|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಯಕ್ಷ ವಚನ ಮೌಕ್ತಿಕ ಹರೀಶ್ ಬಳಂತಿಮೊಗರು

ಯಕ್ಷ ವಚನ ಮೌಕ್ತಿಕ ಹರೀಶ್ ಬಳಂತಿಮೊಗರು


ಹರೀಶ್ ಬಳಂತಿಮೊಗರು ಈ ಹೆಸರು ತಾಳಮದ್ದಳೆ ಕ್ಷೇತ್ರದಲ್ಲಿ ಜನಪ್ರಿಯ ಮೇರು ಕಲಾವಿದರ ಪಟ್ಟಿಯಲ್ಲಿ ಕೇಳಿಬರುವ ಹೆಸರುಗಳಲ್ಲಿ ಒಂದು. ಸದಾ ನಗುಮುಖದ, ಮೃದು ಮಾತಿನ, ಸ್ವಚ್ಛ ಮನಸ್ಸಿನ, ಅಕಳಂಕ ಚರಿತರಾದ ಸಹೃದಯೀ ಸುಹೃದಯೀ ಹರೀಶ ಬಳಂತಿಮೊಗರು ಅವರು ಆತ್ಮೀಯರಿಗೆ ಹರೀಶಣ್ಣ ಎಂದೇ ಚಿರಪರಿಚಿತರು. ತಾಳಮದ್ದಳೆ ಕಲಿಕಾ ಆಸಕ್ತಿ ಉಳ್ಳವರಿಗೆ ಗುರುಗಳಾಗಿ ಮಾರ್ಗದರ್ಶನ ಮಾಡುವ ಕಲಾರಾಧಕರು.


ಬಂಟ್ವಾಳ ತಾಲೂಕು ಪುಣಚಾ ಗ್ರಾಮದ ಬಳಂತಿಮೊಗರುನಲ್ಲಿ 03-02.1972 ರಂದು ರಾಮಕೃಷ್ಣ ಭಟ್ ಮತ್ತು ಸರಸ್ವತಿ ಇವರ ಮಗನಾಗಿ ಜನನ. ಮೆಕ್ಯಾನಿಕಲ್ ಡಿಪ್ಲೊಮಾ ಇವರ ವಿದ್ಯಾಭ್ಯಾಸ.

ಭಾವ ರಾಧಾಕೃಷ್ಣ ಕಲ್ಚಾರ್ ಜೊತೆ ಮಾತಾಡುತ್ತಾ ತಾಳಮದ್ದಳೆಯಲ್ಲಿ ಅರ್ಥ ಹೇಳುವ ಪ್ರೇರಣೆ. ಅಳಿಕೆ ಸಮೀಪದ ಪಡಿಬಾಗಿಲು ಶಾಲೆಯಲ್ಲಿ ಪ್ರಥಮವಾಗಿ ಗೆಳೆಯ ಎಂರ್ಬು ಬಾಲಕೃಷ್ಣ ಕಾರಂತರ ಒತ್ತಾಯದಿಂದ ವಾಲಿವಧೆಯ ಸುಗ್ರೀವನಾಗಿ ಮೊದಲ ಅರ್ಥ. ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ಇವರ ಭಾಗವತಿಕೆ ಗುರುಗಳು.


ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರಿ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:

ರಾಮಾಯಣ, ಮಹಾಭಾರತ, ಭಾಗವತ, ಭಗವದ್ಗೀತೆ ಇತ್ಯಾದಿಗಳನ್ನು ಅರ್ಥ ಹೇಳುವ ಪ್ರಾರಂಭದಲ್ಲೇ ಓದಿದ್ದೆ. ಈಗ ಅರ್ಥ ಹೇಳುವುದಕ್ಕೆ ಮೊದಲೇ ಪ್ರಸಂಗದ ಪದ್ಯ ಮತ್ತು ಆ ದಿನದ ಪ್ರಸಂಗಕ್ಕೆ ಸಂಬಂಧಿಸಿದ ಕತೆಯನ್ನು ಓದಿ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಬಳಂತಿಮೊಗರು.


