನು ಗಮನಿಸುವ ಮಗು ನಾವು ಕೊಡುವ ಸಂಸ್ಕಾರದಿಂದಾಗಿ ದೇವತ್ವದಿಂದ ಮಾನವತ್ವದ ಕಡೆಗೆ ಇಳಿಯುತ್ತದೆ. ಕೊಡುವ ಸಂಸ್ಕಾರಗಳು ಭಾರತೀಯ ಸಂಸ್ಕೃತಿಯಿಂದ ಕೂಡಿದ್ದರೆ, ಭಾರತೀಯನಾಗಿ ಬೆಳೆಯಬಲ್ಲುದು. ವಿದೇಶಿಯ ಸಂಸ್ಕೃತಿಯನ್ನು ಪೋಷಿಸಿದರೆ ಅದೇ ಸ್ವಭಾವವನ್ನು ರೂಢಿಸಿಕೊಳ್ಳುವುದು. ಹೊರ ಪ್ರಪಂಚದಿಂದ ಜ್ಞಾನವನ್ನು ಹೀರಿ ಕೊಳ್ಳಬೇಕಾದ ಮಗುವನ್ನು, ಮೂರು ವರ್ಷದ ಒಳಗೆ ನಾಲ್ಕು ಗೋಡೆಗಳ ಮಧ್ಯದ ಕೋಣೆಯಲ್ಲಿ ಹಾಕುವ ಶಾಲೆಗಳಿಂದ ಏನು ಸಂಸ್ಕಾರವನ್ನು ಕೊಡಬಹುದು? ಮನೆಯೇ ಮೊದಲ ಪಾಠಶಾಲೆ ತಾಯಿ ತಾನೇ ಮೊದಲ ಗುರು ಎಂಬ ಮಾತಿನಂತೆ ಸಂಸ್ಕಾರಯುತ ಭವಿಷ್ಯದ ತಾಯಿ-ತಂದೆಗಳನ್ನು ಸೃಷ್ಟಿಮಾಡುವ ಕೇಂದ್ರವೇ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಎಂದು ನನ್ನ ನಂಬಿಕೆ.
ಮಕ್ಕಳು ನಾವು ಮಾಡುವುದನ್ನು ನೋಡಿ ಕಲಿತಾರೆ ವಿನಃ ನಾವು ಹೇಳುವುದನ್ನು ನೋಡಿ ಕಲಿಯಲಾರರು. ಗುರುಕುಲ ಪದ್ಧತಿಯ ವಿದ್ಯಾಭ್ಯಾಸದಲ್ಲಿ ಎಲ್ಲರೂ ಸಮಾನರು. ದೇವಕಿ ನಂದನ ಶ್ರೀಕೃಷ್ಣ ಕಡುಬಡತನದ ಕುಚೇಲ ಕಲಿತದ್ದು ಒಂದೇ ಗುರುಕುಲದಲ್ಲಿ, ಕಡುಬಡವನಾದ ದ್ರೋಣ ಅರಸನ ಮಗನಾದ ದ್ರುಪದನು ಕಲಿತದ್ದು ಒಂದೇ ಗುರುಕುಲದಲ್ಲಿ, ಲೋಕಾಭಿರಾಮನಾದ ಶ್ರೀರಾಮಚಂದ್ರ ಕಲಿತದ್ದು ವಿಶ್ವಾಮಿತ್ರರ ಗುರುಕುಲದಲ್ಲಿ. ಹಾಗೆ ಕಲಿತಾಗ ಸಮಾಜದ ಕಷ್ಟಕಾರ್ಪಣ್ಯಗಳ ಅರಿವು, ಬಡವ ಶ್ರೀಮಂತರೆಂಬ ಭೇಧವಿಲ್ಲದ ಅರಿವು ನಮ್ಮದಾಗುವುದು. ಮಹಾನಗರಗಳಲ್ಲಿ ಇಂದು ಆರ್ಥಿಕ ಶಕ್ತಿಗನುಸಾರವಾಗಿ ವಿದ್ಯಾಭ್ಯಾಸ ಬೆಳೆದು ಬರುವುದನ್ನು ಕಾಣಬಹುದು.
ಉಪನಯನ ಸಂಸ್ಕಾರದ ಹೆಸರೇ ಹೊಸತೊಂದು ಕಣ್ಣನ್ನು ತೆರೆಸುವುದು. ಯಜ್ಞೋಪವೀತಧಾರಣೆ ನಂತರ ಭವತಿ ಭಿಕ್ಷಾಂದೇಹಿ ಎಂದು ಭಿಕ್ಷೆಯನ್ನು ಕೇಳುವ ಸಂಪ್ರದಾಯ ಚಾಲ್ತಿಯಲ್ಲಿದೆ. ಮನೆಮನೆ ಭಿಕ್ಷೆಬೇಡಿ ಕಷ್ಟಾರ್ಜಿತ ಅನ್ನದ ಮೂಲಕ ಬಂದ ವಿದ್ಯೆ ಶಾಶ್ವತ ಎಂಬುದರ ಕುರುಹು ಇದು. ಆದರೆ ಇಂದು ನಾವೆಲ್ಲ ಭಿಕ್ಷಾಂದೇಹಿ ಅನ್ನುವಾಗ ನಮ್ಮ ನಮ್ಮ ಆರ್ಥಿಕ ಶಕ್ತಿಗನುಸಾರವಾಗಿ ಪ್ರೀತಿಯಿಂದ ಅನೇಕ ಉಡುಗೊರೆಗಳನ್ನು ಕೊಡುತ್ತೇವೆ. ಜ್ಞಾನದ ಕಣ್ಣುತೆರೆ ಸಬೇಕಾದ ಹೊತ್ತಿನಲ್ಲಿ ನಮ್ಮ ವೈಭವವನ್ನು ಪ್ರದರ್ಶಿಸಿ ಮಗುವಿಗೆ ಭೋಗ ಸಂಸ್ಕೃತಿಯನ್ನು ನಮಗೆ ಅರಿವಿಲ್ಲದೆ ದಾನ ಮಾಡುತ್ತಿದ್ದೇವೆ.
ಶತ ಶತಮಾನಗಳ ಅರಿವಿನಿಂದ ಕೂಡಿದ, ಸಹಸ್ರಾರು ಮಂದಿಯ ಅನುಭವದ ಸಾರವಾದ ಸನಾತನಧರ್ಮದ ಬೆಳಕಾದ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಎಲ್ಲರಿಗೂ ಬೆಳಕನ್ನು ನೀಡುದರಲ್ಲಿ ಯಾವುದೇ ಸಂಶಯವಿಲ್ಲ. ಹೊಸ ಪೀಳಿಗೆಯ ಮಕ್ಕಳು ವಿವಿಯಿಂದ ಜ್ಞಾನದ ಬೆಳಕಾಗಿ ಹೊರಹೊಮ್ಮುವಂತೆ ಆಗಲಿ ಎಂದು ಹಾರೈಸುವೆ.
ಹರೇರಾಮ.
-ಎ.ಪಿ. ಸದಾಶಿವ ಮರಿಕೆ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