ಹರೀಶಣ್ಣ ಯಾವುದೇ ಪ್ರಸಂಗದ ಯಾವ ಪಾತ್ರವನ್ನೂ ನಿರ್ವಹಿಸಲು ಸಮರ್ಥರು. ಇವರ ಸ್ವರ, ಸ್ವಭಾವದಿಂದಾಗಿ ಹೆಚ್ಚಾಗಿ ಸೌಮ್ಯ, ಸಾತ್ವಿಕ ಮತ್ತು ಮಹಿಳಾ ಪಾತ್ರಗಳಲ್ಲೇ  ಹೆಚ್ಚಾಗಿ ರಂಗದಲ್ಲಿ ಕಾಣಸಿಗುತ್ತಾರೆ. ಬಹು ಪ್ರಸಂಗಗಳಲ್ಲಿ ಶ್ರೀಕೃಷ್ಣ, ವಿಷ್ಣು, ಹನೂಮಂತ, ವಿದುರ, ಸಂಜಯ, ಭೀಷ್ಮ, ಅಂಗದ, ಅರ್ಜುನ (ಹಲವು ಪ್ರಸಂಗಗಳಲ್ಲಿ), ಶ್ರೀರಾಮ, ಭರತ, ದಶರಥ, ನಾರದ, ದಾಕ್ಷಾಯಿಣಿ, ಅಂಬೆ, ಲಕ್ಷ್ಮೀ, ಖ್ಯಾತಿ, ಕೌಶಿಕೆ, ತಾರೆ, ಮಂಡೋದರಿ, ದ್ರೌಪದಿ, ಸೀತಾ, ಶೂರ್ಪನಖಿ , ಸತ್ಯಭಾಮೆ, ಸುಭದ್ರೆ, ಕೈಕೇಯಿ ಇತ್ಯಾದಿ ಪಾತ್ರಗಳಿಗೆ ಮಾತಿನ ಭಾವದ ಮೂಲಕ ಜೀವ ನೀಡಿದ್ದಾರೆ. ಪ್ರೇಕ್ಷಕರನ್ನು ರಸಗಡಲಲ್ಲಿ ತೇಲಿಸಿದ್ದಾರೆ‌. ಸರಳ ಭಾಷೆ, ರಂಜನೆ, ಚುರುಕಿನ ಸಂವಾದ, ಪಾತ್ರೋಚಿತ ಭಾವ, ಔಚಿತ್ಯ ಪ್ರಜ್ಞೆಯೊಂದಿಗೆ ವಾಗ್ಝರಿ ಬಳಂತಿಮೊಗರು ಅರ್ಥಗಾರಿಕೆಯಲ್ಲಿ ಕಾಣ ಸಿಗುತ್ತದೆ.


ಶೇಣಿಯವರಿಂದ ತೊಡಗಿ ಅನೇಕ ದಿಗ್ಗಜ ಕೀರ್ತಿಶೇಷ ತಾಳಮದ್ದಳೆ ಅರ್ಥಧಾರಿಗಳೊಂದಿಗೆ ರಂಗದಲ್ಲಿ ಅರ್ಥ ಹೇಳುತ್ತಾ ಬೆಳೆದು ಬಂದ ಬಳಂತಿಮೊಗರು ಪ್ರಸ್ತುತ ಪ್ರಸಿದ್ಧರಾಗಿರುವ ಡಾ. ಎಂ. ಪ್ರಭಾಕರ ಜೋಶಿ, ಸುಣ್ಣಂಬಳ ವಿಶ್ವೇಶ್ವರ ಭಟ್, ಶಂಭು ಶರ್ಮ ವಿಟ್ಲ, ರಾಧಾಕೃಷ್ಣ ಕಲ್ಚಾರ್ ವಿಟ್ಲ, ಉಜಿರೆ  ಅಶೋಕ ಭಟ್,  ವಾಸುದೇವ ರಂಗ ಭಟ್, ಮೇಲುಕೋಟೆ ಉಮಾಕಾಂತ ಭಟ್, ಜಬ್ಬಾರ್ ಸಮೊ ಸಂಪಾಜೆ, ಪೆರ್ಮುದೆ ಜಯಪ್ರಕಾಶ ಶೆಟ್ಟಿ, ಸಂಕದಗುಂಡಿ ಗಣಪತಿ ಭಟ್, ದಿನೇಶ್ ಶೆಟ್ಟಿ ಕಾವಳಕಟ್ಟೆ, ಪವನ್ ಕಿರಣ್ಕೆರೆ ಮುಂತಾದ   ಕಲಾವಿದರೊಂದಿಗೆ ರಂಗದಲ್ಲಿ ಪಾತ್ರವಾಗಿ ಮೆರೆದವರು, ಮೆರೆಯುತ್ತಿರುವವರು.


ಮುಂಬೈ, ಶಿರಸಿ, ಉತ್ತರ ಕನ್ನಡ, ಸಾಗರ ಸೇರಿದಂತೆ ಉತ್ತರ ಕರ್ನಾಟಕದ ಹಲವು ಕಡೆಗಳಲ್ಲಿ ನಡೆಯುವ ಕೂಟಗಳಿಗೆ ಬಹುಬೇಡಿಕೆಯ ಕಲಾವಿದರು. ದ.ಕ, ಉಡುಪಿ, ಕಾಸರಗೋಡಿನಲ್ಲಿ ವರ್ಷಂಪ್ರತಿ ನಡೆಯುವ ಹಲವು ಕೂಟಗಳಿಗೆ ಬಳಂತಿಮೊಗರು ಖಾಯಂ ಅರ್ಥಧಾರಿಗಳು.


ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಯಕ್ಷಗಾನ ಸ್ಥಿತಿ ಉತ್ತಮವಾಗಿದೆ. ಪ್ರೇಕ್ಷಕರ ಬೆಂಬಲ ಬಹಳ ಇದೆ. ಯಕ್ಷಗಾನದ ಪ್ರೇಕ್ಷಕರಿಗೆ ಉತ್ಸಾಹವಿದೆ. ಆದರೆ ಬಹಳ ಮಂದಿಗೆ ಕಥೆಯ ಜ್ಞಾನ ಇಲ್ಲ. ತಾಳಮದ್ದಳೆ ಆಗಲಿ ಬಯಲಾಟವಾಗಲಿ ನೋಡುವುದಕ್ಕೆ ಬರುವವರಿಗೆ ಕಥಾಜ್ಞಾನ ಇದ್ದರೆ ಆಸ್ವಾದಿಸುವ ರೀತಿಯೇ ಬೇರೆಯಾಗುತ್ತದೆ.


ಕತೆ ಕಾದಂಬರಿಗಳ ಓದು, ವಾಚನ ಪ್ರವಚನ ಉಪನ್ಯಾಸ ಇತ್ಯಾದಿಗಳು ಇವರ ಹವ್ಯಾಸಗಳು. ಮುಂಬೈಯ ಅಜೆಕಾರು ಕಲಾಭಿಮಾನಿ ಬಳಗದ "ಯಕ್ಷರಕ್ಷಾ ಪ್ರಶಸ್ತಿ", ಯಕ್ಷಾರಾಧನಾ ಕಲಾ ಕೇಂದ್ರ ಉರ್ವದಿಂದ "ಯಕ್ಷಾರಾಧಕ ಪ್ರಶಸ್ತಿ", ಕೈಕಂಬದ "ಯಕ್ಷಮಲ್ಲಿಕಾ" ಪ್ರಶಸ್ತಿ ಹಾಗೇ ಹಲವಾರು ಕಡೆ ಸನ್ಮಾನ ಹಾಗೂ ಪ್ರಶಸ್ತಿಗಳು ಇವರಿಗೆ ದೊರೆತಿದೆ.


ಭಾಗವತಿಕೆ ಬಲ್ಲ ಇವರು ಅಗತ್ಯ ಇದ್ದಲ್ಲಿ ಭಾಗವತರಾಗಿಯೂ ಹಲವು ವೇದಿಕೆಗಳಲ್ಲಿ ಕಾಣಿಸಿಕೊಂಡವರು. ನೂರಾರು ಯಕ್ಷಗಾನ ಪ್ರಸಂಗದ ಪದ್ಯ ಬಾಯಿಪಾಠ ಉಳ್ಳ ಇವರ ಪುರಾಣಗಳಲ್ಲಿನ ಜ್ಞಾನ, ಪೂರಕ ಗ್ರಂಥಗಳ ಅಧ್ಯಯನದಿಂದ ಇವರು ಪ್ರಸಂಗ ಪಾತ್ರ ಪ್ರಸ್ತುತಿಯ ಮಾಹಿತಿ ಕಣಜ ಎಂದರೆ ಅತಿಶಯೋಕ್ತಿಯಾಗದು.


ಹರೀಶ್ ಬಳಂತಿಮೊಗರು ಅವರು ಕುಸುಮ ಅವರನ್ನು ವಿವಾಹವಾಗಿ ಮಕ್ಕಳಾದ ಅನನ್ಯಾ ಹಾಗೂ ಚೈತನ್ಯ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.


ಯಕ್ಷ ವಾಚಿಕ ವೈಭವ ಕ್ಷೇತ್ರದಲ್ಲಿ ಇನ್ನಷ್ಟು ಸಾಧಿಸಿ ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


-ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

8971275651


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 تعليقات

إرسال تعليق

Post a Comment (0)

أحدث أقدم